LIVE New Twist in Dharmasthala Case: Another Skeleton Found on 6th Day of Search?
x

ಶೋಧ ಕಾರ್ಯ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು.

ಧರ್ಮಸ್ಥಳ ಪ್ರಕರಣ | ಮತ್ತೆ ಬಂಗ್ಲಗುಡ್ಡದಲ್ಲಿ ಶೋಧ; ಎಫ್‌ಎಸ್‌ಎಲ್‌ ಪರೀಕ್ಷೆಗಾಗಿ ತಲೆಬುರುಡೆ ಬೆಂಗಳೂರಿಗೆ ರವಾನೆ

ಜುಲೈ 3, 4 ಹಾಗೂ 5 ನೇ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆದಿತ್ತು. ಆದರೆ, ಯಾವುದೇ ಕಳೇಬರ ಪತ್ತೆಯಾಗಿರಲಿಲ್ಲ. ಆದರೆ, ಜುಲೈ 31 ರಂದು 6ನೇ ಪಾಯಿಂಟ್‌ನಲ್ಲಿ ಅಸ್ಥಿಪಂಜರ ಪತ್ತೆಯಾಗಿತ್ತು.


ಧರ್ಮಸ್ಥಳದಲ್ಲಿ ಶವ ಹೂತಿಟ್ಟಿರುವ ಆರೋಪಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಲ್ಲಿ ಎಸ್‌ಐಟಿ ಅಧಿಕಾರಿಗಳ ಎದುರು ಸಾಕ್ಷ್ಯ ನುಡಿಯಲು ಆರು ಮಂದಿ ಸ್ಥಳೀಯರು ಮುಂದೆ ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದರಿಂದ ದೂರು ಸಾಕ್ಷಿದಾರನಿಗೆ ಹೆಚ್ಚಿನ ಬೆಂಬಲ ಸಿಕ್ಕಂತಾಗಿದೆ.

ಎಸ್‌ಐಟಿ ಅಧಿಕಾರಿಗಳು 13ನೇ ಪಾಯಿಂಟ್‌ನಲ್ಲಿ ಶೋಧ ಕಾರ್ಯ ಆರಂಭಿಸಿದ ಬೆನ್ನಲ್ಲೇ ದೂರು ಸಾಕ್ಷಿದಾರನ ಪರವಾಗಿ ಆರು ಮಂದಿ ಸ್ಥಳೀಯರು ಬಂದಿದ್ದು, ಶವ ಹೂತು ಹಾಕಿರುವುದನ್ನು ನಾವೂ ನೋಡಿದ್ದೇವೆ ಎಂದು ಹೇಳಿಕೆ ನೀಡಿರುವುದು ಪ್ರಕರಣದಲ್ಲಿ ಸಂಚಲನ ಮೂಡಿಸಿದೆ. 13 ನೇ ಸ್ಥಳದಲ್ಲಿ ಹೆಚ್ಚಿನ ಅಸ್ಥಿಪಂಜರಗಳು ದೊರೆಯಲಿವೆ ಎಂದು ಸಾಕ್ಷಿದಾರ ಹೇಳಿದ್ದ.

ದೂರುದಾರ ವ್ಯಕ್ತಿಯು ನೇತ್ರಾವತಿ ನದಿ ಸುತ್ತಮುತ್ತ ಜುಲೈ 28 ರಂದು ಒಟ್ಟು 13 ಸ್ಥಳಗಳನ್ನು ಎಸ್‌ಐಟಿ ಅಧಿಕಾರಿಗಳ ಸಮ್ಮುಖದಲ್ಲಿ ಗುರುತಿಸಿದ್ದ. ಜುಲೈ 29 ರಂದು 1 ಹಾಗೂ 2ನೇ ಪಾಯಿಂಟ್‌ನಲ್ಲಿ ಶೋಧಕಾರ್ಯ ಆರಂಭಿಸಿದ್ದ ಎಸ್‌ಐಟಿ ಅಧಿಕಾರಿಗಳಿಗೆ ಯಾವುದೇ ಕುರುಹು ಸಿಕ್ಕಿರಲಿಲ್ಲ. ಜುಲೈ 3, 4 ಹಾಗೂ 5 ನೇ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆದಿತ್ತು. ಅಲ್ಲಿಯೂ ಯಾವುದೇ ಕಳೇಬರ ಪತ್ತೆಯಾಗಿರಲಿಲ್ಲ. ಆದರೆ, ಜುಲೈ 31 ರಂದು 6ನೇ ಪಾಯಿಂಟ್‌ನಲ್ಲಿ ಅಸ್ಥಿಪಂಜರ ಪತ್ತೆಯಾಗಿತ್ತು.

