Dengue Outbreak | ಸೋಂಕು ನಿಯಂತ್ರಿಸದಿದ್ದರೆ ತಲೆದಂಡ: ಹಿರಿಯ ಅಧಿಕಾರಿಗಳಿಗೆ ಸಿಎಂ ಎಚ್ಚರಿಕೆ

Update: 2024-07-08 10:23 GMT

ʻʻರಾಜ್ಯದಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಸಮರೋಪಾದಿಯಲ್ಲಿ ಕೆಲಸ ಮಾಡಿ. ಜಿಲ್ಲಾಧಿಕಾರಿಗಳು, ಜಿಲ್ಲಾ ವೈದ್ಯಾಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳ ಜೊತೆ ಸಭೆ ಮಾಡಿ ಕ್ಷಿಪ್ರವಾಗಿ ಕೆಲಸ ಮಾಡಬೇಕು. ಇಷ್ಟು ದಿನ ಉದಾಸೀನ, ನಿರ್ಲಕ್ಷ್ಯಕ್ಕೆ, ಕರ್ತವ್ಯಲೋಪಕ್ಕೆ ಕೆಳ ಹಂತದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಇಂದಿನಿಂದ ಹಿರಿಯ ಅಧಿಕಾರಿಗಳನ್ನೂ ಹೊಣೆ ಮಾಡಿ ಕ್ರಮ ಕೈಗೊಳ್ಳುತ್ತೇನೆʼʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ ನಡೆದ ಡಿಸಿಗಳು, ಸಿಇಒಗಳು ಹಾಗೂ ಉಸ್ತುವಾರಿ ಕಾರ್ಯದರ್ಶಿಗಳ ಸಭೆಯಲ್ಲಿ ಮಾತನಾಡಿದ ಅವರು, ʻʻಸರ್ಕಾರದ ಕಾರ್ಯಕ್ರಮಗಳು, ಯೋಜನೆಗಳನ್ನು ಪರಿಣಾಮಕಾರಿಯಾಗಿ ಜನ ಸಾಮಾನ್ಯರಿಗೆ ತಲುಪಿಸಲು ಡಿಸಿ-ಎಸ್'ಪಿ-ಸಿಇಒ ಗಳು ಕ್ರಿಯಾಶೀಲತೆವಾಗಿ, ಸಮನ್ವಯತೆಯಿಂದ ಕೆಲಸ ಮಾಡಬೇಕು. ಆಗ ಮಾತ್ರ ಸರ್ಕಾರದ ಕಾಳಜಿಗಳು ಜನರಿಗೆ ತಲುಪಲು ಸಾಧ್ಯʼʼ ಎಂದು ಹೇಳಿದರು.

"ಜನಸಂಪರ್ಕ, ಜನಸ್ಪಂದನ ಸಭೆಗಳಲ್ಲಿ 15-20 ಸಾವಿರ ಅರ್ಜಿಗಳು ಬರುತ್ತವೆ. ನೀವು ಸರಿಯಾಗಿ ಸ್ಥಳೀಯವಾಗಿ ಕೆಲಸ ಮಾಡಿದ್ದರೆ ಇಷ್ಟೊಂದು ಮಂದಿ ನನ್ನ ಬಳಿಗೆ ಏಕೆ ಬರುತ್ತಾರೆ" ಎಂದು ಪ್ರಶ್ನಿಸಿದ ಅವರು, "ಡಿಸಿ, ಸಿಇಒಗಳು ಇರೋದು ಜನಸಂಪರ್ಕ ಸಭೆಗಳಿಗೆ ಬಂದ ಅರ್ಜಿಗಳನ್ನು ಕಳುಹಿಸಿ, ಮುಚ್ಚಳಿಕೆ ಕೊಟ್ಟು ಕೈತೊಳೆದುಕೊಳ್ಳೋಕಾ? ಪರಿಹಾರ ಕೊಡಿಸುವವರು ಯಾರು? ಇದಕ್ಕೇನಾ ನೀವು ಇರೋದು?" ಎಂದು ಖಾರವಾಗಿ ಪ್ರಶ್ನಿಸಿದರು.

"ನೀವು ಪರಿಹಾರ ಕೊಡಲಿಲ್ಲ ಎಂದು ನನ್ನ ಬಳಿ ಬಂದಿದ್ದಾರೆ. ಜನರ ಸಮಸ್ಯೆಗಳ ಅರ್ಜಿಗಳು ಸಕಾರಾತ್ಮಕವಾಗಿ ವಿಲೇವಾರಿ ಆಗಿಲ್ಲ, ಗುಣಾತ್ಮಕವಾಗಿ ವಿಲೇವಾರಿ ಆಗಿಲ್ಲ ಅಂದರೆ ನಿಮ್ಮ ವಿರುದ್ಧ ಕ್ರಮ ಖಚಿತ" ಎಂದು ಸಿದ್ದರಾಮಯ್ಯ ಎಚ್ಚರಿಸಿದರು.

