ಧರ್ಮಸ್ಥಳ ಪ್ರಕರಣ| ಅಸಹಜ ಸಾವುಗಳ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿ ʼನ್ಯಾಯ ಸಮಾವೇಶʼ
ಧರ್ಮಸ್ಥಳದಲ್ಲಿ ನಡೆಯುತ್ತಿರುವ ದೌರ್ಜನ್ಯಗಳು, ಅಸಹಜ ಸಾವುಗಳು ಮತ್ತು ಭೂ ಅಕ್ರಮಗಳಿಗೆ ನ್ಯಾಯ ಒದಗಿಸಬೇಕು. ರಾಜ್ಯ ಸರ್ಕಾರ ಕೂಡಲೇ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸಮಾವೇಶದಲ್ಲಿ ಒತ್ತಾಯಿಸಲಾಯಿತು.
ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ ವತಿಯಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಆರಂಭವಾಗಿರುವ ʼನ್ಯಾಯ ಸಮಾವೇಶʼದಲ್ಲಿ ಸೌಜನ್ಯ ಸಾವಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಲಾಯಿತು.
ಧರ್ಮಸ್ಥಳದ ಅಸಹಜ ಸಾವಿನ ಪ್ರಕರಣಗಳಿಗೆ ನ್ಯಾಯ ಸಿಗಬೇಕು, ಎಸ್ ಐಟಿ ತನಿಖೆಗೆ ಮುಕ್ತ ಸ್ವಾತಂತ್ರ್ಯ ನೀಡಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಸೌಜನ್ಯ ಪರ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್, ಹೈಕೋರ್ಟ್ ವಕೀಲ ಬಾಲನ್ , ಹೋರಾಟಗಾರ್ತಿ ವಿಮಲಾ, ಸಿಪಿಐ(ಎಂ) ಪಕ್ಷದ ರಾಜ್ಯ ಕಾರ್ಯದರ್ಶಿಡಾ. ಕೆ. ಪ್ರಕಾಶ್, ಬಿಗ್ ಬಾಸ್ ಖ್ಯಾತಿಯ ರಜತ್ ಕುಮಾರ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.
ಧರ್ಮಸ್ಥಳದಲ್ಲಿ ನಡೆಯುತ್ತಿರುವ ದೌರ್ಜನ್ಯಗಳು, ಅಸಹಜ ಸಾವುಗಳು ಮತ್ತು ಭೂ ಅಕ್ರಮಗಳಿಗೆ ನ್ಯಾಯ ಒದಗಿಸಬೇಕು. ರಾಜ್ಯ ಸರ್ಕಾರ ಕೂಡಲೇ ಬೇಡಿಕೆಗಳನ್ನು ಈಡೇರಿಸಬೇಕು. ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿರುವ ನೂರಾರು ಅಸಹಜ ಸಾವುಗಳ ಬಗ್ಗೆ ಸಮಗ್ರ ತನಿಖೆ ನಡೆಸಲು ಎಸ್ಐಟಿಗೆ ಮುಕ್ತ ಸ್ವಾತಂತ್ರ್ಯ ನೀಡಬೇಕು ಎಂದು ಹೋರಾಟಗಾರರು, ಮುಖಂಡರು ಆಗ್ರಹಿಸಿದ್ದಾರೆ.
ಭೂ ಅಕ್ರಮ, ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಆಗುತ್ತಿರುವ ದೌರ್ಜನ್ಯಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು. ನಿರ್ದಿಷ್ಟವಾಗಿ, ಹತ್ಯೆಗೀಡಾದ ಪದ್ಮಲತಾ, ವೇದವಲ್ಲಿ, ನಾರಾಯಣ ಮಾವುತ, ಯಮುನಾ ಹಾಗೂ ಸೌಜನ್ಯ ಅವರ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಲಾಯಿತು.
ಧರ್ಮಸ್ಥಳದ ಅಶೋಕನಗರ ಮತ್ತು ಮುಂಡ್ರುಪಾಡಿಯ ದಲಿತ ಕುಟುಂಬಗಳಿಗೆ ಹಕ್ಕುಪತ್ರ ನೀಡಿ, ತಲಾ ಒಂದು ಎಕರೆ ಜಮೀನು ಹಂಚಿಕೆ ಮಾಡಬೇಕು. ಪ್ರಸ್ತುತ ನಡೆಯುತ್ತಿರುವ ಎಸ್ಐಟಿ ತನಿಖೆಯ ವಿರುದ್ಧ ಷಡ್ಯಂತ್ರಗಳನ್ನು ನಿಲ್ಲಿಸಿ, ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕೆಂದು ಸಮಾವೇಶದಲ್ಲಿ ಆಗ್ರಹಿಸಲಾಯಿತು.
