Ground Report | ಧರ್ಮಸ್ಥಳದಲ್ಲಿ ಬಿಗಡಾಯಿಸಿದ ಪರಿಸ್ಥಿತಿ, ಎಸ್‌ಐಟಿ ಶೋಧ ವಿಳಂಬ; ಪೊಲೀಸ್ ಠಾಣೆಯಲ್ಲಿ ದೂರುದಾರ
ಶ್ಯಾಮಸುಂದರ್ ಎಂಬುವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ಈ ಸಂಬಂಧ ದೂರು ನೀಡಿದ್ದು, ಸಾಕ್ಷಿ ದೂರುದಾರ ವ್ಯಕ್ತಿಯನ್ನು ಪೊಲೀಸ ಸುಪರ್ದಿಯಲ್ಲಿಯೇ ಇರಿಸಬೇಕು ಎಂದು ಆಗ್ರಹಿಸಿದ್ದಾರೆ.;
ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟಿರುವ ದೂರುದಾರನ ಆರೋಪ ಕುರಿತಂತೆ ಪರ- ವಿರೋಧದ ಚರ್ಚೆ ಆರಂಭವಾಗಿದೆ. ಸಾಕ್ಷಿ ದೂರುದಾನ ಹೇಳಿಕೆ ಬೆಂಬಲಿಸಿ ಹಲವು ಸ್ಥಳೀಯರು ಸಾಕ್ಷ್ಯ ನುಡಿಯಲು ಮುಂದೆ ಬಂದರೆ, ಮತ್ತೆ ಕೆಲವರು ಸಾಕ್ಷಿ ದೂರುದಾನದ ವಿರುದ್ಧ ತಿರುಗಿಬಿದ್ದಿದ್ದಾರೆ. ದೂರುದಾರನನ್ನು ವಕೀಲರ ಜೊತೆ ಕಳುಹಿಸದೇ ಪೊಲೀಸರ ಸುಪರ್ದಿಯಲ್ಲೇ ಇರಿಸಿಕೊಳ್ಳಬೇಕು ಎಂಬ ಸ್ಥಳೀಯರು ಆಗ್ರಹಿಸಿದ್ದಾರೆ.
ಶ್ಯಾಮಸುಂದರ್ ಎಂಬುವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ಈ ಸಂಬಂಧ ದೂರು ನೀಡಿದ್ದು, ಸಾಕ್ಷಿ ದೂರುದಾರ ವ್ಯಕ್ತಿಯನ್ನು ಪೊಲೀಸ್ ಸುಪರ್ದಿಯಲ್ಲಿಯೇ ಇರಿಸಬೇಕು. ದೂರುದಾರ ಕೆಲವು ಖಾಸಗಿ ವ್ಯಕ್ತಿಗಳ ಮನೆಯಲ್ಲಿ ತಂಗುತ್ತಿರುವ ಮಾಹಿತಿ ಇದೆ. ಇದರಿಂದ ನಿಷ್ಪಕ್ಷಪಾತ ತನಿಖೆ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಧರ್ಮಸ್ಥಳದಲ್ಲಿ ಬುಧವಾರ ಯೂಟ್ಯೂಬರ್‌ಗಳ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ ಬಳಿಕ ಧರ್ಮಸ್ಥಳದಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಈ ಸಂಬಂಧ ದೂರು- ಪ್ರತಿ ದೂರು ದಾಖಲಾಗಿದೆ. ಘರ್ಷಣೆ ಕುರಿತಂತೆ ಸೂಕ್ತ ತನಿಖೆ ನಡೆಸುವಂತೆ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸೂಚಿಸಿದ್ದಾರೆ.
