ಧರ್ಮಸ್ಥಳ ಪ್ರಕರಣ| ಜೆಡಿಎಸ್‌ನಿಂದ ಸೆ. 31ಕ್ಕೆ ʼಧರ್ಮಸ್ಥಳ ಸತ್ಯ ಯಾತ್ರೆʼ

ಧರ್ಮಸ್ಥಳದಲ್ಲಿ ಹಲವಾರು ಕೊಲೆಗಳಾಗಿವೆ ಎಂದು ಅನಾಮಿಕ ದೂರುದಾರ ಹೇಳಿದ ಕೂಡಲೇ ಎಸ್ಐಟಿ ರಚಿಸಿ ಹದಿನೇಳು ಕಡೆ ಅಗೆಸಲಾಯಿತು. ಕೊನೆಗೆ ಅದೇ ಅನಾಮಿಕ ವ್ಯಕ್ತಿ ಉಲ್ಟಾ ಹೊಡೆದಿದ್ದಾನೆ ಎಂದು ಜೆಡಿಎಸ್‌ ಯುವ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಕಿಡಿಕಾರಿದ್ದಾರೆ.;

Update: 2025-08-28 08:34 GMT

   ಜೆಡಿಎಸ್‌ ಯುವ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ

ಧರ್ಮಸ್ಥಳದ ಬಗ್ಗೆ ಕೆಲವರು ಅಪಪ್ರಚಾರ ಮಾಡುತ್ತಿದ್ದು, ನೈತಿಕ ಬೆಂಬಲ ವ್ಯಕ್ತಪಡಿಸಲು ಆ.31 ರಂದು ಜೆಡಿಎಸ್‌ ವತಿಯಿಂದ ʼಧರ್ಮಸ್ಥಳ ಸತ್ಯಯಾತ್ರೆʼ ಮಾಡಲಿದ್ದೇವೆ ಎಂದು ಜೆಡಿಎಸ್‌ ಯುವ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ತಿಳಿಸಿದರು.

ಬೆಂಗಳೂರಿನ ಜೆಪಿ ಭವನದಲ್ಲಿ ಬುಧವಾರ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಧರ್ಮಸ್ಥಳ ವಿಚಾರವಾಗಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಕಳೆದ ಹಲವಾರು ದಿನಗಳಿಂದ ಕ್ಷೇತ್ರಕ್ಕೆ ಆಗಿರುವ ಅಪಮಾನ, ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.  ಪ್ರಕರಣವನ್ನು ಅರ್ಥ ಮಾಡಿಕೊಳ್ಳದೇ ಸರ್ಕಾರ ಎಸ್‌ಐಟಿ ರಚನೆ ಮಾಡಿದೆ. ಧರ್ಮಸ್ಥಳದ ವಿಚಾರದಲ್ಲಿ ವ್ಯವಸ್ಥಿತ ಪಿತೂರಿ ನಡೆದಿದೆ ಎಂದು ಆರೋಪಿಸಿದರು.

ಹಲವಾರು ಕೊಲೆಗಳಾಗಿವೆ ಎಂದು ಅನಾಮಿಕ ದೂರುದಾರ ಹೇಳಿದ ಕೂಡಲೇ ಎಸ್ಐಟಿ ರಚಿಸಿ ಹದಿನೇಳು ಕಡೆ ಅಗೆಯಲಾಯಿತು. ಕೊನೆಗೆ ಅದೇ ಅನಾಮಿಕ ವ್ಯಕ್ತಿ ಉಲ್ಟಾ ಹೊಡೆದಿದ್ದಾನೆ. ಧರ್ಮಸ್ಥಳದ ಕೋಟ್ಯಂತರ ಭಕ್ತರಲ್ಲಿ ನಾನೂ ಒಬ್ಬ, ಬಾಲ್ಯದಿಂದಲೂ ನಾನು ನಿರಂತರವಾಗಿ ಹೋಗುತ್ತಿದ್ದೇನೆ. ಸತ್ಯ, ಧರ್ಮ, ನ್ಯಾಯದ ಮತ್ತೊಂದು ಮುಖವೇ ಮಂಜುನಾಥ ಹಾಗೂ ಅಣ್ಣಪ್ಪ ಸ್ವಾಮಿ. ಕೇವಲ ಒಂದಿಬ್ಬರು ಹೇಳಿದ ಕೂಡಲೇ ಸರ್ಕಾರ ಇಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳಬಾರದಿತ್ತು ಎಂದರು.

