ಧರ್ಮಸ್ಥಳ ಪ್ರಕರಣ, ಎಸ್ಐಟಿ ಹಿಂದಿನ ಶಕ್ತಿಗಳನ್ನು ಪತ್ತೆ ಮಾಡಲಿ: ವಿ. ಸುನೀಲ್ ಕುಮಾರ್
ಈ ಪ್ರಕರಣದಲ್ಲಿ ಕೇವಲ ಒಬ್ಬ ಮುಸುಕುಧಾರಿಯಲ್ಲ, ಹತ್ತಾರು ಮುಸುಕುಧಾರಿಗಳು ಕೆಲಸ ಮಾಡಿದ್ದಾರೆ ಎಂದು ನಾನು ಸದನದಲ್ಲೇ ಹೇಳಿದ್ದೆ ಎಂದು ಸುನೀಲ್ ಕುಮಾರ್ ಹೇಳಿದ್ದಾರೆ.;
ಧರ್ಮಸ್ಥಳ ಪ್ರಕರಣವು ಹಿಂದೂ ಧಾರ್ಮಿಕ ಕ್ಷೇತ್ರವನ್ನು ಅವಹೇಳನ ಮಾಡುವ ಒಂದು ವ್ಯವಸ್ಥಿತ ಷಡ್ಯಂತ್ರವಾಗಿದ್ದು, ಇದರ ಹಿಂದಿರುವ ನಿಜವಾದ ಶಕ್ತಿಗಳನ್ನು ವಿಶೇಷ ತನಿಖಾ ತಂಡ (SIT) ಪತ್ತೆ ಹಚ್ಚಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ವಿ. ಸುನೀಲ್ ಕುಮಾರ್ ಅವರು ಆಗ್ರಹಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಈ ಪ್ರಕರಣದಲ್ಲಿ ಕೇವಲ ಒಬ್ಬ ಮುಸುಕುಧಾರಿಯಲ್ಲ, ಹತ್ತಾರು ಮುಸುಕುಧಾರಿಗಳು ಕೆಲಸ ಮಾಡಿದ್ದಾರೆ ಎಂದು ನಾನು ಸದನದಲ್ಲೇ ಹೇಳಿದ್ದೆ. ಸುಳ್ಳು ಸುದ್ದಿ ಹರಡಿದವರು ಯಾರು, ಈ ಪಿತೂರಿಯ ಹಿಂದಿರುವವರು ಯಾರು ಎಂಬುದು ತನಿಖೆಯಿಂದ ಹೊರಬರಬೇಕು. ಬಿಜೆಪಿ ತನಿಖೆಯಲ್ಲಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ, ಆದರೆ ತನಿಖೆಯ ಹೆಸರಿನಲ್ಲಿ ಧಾರ್ಮಿಕ ಕ್ಷೇತ್ರದ ಅಪಪ್ರಚಾರ ನಿಲ್ಲಬೇಕು," ಎಂದು ಸ್ಪಷ್ಟಪಡಿಸಿದರು.
ಜಾತಿ ಪಟ್ಟಿ ಆಕ್ಷೇಪಣೆಗೆ ಕಾಲಾವಕಾಶ ವಿಸ್ತರಣೆಗೆ ಮನವಿ
ಇದೇ ಸಂದರ್ಭದಲ್ಲಿ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಪ್ರಕಟಿಸಿರುವ ಜಾತಿ ಮತ್ತು ಉಪಜಾತಿಗಳ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ನೀಡಿರುವ 7 ದಿನಗಳ ಕಾಲಾವಕಾಶವನ್ನು ವಿಸ್ತರಿಸುವಂತೆ ಅವರು ಮನವಿ ಮಾಡಿದರು. "ಸದ್ಯ ಸಾಲು ಸಾಲು ಹಬ್ಬಗಳು ಮತ್ತು ಸರ್ಕಾರಿ ರಜೆಗಳಿರುವುದರಿಂದ ಆಕ್ಷೇಪಣೆ ಸಲ್ಲಿಸಲು ಹೆಚ್ಚಿನ ಸಮಯ ಬೇಕಾಗಿದೆ. ಹೀಗಾಗಿ, ಹೆಚ್ಚುವರಿಯಾಗಿ 10 ದಿನಗಳ ಕಾಲಾವಕಾಶ ನೀಡುವಂತೆ ಬಿಜೆಪಿ ವತಿಯಿಂದ ಆಯೋಗದ ಅಧ್ಯಕ್ಷರಿಗೆ ಪತ್ರ ಬರೆಯಲಾಗಿದೆ," ಎಂದು ತಿಳಿಸಿದರು.
