Indian Cricket | ಆರ್‌ಸಿಬಿ ನೂತನ ಕೋಚ್‌ ಆಗಿ ದಿನೇಶ್‌ ಕಾರ್ತಿಕ್‌ ನೇಮಕ‌

Update: 2024-07-01 09:38 GMT

2025ರ ಸಾಲಿನ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿ ಹಿನ್ನೆಲೆಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನೂತನ ಬ್ಯಾಟಿಂಗ್‌ ಕೋಚ್‌ ಮತ್ತು ಮೆಂಟರ್‌ ಆಗಿ ದಿನೇಶ್‌ ಕಾರ್ತಿಕ್‌ ನೇಮಕಗೊಂಡಿದ್ದಾರೆ.

ಈ ಬಗ್ಗೆ ಆರ್‌ಸಿಬಿ ತಂಡ ತನ್ನ ಸೋಷಿಯಲ್‌ ಮೀಡಿಯಾ ವೇದಿಕೆಗಳ ಮೂಲಕ ಈ ಸಿಹಿ ಸುದ್ದಿಯನ್ನು ಅಭಿಮಾನಿಗಳೊಟ್ಟಿಗೆ ಸೋಮವಾರ ಹಂಚಿಕೊಂಡಿದೆ.

ಈ ವರ್ಷದ ಐಪಿಲ್‌ ಮುಗಿಯುತ್ತಿದ್ದಂತೆ ಆಟಗಾರನಾಗಿ ದಿನೇಶ್‌ ಕಾರ್ತಿಕ್ ವಿದಾಯ ಘೋಷಿಸಿದ್ದರು. ಅವರಿಗೆ‌ ಕಾಮೆಂಟರಿಯಲ್ಲಿ ಅಪಾರ ಆಸಕ್ತಿ ಇರುವುದರಿಂದ ಅವರು ಮುಂದಿನ ದಿನಗಳಲ್ಲಿ ಕಾಮೆಂಟೇಟರ್‌ ಆಗಿ ಮುಂದುವರಿಯಬಹುದು ಎಂದು ಅಭಿಮಾನಿಗಳು ನಿರೀಕ್ಷೆ ಮಾಡಿದ್ದರು. ಆದರೆ ಈ ಸ್ಟಾರ್‌ ಕ್ರಿಕೆಟರ್‌ ಇದೀಗ ಕೋಚಿಂಗ್‌ ವೃತ್ತಿಬದುಕು ಶುರು ಮಾಡಲಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, ʻʻನಮ್ಮ ಕೀಪರ್‌ನ ಮರಳಿ ಸ್ವಾಗತಿಸುತ್ತಿದ್ದೇವೆ. ದಿನೇಶ್‌ ಕಾರ್ತಿಕ್ ಹೊಸ ಅವತಾರದಲ್ಲಿ ತಂಡ ಸೇರಿಕೊಂಡಿದ್ದಾರೆ. ಡಿ.ಕೆ ಆರ್‌ಸಿಬಿ ತಂಡದ ನೂತನ ಮೆಂಟರ್‌ ಹಾಗೂ ಬ್ಯಾಟಿಂಗ್‌ ಕೋಚ್‌ ಆಗಿ ಕೆಲಸ ಮಾಡಲಿದ್ದಾರೆ. ಒಬ್ಬ ವ್ಯಕ್ತಿ ಕ್ರಿಕೆಟ್‌ನಿಂದ ದೂರವಾಗಬಹುದು, ಆದರೆ ಆತನಿಂದ ಕ್ರಿಕೆಟ್‌ ದೂರವಾಗಲಾರದು. ಆರ್‌ಸಿಬಿ ಅಭಿಮಾನಿಗಳೆ ನಿಮ್ಮ ಪ್ರೀತಿಯ ಮಳೆ ಸುರಿಯಲಿʼʼ ಎಂದು ದಿನೇಶ್‌ ಕಾರ್ತಿಕ್‌ ಅವರನ್ನು ಸ್ವಾಗತಿಸಲಾಗಿದೆ.‌

ಇಂಡಿಯನ್ ಪ್ರೀಮಿಯರ್‌ ಲೀಗ್‌ ವೃತ್ತಿಬದುಕಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌, ಪಂಜಾಬ್‌ ಕಿಂಗ್ಸ್‌, ಮುಂಬೈ ಇಂಡಿಯನ್ಸ್‌, ಕೋಲ್ಕತಾ ನೈಟ್‌ ರೈಡರ್ಸ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಗಳಲ್ಲಿ ಆಡಿದ ಅಪಾರರ ಅನುಭವ ಹೊಂದಿರುವ ದಿನೇಶ್ ಕಾರ್ತಿಕ್‌, ಕಳೆದ 3 ಆವೃತ್ತಿಗಳಲ್ಲಿ ಆರ್‌ಸಿಬಿ ಪರ ಬ್ಯಾಟ್‌ ಬೀಸಿದ್ದಾರೆ. ತಂಡದಲ್ಲಿ ವಿಕೆಟ್‌ ಕೀಪಿಂಗ್ ಜೊತೆಗೆ ಅತ್ಯುತ್ತಮ ಫಿನಿಷರ್‌ ಆಗಿಯೂ ಕೆಲಸ ಮಾಡಿ ಮಿಂಚಿದ್ದರು. ಟಿ20 ಕ್ರಿಕೆಟ್‌ನಲ್ಲಿ ಅವರು ಹೊಂದಿರುವ ಅಪಾರ ಅನುಭವದ ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಆರ್‌ಸಿಬಿ ಟೀಮ್ ಮ್ಯಾನೇಜ್ಮೆಂಟ್‌ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

ತಮ್ಮ ಸುದೀರ್ಘಾವಧಿಯ ಐಪಿಎಲ್‌ ವೃತ್ತಿಬದುಕಿನಲ್ಲಿ ದಿನೇಶ್‌ ಕಾರ್ತಿಕ್ ಒಟ್ಟಾರೆ 257 ಪಂದ್ಯಗಳನ್ನು ಆಡಿದ್ದಾರೆ. 26.32ರ ಸರಾಸರಿಯಲ್ಲಿ ಅವರು 4842 ರನ್‌ಗಳನ್ನು ಬಾರಿಸಿದ್ದು, 135.26ರ ಅದ್ಭುತ ಸರಾಸರಿ ಸ್ಟ್ರೈಕ್‌ರೇಟ್‌ ಕಾಯ್ದುಕೊಂಡಿದ್ದರು. ಅವರ ಬ್ಯಾಟ್‌ನಿಂದ ಒಟ್ಟು 22 ಅರ್ಧಶತಕಗಳು ಮೂಡಿಬಂದಿದ್ದು, 97 ರನ್‌ ಅವರ ಬೆಸ್ಟ್‌ ಬ್ಯಾಟಿಂಗ್‌ ಪ್ರದರ್ಶನವಾಗಿದೆ. ವೃತ್ತಿಬದುಕಿನ ಬಹುಪಾಲು ಸಮಯ ಮಧ್ಯಮ ಕ್ರಮಾಂಕದಲ್ಲೇ ಬ್ಯಾಟ್‌ ಮಾಡಿರುವ ಡಿ.ಕೆ 50 ಬಾರಿ ನಾಟ್‌ಔಟ್‌ ಅಗಿ ಉಳಿದಿದ್ದಾರೆ.

Tags:    

Similar News