ನಿರ್ದೇಶಕ ಎಸ್.ನಾರಾಯಣ್ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ; ಎಫ್‌ಐಆರ್ ದಾಖಲು
ನಿರ್ದೇಶಕ ಎಸ್. ನಾರಾಯಣ್ ಅವರ ಸೊಸೆ ಪವಿತ್ರಾ ಅವರು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಎಸ್. ನಾರಾಯಣ್, ಅವರ ಪತ್ನಿ ಭಾಗ್ಯಲಕ್ಷ್ಮಿ ಮತ್ತು ಮಗ ಪವನ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.;
ರ್ದೇಶಕ ಎಸ್. ನಾರಾಯಣ್ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಕೇಳಿಬಂದಿದೆ.
ಸ್ಯಾಂಡಲ್ವುಡ್ ಖ್ಯಾತ ನಿರ್ದೇಶಕ ಎಸ್. ನಾರಾಯಣ್ ಅವರ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿದೆ. ಸೊಸೆ ಪವಿತ್ರಾ ಅವರು ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ನಿರ್ದೇಶಕ ಎಸ್. ನಾರಾಯಣ್, ಅವರ ಪತ್ನಿ ಭಾಗ್ಯಲಕ್ಷ್ಮಿ ಮತ್ತು ನಾರಾಯಣ್ ಅವರ ಮಗ ಪವನ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ದೂರಿನಲ್ಲಿ ಏನಿದೆ?
ಪವಿತ್ರಾ ಅವರು ಮದುವೆಯಲ್ಲಿ ಒಂದು ಲಕ್ಷ ರೂಪಾಯಿ ಮೌಲ್ಯದ ಉಂಗುರ ಮತ್ತು ಮದುವೆಯ ಇತರೆ ಖರ್ಚುಗಳನ್ನು ಭರಿಸಿದ್ದರು. ಆದರೆ, ಮದುವೆಯ ನಂತರ ಹಣಕ್ಕಾಗಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಇದಲ್ಲದೆ, ಎಸ್. ನಾರಾಯಣ್ ಅವರ ಪುತ್ರ ಪವನ್ 'ಕಲಾ ಸಾಮ್ರಾಟ್ ಟೀಂ ಅಕಾಡೆಮಿ' ಎಂಬ ಫಿಲ್ಮ್ ಇನ್‌ಸ್ಟಿಟ್ಯೂಟ್ ಸ್ಥಾಪಿಸಲು ಹಣ ತರುವಂತೆ ಪವಿತ್ರಾಗೆ ಪೀಡಿಸುತ್ತಿದ್ದರು ಎನ್ನಲಾಗಿದೆ. ಪವಿತ್ರಾ ತಮ್ಮ ಮನೆಯಿಂದ ತಾಯಿಯ ಒಡವೆಗಳನ್ನು ಅಡವಿಟ್ಟು ಹಣ ನೀಡಿದ್ದರು. ಆದರೆ, ಆ ಕಂಪನಿಯು ನಷ್ಟಕ್ಕೆ ಒಳಗಾಗಿ ಮುಚ್ಚಿಹೋಗಿದೆ. ನಂತರ ಪವನ್‌ಗೆ ಪವಿತ್ರಾ 10 ಲಕ್ಷ ರೂ.ಸಾಲವನ್ನೂ ನೀಡಿದ್ದರು. ಆದರೆ, ಎಸ್. ನಾರಾಯಣ್, ಅವರ ಪತ್ನಿ ಮತ್ತು ಮಗ ತಮ್ಮ ಮೇಲೆ ಹಲ್ಲೆ ನಡೆಸಿ ಮತ್ತಷ್ಟು ಹಣಕ್ಕಾಗಿ ಒತ್ತಾಯಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇತ್ತೀಚೆಗೆ ನನ್ನನ್ನು ಮನೆಯಿಂದ ಹೊರಹಾಕಲಾಗಿದೆ. ನನಗೆ ಅಥವಾ ನನ್ನ ಮಗನಿಗೆ ಯಾವುದೇ ತೊಂದರೆಯಾದರೆ ಈ ಮೂವರೇ ಕಾರಣ ಎಂದು ದೂರಿನಲ್ಲಿ ತಿಳಿಸಿದ್ದಾರೆ.