ಧರ್ಮಸ್ಥಳ ಪ್ರಕರಣ| ಮಹೇಶ್‌ ಶೆಟ್ಟಿ ತಿಮರೋಡಿ ದೂರು ಸ್ವೀಕಾರ, ಎಸ್‌ಐಟಿ ವಿವೇಚನೆಗೆ

ಪ್ರತಿನಿತ್ಯ ನಾವು ಏನು ಮಾಡುತ್ತಿದ್ದೇವೆ ಎಂದು ಎಸ್‌ಐಟಿಯವರು, ಮಾಧ್ಯಮಕ್ಕಾಗಲಿ ಅಥವಾ ಸಾರ್ವಜನಿಕರಿಗಾಗಲಿ ಹೇಳುವುದಿಲ್ಲ. ಅನೇಕ ವಿಚಾರಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವುದಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ತಿಳಿಸಿದರು.;

Update: 2025-09-12 10:19 GMT

ಗೃಹ ಸಚಿವ ಡಾ.ಜಿ ಪರಮೇಶ್ವರ್‌

Click the Play button to listen to article

ಧರ್ಮಸ್ಥಳದ ಅತಿಥಿ ಗೃಹಗಳಲ್ಲಿ ನಾಲ್ಕು ಅನುಮಾನಸ್ಪದ ಸಾವುಗಳಾಗಿವೆ ಎಂದು ಮಹೇಶ್ ಶೆಟ್ಟಿ ತಿಮರೋಡಿ ನೀಡಿರುವ ದೂರು ತೆಗೆದುಕೊಳ್ಳಬೇಕೆ, ಬೇಡವೇ ಎಂಬುದನ್ನು ಎಸ್‌ಐಟಿ ಅಧಿಕಾರಿಗಳು ಪರಿಶೀಲಿಸುತ್ತಾರೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ತಿಳಿಸಿದರು.

ಶುಕ್ರವಾರ ಸದಾಶಿವನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಕರಣ ಬೇರೆ ದಿಕ್ಕಿಗೆ ಹೋಗುವಂತ ಪ್ರಯತ್ನ ನಡೆದರೆ, ಎಸ್‌ಐಟಿ ಅಧಿಕಾರಿಗಳು ವಿಭಿನ್ನ ರೀತಿಯಲ್ಲಿ ತನಿಖೆ ಮಾಡುತ್ತಾರೆ. ಯಾರೋ ಕೊಟ್ಟ ಹೇಳಿಕೆ ಮೇಲೆ ನಾವು ತೀರ್ಮಾನ ಮಾಡುವುದಿಲ್ಲ. ಎಸ್‌ಐಟಿ ಮುಂದೆ ಏನು ದೂರು, ಸಾಕ್ಷ್ಯ ಕೊಟ್ಟಿರುತ್ತಾರೆ ಎಂಬುದನ್ನು ನೋಡಿ ಎಸ್‌ಐಟಿಯವರು ತೀರ್ಮಾನ ಮಾಡುತ್ತಾರೆ. ಸರ್ಕಾರದ ಅನುಮತಿ ಬೇಕೆಂದರೆ ಅಧಿಕಾರಿಗಳು ಕೇಳುತ್ತಾರೆ. ಸದ್ಯಕ್ಕೆ ಯಾವುದೇ ಅನುಮತಿ ಕೇಳಿಲ್ಲ ಎಂದು ಹೇಳಿದರು.

ಪ್ರತಿನಿತ್ಯ ನಾವು ಏನು ಮಾಡುತ್ತಿದ್ದೇವೆ ಎಂದು ಎಸ್‌ಐಟಿಯವರು, ಮಾಧ್ಯಮಕ್ಕಾಗಲಿ ಅಥವಾ ಸಾರ್ವಜನಿಕರಿಗಾಗಲಿ ಹೇಳುವುದಿಲ್ಲ. ಅನೇಕ ವಿಚಾರಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವುದಿಲ್ಲ. ಇದರಿಂದ ಎಸ್‌ಐಟಿ ವೇಗ ಕಳೆದುಕೊಂಡಿದೆ, ತನಿಖೆ ನಡೆಯುತ್ತಿಲ್ಲ ಎಂದುಕೊಳ್ಳಬಾರದು. ಅನೇಕ ವಿಚಾರಗಳಲ್ಲಿ ಸಂಪೂರ್ಣ ಮಾಹಿತಿ ಬರುವವರೆಗೂ ಎಸ್‌ಐಟಿಯವರು ನಮಗೂ ಹೇಳುವುದಿಲ್ಲ ಎಂದರು.

ಎಸ್‌ಐಟಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ

ಧರ್ಮಸ್ಥಳ ಆರೋಪ ಪ್ರಕರಣದಲ್ಲಿ ಅನಾಮಿಕ ದೂರುದಾರನ ಬೆಂಬಲವಾಗಿ ನಿಂತವರಲ್ಲಿ ಯಾರನ್ನು ಬಂಧಿಸಬೇಕು, ಯಾವಾಗ ಬಂಧಿಸಬೇಕು ಎಂಬುದನ್ನು ನಾವು ಎಸ್‌ಐಟಿಗೆ ಹೇಳಲು ಸಾಧ್ಯವಿಲ್ಲ. ಮಾಧ್ಯಮದವರು ಹೇಳಿದನ್ನು ಗಣನೆಗೆ ತೆಗೆದುಕೊಂಡು ಕೂಡಲೇ ಬಂಧಿಸಲೂ ಆಗುವುದಿಲ್ಲ. ಅವರಿಗೆ ಏನು ಮಾಹಿತಿ ಇದೆ, ಬೇಕಾದ ಅಗತ್ಯ ಪುರಾವೆ, ಸಾಕ್ಷ್ಯ  ಪ್ರಕಾರ ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು.

