ಧರ್ಮಸ್ಥಳ ವಿಚಾರದಲ್ಲಿ ಬಿಜೆಪಿ ರಾಜಕಾರಣ: ಸಚಿವ ಎಂ. ಬಿ. ಪಾಟೀಲ್‌

ಯಾರೋ ಒಬ್ಬ ಅನಾಮಿಕ ತಾನು ಧರ್ಮಸ್ಥಳದಲ್ಲಿ ಹತ್ತಾರು ಶವಗಳನ್ನು ಹೂತು ಹಾಕಿದ್ದಾಗಿ ಹೇಳಲು ಶುರು ಮಾಡಿದ. ಅದೇನೆಂದು ಸರಿಯಾಗಿ ಕಂಡುಕೊಳ್ಳುವುದು ಸರ್ಕಾರದ ಕರ್ತವ್ಯವಾಗಿತ್ತು ಎಂದು ಸಚಿವ ಎಂ.ಬಿ. ಪಾಟೀಲ್‌ ತಿಳಿಸಿದರು.;

Update: 2025-08-28 10:27 GMT
ಸಚಿವ ಎಂ.ಬಿ. ಪಾಟೀಲ್‌

ಧರ್ಮಸ್ಥಳ ಕ್ಷೇತ್ರದ ವಿಚಾರದಲ್ಲಿ ಮಿಥ್ಯಾರೋಪಕ್ಕೆ ಪ್ರಚಾರ ಸಿಗುವ ಬದಲು ಸತ್ಯ ದೃಢವಾಗಲಿ ಎನ್ನುವ ಉದ್ದೇಶದಿಂದ ಸರ್ಕಾರ ಎಸ್ಐಟಿ ರಚಿಸಿದೆ. ಇದನ್ನು ಬಿಜೆಪಿಯವರೂ ಸ್ವಾಗತಿಸಿದ್ದರು. ಈಗ ಇದನ್ನೇ ಅವರು ರಾಜಕೀಯ ಬಂಡವಾಳ ಮಾಡಿಕೊಳ್ಳಲು ಹೊರಟಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್‌ ತಿಳಿಸಿದರು.

ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾರೋ ಒಬ್ಬ ಅನಾಮಿಕ ತಾನು ಧರ್ಮಸ್ಥಳದಲ್ಲಿ ಹತ್ತಾರು ಶವಗಳನ್ನು ಹೂತು ಹಾಕಿದ್ದಾಗಿ ಹೇಳಲು ಶುರು ಮಾಡಿದ. ಅದೇನೆಂದು ಸರಿಯಾಗಿ ಕಂಡುಕೊಳ್ಳುವುದು ಸರ್ಕಾರದ ಕರ್ತವ್ಯವಾಗಿತ್ತು. ಎಸ್ಐಟಿ ಮಾಡಿದ್ದರಿಂದ ಧರ್ಮಸ್ಥಳದ ಶಕ್ತಿ ಮತ್ತು ಆ ಕ್ಷೇತ್ರದ ಬಗೆಗಿನ ವಿಶ್ವಾಸ ಮತ್ತಷ್ಟು ಹೆಚ್ಚಾಗಿದೆ. ಏಕೆಂದರೆ, ಇದರಿಂದ ವಿನಾ ಕಾರಣ ಕಳಂಕ ಅಂಟಿಕೊಳ್ಳುವ ಅಪಾಯ ತಪ್ಪಿತು ಎಂದು ಅವರು ಹೇಳಿದರು.

ಎಸ್‌ಐಟಿ ರಚನೆ ಒಳ್ಳೆಯ ನಿರ್ಧಾರ

ಧರ್ಮಸ್ಥಳದಲ್ಲಿ ಏನೋ ನಡೆದಿರಬಹುದು ಎನ್ನುವ ಅನುಮಾನ ಬಿಜೆಪಿಯವರಿಗೂ ಇತ್ತು. ಇಲ್ಲದಿದ್ದರೆ ಎಸ್ಐಟಿ ರಚನೆಯನ್ನೇಕೆ ಅವರು ಸ್ವಾಗತಿಸುತ್ತಿದ್ದರು? ಈಗ ಅಲ್ಲಿ ಅಂಥದ್ದೇನೂ ನಡೆದಿಲ್ಲ ಎಂದಾಗಿದೆ. ಹೀಗಾಗಿ ಬಿಜೆಪಿ ಇದನ್ನು ರಾಜಕೀಯ ಬಂಡವಾಳ ಮಾಡಿಕೊಳ್ಳಲು ಹವಣಿಸುತ್ತಿದೆ. ಎಸ್ಐಟಿ ಮಾಡಿದ್ದರಿಂದ ಒಳ್ಳೆಯದೇ ಆಗಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದರು.

ಮೈಸೂರು ದಸರಾ ಉದ್ಘಾಟಕರಾಗಿ ಸಾಹಿತಿ ಬಾನು ಮುಷ್ತಾಕ್ ಅವರನ್ನು ಸರ್ಕಾರ ಆಯ್ಕೆ ಮಾಡಿರುವುದು ಸರಿಯಿದೆ. ಬಿಜೆಪಿ ಇದನ್ನೂ ವಿರೋಧಿಸುತ್ತಿದೆ. ಹಿಂದೆ ಕವಿ ಕೆ.ಎಸ್ ನಿಸಾರ್ ಅಹಮದ್ ಕೂಡ ದಸರಾವನ್ನು ಉದ್ಘಾಟಿಸಿದ್ದರು. ವಿಜಯಪುರದಲ್ಲಿ ನನ್ನನ್ನು ಕೂಡ ಮುಸ್ಲಿಮರು ತಮ್ಮ ಧಾರ್ಮಿಕ ಕೇಂದ್ರಗಳಿಗೆ ಆಹ್ವಾನಿಸುತ್ತಾರೆ. ಇದರಲ್ಲೆಲ್ಲ ತಪ್ಪೇನಿದೆ ಎಂದು ಪ್ರಶ್ನಿಸಿದರು.

ರೈಲು, ವಿಮಾನ ನಿಲ್ದಾಣದ ಬಗ್ಗೆ ಬಿಜೆಪಿ ಮಾತನಾಡಲಿ

ಬಿಜೆಪಿಯವರ ಬತ್ತಳಿಕೆಯಲ್ಲಿ ಗಟ್ಟಿ ವಿಚಾರಗಳೇ ಇಲ್ಲ. ಹೀಗಾಗಿಯೇ ಅವರು ಜಾತಿ ಮತ್ತು ಧರ್ಮಗಳ ಮಧ್ಯೆ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಬಿಟ್ಟು ಅಮೆರಿಕದ ತೆರಿಗೆ ಹೇರಿಕೆ, ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲು, ಬೆಂಗಳೂರು ನಗರಕ್ಕೆ ಬೇಕಾದ ಎರಡನೆಯ ವಿಮಾನ ನಿಲ್ದಾಣ ಮತ್ತು ರಾಜ್ಯದ ರೈಲ್ವೆ ಯೋಜನೆಗಳ ಬಗ್ಗೆ ಕೇಂದ್ರ ಸರ್ಕಾರದ ಜೊತೆ ಮಾತನಾಡಲಿ ಎಂದು ಬಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.


Tags:    

Similar News