ಶೋಧ ಆರಂಭಿಸದ ಎಸ್‌ಐಟಿ
ಬುಧವಾರ ನಡೆದ ಘರ್ಷಣೆಯ ಬಳಿಕ ಧರ್ಮಸ್ಥಳದಲ್ಲಿ ಗುರುವಾರ ನಡೆಯಬೇಕಾಗಿದ್ದ ಕಳೇಬರ ಶೋಧ ಕಾರ್ಯಾಚರಣೆ ಮಧ್ಯಾಹ್ನವಾದರೂ ಆರಂಭವಾಗಿರಲಿಲ್ಲ. 13ನೇ ಸ್ಥಳದ ಶೋಧ ಕಾರ್ಯ ವಿಳಂಬವಾಗಿದೆ. ಸಾಕ್ಷಿ ದೂರುದಾರನನ್ನು ಬೆಳ್ತಂಗಡಿ ಪೊಲೀಸ್ ಠಾಣೆಗೆ ಕರೆಸಿಕೊಂಡಿದ್ದು, ಎಸ್ಐಟಿ ಅಧಿಕಾರಿಗಳ ಜೊತೆಯಲ್ಲೇ ಇರಿಸಲಾಗಿದೆ. ಇನ್ನೊಂದೆಡೆ 13ನೇ ಸ್ಥಳದಲ್ಲಿ 15 ಅಡಿಗಿಂತಲೂ ಹೆಚ್ಚು ಆಳ ಅಗೆಯಬೇಕಾದ ಪರಿಸ್ಥಿತಿ ಇದೆ ಎನ್ನಲಾಗಿದೆ.
ನೇತ್ರಾವತಿ ನದಿ ತಟದಲ್ಲಿರುವ 13 ನೇ ಸ್ಥಳದಲ್ಲಿ ಶವ ಹೂತಿಟ್ಟ ನಂತರ ಆಣೆಕಟ್ಟು ನಿರ್ಮಿಸಲಾಗಿದೆ. ಈ ಸಂದರ್ಭ ನದಿಯ ಹೂಳೆತ್ತಿ, ಇದೇ ಶವ ಹೂತಿರುವ ಜಾಗದಲ್ಲಿ ಹಾಕಲಾಗಿದೆ ಎನ್ನಲಾಗುತ್ತಿದೆ.
ಸ್ಥಳೀಯ ಅಂಗಡಿ ಮಾಲೀಕ ಕೃಷ್ಣಪ್ಪ ಪೂಜಾರಿ ಪ್ರಕಾರ, ಇಲ್ಲಿ ಅಗೆಯಬೇಕಾದರೆ ಇಡೀ ದಿನ ಬೇಕು. ಅಲ್ಲಿ ಪಳಿಯುಳಿಕೆ ಇದ್ದರೂ ಬಹಳಷ್ಟು ಆಳದಲ್ಲಿ ಇರಬಹುದು ಎನ್ನುತ್ತಾರೆ. "ನನಗೆ 70 ವರ್ಷ ವಯಸ್ಸು. 40ವರ್ಷಗಳ ಹಿಂದಿನಿಂದಲೇ ಈ ಸ್ಥಳ ಎತ್ತರವಾಗಿದೆ" ಎಂದು ಹೇಳಿದರು.
ಸ್ಥಳೀಯರು ಹಾಗೂ ಯೂಟ್ಯೂಬರ್‌ಗಳ ಘರ್ಷಣೆ ನಂತರ ಶೋಧ ಸ್ಥಳದಲ್ಲಿ ರಾಜ್ಯಮಟ್ಟದ ಮಾಧ್ಯಮಗಳು ಮಾತ್ರ ಬೀಡುಬಿಟ್ಟಿವೆ. ಸ್ಥಳೀಯ ಯೂಟ್ಯೂಬರ್‌ಗಳು ಕಾಣುತ್ತಿಲ್ಲ.
ಧರ್ಮಸ್ಥಳ ಘರ್ಷಣೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಖಂಡಿಸಿದ್ದಾರೆ. ಮಾಧ್ಯಮದವರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.
ಧರ್ಮಸ್ಥಳದ ನೇತ್ರಾವತಿ ನದಿ ಸುತ್ತಮುತ್ತ ಕಳೆದ ಹತ್ತು ದಿನಗಳಿಂದ ಎಸ್‌ಐಟಿ ಅಧಿಕಾರಿಗಳು ಶೋಧಕಾರ್ಯ ನಡೆಸುತ್ತಿದ್ದು, ದೂರುದಾರ ಗುರುತಿಸಿದ್ದ ಕೆಲವು ಸ್ಥಳಗಳಲ್ಲಿ ಅಸ್ಥಿಪಂಜರ ಸಮೇತ ಮೂಳೆಗಳು ದೊರೆತಿದ್ದವು.
