ಧರ್ಮಸ್ಥಳ ಪ್ರಕರಣ: ಯಾರೋ ಹೇಳಿದರು ಅಂಥ ಎಸ್‌ಐಟಿ ರಚನೆ ಮಾಡಲ್ಲ ಎಂದ ಸಿಎಂ ಸಿದ್ದರಾಮಯ್ಯ
ತಪ್ಪೊಪ್ಪಿಗೆ ನೀಡಿದ ವ್ಯಕ್ತಿಯ ಹೇಳಿಕೆ ಆಧಾರದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೊಲೀಸರ ವರದಿಯನ್ನು ಎರಡು ದಿನಗಳಲ್ಲಿ ಪರಿಶೀಲಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಅವರು ತಿಳಿಸಿದ್ದಾರೆ.;
ಧರ್ಮಸ್ಥಳದಲ್ಲಿ ನಡೆದ ಸರಣಿ ಕೊಲೆ ಮತ್ತು ಅತ್ಯಾಚಾರ ಪ್ರಕರಣಗಳ ತನಿಖೆಯಲ್ಲಿನ ಲೋಪಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ, ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದ್ದಾರೆ. "ಯಾರೋ ಹೇಳಿದ್ರು ಅಂತ ಎಸ್.ಐ.ಟಿ ರಚನೆ ಮಾಡಲು ಆಗೋದಿಲ್ಲ. ಪೊಲೀಸರು ಸದ್ಯ ತನಿಖೆ ನಡೆಸುತ್ತಿದ್ದಾರೆ. ತನಿಖೆ ಬಳಿಕ ಅಗತ್ಯವಿದ್ರೆ ಎಸ್.ಐ.ಟಿ ರಚನೆ ಮಾಡ್ತೀವಿ" ಎಂದು ಮೈಸೂರಿನಲ್ಲಿ ಸಿಎಂ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, "ನಮಗೆ ಯಾರಿಂದಲೂ ಒತ್ತಡ ಬಂದಿಲ್ಲ. ಒತ್ತಡ ಬಂದ್ರೂ ನಾವು ಕೇರ್ ಮಾಡೋದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ. ಗೋಪಾಲ್ ಗೌಡ ಸೇರಿದಂತೆ ಇನ್ಯಾರೋ ಹೇಳಿದರು ಅಂಥ ಎಸ್‌ಐಟಿ ರಚನ ಮಾಡುವುದಿಲ್ಲ. ತಪ್ಪೊಪ್ಪಿಗೆ ನೀಡಿದ ವ್ಯಕ್ತಿಯ ಹೇಳಿಕೆ ಆಧಾರದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೊಲೀಸರ ವರದಿಯನ್ನು ಎರಡು ದಿನಗಳಲ್ಲಿ ಪರಿಶೀಲಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಅವರು ತಿಳಿಸಿದ್ದಾರೆ.
ಎಸ್‌ಐಟಿ ರಚನೆಗೆ ಹೆಚ್ಚಿದ ಒತ್ತಡ
ಧರ್ಮಸ್ಥಳದಲ್ಲಿ ನಡೆದಿರುವ ಕೆಲವು ಕೊಲೆ ಮತ್ತು ಅತ್ಯಾಚಾರ ಪ್ರಕರಣಗಳ ತನಿಖೆಯಲ್ಲಿ ಸ್ಥಳೀಯ ಪೊಲೀಸರು ಹೆಚ್ಚಿನ ಪ್ರಗತಿ ಸಾಧಿಸಲು ಸಾಧ್ಯವಾಗದ ಕಾರಣ, ಹೈಕೋರ್ಟ್ ವಕೀಲರ ನಿಯೋಗವು ಬುಧವಾರ (ಜುಲೈ 16) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿಯಾಗಿತ್ತು. ಈ ವೇಳೆ, ಪ್ರಕರಣಗಳ ಸಮಗ್ರ ತನಿಖೆಗಾಗಿ ಎಸ್‌ಐಟಿ ರಚಿಸುವಂತೆ ಮನವಿ ಸಲ್ಲಿಸಲಾಗಿತ್ತು. ಅಪರಿಚಿತ ವ್ಯಕ್ತಿಯೊಬ್ಬರು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದರೂ, ಈ ಪ್ರಕರಣಗಳಲ್ಲಿ ಸರಿಯಾದ ತನಿಖೆ ನಡೆಯುತ್ತಿಲ್ಲ ಎಂಬುದನ್ನು ವಕೀಲರ ನಿಯೋಗವು ಮುಖ್ಯಮಂತ್ರಿಯವರಿಗೆ ಮನವರಿಕೆ ಮಾಡಿಕೊಟ್ಟಿತ್ತು. ಎಡಿಜಿಪಿ ಮಟ್ಟದ ಪೊಲೀಸ್ ಅಧಿಕಾರಿ ಮತ್ತು ಹೈಕೋರ್ಟ್‌ನ ನಿವೃತ್ತ ಅಥವಾ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆಯ ಮೇಲ್ವಿಚಾರಣೆ, ಡಿಜಿಟಲ್ ವಿಧಿವಿಜ್ಞಾನ ಮತ್ತು ವಿಡಿಯೋ ರೆಕಾರ್ಡಿಂಗ್ ನಡೆಸಬೇಕು ಎಂದು ನಿಯೋಗವು ಒತ್ತಾಯಿಸಿದೆ.
