ಧರ್ಮಸ್ಥಳ ಪ್ರಕರಣ | ಆರೋಪಿ ಮುಸುಕುಧಾರಿಯ ಜಾಮೀನು ಅರ್ಜಿ ವಜಾ
ಆರೋಪಿ ಅನಾಮಿಕ ವ್ಯಕ್ತಿಯನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಬಂಧಿಸಿತ್ತು. ಆತ ಜೈಲು ಸೇರಿದ ಕೂಡಲೇ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಎಸ್ಐಟಿ ಪರ ವಕೀಲರಿಂದ ಜಾಮೀನಿಗೆ ಆಕ್ಷೇಪಣೆ ಸಲ್ಲಿಕೆಯಾಗಿತ್ತು.;
ಆರೋಪಿ
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಅನಾಮಿಕ ವ್ಯಕ್ತಿಯ ಜಾಮೀನು ಅರ್ಜಿಯನ್ನು ಬೆಳ್ತಂಗಡಿ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ.
ಆರೋಪಿ ಮುಸುಕುಧಾರಿಯನ್ನು ಎಸ್‌ಐಟಿ ಬಂಧಿಸಿತ್ತು. ಆತ ಜೈಲು ಸೇರಿದ ಕೂಡಲೇ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಎಸ್ಐಟಿ ಪರ ವಕೀಲರಿಂದ ಜಾಮೀನಿಗೆ ಆಕ್ಷೇಪಣೆ ಸಲ್ಲಿಸಿದ್ದರು. ಆಕ್ಷೇಪಣೆ ಸಲ್ಲಿಕೆ ಬಳಿಕ ಎರಡೂ ಕಡೆಯ ವಾದ-ಪ್ರತಿವಾದವನ್ನು ಸೆ.12ರಂದು ಆಲಿಸಿದ್ದ ನ್ಯಾಯಾಲಯ ಸೆ.16ಕ್ಕೆ ಆದೇಶ ಕಾಯ್ದಿರಿಸಿತ್ತು. ಅದರಂತೆ ಮಂಗಳವಾರ ಜಾಮೀನು ಅರ್ಜಿ ವಜಾ ಮಾಡಿ ಬೆಳ್ತಂಗಡಿ ನ್ಯಾಯಾಲಯ ಆದೇಶ ಹೊರಡಿಸಿದೆ.
‘ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ. ಇದರಿಂದ ನನಗೆ ಈಗ ಪಶ್ಚಾತ್ತಾಪವಾಗುತ್ತಿದೆ. ಹೀಗಾಗಿ, ಸತ್ಯ ಬಿಚ್ಚಿಡುತ್ತಿದ್ದೇನೆ’ ಎಂದು ಆರೋಪಿ ಮುಸುಕುಧಾರಿಯು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದೀಗ ಪ್ರಕರಣದ ವಿಚಾರಣೆ ವೇಳೆ ಏನೇ ಪ್ರಶ್ನೆ ಕೇಳಿದರೂ ಕಣ್ಣೀರು ಹಾಕುತ್ತಿದ್ದು, ‘ಇಷ್ಟೆಲ್ಲಾ ಆಗುತ್ತದೆ ಎಂದು ನನಗೆ ಗೊತ್ತಿರಲಿಲ್ಲ, ನನ್ನ ಬಿಟ್ಟು ಬಿಡಿ’ ಎಂದು ಕಣ್ಣೀರುಡುತ್ತಿದ್ದಾನೆ ಎಂದು ತಿಳಿದುಬಂದಿದೆ. ಸದ್ಯ ಶಿವಮೊಗ್ಗ ಜೈಲಿನಲ್ಲಿರುವ ಮುಸುಕುಧಾರಿಯನ್ನು ಎಸ್‌ಐಟಿ ವಿಚಾರಣೆ ನಡೆಸುತ್ತಿದೆ.