The Federal Interview| ಧರ್ಮಸ್ಥಳ ಪ್ರಕರಣ: ತಿರುಪತಿಯಲ್ಲಿ ಆಗದ ಸಾವುಗಳು, ಇಲ್ಲಿ ಯಾಕಾಗುತ್ತವೆ? ಉಗ್ರಪ್ಪ ಸಮಿತಿ ಪ್ರಶ್ನೆ
x

The Federal Interview| ಧರ್ಮಸ್ಥಳ ಪ್ರಕರಣ: ತಿರುಪತಿಯಲ್ಲಿ ಆಗದ ಸಾವುಗಳು, ಇಲ್ಲಿ ಯಾಕಾಗುತ್ತವೆ? ಉಗ್ರಪ್ಪ ಸಮಿತಿ ಪ್ರಶ್ನೆ

ಧರ್ಮಸ್ಥಳದಲ್ಲಿ ನಡೆಯುತ್ತಿರುವ ಸರಣಿ ಅಸಹಜ ಸಾವುಗಳ ಕುರಿತು ಇದೀಗ ತೀವ್ರ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಉಗ್ರಪ್ಪ ಅವರ ನೇತೃತ್ವದ ಸಮಿತಿಯು 2018ರಲ್ಲಿ ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯ ಅಂಶಗಳು ಮತ್ತೆ ಮುನ್ನೆಲೆಗೆ ಬಂದಿವೆ.


ತಿರುಪತಿಗೆ ಧರ್ಮಸ್ಥಳಕ್ಕಿಂತಲೂ ಹೆಚ್ಚು ಯಾತ್ರಾರ್ಥಿಗಳು ಭೇಟಿ ನೀಡುತ್ತಾರೆ. ಅಲ್ಲಿ ನಡೆಯದ ಅಸಹಜ ಸಾವುಗಳು, ಧರ್ಮಸ್ಥಳದಲ್ಲಿ ಮಾತ್ರ ಯಾಕೆ ಸಂಭವಿಸುತ್ತವೆ..? ಇದು ಕಾಂಗ್ರೆಸ್ ಮುಖಂಡ ಹಾಗೂ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಕುರಿತ ತಜ್ಞರ ಸಮಿತಿಯ ಅಂದಿನ ಅಧ್ಯಕ್ಷರಾಗಿದ್ದ ವಿ.ಎಸ್. ಉಗ್ರಪ್ಪ ಅವರು, 2016ರಲ್ಲಿಯೇ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದ ಖಡಕ್ ಪ್ರಶ್ನೆ.

ಧರ್ಮಸ್ಥಳದಲ್ಲಿ ನಡೆಯುತ್ತಿರುವ ಸರಣಿ ಅಸಹಜ ಸಾವುಗಳ ಕುರಿತು ಇದೀಗ ತೀವ್ರ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಉಗ್ರಪ್ಪ ಅವರ ನೇತೃತ್ವದ ಸಮಿತಿಯು 2018ರಲ್ಲಿ ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯ ಅಂಶಗಳು ಮತ್ತೆ ಮುನ್ನೆಲೆಗೆ ಬಂದಿವೆ.

