ಧರ್ಮಸ್ಥಳ ಪ್ರಕರಣ: ಸುಪ್ರೀಂ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಎಸ್‌ಐಟಿ ರಚನೆಗೆ ಆಗ್ರಹ

ಪ್ರಕರಣದ ಸಾಕ್ಷಿದಾರನ ಹೇಳಿಕೆಗಳು ಸೋರಿಕೆಯಾಗುತ್ತಿದ್ದು ತನಿಖೆ ಎತ್ತ ಸಾಗುತ್ತಿದೆ ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಕಳವಳ ವ್ಯಕ್ತಪಡಿಸಿದರು.;

Update: 2025-07-17 11:39 GMT
ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ

ಧರ್ಮಸ್ಥಳ ಗ್ರಾಮದಲ್ಲಿ ನಡೆದಿವೆ ಎನ್ನಲಾದ ಕೊಲೆಗಳು ಹಾಗೂ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಉನ್ನತ ತನಿಖೆ ನಡೆಸಲು ಎಸ್‌ಐಟಿ ರಚಿಸುವಂತೆ ಹೈಕೋರ್ಟ್‌ ವಕೀಲರ ನಿಯೋಗ ಹಾಗೂ ರಾಜ್ಯ ಮಹಿಳಾ ಆಯೋಗ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಇದೀಗ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಅವರು ಪ್ರಕರಣದ ಸಾಕ್ಷಿದಾರನಿಗೆ ರಾಜ್ಯ ಸರ್ಕಾರ ರಕ್ಷಣೆ ನೀಡಬೇಕು ಹಾಗೂ ತನಿಖೆಗೆ ವಿಶೇಷ ತಂಡ ರಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪೊಲೀಸರಿಂದ ಒತ್ತಡ

ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ಸಾಕ್ಷಿದಾರ ಹೇಳಿಕೆ ನೀಡಿದ ನಂತರ ತನಿಖೆ ಸರಿಯಾಗಿ ನಡೆಯುತ್ತಿಲ್ಲ. ಶವಗಳನ್ನು ಎಲ್ಲಿ ಹೂಳಲಾಗಿದೆ ಎಂದು ಖಾಲಿ ಹಾಳೆಯಲ್ಲಿ ಬರೆದುಕೊಡುವಂತೆ ಪೊಲೀಸರು ಒತ್ತಡ ಹೇರುತ್ತಿದ್ದಾರೆ. ಆತನ ಹೇಳಿಕೆಗಳು ಸೋರಿಕೆಯಾಗುತ್ತಿದ್ದು ತನಿಖೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. 

ತನಿಖಾಧಿಕಾರಿ ಬದಲಾಯಿಸಿ

ಸಾಕ್ಷಿದಾರ ತನ್ನ ವಕೀಲರೊಂದಿಗೆ ತೆರಳಿ ಮೃತದೇಹವನ್ನು ತೆಗೆಯುವುದಾಗಿ ನ್ಯಾಯಾಲಯ ಹಾಗೂ ಪೊಲೀಸರ ಮುಂದೆ ತಿಳಿಸಿದ್ದರೂ ಪೊಲೀಸರು ಸ್ಥಳಕ್ಕೆ ಹೋಗಿಲ್ಲ. ತನಿಖಾಧಿಕಾರಿ ಯಾರಿಗೋ ಕರೆ ಮಾಡಿ ಅವರು ಸೂಚಿಸಿದಂತೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಆದ್ದರಿಂದ ಸರ್ಕಾರ ಶೀಘ್ರವೇ ತನಿಖಾಧಿಕಾರಿಯನ್ನು ಬದಲಾಯಿಸಬೇಕು. ಸುಪ್ರೀಂ ಅಥವಾ ಹೈಕೋರ್ಟ್‌ನ ಹಾಲಿ ಅಥವಾ ಮಾಜಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಎಸ್‌ಐಟಿ ರಚಿಸಬೇಕು ಎಂದು ತಿಳಿಸಿದರು. 

ವಕೀಲರು, ಸಾಕ್ಷಿದಾರನಿಗೆ ಭದ್ರತೆ ನೀಡಿ

ವಕೀಲರು ಹಾಗೂ ಸಾಕ್ಷಿದಾರನಿಗೆ ಬೆದರಿಕೆ ಇದ್ದು ಸರ್ಕಾರ ಶೀಘ್ರವೇ ಅವರಿಗೆ ಭದ್ರತೆ ನೀಡಬೇಕು. ಅವರಿಗೆ ಯಾವುದೇ ತೊಂದರೆಗಳಾದರೂ ಗೃಹ ಸಚಿವರು ಹಾಗೂ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರು ಕಾರಣರಾಗುತ್ತಾರೆ ಎಂದು ಹೇಳಿದರು. 

ಧರ್ಮಸ್ಥಳದಲ್ಲಿನ ಕೊಲೆ ಹಾಗೂ ಅತ್ಯಾಚಾರಗಳ ಕುರಿತು ವಿಶೇಷ ತನಿಖೆ ನಡೆಸುವಂತೆ ಎಲ್ಲೆಡೆಯಿಂದ ಸರ್ಕಾರಕ್ಕೆ ಮನವಿ ಮಾಡಲಾಗುತ್ತಿದೆ. ಹಲವು ವರ್ಷಗಳ ಹಿಂದೆ ಇದೇ ಗ್ರಾಮದಲ್ಲಿ ನಡೆದಿದ್ದ ಸೌಜನ್ಯ ಹತ್ಯೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಹಾಲಿ ಅಥವಾ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಎಸ್‌ಐಟಿ ತನಿಖೆಯಾಗಬೇಕು ಎಂಬ ಸಹಿ ಸಂಗ್ರಹಕ್ಕೆ ಬಹುಭಾಷಾ ನಟ ಪ್ರಕಾಶ್‌ರಾಜ್‌ ಬೆಂಬಲ ಸೂಚಿಸಿದ್ದಾರೆ.

Tags:    

Similar News