ನೀರಾವರಿ ವಿಚಾರದಲ್ಲಿ ದೆಹಲಿ ಪ್ರವಾಸ ಫಲಪ್ರದ : ಡಿಸಿಎಂ ಡಿ.ಕೆ. ಶಿವಕುಮಾರ್
ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಪಕ್ಷ ಸಂಘಟನೆ ವಿಚಾರದಲ್ಲಿ ಶ್ರಮಿಸಿರುವವರಿಗೆ ಹಾಗೂ ಕೆಲವರಿಗೆ ನಾವು ಕೊಟ್ಟಿರುವ ಮಾತಿಗೆ ಬದ್ಧವಾಗಿ ಸ್ಥಾನಮಾನ ನೀಡಬೇಕಿದೆ ಎಂದು ಡಿ.ಕೆ ಶಿವಕುಮಾರ್ ಅವರು ತಿಳಿಸಿದ್ದಾರೆ.;
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್
ಇತ್ತೀಚಿನ ದೆಹಲಿ ಪ್ರವಾಸವು ಕರ್ನಾಟಕದ ನೀರಾವರಿ ಯೋಜನೆಗಳಿಗೆ, ವಿಶೇಷವಾಗಿ ಎತ್ತಿನಹೊಳೆ ಯೋಜನೆಗೆ ಕೇಂದ್ರದಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ. ಈ ಮನವಿಯನ್ನು ಕೇಂದ್ರ ಪುರಸ್ಕರಿಸುವುದಾಗಿ ಭರವಸೆ ನೀಡಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಅವರು ಶುಕ್ರವಾರ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು.
ದೆಹಲಿ ಪ್ರವಾಸದಲ್ಲಿ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್ ಪಾಟೀಲ್ ಅವರನ್ನು ಭೇಟಿ ಮಾಡಿ ಕೃಷ್ಣಾ ನ್ಯಾಯಾಧಿಕರಣದ ತೀರ್ಪಿನ ಸಂಬಂಧ ಅಧಿಸೂಚನೆ ಹೊರಡಿಸುವುದು, ಮೆಕೆದಾಟು ಯೋಜನೆ ಅಪ್ರೈಸಲ್ ವರದಿ ಬಗ್ಗೆ ಚರ್ಚಿಸಲಾಗಿದೆ. ಅರಣ್ಯ ಸಚಿವ ಭೂಪೇಂದ್ರ ಯಾದವ್ ಅವರನ್ನು ಭೇಟಿ ಮಾಡಿ ಕಳಸಾ ಬಂಡೂರಿ ವಿಚಾರವಾಗಿ ಚರ್ಚೆ ಮಾಡಲಾಗಿದೆ. ಈ ವಿಚಾರವಾಗಿ ಪ್ರಹ್ಲಾದ್ ಜೋಷಿ ಅವರ ಜತೆಗೂ ಮಾತನಾಡಿದ್ದೇನೆ. ಎರಡು ರಾಜ್ಯಗಳ ನಡುವೆ ರಾಜಿಗೆ ಸಲಹೆ ನೀಡಿದ್ದಾರೆ. ನಾವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಈ ವಿಚಾರದಲ್ಲಿ ಕೆಲವು ತಾಂತ್ರಿಕ ಅಂಶಗಳಿವೆ. ಗೋವಾದವರು ನಮಗೆ ಶೋಕಾಸ್ ನೋಟೀಸ್ ನೀಡಿರುವುದು ಸರಿಯಲ್ಲ ಎಂದು ಹೇಳಿದ್ದು, ಕಾನೂನು ತಜ್ಞರ ಜೊತೆ ಚರ್ಚೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
“ಜೊತೆಗೆ ಹೊಸ ಯೋಜನೆಗಳಿಗೆ ಮನವಿ ಸಲ್ಲಿಸಿದ್ದೇವೆ. ಸಂಸತ್ ಅಧಿವೇಶನ ಸಂದರ್ಭದಲ್ಲಿ ಮತ್ತೊಮ್ಮೆ ದೆಹಲಿಗೆ ಹೋಗಿ, ರಾಜ್ಯದ ಸಂಸದರ ಜೊತೆ ಚರ್ಚೆ ನಡೆಸಿ ಒಟ್ಟಾಗಿ ಒತ್ತಾಯ ಹೇರಲು ಮನವಿ ಮಾಡಲಾಗುವುದು” ಎಂದು ತಿಳಿಸಿದರು.