ಅಧಿಕಾರಿಗಳನ್ನು ಎಸ್​ಐಟಿಗೆ ಒಳಪಡಿಸಿ

ಬೆಳ್ತಂಗಡಿ ತಾಲೂಕಿನಲ್ಲಿ ಈ ಹಿಂದೆ ಸಂಭವಿಸಿದ ನೂರಾರು ಅಸಹಜ ಸಾವುಗಳ ಕುರಿತು ತಮ್ಮ ನೇತೃತ್ವದ ಸದನ ಸಮಿತಿಯ ಮುಂದೆ ಪೊಲೀಸ್ ಅಧಿಕಾರಿಗಳೇ ಒಪ್ಪಿಕೊಂಡಿದ್ದರು ಎಂಬ ಮಾಹಿತಿಯನ್ನು ಸಮಿತಿಯ ಮಾಜಿ ಅಧ್ಯಕ್ಷ ವಿ.ಎಸ್. ಉಗ್ರಪ್ಪ ಬಹಿರಂಗಪಡಿಸಿದ್ದಾರೆ. ಸೌಜನ್ಯ ಪ್ರಕರಣದ ಎಸ್‌ಐಟಿ ತನಿಖೆ ನಡೆಯುತ್ತಿರುವ ಈ ಸಂದರ್ಭದಲ್ಲಿ, ಅಂದು ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸುವ ಮೂಲಕ ಸತ್ಯವನ್ನು ಹೊರತರಬೇಕು ಎಂದು ಅವರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಕುರಿತು ವರದಿ ನೀಡಲು 2014ರಲ್ಲಿ ಎಂ.ಸಿ. ನಾಣಯ್ಯ ಅವರ ನೇತೃತ್ವದಲ್ಲಿ ರಚನೆಯಾಗಿದ್ದ ಸಮಿತಿಗೆ ಅವರು ರಾಜೀನಾಮೆ ನೀಡಿದ ನಂತರ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯಂತೆ ನನ್ನನ್ನು ಅಧ್ಯಕ್ಷನನ್ನಾಗಿ ನೇಮಿಸಲಾಯಿತು. ಶಾಸಕರು, ಐಎಎಸ್, ಐಪಿಎಸ್ ಅಧಿಕಾರಿಗಳು ಮತ್ತು ವಿವಿಧ ಸಂಘಟನೆಗಳ 40 ಸದಸ್ಯರಿದ್ದ ಸಮಿತಿಯು ರಾಜ್ಯಾದ್ಯಂತ ಪ್ರವಾಸ ಮಾಡಿ, 6 ಸಾವಿರ ಪುಟಗಳ ವಿಸ್ತೃತ ವರದಿ ಸಲ್ಲಿಸಿತ್ತು ಎಂದು ಉಗ್ರಪ್ಪ ಮಾಹಿತಿ ನೀಡಿದರು.

ಬೆಳ್ತಂಗಡಿಯಲ್ಲಿ ದೂರು

"ವರದಿ ಸಿದ್ಧಪಡಿಸುವ ವೇಳೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಭೆ ನಡೆಸುತ್ತಿದ್ದಾಗ, ಶೇಖರ್ ಎಂಬ ವ್ಯಕ್ತಿಯೊಬ್ಬರು ಬೆಳ್ತಂಗಡಿ ತಾಲೂಕೊಂದರಲ್ಲೇ 500-600 ಅಸಹಜ ಸಾವುಗಳು ಸಂಭವಿಸಿವೆ ಎಂದು ಸಮಿತಿಯ ಗಮನ ಸೆಳೆದರು. ಇದು ಆಘಾತಕಾರಿ ವಿಷಯವಾಗಿತ್ತು. ತಕ್ಷಣವೇ ನಾನು ಅಂದಿನ ಎಸ್‌ಪಿ ಮತ್ತು ಹೆಚ್ಚುವರಿ ಎಸ್‌ಪಿಯವರನ್ನು ಪ್ರಶ್ನಿಸಿದಾಗ, '500 ಇಲ್ಲ, ಆದರೆ ವರ್ಷಕ್ಕೆ ಸರಾಸರಿ 100 ಅಸಹಜ ಸಾವುಗಳು ಸಂಭವಿಸುತ್ತವೆ' ಎಂದು ಅವರು ಒಪ್ಪಿಕೊಂಡಿದ್ದರು. ಇದಕ್ಕೆ ಕಾರಣ ಕೇಳಿದಾಗ, 'ಧರ್ಮಸ್ಥಳಕ್ಕೆ ಬರುವ ಭಕ್ತರು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ' ಎಂದು ಪೊಲೀಸರು ವಿಚಿತ್ರ ಸಮಜಾಯಿಷಿ ನೀಡಿದರು. ಆಗ ನಾನು, 'ತಿರುಪತಿಯಂತಹ ದೊಡ್ಡ ಕ್ಷೇತ್ರಕ್ಕೆ ಲಕ್ಷಾಂತರ ಜನ ಬರುತ್ತಾರೆ, ಅಲ್ಲಿ ಈ ಪ್ರಮಾಣದ ಆತ್ಮಹತ್ಯೆಗಳು ಏಕೆ ನಡೆಯುವುದಿಲ್ಲ? ಇಲ್ಲಿಯೇ ಏಕೆ ಹೀಗಾಗುತ್ತಿದೆ?' ಎಂದು ಮರುಪ್ರಶ್ನಿಸಿದ್ದೆ. ಆದರೆ, ಈ ಬಗ್ಗೆ ಹೆಚ್ಚಿನ ವರದಿ ನೀಡಲು ಸೂಚಿಸುವಷ್ಟರಲ್ಲಿ ನನ್ನ ಸಮಿತಿಯ ಅವಧಿ ಮುಕ್ತಾಯವಾಯಿತು," ಎಂದು ಉಗ್ರಪ್ಪ ಹಿಂದಿನ ಘಟನೆಗಳನ್ನು ವಿವರಿಸಿದರು.