ಜಿಲ್ಲಾಧಿಕಾರಿ ಮಹಾರಾಜರಲ್ಲ, ಜನ ಸೇವಕರು

ʻʻಜಿಲ್ಲಾಧಿಕಾರಿಗಳೆಂದರೆ ಮಹಾರಾಜರಲ್ಲ, ಜನ ಸೇವಕರು. ಮಹಾರಾಜ ಎನ್ನುವ ಭಾವನೆ ಇದ್ದರೆ ಅಭಿವೃದ್ಧಿ ಮತ್ತು ಪ್ರಗತಿ ಸಾಧ್ಯವಿಲ್ಲ. ರಾಜಕಾರಣಿಗಳು ಮತ್ತು ಅಧಿಕಾರಿಗಳು ಇಬ್ಬರೂ ಜನ ಸೇವಕರು ಎನ್ನುವುದನ್ನು ನೆನಪಿನಲ್ಲಿಟ್ಟುಕೊಂಡು ಜನಸೇವೆ ಮಾಡಬೇಕುʼʼ ಎಂದು ಸೂಚನೆ ನೀಡಿದ್ದಾರೆ.

40 ವರ್ಷಗಳ ಹಿಂದೆ ಅಧಿಕಾರಿಗಳು ಕೆಲಸ ನಿರ್ವಹಿಸುವ ರೀತಿಗೂ, ಇವತ್ತಿನ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವ ರೀತಿಗೂ ಹೋಲಿಸಿದರೆ ಕಾರ್ಯಾಂಗ ಮತ್ತು ಶಾಸಕಾಂಗ ಈಗ ಹೆಚ್ಚು ಪರಿಣಾಮಕಾರಿಯಾಗಿ, ಗುಣಾತ್ಮಕವಾಗಿ ಕೆಲಸ ಮಾಡುತ್ತಿಲ್ಲ ಎನ್ನುವುದು ಗೊತ್ತಾಗುತ್ತಿದೆ. ಇದು ಬಹಳ ಬೇಸರದ ಸಂಗತಿಯಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಕರ್ತವ್ಯದ ಜಾಗದಲ್ಲೇ ವಾಸ್ತವ್ಯ ಸೂಚನೆ ಜಾರಿಯಾಗಿಲ್ಲ

ತಹಶೀಲ್ದಾರ್, ಜಿಲ್ಲಾಧಿಕಾರಿಗಳ ಸಹಿತ ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳು ಜನರನ್ನು ನೇರ ಭೇಟಿ ಮಾಡುತ್ತಿಲ್ಲ. ಅಧಿಕಾರಿಗಳು ಕರ್ತವ್ಯ ನಿರ್ವಹಿಸುವ ಕಡೆಯೇ ವಾಸ್ತವ್ಯ ಹೂಡಬೇಕು ಎನ್ನುವ ನನ್ನ ಸೂಚನೆ ಸರಿಯಾಗಿ ಪಾಲನೆ ಆಗುತ್ತಿಲ್ಲ. ಪಿಡಿಒಗಳು, ವಿಎಗಳು ಕೆಲಸ ಮಾಡುವ ಜಾಗದಲ್ಲೇ ಉಳಿಯಬೇಕು. ಈ ಬಗ್ಗೆ ಡಿಸಿ, ಸಿಇಒ ಗಳು ಗಮನ ಹರಿಸಬೇಕು ಎಂದು ಸಿಎಂ ತಾಕೀತು ಮಾಡಿದರು.

"ತಹಶೀಲ್ದಾರ್ ನ್ಯಾಯಾಲಯಗಳಲ್ಲಿ 8234 ಪ್ರಕರಣಗಳು ಬಾಕಿ ಇವೆ. ಉಪವಿಭಾಗಾಧಿಕಾರಿಗಳ ಬಳಿ ಆರ್‌ಆರ್‌ಟಿ (ಹಕ್ಕು ಬದಲಾವಣೆ) ಪ್ರಕರಣಗಳು 37587 ಬಾಕಿ ಇವೆ. ಇವುಗಳಲ್ಲಿ 5 ವರ್ಷಕ್ಕೂ ಮೇಲ್ಪಟ್ಟವು 7522 ಪ್ರಕರಣಗಳಿವೆ. ಡಿಸಿಗಳ ಬಳಿ 10838 ಪ್ರಕರಣಗಳು ಬಾಕಿ ಇವೆ. 5 ವರ್ಷಕ್ಕೂ ಮೇಲ್ಪಟ್ಟವು 4207 ಪ್ರಕರಣಗಳಿವೆ. ಡಿಸಿಗಳೇ ಬಾಕಿ ಉಳಿಸಿಕೊಂಡರೆ ನೀವು ಎಸಿ ಮತ್ತು ತಹಶೀಲ್ದಾರ್ ಗಳಿಗೆ ಏನು ಸೂಚನೆ ಕೊಡುತ್ತೀರಿ? ಕೆಲವು ಡಿಸಿ ಗಳ ಬಳಿ ಒಂದೂ ಪ್ರಕರಣಗಳೂ ಬಾಕಿ ಇಲ್ಲ. ಉಳಿದ ಡಿಸಿಗಳಿಂದ ಅದು ಏಕೆ ಸಾಧ್ಯವಾಗಿಲ್ಲ. ಜನ ಡಿಸಿ, ಎಸಿ, ತಹಶೀಲ್ದಾರ್ ಕಚೇರಿಗಳಿಗೆ ಅಲೆಯೋದು, ಅಧಿಕಾರಿಗಳು ಜನರ ಕೈಗೆ ಸಿಗದೇ ಇದ್ದರೆ ಅವರು ಏನು ಮಾಡಬೇಕು?" ಎಂದು ಸಿದ್ದರಾಮಯ್ಯ ಅಧಿಕಾರಿಗಳಿಗೆ ಖಾರವಾಗಿ ಪ್ರಶ್ನಿಸಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸುಧಾರಿಸಲು ಸೂಚನೆ