ಎತ್ತಿನಹೊಳೆ ಯೋಜನೆ ಸಂಬಂಧ ಲಕ್ಕೇನಹಳ್ಳಿಯಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ವಿರೋಧ ವ್ಯಕ್ತವಾಗಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿ ಅವರು, “ನೀವು ರಸ್ತೆ, ಅಣೆಕಟ್ಟು ಸೇರಿದಂತೆ ಯಾವುದೇ ಯೋಜನೆ ಮಾಡಬೇಕಾದರೂ ವಿರೋಧ ವ್ಯಕ್ತವಾಗುತ್ತದೆ. ಕುಡಿಯುವ ನೀರು ಪೂರೈಸಲೇಬೇಕು. ಈ ನೀರನ್ನು ಎಲ್ಲಾದರೂ ಸಂಗ್ರಹ ಮಾಡಿಕೊಳ್ಳಬೇಕು. ಲಕ್ಕೇನಹಳ್ಳಿ ಮಾತ್ರವಷ್ಟೇ ಅಲ್ಲ, ಕೊರಟಗೆರೆ ಭಾಗದಲ್ಲಿ ಕೆಲವು ಪ್ರದೇಶ ಬಳಸಿಕೊಳ್ಳಬೇಕು ಎಂದು ಆಲೋಚಿಸಿದ್ದೆವು. ನೀರು ಹೇಗೆ ಹರಿಯುತ್ತದೆ ಹೇಳಲು ಸಾಧ್ಯವಿಲ್ಲ. ಈ ವಿಚಾರವಾಗಿ ಪರಮೇಶ್ವರ್ ಅವರ ಜತೆ ಚರ್ಚಿಸಿ, ಮುಂದಿನ ಸಚಿವ ಸಂಪುಟದಲ್ಲಿ ಚರ್ಚೆ ನಡೆಸಲಾಗುವುದು” ಎಂದು ಅವರು ತಿಳಿಸಿದರು.
ಹೈಕಮಾಂಡ್ ಭೇಟಿಯಾಗಿ ಯಾವೆಲ್ಲಾ ರಾಜಕೀಯ ಚರ್ಚೆ ನಡೆಯಿತು ಎಂದು ಕೇಳಿದ ಪ್ರಶ್ನೆಗೆ, “ಯಾವ ರಾಜಕೀಯ ಚರ್ಚೆಯಾಗಿದೆ? ನಮ್ಮ ಕಾರ್ಯಕರ್ತರಿಗೆ ಕೆಲವು ಸ್ಥಾನಮಾನ ನೀಡುವ ಬಗ್ಗೆ ಚರ್ಚೆ ಮಾಡಲಾಗಿದೆ. ಎಲ್ಲಾ ಶಾಸಕರು ತಮ್ಮ ಅಭಿಪ್ರಾಯ ಸಲ್ಲಿಸಿದ್ದಾರೆ. ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಪಕ್ಷ ಸಂಘಟನೆ ವಿಚಾರದಲ್ಲಿ ಶ್ರಮಿಸಿರುವವರಿಗೆ ಹಾಗೂ ಕೆಲವರಿಗೆ ನಾವು ಕೊಟ್ಟಿರುವ ಮಾತಿಗೆ ಬದ್ಧವಾಗಿ ಸ್ಥಾನಮಾನ ನೀಡಬೇಕಿದೆ. ಇದು ಅಂತಿಮ ಹಂತಕ್ಕೆ ಬಂದಿದೆ. ಇದರ ಪ್ರಸ್ತಾವನೆಯನ್ನು ಮತ್ತೊಮ್ಮೆ ದೆಹಲಿಗೆ ಕಳುಹಿಸಿ ಅನುಮತಿ ಪಡೆಯಲಾಗುವುದು” ಎಂದು ಅವರು ತಿಳಿಸಿದರು.