ಸಮಾವೇಶಕ್ಕೆ ಸಿಪಿಎಂ ಸೇರಿದಂತೆ ವಿವಿಧ ಸಂಘಟನೆಗಳು, ಆಟೊ ಸಂಘಟನೆಗಳು ಕೂಡ ಬೆಂಬಲ ಸೂಚಿಸಿವೆ.
ಹೋರಾಟ ನಡೆಸುತ್ತಿರುವುದು ಧರ್ಮಸ್ಥಳದ ದೇವಸ್ಥಾನದ ವಿರುದ್ಧವಲ್ಲ. ಧರ್ಮಾಧಿಕಾರಿ ಹೆಸರು ಹೇಳದೆ ಹೋರಾಟಮಾಡುವುದು ಹೇಗೆ. ಹೋರಾಟ ಮಾಡುವುದನ್ನೇ ಷಡ್ಯಂತ್ರ ಎಂದು ಬಿಂಬಿಸಲಾಗುತ್ತಿದೆ ಎಂದು ಸೌಜನ್ಯ ಪರ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ತಿಳಿಸಿದರು.
ಹೋರಾಟ ಮಾಡುವವರಲ್ಲೇ ಅನೇಕರು ದೇವಸ್ಥಾನದ ಭಕ್ತರಾಗಿದ್ದು, ನೇತ್ರಾವತಿ ನದಿಯಲ್ಲಿ ತೇಲಾಡಿ ಬಂದವರೇ ಆಗಿದ್ದಾರೆ. ಸೌಜನ್ಯ ಕೊಲೆ ಪ್ರಕರಣದಲ್ಲಿ ಮೊದಲು ಸೌಜನ್ಯ ಚಿಕ್ಕಪ್ಪನಿಂದ ದೂರು ಪಡೆದುಕೊಂಡಿದ್ದರು. ಇದು ಮೊದಲ ಷಡ್ಯಂತ್ರವಾಗಿದೆ. ಸೌಜನ್ಯ ತಾಯಿಯನ್ನು ಪ್ರಕರಣದ ಆರಂಭದಲ್ಲಿ ದೂರವಿಟ್ಟಿದ್ದರು. ಇದು ಮತ್ತೊಂದು ಷಡ್ಯಂತ್ರ. ಸಂತೋಷ್ ರಾವ್‌ರನ್ನು ಪೊಲೀಸರು ಬಂಧನವೇ ಮಾಡಿಲ್ಲ. ಅತ್ಯಾಚಾರಿ, ಕೊಲೆಗಡುಕರನ್ನು ರಕ್ಷಿಸುವ ಷಡ್ಯಂತ್ರ ನಡೆದಿದೆ ಎಂದು ತಿಳಿಸಿದರು.
ಧರ್ಮಸ್ಥಳದಲ್ಲಿ ಸಾಕಷ್ಟು ಹೋರಾಟ ನಡೆದಿದೆ, ನ್ಯಾಯ ಸಿಗುವವರೆಗೂ ಬಿಡುವುದಿಲ್ಲ ಎಂದು ಚಿಂತಕಿ ಲೀಲಾ ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಡೆದ ನ್ಯಾಯ ಸಮಾವೇಶದಲ್ಲಿ ಮಾತನಾಡಿದ ಅವರು, ಎಸ್ ಐಟಿಯವರು ಅಡ್ಡದಾರಿ ಹಿಡಿಸಿ ಕ್ಲೀನ್ ಚಿಟ್ ಕೊಟ್ಟರೆ ನಾವು ಬಿಡಲ್ಲ, ಧರ್ಮಸ್ಥಳದ ಮೈಕ್ರೋಫೈನಾನ್ಸ್ ವಿರುದ್ಧ ಸಹ ಹೋರಾಟ ಮಾಡಲಿದ್ದೇವೆ ಎಂದು ಎಚ್ಚರಿಸಿದ್ದಾರೆ.