"ಎಸ್ಎಸ್ಎಲ್‌ಸಿ ಫಲಿತಾಂಶ ಕೆಲವು ಜಿಲ್ಲೆಗಳಲ್ಲಿ ಕುಸಿತ ಕಂಡಿರುವುದನ್ನು ಪ್ರಸ್ತಾಪಿಸಿದ ಮುಖ್ಯಮಂತ್ರಿ, ಈ ಬಾರಿ ನಕಲು ಮಾಡುವುದನ್ನು ಸಂಪೂರ್ಣ ನಿಲ್ಲಿಸಿದ್ದು ಶ್ಲಾಘನೀಯ. ಆದರೆ, ಈ ಕಾರಣಕ್ಕೆ ಫಲಿತಾಂಶ ಕುಸಿತ ಆಯಿತು ಎನ್ನುವ ಸಮರ್ಥನೆ ಸರಿಯಲ್ಲ. ಡಿಸಿ, ಸಿಇಒ, ಇಲಾಖಾ ಕಾರ್ಯದರ್ಶಿಗಳ ಜವಾಬ್ದಾರಿ ಇಲ್ಲವಾ? ಆತ್ಮಾವಲೋಕನ ಮಾಡಿಕೊಂಡು ಪರಿಸ್ಥಿತಿ ಸುಧಾರಿಸಲು ಪ್ರಯತ್ನಿಸಲೇಬೇಕು. ಡಿಡಿಪಿಐ, ಡಿಸಿ, ಸಿಇಒಗಳು ಒಟ್ಟಿಗೇ ಕುಳಿತು ಚರ್ಚಿಸಿ ಪರಿಸ್ಥಿತಿ ಸುಧಾರಿಸಬೇಕುʼʼ ಎನ್ನುವ ಸೂಚನೆ ನೀಡಿದರು.

ಕುರಿಗಾಹಿಗಳಿಗೆ ಗುರುತಿನ ಚೀಟಿ ಕಡ್ಡಾಯ

ಸಂಚಾರಿ ಕುರಿಗಾಹಿಗಳಿಗೆ ಗುರುತಿನ ಚೀಟಿ ನೀಡಬೇಕು, ಕುರಿ-ಮೇಕೆಗಳ ಟೆಂಟ್ ಹಾಕಿರುವ ಸ್ಥಳಕ್ಕೇ ಹೋಗಿ ಲಸಿಕೆ ಮತ್ತು ಚುಚ್ಚುಮದ್ದುಗಳನ್ನು ನೀಡಬೇಕು, ಸಂಚಾರಿ ಕುರಿಗಾಹಿಗಳಿಗೆ ಬಂದೂಕು ಲೈಸೆನ್ಸ್ ಕೊಡುವುದು ಕಡ್ಡಾಯ. ಕುರಿ ಕಳ್ಳತನ ತಡೆಯಲು ಇದು ಅಗತ್ಯ ಎನ್ನುವ ಸ್ಪಷ್ಟ ಸೂಚನೆಗಳನ್ನು ನೀಡಿದರು.

"ಮಣ್ಣಿನ ಫಲವತ್ತತೆ ಕಡಿಮೆ ಆಗುತ್ತಿದೆ. ಇದನ್ನು ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳುವ ಜೊತೆಗೆ ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡ್ ಅನ್ನು ಕಡ್ಡಾಯವಾಗಿ ನೀಡಬೇಕು. ಪ್ರತೀ ಎರಡು ವರ್ಷಕ್ಕೊಮ್ಮೆ ಮಣ್ಣಿನ ಪರೀಕ್ಷೆ ನಡೆಸಬೇಕು ಎಂದು ಸ್ಪಷ್ಟ ಸೂಚನೆ ನೀಡಿದರು. ಈ ಎಲ್ಲಾ ಕೆಲಸಗಳನ್ನು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಬೇಕು" ಎಂದು ಸೂಚನೆ ನೀಡಿದರು.

Tags:    

Similar News