ಧರ್ಮಸ್ಥಳ ಪ್ರಕರಣ| ಎಸ್‌ಐಟಿ ದಾಖಲಿಸಿದ ಎಫ್‌ಐಆರ್ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋದ ತಿಮರೋಡಿ ತಂಡ
ಧರ್ಮಸ್ಥಳ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಎಸ್ಐಟಿ ತಂಡವು ಅಂತಿಮ ವರದಿ ಸಲ್ಲಿಸಲು ತಯಾರಿ ನಡೆಸಿರುವ ಬೆನ್ನಲ್ಲೇ ಎಫ್ಐಆರ್ ದಾಖಲಿಸುವಾಗ ಅನುಸರಿಸಿದ ವಿಧಾನ ಪ್ರಶ್ನಿಸಿ ಅರ್ಜಿ ಸಲ್ಲಿಸಿರುವುದು ಪ್ರಕರಣಕ್ಕೆ ಹೊಸ ತಿರುವು ಸಿಕ್ಕಂತಾಗಿದೆ.
ಹೈಕೋರ್ಟ್ ಹಾಗೂ ಸೌಜನ್ಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ
ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟಿರುವ ಕುರಿತ ಅನಾಮಿಕನ ಆರೋಪ ಆಧರಿಸಿ ಎಸ್ಐಟಿ ದಾಖಲಿಸಿಕೊಂಡಿರುವ ಎಫ್ಐಆರ್ ವಿಧಾನ ಪ್ರಶ್ನಿಸಿ ಸೌಜನ್ಯಪರ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಟಿ. ಜಯಂತ್, ವಿಠಲಗೌಡ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಧರ್ಮಸ್ಥಳ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಎಸ್ಐಟಿ ತಂಡವು ಅಂತಿಮ ವರದಿ ಸಲ್ಲಿಸಲು ತಯಾರಿ ನಡೆಸಿರುವ ಬೆನ್ನಲ್ಲೇ ಎಫ್ಐಆರ್ ದಾಖಲಿಸುವಾಗ ಅನುಸರಿಸಿದ ವಿಧಾನ ಪ್ರಶ್ನಿಸಿ ಅರ್ಜಿ ಸಲ್ಲಿಸಿರುವುದು ಪ್ರಕರಣಕ್ಕೆ ಹೊಸ ತಿರುವು ಸಿಕ್ಕಂತಾಗಿದೆ.
ದೂರುದಾರ ಚಿನ್ನಯ್ಯ ಪ್ರಕರಣದಲ್ಲಿ ಎಸ್‌ಐಟಿ ತಂಡ ಎಫ್‌ಐಆರ್ ಮಾಡಿರುವ ವಿಧಾನ ತಪ್ಪಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಹಾಗಾಗಿ ಪ್ರಕರಣ ರದ್ದು ಮಾಡಬೇಕು. ಜತೆಗೆ ಮಹೇಶ್ ಶೆಟ್ಟಿ ತಿಮರೋಡಿಗೆ ಹಲವಾರು ನೋಟಿಸ್ ನೀಡಿದ್ದು ಇದನ್ನು ರದ್ದುಗೊಳಿಸಬೇಕೆಂದು ಅರ್ಜಿದಾರ ಪರ ವಕೀಲರಾದ ಬಾಲನ್ ಅರ್. ಅರ್ಜಿ ಸಲ್ಲಿಸಿದ್ದು ಗುರುವಾರ(ಅ.30) ಸಂಜೆ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆ ಇದೆ.
ಪ್ರಕರಣದ ತನಿಖೆಯ ಆರಂಭಿಕ ಹಂತದಲ್ಲಿ ಎಸ್‌ಐಟಿ ತನಿಖಾ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಹೋರಾಟಗಾರರು ಇದೀಗ ದೂರು ದಾಖಲಿಸಿಕೊಂಡ ಪ್ರಕ್ರಿಯೆ ಪ್ರಶ್ನಿಸಿರುವುದು ಅಚ್ಚರಿ ಮೂಡಿಸಿದೆ.
ನೂರಾರು ಶವ ಹೂತು ಹಾಕಿರುವ ಕುರಿತು ಹೇಳಿಕೆ ನೀಡಿದ್ದ ಅನಾಮಿಕ, ತನಿಖೆ ವೇಳೆ ತಪ್ಪೊಪ್ಪಿಗೆ ನೀಡಿದ್ದರಿಂದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿತ್ತು. ಅಲ್ಲದೇ ಸುಜಾತಾ ಭಟ್ ಪ್ರಕರಣದಲ್ಲಿ ಸೌಜನ್ಯಪರ ಹೋರಾಟಗಾರರಿಗೆ ಹಿನ್ನಡೆಯಾಗಿತ್ತು.
ಆ ಬಳಿಕ ತನಿಖೆ ತೀವ್ರಗೊಳಿಸಿದ್ದ ಎಸ್ಐಟಿ ತಂಡವು ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಟಿ.ಜಯಂತ್, ವಿಠಲಗೌಡ ಅವರಿಗೆ ಪದೇ ಪದೇ ನೋಟಿಸ್ ನೀಡಿ ವಿಚಾರಣೆಗೆ ಒಳಪಡಿಸಿತ್ತು. ಈಗ ಹೈಕೋರ್ಟ್ ಗೆ ಸಲ್ಲಿಕೆಯಾಗಿರುವ ಅರ್ಜಿಯು ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ನೇತೃತ್ವದ ಏಕಸದಸ್ಯ ಪೀಠದಲ್ಲಿ ವಿಚಾರಣೆಗೆ ಬರಲಿದೆ.