ಈ ಕುರಿತು ಕಾರ್ಕಳ ಶಾಸಕ ಸುನೀಲ್ ಕುಮಾರ್ ತಮ್ಮ ಸಾಮಜಿಕ ಜಾಲತಾಣ ʼಎಕ್ಸ್ʼನಲ್ಲಿ ಪ್ರತಿಕ್ರಿಯಿಸಿದ್ದು, "ನೇತ್ರಾವತಿ ತಟದಲ್ಲಿ ತನಿಖೆ, ಬುರುಡೆ ಶೋಧದ ನೆಪದಲ್ಲಿ ಹಿಂದೂ ಧಾರ್ಮಿಕ ಕೇಂದ್ರಗಳ ವಿರುದ್ಧ ನಡೆಯುವ ಅಪಪ್ರಚಾರವನ್ನು ಸಹಿಸುವುದಕ್ಕೆ ಸಾಧ್ಯವಿಲ್ಲ. ಹೋರಾಟ ಹಾಗೂ ತನಿಖೆ ಜನರ ನಂಬಿಕೆಯನ್ನು ಘಾಸಿಗೊಳಿಸುವಂತಿರಬಾರದು. ಸರ್ಕಾರ ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಜಾಗೃತ ಹೆಜ್ಜೆ ಇಡಲಿ. ಜನರು ಬೀದಿಗೆ ಇಳಿಯುವ ಸಂದರ್ಭ ಸೃಷ್ಟಿಯಾಗದಿರಲಿ" ಎಂದು ತಿಳಿಸಿದ್ದಾರೆ.
ಎಸ್‌ಐಟಿ ಮುಖ್ಯಸ್ಥ ಪ್ರಣಬ್ ಮೊಹಂತಿ ಸೇರಿದಂತೆ ಎಲ್ಲಾ ಅಧಿಕಾರಿಗಳು ಪ್ರಮುಖ ಮಾಹಿತಿದಾರ ಭೀಮ ಮತ್ತು ಇತರ ನಾಲ್ವರನ್ನು ವಿಚಾರಣೆ ನಡೆಸಿ ವಾಪಸ್ ಕಳಿಸಿದ್ದಾರೆ. ಇಂದು ನಡೆಯಬೇಕಿದ್ದ 13ನೇ ಸ್ಥಳದ ಶೋಧಕಾರ್ಯ ರದ್ದುಗೊಳಿಸಲಾಗಿದೆ.
ಅಧಿಕಾರಿಗಳು 13ನೇ ಸ್ಥಳದಲ್ಲಿ ಶೋಧಕಾರ್ಯ ಮಾಡುವ ಮೊದಲು ರಾಡರ್ ಉಪಯೋಗ ಮಾಡುವ ಬಗ್ಗೆ ನಿರ್ಧಾರ ಮಾಡಿದ್ದು, ಇದಕ್ಕೆ ಇನ್ನಷ್ಟು ದಿನದ ಅವಶ್ಯಕತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಧರ್ಮಸ್ಥಳದಲ್ಲಿ ದೂರುದಾರ ಗುರುತಿಸಿದ್ದ 13ನೇ ಪಾಯಿಂಟ್‌ನಲ್ಲಿ ಗುರವಾರ ಶೋಧ ಕಾರ್ಯ ಮಾಡಬೇಕಿತ್ತು. ಆದರೆ ಸಂಜೆಯಾದರೂ ಎಸ್‌ಐಟಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸದಿರುವುದರಿಂದ ಇಂದು ಬಹುತೇಕ ಶೋಧಕಾರ್ಯ ಮಾಡುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ಯೂಟ್ಯೂಬರ್ ಗಳ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಗುರುವಾರ ಧರ್ಮಸ್ಥಳದಲ್ಲಿ ಭದ್ರತೆ ಒದಗಿಸಲಾಗಿದೆ. ಕೇವಲ ಮುಖ್ಯವಾಹಿನಿ ಮಾಧ್ಯಮಗಳ ಪ್ರತಿನಿಧಿಗಳು,ಕ್ಯಾಮರಾಮೆನ್ ಮಾತ್ರ ಸ್ಥಳದಲ್ಲಿದ್ದು, ಯೂಟ್ಯೂಬರ್‌ಗಳು ಇಲ್ಲ. ಮುಂಜಾಗ್ರತಾ ಕ್ರಮವಾಗಿ 2 ಕೆಎಸ್‌ಆರ್‌ಪಿ ತುಕಡಿ ಮತ್ತು 4 ಗನ್ ಮ್ಯಾನ್‌ಗಳನ್ನು ನಿಯೋಜಿಸಲಾಗಿದೆ.