ಇದೇ ವಿಚಾರವಾಗಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಕೂಡ ಮುಖ್ಯಮಂತ್ರಿಯವರಿಗೆ ಪತ್ರ ಬರೆದು, ಧರ್ಮಸ್ಥಳ ವ್ಯಾಪ್ತಿಯಲ್ಲಿನ ಸಾವಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆಗಾಗಿ ಹಿರಿಯ ಪೊಲೀಸ್ ಅಧಿಕಾರಿಯ ನೇತೃತ್ವದಲ್ಲಿ ಎಸ್‌ಐಟಿ ರಚಿಸುವಂತೆ ಕೋರಿದ್ದರು.
ಈ ನಡುವೆ, ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಅಪರಾಧ ಕೃತ್ಯಗಳು ನಡೆದಿವೆ ಎಂದು ವಕೀಲರ ಮೂಲಕ ಪೊಲೀಸರಿಗೆ ದೂರು ನೀಡಿದ್ದ ವ್ಯಕ್ತಿಯೊಬ್ಬರು ಕಳೆದ ವಾರ ಬೆಳ್ತಂಗಡಿ ಪ್ರಧಾನ ಸಿವಿಲ್ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಸಂದೇಶ್ ಕೆ. ಅವರ ಮುಂದೆ ಹಾಜರಾಗಿ, ತಾವೇ ಹೊರತೆಗೆದಿರುವುದಾಗಿ ತಿಳಿಸಿದ್ದ ಅಸ್ಥಿಪಂಜರದ ಅವಶೇಷಗಳನ್ನು ಪ್ರಸ್ತುತಪಡಿಸಿದ್ದರು. ಪ್ರಕರಣದ ಗಂಭೀರತೆಯನ್ನು ಗಮನಿಸಿ, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈಗಾಗಲೇ ಬಂಟ್ವಾಳ ಡಿವೈಎಸ್‌ಪಿ ನೇತೃತ್ವದಲ್ಲಿ ಪ್ರತ್ಯೇಕ ತನಿಖೆ ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದ್ದರು.
ಕೇರಳದಿಂದಲೂ ಸಹಕಾರಕ್ಕೆ ಆಗ್ರಹ: ವಕೀಲ ಕೆ.ವಿ. ಧನಂಜಯ್
ಧರ್ಮಸ್ಥಳ ಪ್ರಕರಣ ರಾಜ್ಯದಲ್ಲಿ ಮಾತ್ರವಲ್ಲದೆ, ನೆರೆಯ ಕೇರಳದಲ್ಲಿಯೂ ಪ್ರತಿಧ್ವನಿಸುತ್ತಿದೆ. ಪ್ರಕರಣಗಳಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಸರ್ಕಾರದ ತನಿಖೆಯಲ್ಲಿ ಸಹಕರಿಸಲು ಕೇರಳ ಸರ್ಕಾರವು ತನ್ನ ವಿಧಾನಸಭೆಯಲ್ಲಿ ನಿರ್ಣಯ ಕೈಗೊಂಡು ಅಂಗೀಕರಿಸಬೇಕು ಎಂದು ಸುಪ್ರೀಂ ಕೋರ್ಟ್ ವಕೀಲ ಕೆ.ವಿ. ಧನಂಜಯ್ ಆಗ್ರಹಿಸಿದ್ದಾರೆ.