ಪ್ರಕರಣವನ್ನು ಎನ್‌ಐಎಗೆ ವಹಿಸಿ

ಅಪಪ್ರಚಾರದ ಹಿಂದೆ ಪಿತೂರಿ ಇದ್ದು, ಒಂದು ಸಂಘಟನೆ ಕೆಲಸ ಮಾಡಿದಂತಿದೆ. ಅಂತರರಾಷ್ಟ್ರೀಯ ಸುದ್ದಿ ಮಾಧ್ಯಮಗಳು, ಯೂಟ್ಯೂಬರ್‌ಗಳು ಇದರ ಬಗ್ಗೆ ನಿರಂತರವಾಗಿ ಸುದ್ದಿ ಮಾಡಿದ್ದವು.  ಇವರಿಗೆಲ್ಲಾ ಹಣಕಾಸು ಸಹಾಯ ಮಾಡಿದ್ದು ಯಾರು ಎಂದು ತನಿಖೆ ಮೂಲಕ ಹೊರಗೆ ಬರಬೇಕಿದೆ.

ಎಸ್‌ಐಟಿಯಿಂದ ಕೇವಲ ಶೇ.1 ರಷ್ಟು ಸತ್ಯ ಹೊರಗೆ ಬರಲಿದೆ. ಆದ್ದರಿಂದ ಪ್ರಕರಣವನ್ನು ಸರ್ಕಾರ ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸಿ ಸತ್ಯ ಹೊರತೆಗೆಯಬೇಕು ಎಂದು ಆಗ್ರಹಿಸಿದರು.

ಸಾಕಷ್ಟು ನೋವಿದ್ದರೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹಾಗೂ ಅವರ ಕುಟುಂಬ ತಾಳ್ಮೆಯಿಂದ ನಡೆದುಕೊಂಡಿದೆ. ನಾವು ಅವರ ಜೊತೆ ಇದ್ದೇವೆ, ನಮ್ಮ ರಾಜ್ಯದ ಮಾಧ್ಯಮಗಳು ಪ್ರಕರಣದ ಕುರಿತು ಉತ್ತಮವಾಗಿ ಸುದ್ದಿ ಮಾಡಿ, ಪ್ರತ್ಯಕ್ಷ ವರದಿ ಬಿತ್ತರಿಸಿವೆ. ಧರ್ಮಸ್ಥಳದ ಗೌರವ ಎತ್ತಿ ಹಿಡಿಯುವಲ್ಲಿ ಮಾಧ್ಯಮಗಳ ಪಾತ್ರ ದೊಡ್ಡದು ಎಂದು ತಿಳಿಸಿದರು.

ದೂರುದಾರ ಹೇಳಿದಂತೆ ಸರ್ಕಾರ ಕೇಳಿದ್ದು ತಪ್ಪು

ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಸುರೇಶ್‌ ಬಾಬು ಮಾತನಾಡಿ, ಪಕ್ಷದ ಶಾಸಕರು ಹಾಗೂ ಮಾಜಿ ಶಾಸಕರ ಜತೆಗೆ ಭಾನುವಾರ ಧರ್ಮಸ್ಥಳಕ್ಕೆ ತೆರಳಿ ಮಂಜುನಾಥನ ದರ್ಶನ ಪಡೆಯಲಿದ್ದೇವೆ. ಧರ್ಮಸ್ಥಳದ ಬಗ್ಗೆ ಸಾಕಷ್ಟು ಅಪಪ್ರಚಾರ ನಡೆಯಿತು.

ರಾಜ್ಯ ಸರ್ಕಾರ ಸಾಧಕ-ಬಾಧಕ ನೋಡಿ ಎಸ್‌ಐಟಿ ರಚಿಸಬೇಕಿತ್ತು. ಅನಾಮಿಕ ದೂರುದಾರ ಬಂದು ಹೆಣ ಹೂತಿದ್ದೇನೆೆಂದು ದೂರು ಕೊಟ್ಟಾಗ, ಆತ ಹೇಳಿದಂತೆ ಸರ್ಕಾರ ಕೇಳಿದ್ದು ಎಷ್ಟು ಸರಿ?, ಆದರೆ, ಎಸ್‌ಐಟಿ ರಚನೆ ಮಾಡಿದ್ದರಿಂದ ಧರ್ಮಸ್ಥಳದ ಮೇಲೆ ಅಪಕೀರ್ತಿ ಹೋಯಿತೇ ಎಂದು ಪ್ರಶ್ನಿಸಿದರು.

Tags:    

Similar News