ವರದಿ ಅಂಗೀಕಾರ ಮತ್ತು ಸರ್ಕಾರದ ಕ್ರಮಕ್ಕೆ ಒತ್ತಾಯ

"ನಮ್ಮ ಸಮಿತಿಯ ವರದಿಯನ್ನು ಸಚಿವ ಸಂಪುಟ ಅಂಗೀಕರಿಸಿದ್ದು, ಅದರ ಶಿಫಾರಸುಗಳನ್ನು ಜಾರಿಗೆ ತರಲು ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ. ಈಗ ಸೌಜನ್ಯ ಪ್ರಕರಣದ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗಬೇಕಾದರೆ, ಅಂದು ಅಸಹಜ ಸಾವುಗಳ ಬಗ್ಗೆ ಒಪ್ಪಿಕೊಂಡಿದ್ದ ಪೊಲೀಸ್ ಅಧಿಕಾರಿಗಳನ್ನು ಎಸ್‌ಐಟಿ ತನಿಖೆಗೆ ಒಳಪಡಿಸಬೇಕು. ಈ ಕುರಿತು ಗೃಹ ಸಚಿವರು ಮತ್ತು ಡಿಜಿಪಿಯವರ ಗಮನ ಸೆಳೆದಿದ್ದೇನೆ. ಮುಖ್ಯಮಂತ್ರಿಗಳಿಗೂ ಈ ಬಗ್ಗೆ ಮಾಹಿತಿ ನೀಡಲಾಗುವುದು. ಇದು ಮಹಿಳೆಯರ ಮೇಲಿನ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಒಂದು ಕಣ್ಣು ತೆರೆಸುವ ಪ್ರಕರಣವಾಗಬೇಕು," ಎಂದು ಅವರು ಹೇಳಿದರು.

ಬಿಜೆಪಿ ವಿರುದ್ಧ ರಾಜಕೀಯ ಷಡ್ಯಂತ್ರದ ಆರೋಪ

"ನಾನು ಯಾವುದೇ ವ್ಯಕ್ತಿ ಅಥವಾ ಸಮುದಾಯದ ಕಡೆಗೆ ಬೆರಳು ತೋರಿಸುವುದಿಲ್ಲ. ಜೈನರು ಅಹಿಂಸಾವಾದಿಗಳು. ಒಂದುವೇಳೆ ಆ ಸಮುದಾಯದವರು ಈ ಕೃತ್ಯ ಎಸಗಿದ್ದರೆ, ಅವರು ಉಮೇಶ್ ರೆಡ್ಡಿಯಂತಹ 'ಸೈಕಿಕ್' ಆಗಿರಬೇಕು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಕೂಡ ಎಸ್‌ಐಟಿ ತನಿಖೆಯನ್ನು ಸ್ವಾಗತಿಸಿದ್ದಾರೆ. ಆದರೆ, ಬಿಜೆಪಿ ಈ ಸೂಕ್ಷ್ಮ ವಿಚಾರದಲ್ಲಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದೆ. ಸೌಜನ್ಯ ಪರ ಹೋರಾಟದಲ್ಲಿರುವ ಮಹೇಶ್ ಶೆಟ್ಟಿ ತಿಮರೋಡಿ ಆರ್‌ಎಸ್‌ಎಸ್‌ನ ಕಟ್ಟಾ ಕಾರ್ಯಕರ್ತ. ಬಿಜೆಪಿಯವರು ಸೌಜನ್ಯ ಅವರ ತಾಯಿಯನ್ನು ಭೇಟಿಯಾದಾಗ ಏನು ಮಾತುಕತೆ ನಡೆಸಿದರು ಎಂಬುದನ್ನು ಬಹಿರಂಗಪಡಿಸಲಿ. ನನ್ನ ಪ್ರಕಾರ, ಈ ಷಡ್ಯಂತ್ರದ ಹಿಂದೆ ಇರುವುದೇ ಬಿಜೆಪಿ. ಅವರು ಒಡೆದು ಆಳುವ ನೀತಿಯ ಮೂಲಕ ಧರ್ಮ ಮತ್ತು ದೇವರನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ," ಎಂದು ಉಗ್ರಪ್ಪ ಗಂಭೀರ ಆರೋಪ ಮಾಡಿದರು.

ಮುಕ್ತ ತನಿಖೆ ಮತ್ತು ಸಾಮಾಜಿಕ ಜಾಗೃತಿಗೆ ಕರೆ

"ರಾಜ್ಯದ ಬೇರೆ ಯಾವುದೇ ಯಾತ್ರಾ ಸ್ಥಳಗಳಲ್ಲಿ ನಡೆಯದ ಘಟನೆಗಳು ಧರ್ಮಸ್ಥಳದಲ್ಲಿ ಏಕೆ ನಡೆಯುತ್ತಿವೆ ಎಂಬುದರ ಬಗ್ಗೆ ಸತ್ಯ ಹೊರಬರಬೇಕು. ಸಾವುಗಳು ಸಂಭವಿಸಿರುವುದನ್ನು ಎಲ್ಲರೂ ಒಪ್ಪುತ್ತಾರೆ. ಆದ್ದರಿಂದ, ಅತ್ಯಂತ ಮುಕ್ತ ಮನಸ್ಸಿನಿಂದ ತನಿಖೆ ನಡೆಸಿ, ಸತ್ಯವನ್ನು ಜನರ ಮುಂದಿಡಬೇಕು. ಹೆಣ್ಣುಮಕ್ಕಳ ರಕ್ಷಣೆ ವಿಚಾರದಲ್ಲಿ ಆಡಳಿತ ಪಕ್ಷ, ಪ್ರತಿಪಕ್ಷ, ಕೇಂದ್ರ ಸರ್ಕಾರ ಮತ್ತು ಜಿಲ್ಲಾಡಳಿತಗಳು ರಾಜಕಾರಣ ಬದಿಗಿಟ್ಟು ಒಟ್ಟಾಗಿ ಕೆಲಸ ಮಾಡಬೇಕು. ಬೆಳ್ತಂಗಡಿ ವ್ಯಾಪ್ತಿಯಲ್ಲಿ ಅಸಹಜ ಸಾವುಗಳನ್ನು ತಡೆಗಟ್ಟಲು ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಜನರಲ್ಲಿ ಜಾಗೃತಿ ಮೂಡಿಸಬೇಕು. ಈ ಸೂಕ್ಷ್ಮ ವಿಚಾರದಲ್ಲಿ ಮಾಧ್ಯಮಗಳು ಅಥವಾ ಸಾರ್ವಜನಿಕರು ತೀರ್ಪು ನೀಡಬಾರದು. ತನಿಖೆ ಮುಗಿದು ಸತ್ಯ ಹೊರಬರುವವರೆಗೂ ಎಲ್ಲರೂ ತಾಳ್ಮೆಯಿಂದ ಕಾಯಬೇಕು," ಎಂದು ಉಗ್ರಪ್ಪ ಹೇಳಿದರು.

Read More
Next Story