ಸತ್ಯ ಶೀಘ್ರ ಬಯಲಾಗಲಿ; ಎಸ್‌ಐಟಿ ತನಿಖೆಗೆ ಶ್ರೀಕ್ಷೇತ್ರ ಧರ್ಮಸ್ಥಳ ಸ್ವಾಗತ
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕ್ಷೇತ್ರವು, "ಪ್ರಾಮಾಣಿಕ ತನಿಖೆಯ ಮೂಲಕ ಸತ್ಯಾಂಶ ಶೀಘ್ರವಾಗಿ ಹೊರಬರಬೇಕು" ಎಂದು ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.;
ಹಲವಾರು ಶವಗಳನ್ನು ಹೂತಿದ್ದೆ" ಎಂಬ ಪೌರಕಾರ್ಮಿಕರೊಬ್ಬರ ತಪ್ಪೊಪ್ಪಿಗೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ ಧರ್ಮಸ್ಥಳದ ಹತ್ಯೆ ಪ್ರಕರಣವನ್ನು ಸರ್ಕಾರ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ವಹಿಸಿರುವುದಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಸ್ವಾಗತ ವ್ಯಕ್ತಪಡಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕ್ಷೇತ್ರವು, "ಪ್ರಾಮಾಣಿಕ ತನಿಖೆಯ ಮೂಲಕ ಸತ್ಯಾಂಶ ಶೀಘ್ರವಾಗಿ ಹೊರಬರಬೇಕು" ಎಂದು ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.
ಶ್ರೀಕ್ಷೇತ್ರದ ವಕ್ತಾರರಾದ ಕೆ. ಪಾರ್ಶ್ವನಾಥ್ ಜೈನ್ ಪತ್ರಿಕಾಪ್ರಕಟಣೆ ಮೂಲಕ, "ಈ ದೂರು ರಾಷ್ಟ್ರಮಟ್ಟದಲ್ಲಿ ಸೃಷ್ಟಿಸಿರುವ ಗೊಂದಲ ಮತ್ತು ಊಹಾಪೋಹಗಳ ನಡುವೆ ಸಾರ್ವಜನಿಕರ ನಿರೀಕ್ಷೆಯಂತೆ ಸರ್ಕಾರವು ಎಸ್‌ಐಟಿ ತನಿಖೆಗೆ ಆದೇಶಿಸಿರುವುದು ಸೂಕ್ತವಾದ ಕ್ರಮ" ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ಸಮಾಜದ ನೈತಿಕತೆ ಮತ್ತು ಶ್ರದ್ಧೆಗೆ 'ಸತ್ಯ'ವೇ ಬಲವಾದ ಆಧಾರವಾಗಿರುತ್ತದೆ. ಹೀಗಾಗಿ, ಎಸ್‌ಐಟಿ ತಂಡವು ಅತಿ ಶೀಘ್ರವಾಗಿ ಪ್ರಾಮಾಣಿಕ ತನಿಖೆ ನಡೆಸಿ, ಸತ್ಯವನ್ನು ಸಾರ್ವಜನಿಕರ ಮುಂದೆ ಬಹಿರಂಗಪಡಿಸಬೇಕು ಎನ್ನುವುದು ನಮ್ಮ ಕಳಕಳಿಯಾಗಿದೆ," ಎಂದು ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ.
ಸರ್ಕಾರದ ಈ ತನಿಖಾ ನಿರ್ಧಾರವನ್ನು ಸಂಪೂರ್ಣವಾಗಿ ಬೆಂಬಲಿಸುವುದಾಗಿ ತಿಳಿಸಿರುವ ಶ್ರೀಕ್ಷೇತ್ರವು, ತನಿಖಾ ಪ್ರಕ್ರಿಯೆಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿಯೂ ಭರವಸೆ ನೀಡಿದೆ.