ನಿಮ್ಮ ಪ್ರಶ್ನೆಗಳಿಗೆ ಮುಖ್ಯಮಂತ್ರಿಗಳೇ ಉತ್ತರ ನೀಡಿದ್ದಾರೆ
ಡಿ.ಕೆ. ಶಿವಕುಮಾರ್ ಅವರಿಗೆ ಕೆಲವು ಶಾಸಕರ ಬೆಂಬಲ ಮಾತ್ರವಿದೆ ಎಂಬ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಉತ್ತರಿಸಿದ ಡಿಕೆಶಿ, “ನಾನು ಪಕ್ಷದ ರಾಜ್ಯ ಅಧ್ಯಕ್ಷ. ಪಕ್ಷ ಏನು ಹೇಳುತ್ತದೆಯೋ ಅದನ್ನು ಮಾಡುತ್ತೇನೆ. ನಾನು ನಿನ್ನೆ ಬ್ಯುಸಿ ಇದ್ದೆ. ಅದರ ಮಧ್ಯೆ ಮುಖ್ಯಮಂತ್ರಿಗಳ ಹೇಳಿಕೆ ನೋಡಿದೆ. ನಿಮ್ಮ ಪ್ರಶ್ನೆಗಳಿಗೆ ಅವರೇ ಉತ್ತರ ನೀಡಿದ್ದಾರೆ. ಅವರು ಉತ್ತರ ನೀಡಿದ ಮೇಲೆ ನಾವು ಮತ್ತೆ ಆ ವಿಚಾರ ಚರ್ಚೆ ಮಾಡುವುದು ಸೂಕ್ತವಲ್ಲ. ನೀವು ಸಹ ಮತ್ತೆ ಆ ವಿಚಾರವಾಗಿ ಪ್ರಶ್ನೆ ಮಾಡುವುದು ಸೂಕ್ತವಲ್ಲ” ಎಂದು ಹೇಳಿದರು.
ಈ ಹಿಂದೆ ನನ್ನ ಬಳಿ ಆಯ್ಕೆ ಇಲ್ಲ ಎಂದು ಹೇಳಿದ್ದಿರಿ, ಈಗಲೂ ನೀವು ಅದೇ ಸ್ಥಿತಿಯಲ್ಲಿದ್ದೀರಾ ಎಂದು ಪತ್ರಕರ್ತರು ಕೇಳಿದಾಗ, “ನಿಮಗೆ ನಮ್ಮ ವಿಚಾರದಲ್ಲಿ ಯಾಕೆ ಗಾಬರಿ? ಈ ವಿಚಾರದಲ್ಲಿ ನಮಗೆ ಗಾಬರಿಯಿಲ್ಲ” ಎಂದರು.
ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುವ ಆಸೆಯನ್ನು ಅನೇಕರು ಹೊಂದಿದ್ದಾರೆ ಎಂಬ ಪ್ರಶ್ನೆಗೆ, “ನಿಮ್ಮಲ್ಲಿಯೂ ಅನೇಕರಿಗೆ ಬೇರೆ ಬೇರೆ ಆಸೆಗಳಿರುತ್ತವೆ. ಈ ವಿಚಾರವಾಗಿ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಅದರ ಅಗತ್ಯವೂ ಇಲ್ಲ. ಯಾರು ಏನು ಮಾತನಾಡಿದ್ದಾರೋ, ಅವರೇ ಪ್ರಶ್ನೆ ಹಾಗೂ ಉತ್ತರ ಎರಡನ್ನೂ ಕೊಟ್ಟಿದ್ದಾರೆ. ಸದ್ಯಕ್ಕೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ,” ಎಂದು ಅವರು ತಿಳಿಸಿದರು.