Why didnt the CM stop the final notification of land acquisition: Actor Prakash Raj
x

ಮಾಧ್ಯಮಗೋಷ್ಠಿಯಲ್ಲಿ ನಟ ಪ್ರಕಾಶ್‌ ರಾಜ್‌ ಮಾತನಾಡಿದರು. 

ವಿರೋಧ ಪಕ್ಷದಲ್ಲಿದ್ದಾಗ ನೀಡಿದ ಹೇಳಿಕೆ ಮರೆತಿದ್ದು ಯಾಕೆ: ಸಿಎಂಗೆ ಪ್ರಕಾಶ್‌ ರಾಜ್‌ ಪ್ರಶ್ನೆ

ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಆಗಿರುವುದರಿಂದ ಕಾನೂನು ತೊಡಕಿದೆ ಎಂದು ಹೇಳಿ ಸಿಎಂ ಸಿದ್ದರಾಮಯ್ಯ ದೆಹಲಿಗೆ ಹೋಗಲು ಕಾರಣವೇನು? ಎಂದು ನಟ ಪ್ರಕಾಶ್‌ ರಾಜ್‌ ಪ್ರಶ್ನಿಸಿದ್ದಾರೆ.


ದೇವನಹಳ್ಳಿಯ ಚನ್ನರಾಯಪಟ್ಟಣ ಹೋಬಳಿಯ 1,777 ಎಕರೆ ಭೂಸ್ವಾಧೀನ ಪ್ರಕ್ರಿಯೆಯ ವಿರುದ್ಧ ಹೋರಾಟ ನಡೆಸುತ್ತಿರುವ ರೈತರಿಗೆ ಬೆಂಬಲವಾಗಿ ನಿಂತಿರುವ ನಟ ಪ್ರಕಾಶ್‌ ರಾಜ್‌, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಿರೋಧ ಪಕ್ಷದಲ್ಲಿದ್ದಾಗ ಭೂಸ್ವಾಧೀನ ಕೈಬಿಡುವುದಾಗಿ ಭರವಸೆ ನೀಡಿದ್ದ ಸಿದ್ದರಾಮಯ್ಯ ಅವರು, ಈಗ ಅಧಿಕಾರದಲ್ಲಿದ್ದಾಗ ಅಂತಿಮ ಅಧಿಸೂಚನೆ ಆಗುವುದನ್ನು ಏಕೆ ತಡೆಯಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ನಗರದ ಪ್ರೆಸ್ ಕ್ಲಬ್ ಸಭಾಂಗಣದಲ್ಲಿ 'ಎದ್ದೇಳು ಕರ್ನಾಟಕ ಸಾಮಾಜಿಕ ಸಂಘಟನೆ' ವತಿಯಿಂದ ಭೂಸ್ವಾಧೀನ ಖಂಡಿಸಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, "ಗೆಲ್ಲುವವರೆಗೆ ಮಾತ್ರ ಪಕ್ಷ. ನಂತರ ಸರ್ಕಾರ. ಸಾರ್ವಜನಿಕರು ಸರ್ಕಾರವನ್ನು ಪ್ರಶ್ನಿಸಬೇಕು" ಎಂದು ಕರೆ ನೀಡಿದರು.

ಸಿಎಂ ದೆಹಲಿಗೆ ಹೋಗಲು ಕಾರಣವೇನು? ಎಂ.ಬಿ. ಪಾಟೀಲ್ ಹಠಕ್ಕೆ ಬಿದ್ದಿದ್ದಾರೆ

ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಭೂಸ್ವಾಧೀನ ಕುರಿತು ನಡೆದ ಸಭೆಯಲ್ಲಿ 10 ದಿನಗಳ ಕಾಲಾವಕಾಶ ಕೇಳಿದ್ದರು. ನಂತರ ಕಾನೂನು ತಜ್ಞರೊಂದಿಗೆ ಸಭೆ ನಡೆಸಿದ ಸಿಎಂ, ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಆಗಿರುವುದರಿಂದ ಕಾನೂನು ತೊಡಕಿದೆ ಎಂದು ಹೇಳಿ ದೆಹಲಿಗೆ ಹೋಗಲು ಕಾರಣವೇನು ಎಂದು ಪ್ರಕಾಶ್ ರಾಜ್ ಪ್ರಶ್ನಿಸಿದರು. ಈ ವಿಚಾರದಲ್ಲಿ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹಠಕ್ಕೆ ಬಿದಿದ್ದಾರೆ ಎಂದೂ ಅವರು ಆರೋಪಿಸಿದರು.

