ಸಿಜೆಐ ಮೇಲೆ ಶೂ ಎಸೆತ ಪ್ರಕರಣ; ವಕೀಲ ರಾಕೇಶ್‌ ಕಿಶೋರ್‌ ವಿರುದ್ಧ ಎಫ್‌ಐಆರ್‌
x

ಸಿಜೆಐ ಮೇಲೆ ಶೂ ಎಸೆತ ಪ್ರಕರಣ; ವಕೀಲ ರಾಕೇಶ್‌ ಕಿಶೋರ್‌ ವಿರುದ್ಧ ಎಫ್‌ಐಆರ್‌

ಬೆಂಗಳೂರಿನ ವಕೀಲ ಭಕ್ತವತ್ಸಲ ಹಾಗೂ ಲೆಕ್ಸ್‌ ಗ್ರೂಪ್‌( LEXGROUP) ತಂಡ ನೀಡಿದ ದೂರಿನ ಮೇರೆಗೆ ರಾಕೇಶ್ ಕಿಶೋರ್ ವಿರುದ್ಧ ಬಿಎನ್ಎಸ್ ಸೆಕ್ಷನ್ 132, 133 ಅಡಿ ಪ್ರಕರಣ ದಾಖಲಿಸಲಾಗಿದೆ.


ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿ ಬಾರ್‌ ಅಸೋಸೊಯೇಷನ್‌ನಿಂದ ಅಮಾನತುಗೊಂಡಿರುವ ಹಿರಿಯ ವಕೀಲ ರಾಕೇಶ್ ಕಿಶೋರ್ ವಿರುದ್ಧ ಬೆಂಗಳೂರಿನ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಬೆಂಗಳೂರಿನ ವಕೀಲ ಭಕ್ತವತ್ಸಲ ಹಾಗೂ ಲೆಕ್ಸ್‌ ಗ್ರೂಪ್‌( LEXGROUP) ತಂಡ ನೀಡಿದ ದೂರಿನ ಮೇರೆಗೆ ರಾಕೇಶ್ ಕಿಶೋರ್ ವಿರುದ್ಧ ಬಿಎನ್ಎಸ್ ಸೆಕ್ಷನ್ 132, 133 ಅಡಿ ಪ್ರಕರಣ ದಾಖಲಿಸಲಾಗಿದೆ. ಇದಕ್ಕೂ ಮುನ್ನ ಹೈಕೋರ್ಟ್‌ನ ಗೋಲ್ಡನ್ ಜ್ಯುಬಿಲಿ ಗೇಟ್ ಮುಂಭಾಗ ವಕೀಲರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು.

ಕಳೆದ ಸೋಮವಾರ ಹಿರಿಯ ವಕೀಲ ರಾಕೇಶ್ ಕಿಶೋರ್ ಎಂಬುವರು ಸುಪ್ರೀಂಕೋರ್ಟ್‌ ಕಲಾಪದಲ್ಲಿ ಸಿಜೆಐ ಬಿ.ಆರ್‌.ಗವಾಯಿ ಅವರತ್ತ ಶೂ ಎಸೆಯಲು ಯತ್ನಿಸಿದ್ದರು. ಭದ್ರತಾ ಸಿಬ್ಬಂದಿ ಸಕಾಲಕ್ಕೆ ಮಧ್ಯಪ್ರವೇಶಿಸಿ ವಕೀಲನನ್ನು ಹೊರ ಕರೆದೋಯ್ದಿದ್ದರು. ಈ ವೇಳೆ ವಕೀಲ ರಾಕೇಶ್‌ ಕಿಶೋರ್‌ "ಸನಾತನ್ ಕಾ ಅಪಮಾನ್ ನಹೀ ಸಹೇಂಗೆ" (ಸನಾತನಕ್ಕೆ ಮಾಡುವ ಅಪಮಾನ ಸಹಿಸುವುದಿಲ್ಲ) ಎಂದು ಘೋಷಣೆ ಕೂಗಿದ್ದ.

ದಿಢೀರನೇ ನಡೆದ ಘಟನೆಯಿಂದ ವಿಚಲಿತರಾದ ಮುಖ್ಯ ನ್ಯಾಯಮೂರ್ತಿ ಬಿ.ಆರ್‌.ಗವಾಯಿ ಅವರು, "ಘಟನೆಯಿಂದ ಯಾರೂ ವಿಚಲಿತರಾಗಬೇಡಿ. ನಾನು ಕೂಡ ವಿಚಲಿತನಾಗುವುದಿಲ್ಲ. ಇಂತಹ ಘಟನೆಗಳು ನನ್ನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ" ಎಂದಿದ್ದರು.

ಮಧ್ಯಪ್ರದೇಶದ ಖಜುರಾಹೊ ಸ್ಮಾರಕ ಸಮುಚ್ಛಯದಲ್ಲಿರುವ ಜವಾರಿ ದೇವಸ್ಥಾನದಲ್ಲಿ 7 ಅಡಿ ಎತ್ತರದ ವಿಷ್ಣುವಿನ ಶಿರಚ್ಛೇದಿತ ಪ್ರಾಚೀನ ವಿಗ್ರಹವನ್ನು ಸರಿಪಡಿಸಲು ಕೋರಿದ್ದ ಅರ್ಜಿ ವಿಚಾರಣೆಗೆ ಸಿಜೆಐ ನಿರಾಕರಿಸಿದ್ದರು. ಪರಿಹಾರಕ್ಕಾಗಿ ದೇವರನ್ನೇ ಪ್ರಾರ್ಥಿಸಿ ಎಂದು ಸಿಜೆಐ ಹೇಳಿದ್ದಕ್ಕೆ ರಾಕೇಶ್‌ ಕಿಶೋರ್‌ ಕುಪಿತರಾಗಿದ್ದರು ಎನ್ನಲಾಗಿದೆ.

Read More
Next Story