ಮೋದಿ ಪ್ರಧಾನಿಯಾದ್ರೆ, ದೇಶ ಬಿಟ್ಟು ಹೋಗುವೆ ಎಂದಿದ್ದ ದೇವೇಗೌಡರು, ಅವರನ್ನೇ ಅಪ್ಪಿಕೊಳ್ಳುತ್ತಿದ್ದಾರೆ: ಸಿಎಂ ಸಿದ್ದರಾಮಯ್ಯ

Update: 2024-04-18 12:55 GMT
ಸಿದ್ದರಾಮಯ್ಯ, ಮುಖ್ಯಮಂತ್ರಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ ದೇವೇಗೌಡ ಅವರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ನಗರದಲ್ಲಿ ಆಯೋಜಿಸಿದ್ದ ರೋಡ್ ಶೋ ನಲ್ಲಿ ಪಾಲ್ಗೊಂಡು ಅವರು ಮಾತನಾಡಿದ್ದಾರೆ. ʻಲೋಕಸಭೆ ಚುನಾವಣೆ ಬಳಿಕ ರಾಜ್ಯ ಕಾಂಗ್ರೆಸ್ ಸರ್ಕಾರ ಬೀಳಲಿದೆ ಎನ್ನುವುದು ದೇವೇಗೌಡ ಅವರ ಭ್ರಮೆ ಅಷ್ಟೇ. ಭರ್ತಿ 5 ವರ್ಷವೂ ನಮ್ಮ ಸರ್ಕಾರ ಸುಭದ್ರವಾಗಿರಲಿದೆ. ಅಲ್ಲದೇ ಮತ್ತೆ ನಾವೇ ಗೆದ್ದು ಬರ್ತೀವಿʼ ಎಂದು ಹೇಳಿದರು.

ʻಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಹತ್ತು ವರ್ಷದಲ್ಲಿ ಜನರಿಗೆ ನೀಡಿದ ಒಂದೇ ಒಂದು ಭರವಸೆಯನ್ನೂ ಈಡೇರಿಸಿಲ್ಲ. ಈ ಮೂಲಕ ಭಾರತೀಯರಿಗೆ ನಂಬಿಕೆ ದ್ರೋಹ ಎಸಗಿದ್ದಾರೆ. ಕೊಟ್ಟ ಮಾತನ್ನು ಉಳಿಸಿಕೊಳ್ಳದ ಬಿಜೆಪಿಗೆ ಮತ್ತು ಅವರೊಂದಿಗೆ ಸೇರಿರುವ ಈ ಜೆಡಿಎಸ್‌ನವರಿಗೂ ನಿಮ್ಮ ಮತ ಕೇಳುವ ನೈತಿಕತೆ ಇಲ್ಲ. ನರೇಂದ್ರ ಮೋದಿ ಪ್ರಧಾನಿಯಾದರೆ, ನಾನು ದೇಶ ಬಿಟ್ಟು ಹೋಗ್ತೀನಿ ಎಂದು ಹೇಳಿದ್ದ ದೇವೇಗೌಡ ಅವರು ಈಗ ಅದೇ ಮೋದಿ ಅವರನ್ನು ಅಪ್ಪಿಕೊಳ್ಳುತ್ತಿದ್ದಾರೆʼ ಎಂದು ವ್ಯಂಗ್ಯವಾಡಿದರು.

ಈ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ರಕ್ಷಾ ರಾಮಯ್ಯ ಅವರು ಅಭೂತಪೂರ್ವ ಗೆಲುವು ಸಾಧಿಸಲಿದ್ದಾರೆ. ನೀವೇ ತಿರಸ್ಕರಿಸಿದ ಬಿಜೆಪಿ ಅಭ್ಯರ್ಥಿ ಸುಧಾಕರ್ ಮತ್ತೆ ಪ್ರಭಾವ ಬಳಸಿ ಲೋಕಸಭೆಗೆ ನಿಂತಿದ್ದಾರೆ. ಇವರನ್ನು ಈ ಬಾರಿಯೂ ಸೋಲಿಸಿದರೆ ನಿಮ್ಮ ಮತಕ್ಕೆ ಹೆಚ್ಚು ಗೌರವ ಬರುತ್ತದೆ ಎಂದು ಹೇಳಿದರು.