ಜಾತಿ,ಧರ್ಮ ನೋಡದೆ ಕ್ರಮ

ಮದ್ದೂರು ಘಟನೆಯಲ್ಲಿ ಕಾನೂನಿಗೆ ವಿರುದ್ಧವಾಗಿ ಯಾರೇ ನಡೆದುಕೊಂಡಿದ್ದರೂ, ಅಂಥವರ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ. ಕೆಲವರು ಅಲ್ಲಿಗೆ ಹೋಗಿ ಪ್ರಚೋದನಾಕಾರಿಯಾಗಿ ಭಾಷಣ ಮಾಡುವುದು ಸರಿಯಲ್ಲ. ನಾವು ಮೊದಲಿಂದಲೂ ರಾಜಕೀಯ ಮಾಡಬೇಡಿ ಎಂದು ಹೇಳುತ್ತಿದ್ದೇವೆ. ಪೊಲೀಸರಿಗೆ ಪೂರ್ಣ ಸ್ವಾತಂತ್ರ್ಯ ನೀಡಿದ್ದು, ಕಲ್ಲು ಹೊಡೆದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತಾರೆ. ಮುಸಲ್ಮಾನರಾಗಿರಲಿ, ಹಿಂದೂವಾಗಿರಲಿ ಯಾರೇ ಆದರೂ ಕ್ರಮ ತೆಗೆದುಕೊಳ್ಳುತ್ತಾರೆ. ಕೆಲವರು ಹೋಗಿ ಪ್ರಚೋದನಾಕಾರಿಯಾಗಿ ಭಾಷಣ ಮಾಡಿ, ಜನರ ನಡುವೆ ವಿಷಬೀಜ ಬಿತ್ತುವುದು ಸರಿಯಲ್ಲ ಎಂದರು.

ಬಾನು ಮುಷ್ತಾಕ್‌ಗೆ ಭದ್ರತೆ

ಮಂಡ್ಯ ಎಎಸ್‌ಪಿ ವರ್ಗಾವಣೆ ಕುರಿತು ಪ್ರತಿಕ್ರಿಯಿಸಿ, ಆಂತರಿಕವಾಗಿ ಎಲ್ಲಿ ಲೋಪ ಕಂಡಿದೆ, ಅದಕ್ಕೆ ಕ್ರಮ ತೆಗೆದುಕೊಳ್ಳಬೇಕಲ್ಲವೇ? ಒಬ್ಬ ಇನ್‌ಸ್ಪೆಕ್ಟರ್ ಆಗಿರಬಹುದು, ಸಬ್ ಇನ್‌ಸ್ಪೆಕ್ಟರ್ ಆಗಿರಬಹುದು, ಅವರ ಕರ್ತವ್ಯ ಲೋಪ ಕಂಡು ಬಂದಾಗ ಇಲಾಖೆ ಕ್ರಮ ತೆಗೆದುಕೊಳ್ಳುತ್ತದೆ. ಸಾಹಿತಿ ಬಾನು ಮುಷ್ತಾಕ್ ಅವರಿಗೆ ಭದ್ರತೆ ಕೊಡುತ್ತೇವೆ. ಈ ಬಗ್ಗೆ ಯಾರು ಹೇಳುವುದು ಬೇಕಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ವಯೋಮಿತಿ ಹೆಚ್ಚಳಕ್ಕೆ ಚರ್ಚೆ

ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿಯ ವಯೋಮಿತಿ ಸಡಿಲಿಕೆ ಬಗ್ಗೆ ಚರ್ಚೆ ಮಾಡಿದ್ದೇವೆ. ಬೇರೆ ರಾಜ್ಯದಲ್ಲಿ ಏನಿದೆ ಎಂಬುದನ್ನು ಪರಿಶೀಲನೆ ಮಾಡುತ್ತಿದ್ದೇವೆ. ಸುಮಾರು ವರ್ಷಗಳಿಂದ ಕಾನ್‌ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ ನಡೆದಿಲ್ಲ. ಎರಡು,‌ ಮೂರು ವರ್ಷ ವಯೋಮಿತಿ ಹೆಚ್ಚಳ ಮಾಡಿಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಅನೇಕ ಸಂದರ್ಭಗಳಲ್ಲಿ ವಿದ್ಯಾರ್ಥಿಗಳು ನನ್ನನ್ನು ಭೇಟಿ ಮಾಡಿದ್ದಾರೆ. ಬೇರೆ ರಾಜ್ಯದಲ್ಲಿನ ವಯೋಮಿತಿ ಪರಿಶೀಲನೆ ಮಾಡಿ, ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸುವಂತೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಪ್ರಸ್ತಾವನೆ ಬಂದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ಪೊಲೀಸ್ ದಂಪತಿ ಅಂತರ್ ಜಿಲ್ಲಾ ವರ್ಗಾವಣೆ‌ ಸರ್ಕಾರದ ಆದೇಶದಂತೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

Tags:    

Similar News