ಆರನೇ ಪಾಯಿಂಟ್‌ನಲ್ಲಿ ದೊರೆತ ಅಸ್ಥಿಪಂಜರವನ್ನು ಉಡುಪಿಯ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆ.1ರಂದು 7 ಹಾಗೂ 8ನೇ ಪಾಯಿಂಟ್‌ ಹಾಗೂ ಆ. 2ರಂದು 9 ಹಾಗೂ 10ನೇ ಪಾಯಿಂಟ್‌ನಲ್ಲಿ ಅಧಿಕಾರಿಗಳಿಗೆ ಯಾವುದೇ ಕುರುಹುಗಳು ಸಿಕ್ಕಿರಲಿಲ್ಲ.

ಆ. 4ರಂದು 11ನೇ ಪಾಯಿಂಟ್‌ನಲ್ಲಿ ಅಧಿಕಾರಿಗಳು ಶೋಧ ಕಾರ್ಯ ಆರಂಭಿಸುವ ವೇಳೆಗೆ ದೂರುದಾರ ನಿಗದಿತ ಸ್ಥಳದ ಬದಲು ಬಂಗ್ಲಗುಡ್ಡದಲ್ಲಿ ಶೋಧ ಕಾರ್ಯ ಮಾಡಲು ತಿಳಿಸಿದ್ದ. ದೂರುದಾರ ತೋರಿಸಿದ ಸ್ಥಳದಲ್ಲಿ ಶೋಧ ಕಾರ್ಯ ಆರಂಭಿಸಿದಾಗ ಅಸ್ಥಿಪಂಜರದ ನೂರಕ್ಕೂ ಹೆಚ್ಚು ಮೂಳೆಗಳು ಅಧಿಕಾರಿಗಳಿಗೆ ಸಿಕ್ಕಿದ್ದವು. ಇದರಿಂದ ತನಿಖೆಗೆ ಮತ್ತಷ್ಟು ವೇಗ ಸಿಕ್ಕಿತ್ತು. ಸುರಿಯುತ್ತಿದ್ದ ನಿರಂತರ ಮಳೆ ನಡುವೆಯೂ ಎಸ್‌ಐಟಿ ಅಧಿಕಾರಿಗಳು ಹಿಟಾಚಿ ಯಂತ್ರದ ಮೂಲಕ ಶೋಧ ಕಾರ್ಯ ಮುಂದುವರೆಸಿದ್ದರು.

13ನೇ ಪಾಯಿಂಟ್‌ ಶೋಧ ಕಾರ್ಯ ಮುಗಿದ ನಂತರ ಮುಂದಿನ ತನಿಖೆ ಯಾವ ರೀತಿ ನಡೆಯಬೇಕೆಂದು ಅಧಿಕಾರಿಗಳ ತಂಡ ಸಭೆ ಮಾಡಿ ಚರ್ಚಿಸಿತ್ತು. ಎರಡು ಸ್ಥಳಗಳಲ್ಲಿ ಸಿಕ್ಕ ಅಸ್ಥಿಪಂಜರಗಳನ್ನು ಪ್ರತ್ಯೇಕವಾಗಿ ಇರಿಸಿದ್ದು, ಪ್ರತ್ಯೇಕ ಎಫ್‌ಐಆರ್‌ ದಾಖಲಿಸಲಾಗಿದೆ.