"ಆಯೋಗ ಪ್ರಕಟಿಸಿರುವ 1,400 ಜಾತಿಗಳ ಪಟ್ಟಿಯಲ್ಲಿ ಮುಸ್ಲಿಮರ ಉಪಜಾತಿಗಳನ್ನು ಕೈಬಿಡಲಾಗಿದೆ. ಈ ಹಿಂದೆ ಜಯಪ್ರಕಾಶ್ ಹೆಗ್ಡೆ ಅವರ ವರದಿಯಲ್ಲಿ 90 ಮುಸ್ಲಿಂ ಉಪಜಾತಿಗಳಿವೆ ಎಂದು ಹೇಳಲಾಗಿತ್ತು. ಆದರೆ, ಈಗಿನ ಪಟ್ಟಿಯಲ್ಲಿ ಅವನ್ನು ಏಕೆ ಕೈಬಿಡಲಾಗಿದೆ ಎಂಬ ಬಗ್ಗೆ ಗೊಂದಲವಿದೆ," ಎಂದು ಪ್ರಶ್ನಿಸಿದರು. ಈ ಎಲ್ಲಾ ಗೊಂದಲಗಳ ಬಗ್ಗೆ ಚರ್ಚಿಸಲು ಮುಂದಿನ ವಾರ ಬಿಜೆಪಿ ನಿಯೋಗವು ಆಯೋಗವನ್ನು ಭೇಟಿ ಮಾಡಲಿದೆ ಎಂದರು.
ದಸರಾ ಮತ್ತು ಡಿಕೆಶಿ ಕ್ಷಮೆ ಕುರಿತು ಟೀಕೆ
ದಸರಾ ಉದ್ಘಾಟಕಿಯರ ವಿವಾದದ ಕುರಿತು ಪ್ರತಿಕ್ರಿಯಿಸಿದ ಅವರು, "ವಿಗ್ರಹಾರಾಧನೆಯನ್ನು ಒಪ್ಪದವರನ್ನು ದಸರಾ ಉದ್ಘಾಟನೆಗೆ ಕರೆದಿರುವುದು ಸರ್ಕಾರದ ಬೇಜವಾಬ್ದಾರಿತನ. ಇದು ಪ್ರತಿಬಾರಿಯೂ ಹಿಂದೂಗಳನ್ನು ಅವಮಾನಿಸುವ ಸಿದ್ದರಾಮಯ್ಯನವರ ಉದ್ದೇಶದ ಭಾಗವಾಗಿದೆ," ಎಂದು ಟೀಕಿಸಿದರು.
ಇನ್ನು, ಡಿ.ಕೆ. ಶಿವಕುಮಾರ್ ಅವರು ಆರ್‌ಎಸ್‌ಎಸ್ ಪ್ರಾರ್ಥನೆ ಹೇಳಿದ್ದಕ್ಕೆ ಕ್ಷಮೆ ಕೇಳಿರುವ ಬಗ್ಗೆ ಮಾತನಾಡಿದ ಅವರು, "ಯಾರದೋ ಒತ್ತಡಕ್ಕೆ ಮಣಿದು ದೇಶಭಕ್ತಿ ಸಾರುವ ಪ್ರಾರ್ಥನೆಗೆ ಕ್ಷಮೆ ಕೇಳಿರುವುದು ದುರಂತ. ವಿಧಾನಸೌಧದ ಆವರಣದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದಾಗ ಅಥವಾ ಜಾರಕಿಹೊಳಿ ಅವರು ಹಿಂದೂ ಶಬ್ದವನ್ನು ಅಶ್ಲೀಲ ಎಂದಾಗ ಕ್ಷಮೆ ಕೇಳಬೇಕಿತ್ತು, ದೇಶಭಕ್ತಿಯ ಪ್ರಾರ್ಥನೆಗಲ್ಲ," ಎಂದು ಆಕ್ಷೇಪ ವ್ಯಕ್ತಪಡಿಸಿದರು.