ಭ್ರಷ್ಟಾಚಾರಿ ಎನ್ನುವ ಕಾರಣಕ್ಕೇ ಇಲ್ಲಿಯ ಜನತೆ ಸುಧಾಕರ್ ಅವರನ್ನು ಸೋಲಿಸಿದ್ದೀರಿ. ಇವರ ಭ್ರಷ್ಟಾಚಾರದ ವಿರುದ್ಧ ತನಿಖೆ ನಡೆಯುತ್ತಿದೆ. ತನಿಖೆಯಲ್ಲಿ ಇವರ ಭ್ರಷ್ಟಾಚಾರ ಸಾಬೀತಾಗುತ್ತದೆ. ಬಳಿಕ ಸುಧಾಕರ್ ಎಲ್ಲಿಗೆ ಹೋಗಬೇಕೋ ಅಲ್ಲಿಗೇ ಹೋಗ್ತಾರೆ. ಎನ್.ಡಿ.ಎ ಅಭ್ಯರ್ಥಿ ಸುಧಾಕರ್ ಅವರಿಗೆ ಜನತಾ ನ್ಯಾಯಾಲಯದಲ್ಲಿ ನೀವೂ ಶಿಕ್ಷೆ ಕೊಡಬೇಕು. ಶಿಕ್ಷೆ ಕೊಟ್ಟರೆ ಮಾತ್ರ ಕ್ಷೇತ್ರದ ಜನತೆಯ ಹೆಸರಿನಲ್ಲಿ ಮಾಡಿದ ಮೋಸಕ್ಕೆ ಮತ್ತು ಮಂತ್ರಿಯಾಗಿ ಮಾಡಿದ ಭ್ರಷ್ಟಾಚಾರಕ್ಕೆ ತಕ್ಕ ಶಾಸ್ತಿ ಮಾಡಿದಂತಾಗುತ್ತದೆ ಎಂದು ಕರೆ ನೀಡಿದರು.

ಈ ಬಾರಿ ಕೇಂದ್ರದಲ್ಲೂ ಬಿಜೆಪಿಯ ಎನ್.ಡಿ.ಎ ಮೈತ್ರಿಕೂಟ ಅಧಿಕಾರಕ್ಕೆ ಬರೋದಿಲ್ಲ. ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರುವುದರಿಂದ ಇಲ್ಲಿ ಸುಧಾಕರ್ ಸೋಲಿಸಿ. ನಮ್ಮ ಸರ್ಕಾರ ರಾಜ್ಯದಲ್ಲಿ ಮಹಿಳೆಯರಿಗೆ ತಿಂಗಳಿಗೆ 2 ಸಾವಿರ ರೂಪಾಯಿ ನೀಡುತ್ತಿದೆ. ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರತೀ ಅರ್ಹ ಕುಟುಂಬದ ಮಹಿಳೆಯರ ಅಕೌಂಟಿಗೆ ವರ್ಷಕ್ಕೆ ಒಂದು ಲಕ್ಷ ರೂಪಾಯಿ ಜಮೆ ಆಗುತ್ತದೆ. ರಾಜ್ಯ ಸರ್ಕಾರ ಕೊಡುವ ಪ್ರತಿ ತಿಂಗಳ 2 ಸಾವಿರ ರೂಪಾಯಿ ಕೂಡ ಇದಕ್ಕೆ ಸೇರಿ ವರ್ಷಕ್ಕೆ ಒಂದು ಲಕ್ಷದ 24 ಸಾವಿರ ರೂಪಾಯಿ ಪ್ರತೀ ಕುಟುಂಬಗಳ ಖಾತೆಗೆ ಬರುತ್ತದೆ.

ಇದರೊಂದಿಗೆ ಇಡೀ ದೇಶದ ಅಷ್ಟೂ ರೈತರ ಸಾಲ ಮನ್ನಾ ಮಾಡಲಾಗುವುದು. ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ತರಬೇತಿ ಮತ್ತು ಒಂದು ಲಕ್ಷ ರೂಪಾಯಿ ವೇತನ ಸಿಗುತ್ತದೆ. ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಖಚಿತವಾಗಿ ನೀಡಲಾಗುವುದು. ಪ್ರಧಾನಿ ನರೇಂದ್ರ ಮೋದಿ ಅವರ ಕೆಟ್ಟ ನೀತಿಯಿಂದಾಗಿ ಹದಗೆಟ್ಟಿರುವ ಭಾರತದ ಆರ್ಥಿಕತೆಯನ್ನು ಸರಿ ದಾರಿಗೆ ತಂದು ಜನರ ಪರವಾದ ಆರ್ಥಿಕತೆಯನ್ನು ಪುನರ್ ಸ್ಥಾಪಿಸಲಾಗುವುದು ಎಂದು ತಿಳಿಸಿದರು.

Tags:    

Similar News