Live Updates

  • 6 Aug 2025 4:29 PM IST

    ಅಧಿಕಾರಿಗಳೊಂದಿಗೆ ಎಸ್‌ಐಟಿ ಮುಖ್ಯಸ್ಥ ಪ್ರಣಬ್‌ ಮೊಹಂತಿ ಸಭೆ

    ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿ ಎಸ್‌ಐಟಿ ಮುಖ್ಯಸ್ಥ ಪ್ರಣಬ್‌ ಮೊಹಂತಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಶೋಧ ಕಾರ್ಯದ ಪ್ರಸ್ತುತ ವರದಿಯನ್ನು ಪಡೆದಿದ್ದಾರೆ. ಸಭೆಯಲ್ಲಿ ಡಿಐಜಿಪಿ ಅನುಚೇತ್‌, ಎಸ್‌ಪಿ ಸೈಮನ್‌ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಸಭೆಗೂ ಮೊದಲು ಶೋಧಕಾರ್ಯ ಸ್ಥಳಕ್ಕೆ ಪ್ರಣಬ್‌ ಮೊಹಂತಿ ಭೇಟಿ ನೀಡಿ ಪರೀಶಿಲನೆ ನಡೆಸಿದ್ದರು.

     



     


  • 6 Aug 2025 3:20 PM IST

    11ಎ ನೇ ಪಾಯಿಂಟ್‌ನಲ್ಲಿ ಶೋಧ ಕಾರ್ಯ ಆರಂಭ

    ಅಧಿಕಾರಿಗಳು 11ಎ ಪಾಯಿಂಟ್‌ನಲ್ಲಿ ಶೋಧ ಕಾರ್ಯ ಆರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಎಸ್‌ಐಟಿ ಮುಖ್ಯಸ್ಥ ಹಿರಿಯ ಐಪಿಎಸ್‌ ಅಧಿಕಾರಿ ಪ್ರಣಬ್‌ ಮೊಹಂತಿ ಸ್ಥಳಕ್ಕೆ ಭೇಟಿ ನೀಡಿದ್ದು ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಈ ನಡುವೆಯೇ ಎಸ್‌ಐಟಿ ಅಧಿಕಾರಿಗಳು ಧರ್ಮಸ್ಥಳ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ್ದು, ಹಲವು ಮಾಹಿತಿ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

     

     

  • 6 Aug 2025 2:32 PM IST

    ಶೋಧ ಕಾರ್ಯ ಸ್ಥಳಕ್ಕೆ ಎಸ್‌ಐಟಿ ಮುಖ್ಯಸ್ಥ ಪ್ರಣಬ್‌ ಮೊಹಂತಿ ಭೇಟಿ

    ಧರ್ಮಸ್ಥಳದಲ್ಲಿ ನಡೆಯುತ್ತಿರುವ ಶೋಧ ಕಾರ್ಯ ಸ್ಥಳಕ್ಕೆ ಎಸ್‌ಐಟಿ ಮುಖ್ಯಸ್ಥ ಪ್ರಣಬ್‌ ಮೊಹಂತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳೆದ ಹತ್ತು ದಿನಗಳಿಂದ ಅಧಿಕಾರಿಗಳು ನಡೆಸುತ್ತಿರುವ ತನಿಖೆಯ ವರದಿಯನ್ನು ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

     

     

     