ಕರ್ನಾಟಕ ಸರ್ಕಾರದ ತನಿಖೆಯಲ್ಲಿ ಸಹಕರಿಸಲು ಯಾವುದೇ ರಾಜಕೀಯ ಪ್ರೇರಣೆ ಇಲ್ಲ ಎಂಬುದಾಗಿ ಸುಪ್ರೀಂ ಕೋರ್ಟ್‌ನಲ್ಲಿ ಅನುಮತಿ ಪಡೆದುಕೊಳ್ಳಬೇಕು. ಅಲ್ಲದೆ, ಕರ್ನಾಟಕ ಸರ್ಕಾರದ ಜತೆಗೆ ಕೇರಳ ಸರ್ಕಾರ ಸಹಕರಿಸಲಿದ್ದು, ಪೊಲೀಸರು ಸಹ ತನಿಖೆಗೆ ಕೈ ಜೋಡಿಸಲಿದ್ದಾರೆ ಎಂಬುದರ ಬಗ್ಗೆ ಕೇರಳ ಸರ್ಕಾರವು ತನ್ನ ವಿಧಾನಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಬೇಕಿದೆ ಎಂದು ಅವರು ಒತ್ತಾಯಿಸಿದ್ದಾರೆ.
ಧರ್ಮಸ್ಥಳದಲ್ಲಿ ಬಲಿಯಾಗಿರುವ ನಿವಾಸಿಗಳು ಕರ್ನಾಟಕದವರು ಮಾತ್ರವಲ್ಲದೆ, ಹೊರ ರಾಜ್ಯದವರೂ ಸಂತ್ರಸ್ತರಾಗಿರುವ ಸಾಧ್ಯತೆ ಇದೆ. ಕೇರಳ ಧರ್ಮಸ್ಥಳಕ್ಕೆ ಸಮೀಪ ಇರುವ ಕಾರಣ ಆ ರಾಜ್ಯದವರೇ ಇರಬಹುದು ಎಂಬ ಅನುಮಾನಗಳಿವೆ. ಹೀಗಾಗಿ ತನಿಖೆಯು ಪಾರದರ್ಶಕವಾಗಿ ನಡೆದುಕೊಳ್ಳಬೇಕು. "ಪ್ರಕರಣ ಸಂಬಂಧ ಬೇರೆ ರಾಜ್ಯಗಳು ಪ್ರಶ್ನಿಸುವ ಮುನ್ನ ರಾಜ್ಯ ಸರ್ಕಾರವು ಎಚ್ಚೆತ್ತುಕೊಂಡು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಅಗತ್ಯವಿದೆ" ಎಂದು ಧನಂಜಯ್ ಪತ್ರಿಕಾಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಒಂದು ವೇಳೆ ಕೇರಳ ರಾಜ್ಯವು ತನ್ನ ವಿಧಾನಸಭೆಯಲ್ಲಿ ಚರ್ಚೆಗೆ ತೆಗೆದುಕೊಂಡರೆ ಕರ್ನಾಟಕ ಸರ್ಕಾರವು ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ರಾಜ್ಯ ವಿಧಾನಸಭೆಯಲ್ಲಿಯೂ ಚರ್ಚೆಗಳು ನಡೆಯುವ ನಿರೀಕ್ಷೆ ಇದೆ ಎಂದು ಅವರು ಹೇಳಿದ್ದಾರೆ.
ಸೌಜನ್ಯ ಪ್ರಕರಣ: ನ್ಯಾಯಕ್ಕಾಗಿ ಹೋರಾಟ ಮುಂದುವರಿಕೆ
ರಾಜ್ಯದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟಕ್ಕೆ ನಟ ಪ್ರಕಾಶ್ ರಾಜ್ ಅವರು ತಮ್ಮ ಬೆಂಬಲ ಘೋಷಿಸಿದ್ದಾರೆ. "ಈ ಹೋರಾಟದಲ್ಲಿ ನಾನೂ ಪಾಲ್ಗೊಂಡಿದ್ದೇನೆ. ನೀವು ಪಾಲ್ಗೊಳ್ಳಿ" ಎಂದು ಸಾಮಾಜಿಕ ಮಾಧ್ಯಮ ವೇದಿಕೆ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸೌಜನ್ಯ ಪ್ರಕರಣದಲ್ಲಿ ನ್ಯಾಯಕ್ಕಾಗಿ ಒತ್ತಾಯಿಸಿ ಆನ್‌ಲೈನ್ ಸಹಿ ಸಂಗ್ರಹ ಅಭಿಯಾನ ನಡೆಯುತ್ತಿದೆ. ಇದಕ್ಕೆ ಪ್ರಕಾಶ್ ರಾಜ್ ಸಹಿ ಹಾಕಿದ್ದು, ಒಂದು ಲಕ್ಷ ಸಹಿ ಸಂಗ್ರಹಿಸುವ ಗುರಿಯನ್ನು ಹೊಂದಲಾಗಿದೆ. ಸೌಜನ್ಯ ಹತ್ಯೆ ಮತ್ತು ಧರ್ಮಸ್ಥಳದಲ್ಲಿ ದಶಕಗಳಿಂದ ಆದ ನಿಗೂಢ ಸಾವುಗಳ ಬಗ್ಗೆ ಸುಪ್ರೀಂ ಕೋರ್ಟ್‌ನ ಹಾಲಿ ಅಥವಾ ನಿವೃತ್ತ ನ್ಯಾಯಾಧೀಶರ ಉಸ್ತುವಾರಿಯಲ್ಲಿ ಎಸ್‌ಐಟಿ ತನಿಖೆ ಆಗಬೇಕು ಎಂದು ಅಭಿಯಾನದಲ್ಲಿ ಒತ್ತಾಯಿಸಲಾಗಿದೆ.