ಸೌಜನ್ಯ ಪ್ರಕರಣ ಆದಾಗ ಧರ್ಮಸ್ಥಳ ಉರಿಯುವ ಕೆಂಡದಂತಿತ್ತು. ಆಗ ನಾವು ಪ್ರತಿಭಟನೆಗೆ ಹೋಗಿದ್ದೆವು, ಧರ್ಮಸ್ಥಳದ ಪರಿವರ್ತನೆ ಕಾಲ ಆರಂಭವಾಗಿದೆ ಎಂದು ದಲಿತ ಸಂಘಟನೆ ಮುಖಂಡ ಮಾವಳ್ಳಿ ಶಂಕರ್ ಹೇಳಿದ್ದಾರೆ.
ಪಾಪದ ಕೊಡ ತುಂಬಿದೆ, ಈಗ ಅನುಭವಿಸಬೇಕಾಗುತ್ತದೆ. ನೂರಾರು ಎಕರೆ ಭೂಮಿಯನ್ನು ಲೂಟಿ ಮಾಡಿದ್ದಾರೆ. ಆಗ ಕಂದಾಯ ಸಚಿವರಾಗಿದ್ದ ಶ್ರೀನಿವಾಸ ಪ್ರಸಾದ್ ಗೆ ದೂರು ನೀಡಿದ್ದರೆ ತಲೆ ಕೆಡಿಸಿಕೊಂಡಿರಲಿಲ್ಲ. ಈಗ ಮುಖ್ಯಮಂತ್ರಿ ಹಾಗೂ ಸಚಿವರು ಯಾರಾಗಬೇಕೆಂದು ಮಠಾಧೀಶರು ನಿರ್ಣಯ ಮಾಡುವ ಪರಿಸ್ಥಿತಿಗೆ ಬಂದಿದೆ ಎಂದು ಬೇಸರ ಹೊರಹಾಕಿದರು.
ಧರ್ಮಸ್ಥಳ ಪ್ರಕರಣದಲ್ಲಿ ಕೊಂದವರು ಯಾರು ಎಂಬುದು ಎಲ್ಲರಿಗೂ ಗೊತ್ತಿದೆ, ಅಪಹರಣ ಮಾಡಿದ ಜಾಗದಲ್ಲಿ ಯಾಕೆ ಮಹಜರು ಮಾಡಿಲ್ಲ, ಅತ್ಯಾಚಾರ ಮಾಡಿದ ಜಾಗದಲ್ಲಿ ಯಾಕೆ ಮಹಜರು ಮಾಡಿಲ್ಲ ಎಂದು ಪೊಲೀಸ್ ಇಲಾಖೆಯನ್ನು ಹೈಕೋರ್ಟ್ ವಕೀಲ ಬಾಲನ್ ಪ್ರಶ್ನಿಸಿದ್ದಾರೆ.
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯುತ್ತಿರುವ ನ್ಯಾಯ ಸಮಾವೇಶದಲ್ಲಿ ಅವರು ಮಾತನಾಡಿ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪದ್ಮಲತಾ ಪ್ರಕರಣ ಮರು ತನಿಖೆ ಆಗಲಿದೆ. ಸೌಜನ್ಯ ಪ್ಲವರ್ ಅಲ್ಲ, ಅದೊಂದು ಫೈರ್, ಇಂದು ಹೊತ್ತಿ ಉರಿಯುತ್ತದೆ ಎಂದು ಹೇಳಿದ್ದಾರೆ.
ಧರ್ಮದ ವಿರುದ್ಧ ನಾವು ಮಾತನಾಡುತ್ತಿಲ್ಲ, ದೌರ್ಜನ್ಯ, ಅತ್ಯಾಚಾರ ಕೊಲೆಯಾದ ನ್ಯಾಯವನ್ನು ಕೇಳುತ್ತಿದ್ದೇವೆ. ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳಿಲ್ವಾ?, ಸೌಜನ್ಯ ನಮ್ಮ ಮನೆಯ ಮಗಳು ಎಂದು ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಹೇಳಿದ್ದಾರೆ.
ಎಷ್ಟು ನೆತ್ತರು ಹರಿದಿದೆ ನಿಮ್ಮ ಆತ್ಮಸಾಕ್ಷಿಯನ್ನು ಕೇಳಿಕೊಳ್ಳಿ, ಕೊಂದವರು ಯಾರು ಎಂಬುದನ್ನು ಸರ್ಕಾರದ ಜವಾಬ್ದಾರಿ ಸ್ಥಾನದಲ್ಲಿರುವವರು ಉತ್ತರ ನೀಡಬೇಕು, ಧರ್ಮಸ್ಥಳಕ್ಕೆ ಹೋಗಿದ್ದ ರಾಜಕಾರಣಿಗಳು ಕೊಂದವರು ಯಾರು ಎಂದು ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದಾರೆ.