JOG FALLS| ಜೋಗಕ್ಕೆ ಹೋಗುವ ಪ್ರವಾಸಿಗರನ್ನು ಸ್ವಾಗತಿಸಲಿವೆ ಅತ್ಯಾಕರ್ಷಕ ಸೌಲಭ್ಯಗಳು; ಏನೇನಿವೆ ಎಂಬ ವಿವರ ಇಲ್ಲಿದೆ
ಎರಡನೇ ಹಂತದ ಕಾಮಗಾರಿ ಈಗಾಗಲೇ ಆರಂಭವಾಗಿದ್ದು, ಜೋಗ ನೋಡಲು ಬಂದವರಿಗೆ ಅನುಕೂಲವಾಗು ನಿಟ್ಟಿನಲ್ಲಿ ಸುಮಾರು 80 ಕೊಠಡಿ ಒಳಗೊಂಡ ಒಂದು ಸ್ಟಾರ್ ಹೋಟೆಲ್ ನಿರ್ಮಾಣ ಮಾಡಲಾಗುತ್ತಿದೆ.;
ಜೋಗ ಜಲಪಾತ
ಜಗತ್ತಿನ ಅದ್ಭುತ ಜಲಪಾತಗಳಲ್ಲಿ ಒಂದೆಂದೇ ಖ್ಯಾತಿ ಪಡೆದಿರುವ ಶಿವಮೊಗ್ಗ ಜಿಲ್ಲೆಯ ಜೋಗ ಜಲಪಾತಕ್ಕೆ ಇನ್ನಷ್ಟು ಕಾಯಕಲ್ಪ ನೀಡಿ, ಪ್ರವಾಸಿಗರ ಅನುಭವವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಸಮಗ್ರ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗಿವೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಜೋಗದ ಸಮಗ್ರ ಅಭಿವೃದ್ಧಿಗೆ 185 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದ್ದರೆ. . ಇದೀಗ ಪ್ರವಾಸೋದ್ಯಮ ಇಲಾಖೆ, ಶಿವಮೊಗ್ಗ ಜಿಲ್ಲಾಡಳಿತ ಮತ್ತು ಜೋಗ ಅಭಿವೃದ್ಧಿ ಪ್ರಾಧಿಕಾರವು ಜೊತೆಯಾಗಿ, ಒಟ್ಟು 180 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ. ಶಂಕರ ನಾರಾಯಣ ಕನ್ಸ್ಟ್ರಕ್ಷನ್ ಕಂಪನಿ ಈ ಕಾಮಗಾರಿಗಳನ್ನು ನಿರ್ವಹಿಸುತ್ತಿದೆ. ಕಾಮಗಾರಿಗಳು ಬಹುತೇಕ ಅಂತಿಮ ಹಂತ ತಲುಪಿವೆ.
ಕಾಮಗಾರಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಪ್ರವಾಸಿಗರ ಭೇಟಿಗೆ ವಿಧಿಸಲಾಗಿದ್ದ ನಿರ್ಬಂಧವನ್ನು ಇದೀಗ ತೆರವುಗೊಳಿಸಲಾಗಿದ್ದು, ಜೋಗಕ್ಕೆ ಮತ್ತೆ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.
ಕಾಮಗಾರಿಯು ವಾಸ್ತವವಾಗಿ 2024ರ ನವೆಂಬರ್ ಅಂತ್ಯಕ್ಕೆ ಪೂರ್ಣಗೊಳ್ಳಬೇಕಿತ್ತು. ಆದರೆ, ಅನಿರೀಕ್ಷಿತ ಮಳೆಯ ಕಾರಣದಿಂದಾಗಿ ಕೆಲಸ ವಿಳಂಬಗೊಂಡಿದ್ದು, ಗುತ್ತಿಗೆ ಪಡೆದ ಕಂಪನಿಯು ಕಾಮಗಾರಿ ಮುಗಿಸಲು 2025ರ ನವೆಂಬರ್‌ವರೆಗೆ ಕಾಲಾವಕಾಶ ನೀಡುವಂತೆ ರಾಜ್ಯ ಸರ್ಕಾರವನ್ನು ಕೋರಿತ್ತು. ಸದ್ಯ ರಾಜ್ಯ ಸರ್ಕಾರವು ಕಾಮಗಾರಿಗೆ ಅಗತ್ಯವಿರುವ ಹಣವನ್ನು ಬಿಡುಗಡೆ ಮಾಡಿದ್ದರಿಂದ ಕೆಲಸ ವೇಗ ಪಡೆದುಕೊಂಡಿದ್ದು, ಮುಂದಿನ ವರ್ಷದೊಳಗೆ ಕಾಮಗಾರಿಗಳು ಸಂಪೂರ್ಣವಾಗಿ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ.
ಪ್ರವೇಶ ದ್ವಾರ ನಿರ್ಮಾಣ
ಅಭಿವೃದ್ಧಿ ಯೋಜನೆಯ ಭಾಗವಾಗಿ, ಜೋಗ ಜಲಪಾತಕ್ಕೆ ಆಧುನಿಕ ಪ್ರವೇಶ ದ್ವಾರ ನಿರ್ಮಾಣವಾಗುತ್ತಿದೆ. ಇಲ್ಲಿಂದ ಸುಂದರವಾದ ವಾಕಿಂಗ್ ಪಾಥ್ ಮೂಲಕ ನಡೆದುಕೊಂಡು ಹೋದರೆ ಜಲಪಾತ ವೀಕ್ಷಣೆಗೆಂದೇ ನಿರ್ಮಿಸಲಾಗಿರುವ ವಿಶೇಷ ಗೋಪುರವನ್ನು ತಲುಪಬಹುದು. ಗೋಪುರ ತಲುಪುವ ಮುನ್ನ ಶಾಪಿಂಗ್ ಮಾಡಲು ಮಳಿಗೆಗಳ ಸಂಕೀರ್ಣವಿದ್ದು, ಅಲ್ಲಿಂದ ಜೋಗವನ್ನು ಅತ್ಯಂತ ಹತ್ತಿರದಿಂದ ಕಣ್ತುಂಬಿಕೊಳ್ಳಲು ಅನುಕೂಲವಾಗುವಂತೆ ವಿಶೇಷ ಗ್ಯಾಲರಿಗಳನ್ನು ನಿರ್ಮಿಸಲಾಗಿದೆ. ಇದು ಪ್ರವಾಸಿಗರಿಗೆ ಜೋಗದ ಸೌಂದರ್ಯವನ್ನು ಇನ್ನಷ್ಟು ಸಮೀಪದಿಂದ ಆಸ್ವಾದಿಸಲು ಅವಕಾಶ ನೀಡುತ್ತದೆ. ಇದಲ್ಲದೆ, ಮಕ್ಕಳಿಗೆ ಆಟವಾಡಲು ಸುಂದರ ಉದ್ಯಾನವನ, ಹಾಗೂ ಪ್ರವಾಸಿಗರ ಅನುಕೂಲಕ್ಕಾಗಿ ಉಪಹಾರ ಗೃಹಗಳು ಮತ್ತು ವಿಶ್ರಾಂತಿ ಕೊಠಡಿಗಳನ್ನೂ ನಿರ್ಮಿಸಲಾಗುತ್ತಿದೆ.
ರೋಪ್ ವೇ ನಿರ್ಮಾಣ
ಜೋಗದ ಸಂಪೂರ್ಣ ವಿಹಂಗಮ ನೋಟವನ್ನು ಒದಗಿಸಲು ಜಲಪಾತದ ಮುಂಭಾಗದಿಂದ ಬ್ರಿಟಿಷ್ ಬಂಗ್ಲೆವರೆಗೆ ರೋಪ್ ವೇ ನಿರ್ಮಾಣ ಕಾಮಗಾರಿಯೂ ಪ್ರಗತಿಯಲ್ಲಿದೆ. ಇದರ ಜೊತೆಗೆ, ಪ್ರವಾಸಿಗರಿಗೆ ತಲಕಳಲೆ ಡ್ಯಾಂನಲ್ಲಿ ಬೋಟಿಂಗ್ ಮತ್ತು ವಾಟರ್ ಸ್ಪೋರ್ಟ್ಸ್‌ನಂತಹ ಜಲಕ್ರೀಡೆಗಳ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತಿದೆ.
ಯೋಜನೆಯ ಮೊದಲ ಹಂತದ ಕಾಮಗಾರಿಗಳಲ್ಲಿ ವೀಕ್ಷಣಾ ಗೋಪುರ, ವಾಣಿಜ್ಯ ಮಳಿಗೆಗಳು, ವಾಕಿಂಗ್ ಪಾಥ್, ಮತ್ತು ಪ್ರವಾಸಿಗರಿಗೆ ನಿಂತು ಜಲಪಾತ ನೋಡಲು ಸಣ್ಣ ಸಣ್ಣ ಆಶ್ರಯ ತಾಣಗಳ ನಿರ್ಮಾಣ ಪೂರ್ಣಗೊಂಡಿವೆ. ಪ್ರವೇಶ ದ್ವಾರದಲ್ಲಿ ಟಿಕೆಟ್ ಕೌಂಟರ್, ಒಳ ಪ್ರವೇಶಕ್ಕೆ ಒಂದು ದಾರಿ ಮತ್ತು ಜಲಪಾತ ವೀಕ್ಷಿಸಿ ಹೊರಬರಲು ಮತ್ತೊಂದು ಪ್ರತ್ಯೇಕ ದಾರಿ ಮಾಡಲಾಗಿದೆ.
ಸ್ಟಾರ್ ಹೋಟೆಲ್ ನಿರ್ಮಾಣ
ಎರಡನೇ ಹಂತದ ಕಾಮಗಾರಿಗಳು ಈಗಾಗಲೇ ಆರಂಭಗೊಂಡಿದ್ದು, ಜೋಗಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಉತ್ತಮ ವಸತಿ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಸುಮಾರು 80 ಕೊಠಡಿಗಳನ್ನು ಹೊಂದಿರುವ ಒಂದು ಸ್ಟಾರ್ ಹೋಟೆಲ್ ನಿರ್ಮಾಣವಾಗುತ್ತಿದೆ. ಅಲ್ಲದೆ, ಹೆಚ್ಚುವರಿ ಪ್ರವಾಸಿ ವಾಹನಗಳ ನಿಲುಗಡೆಗೆ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. ಈ ಎರಡನೇ ಹಂತದ ಕಾಮಗಾರಿಯ ಜವಾಬ್ದಾರಿಯನ್ನು ಭೂಮಿಪುತ್ರ ಕಂಪನಿಯು ವಹಿಸಿಕೊಂಡಿದೆ.
ಜೋಗ ಜಲಪಾತದ ವೀಕ್ಷಣೆಗೆ ರೂಪ್ ವೇ ಕಾಮಗಾರಿ (ಈಗಾಗಲೇ ಪ್ರಗತಿಯಲ್ಲಿದೆ), ವಿಸ್ತಾರವಾದ ಪಾರ್ಕಿಂಗ್, ರೈನ್ ಡ್ಯಾನ್ಸ್, ನೀರಿನ ಕಾರಂಜಿ, ಗ್ಲಾಸ್ ಹೌಸ್ ನಿರ್ಮಾಣ, ಮತ್ತೊಂದು ಸುಸಜ್ಜಿತ ಉದ್ಯಾನವನ, ಜೈಂಟ್ ವೀಲ್ ಹಾಗೂ ಜೋಗ ಜಲಪಾತ ಮತ್ತು ಇಲ್ಲಿನ ವಿದ್ಯುತ್ ಉತ್ಪಾದನೆಯ ಸಮಗ್ರ ಮಾಹಿತಿಯನ್ನು ನೀಡುವ ಒಂದು ಮ್ಯೂಸಿಯಂ ನಿರ್ಮಾಣವೂ ಯೋಜನೆಯಲ್ಲಿ ಸೇರಿದೆ. ಈ ಬೃಹತ್ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಂಡ ನಂತರ ಜೋಗ ಜಲಪಾತವು ದೇಶದ ಪ್ರಮುಖ ಪ್ರವಾಸಿ ತಾಣವಾಗಿ ಮತ್ತಷ್ಟು ಮೆರೆಯುವ ನಿರೀಕ್ಷೆಯಿದೆ.