  • 6 Aug 2025 1:41 PM IST

    ದೂರುದಾರ ನೀಡಿದ್ದ ತಲೆಬುರುಡೆ ಹೆಚ್ಚಿನ ತನಿಖೆಗಾಗಿ ಬೆಂಗಳೂರಿಗೆ ರವಾನೆ

    ಧರ್ಮಸ್ಥಳದಲ್ಲಿ ಪ್ರಕರಣದ ಆರಂಭದಲ್ಲಿ ದೂರುದಾರ ಮಹಿಳೆಯ ತಲೆಬುರುಡೆ ಎಂದು ಎಸ್‌ಐಟಿ ಅಧಿಕಾರಿಗಳಿಗೆ ತಲೆಬುರುಡೆ ನೀಡಿದ್ದರು. ಸಾಕ್ಷಿದಾರ ನೀಡಿದ್ದ ತಲೆಬುರುಡೆ ಮಹಿಳೆಯದ್ದಲ್ಲ, ಪುರುಷನದು ಎಂದು ಎಸ್‌ಐಟಿ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದು, ಹೆಚ್ಚಿನ ತನಿಖೆಗಾಗಿ ಬೆಂಗಳೂರಿಗೆ ಕಳುಹಿಸಿಕೊಡಲಾಗಿದೆ ಎಂದು ಮೂಲಗಳು ತಿಳಿಸಿವೆ.

     

  • 6 Aug 2025 12:19 PM IST

    ಧರ್ಮಸ್ಥಳ ಪ್ರಕರಣ: ದೂರುದಾರನ ಬೆಂಬಲಕ್ಕೆ ನಿಂತ ಸ್ಥಳೀಯರು

    ಧರ್ಮಸ್ಥಳ ಪ್ರಕರಣದಲ್ಲಿ ಎಸ್‌ಐಟಿ ಅಧಿಕಾರಿಗಳು 13ನೇ ಪಾಯಿಂಟ್‌ನಲ್ಲಿ ಶೋಧ ಕಾರ್ಯ ಆರಂಭಿಸಿದ್ದಾರೆ. ಈ ನಡುವೆಯೇ ದೂರುದಾರನ ಪರ ಆರು ಮಂದಿ ಸ್ಥಳೀಯರು ಬೆಂಬಲಕ್ಕೆ ಬಂದಿದ್ದು, ಶವಗಳನ್ನು ಹೂತು ಹಾಕಿದ್ದನ್ನು ನಾವು ನೋಡಿದ್ದೇವೆ ಎಂದು ಹೇಳಿಕೆ ನೀಡಿದ್ದು ತೀವ್ರ ಕುತೂಹಲ ಮೂಡಿಸಿದೆ. 

     

  • 6 Aug 2025 11:53 AM IST

    ಎಸ್‌ಐಟಿಗೆ ದೂರು ವರ್ಗಾವಣೆ ಮಾಡಿ ಆದೇಶ

    ಧರ್ಮಸ್ಥಳ ಗ್ರಾಮದಲ್ಲಿ 15 ವರ್ಷಗಳ ಹಿಂದೆ ಬಾಲಕಿಯ ಮೃತದೇಹವನ್ನು ಯಾವುದೇ ಕಾನೂನು ಪ್ರಕ್ರಿಯೆ  ನಡೆಸದೇ ಹೂತು ಹಾಕಲಾಗಿದೆ ಎಂದು ಆರೋಪಿಸಿ ಕಡಬ ತಾಲ್ಲೂಕಿನ ಇಚಲಂಪಾಡಿ ಗ್ರಾಮದ ಜಯಂತ್ ಟಿ. ಎಂಬುವರು ನೀಡಿದ್ದ ದೂರನ್ನು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ವರ್ಗಾಯಿಸಲಾಗಿದೆ.

     ಜಯಂತ್ ಟಿ. ಅವರು ಧರ್ಮಸ್ಥಳ ಠಾಣೆಗೆ ನೀಡಿರುವ ದೂರನ್ನು (200/DPS/2025) ಮುಂದಿನ ವಿಚಾರಣೆಗಾಗಿ ಎಸ್‌ಐಟಿಗೆ ಹಸ್ತಾಂತರಿಸುವಂತೆ ಡಿಜಿಪಿ ಮತ್ತು ಐಜಿಪಿ ಎಂ.ಎ.ಸಲೀಂ ಆದೇಶ ಮಾಡಿದ್ದಾರೆ' ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಮೂಲಗಳು ತಿಳಿಸಿವೆ.

     

Read More
Next Story