ದಳ್ಳಾಳಿಗಳ ನೇಮಕ ಮತ್ತು ರೈತರ ಒಡಕಿಗೆ ಯತ್ನ ಆರೋಪ

ಪ್ರಕಾಶ್ ರಾಜ್‌ ಅವರು ಈ ಹೋರಾಟದಲ್ಲಿ ರೈತರ ನಡುವೆ ಒಡಕು ಮೂಡಿಸಲು ಷಡ್ಯಂತ್ರ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. "ಇತ್ತೀಚೆಗೆ ಕೆಲವು ರೈತರು ದಿಢೀರನೆ ಹುಟ್ಟಿಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ. ರೈತರ ನಡುವೆ ಒಡಕು ಹುಟ್ಟಿಸಲು ಕೆಲವು ದಳ್ಳಾಳಿಗಳನ್ನು ನೇಮಿಸಿ ಷಡ್ಯಂತ್ರ ಮಾಡುತ್ತಿದ್ದಾರೆ. ಪ್ರತಿ ಎಕರೆಗೆ 3.5 ಕೋಟಿ ರೂ. ಪರಿಹಾರ ನೀಡಲು ಸಾಧ್ಯವೇ?" ಎಂದು ಪ್ರಶ್ನಿಸಿದರು. ದೇವನಹಳ್ಳಿ ರೈತರ ಬೆಂಬಲಕ್ಕೆ ದೇಶದ ಹಲವಾರು ಸಂಘಟನೆಗಳು ಬೆಂಬಲ ನೀಡುತ್ತಿವೆ, ಹಾಗಾಗಿ ನಿಮ್ಮ (ಸರ್ಕಾರದ) ಹಿಂದಿರುವವರು ಯಾರು ಎಂಬುದನ್ನು ತಿಳಿಸಬೇಕು ಎಂದು ಅವರು ಆಗ್ರಹಿಸಿದರು.

ಸ್ಥಳಾಂತರಕ್ಕೂ ಮುನ್ನ ಅಧ್ಯಯನ ಮಾಡಿ; ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಲಿ

ಸಂವಿಧಾನದ ಪ್ರಕಾರ ಹಸಿರು ವಲಯವನ್ನು ಪರಿವರ್ತನೆ ಮಾಡದೆ ಅಕ್ರಮಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪ್ರಕಾಶ್ ರಾಜ್‌ ಪ್ರತಿಪಾದಿಸಿದರು. "ಮೊದಲು ಹಳದಿ ವಲಯ ಪರಿಶೀಲನೆ ಮಾಡಬೇಕು. ದಾರಿ ತಪ್ಪಿಸುವ ಕೆಲಸ ಮಾಡಬೇಡಿ, ದೇವನಹಳ್ಳಿ ರೈತರ ಕುರಿತು ಅಭಿಮಾನವಿರಲಿ. ಕಾನೂನು ತೊಡಕು ಕುರಿತು ಮಾತುಕತೆ ಅಷ್ಟೆ, ಪರಿಹಾರವಲ್ಲ. 13 ಹಳ್ಳಿಗಳನ್ನು ಸ್ಥಳಾಂತರ ಮಾಡುವ ಕುರಿತು ಅಧ್ಯಯನ ಮಾಡಬೇಕು. ಕೃಷಿ ಭೂಮಿಯಲ್ಲಿ ಕಟ್ಟಡ ಕಟ್ಟಿದರೆ ಹೊಟ್ಟೆಗೆ ಏನು ತಿನ್ನುತ್ತಿರಿ?" ಎಂದು ಪ್ರಶ್ನಿಸಿದರು.

"ಭೂಮಿ ಸ್ವಾಧೀನ ಪಡೆಸಿಕೊಳ್ಳುವುದು ಬೇಡವೆಂದರೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ರಾಜ್ಯ ಸರ್ಕಾರ ಇಚ್ಛಾಶಕ್ತಿ ಪ್ರದರ್ಶನ ಮಾಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುರಿತು ನಮಗೆ ಗೌರವವಿದೆ. ಮೂರು ವರ್ಷಗಳಿಂದ ರೈತರು ಸತತ ಹೋರಾಟ ಮಾಡುತ್ತಿದ್ದರೂ, ಬಿಜೆಪಿ, ಜೆಡಿಎಸ್ ಪಕ್ಷದವರು ಮೌನವಾಗಿದ್ದಾರೆ. ಶಾಸಕ, ಸಂಸದರು ಚುನಾವಣೆ ಸಂದರ್ಭದಲ್ಲಿ ಮಾತ್ರ ಮತ ಕೇಳಲು ಬರುತ್ತಾರೆ. ಆದರೆ ಸಾರ್ವಜನಿಕರ ಸಮಸ್ಯೆಗಳನ್ನು ಕೇಳುವುದಿಲ್ಲ. ಅಕ್ರಮ ಭೂ ಕಬಳಿಕೆ ವಿರುದ್ಧ ಚಳುವಳಿ ಹಾಗೂ ಕಾನೂನಿನ ಮೂಲಕ ಹೋರಾಟ ಮಾಡುತ್ತೇವೆ," ಎಂದು ಪ್ರಕಾಶ್ ರಾಜ್‌ ಎಚ್ಚರಿಕೆ ನೀಡಿದರು.

Read More
Next Story