2012ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ 17 ವರ್ಷದ ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರಕ್ಕೊಳಗಾಗಿ ಕೊಲೆಯಾಗಿದ್ದರು. ಘಟನೆ ನಡೆದು ಇಷ್ಟು ವರ್ಷಗಳಾದರೂ ಅಪರಾಧಿಗಳಿಗೆ ಶಿಕ್ಷೆಯಾಗದಿರುವುದು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಕರಣದ ತನಿಖೆ ಆರಂಭದಲ್ಲಿ ಸ್ಥಳೀಯ ಪೊಲೀಸರಿಂದ, ನಂತರ ಸಿಐಡಿ ಮತ್ತು ಸಿಬಿಐಗೆ ಹಸ್ತಾಂತರಿಸಲ್ಪಟ್ಟರೂ, ಅಂತಿಮವಾಗಿ ಯಾವುದೇ ದೋಷಿಗಳಿಗೆ ಶಿಕ್ಷೆಯಾಗಿಲ್ಲ.
ಹೈಕೋರ್ಟ್ ತೀರ್ಪು ಮತ್ತು ಇತ್ತೀಚಿನ ಬೆಳವಣಿಗೆಗಳು
2024ರಲ್ಲಿ ಕರ್ನಾಟಕ ಹೈಕೋರ್ಟ್, ಈ ಪ್ರಕರಣದ ಮರುಪರಿಶೀಲನೆಯಿಂದ ಯಾವುದೇ ಉಪಯೋಗವಾಗುವುದಿಲ್ಲ ಎಂದು ತೀರ್ಪು ನೀಡುವ ಮೂಲಕ ಪ್ರಕರಣವನ್ನು ಮುಕ್ತಾಯಗೊಳಿಸಿತ್ತು.
2025ರ ಫೆಬ್ರವರಿಯಲ್ಲಿ ಸಮೀರ್ ಎಂ.ಡಿ. ಅವರ ಯೂಟ್ಯೂಬ್ ವೀಡಿಯೊದಿಂದ ಈ ಪ್ರಕರಣ ಮತ್ತೆ ಸಾರ್ವಜನಿಕರ ಗಮನ ಸೆಳೆಯಿತು. ಈ ವೀಡಿಯೊದಲ್ಲಿ ತನಿಖೆಯ ದೋಷಗಳು ಮತ್ತು ಪ್ರಕರಣದಲ್ಲಿ ಪ್ರಭಾವಶಾಲಿ ವ್ಯಕ್ತಿಗಳ ಸಂಬಂಧದ ಬಗ್ಗೆ ಗಂಭೀರ ಆರೋಪಗಳನ್ನು ಮಾಡಲಾಗಿತ್ತು. ಈ ವೀಡಿಯೊದಿಂದಾಗಿ ಸಮೀರ್ ಎಂ.ಡಿ. ಮತ್ತು ಅವರೊಂದಿಗೆ ಗುರುತಿಸಿಕೊಂಡಿರುವ ಕೆಲವು ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಈ ಬೆಳವಣಿಗೆಯು ರಾಜ್ಯಾದ್ಯಂತ ಸಾರ್ವಜನಿಕ ಪ್ರತಿಭಟನೆಗಳಿಗೆ ಕಾರಣವಾಯಿತು.