Karnataka Dams | ಮುಂಗಾರು ಪೂರ್ವ ಮಳೆಯ ಕೊಡುಗೆ; ಕರ್ನಾಟಕದ ಜಲಾಶಯಗಳಲ್ಲಿ ಆಗಿಲ್ಲ ನೀರಿನ ಕೊರತೆ

ಮುಂಗಾರು ಪೂರ್ವ ಮಳೆಯಿಂದ ಕರ್ನಾಟಕದ ಜಲಾಶಯಗಳಲ್ಲಿ ನೀರಿನ ಕೊರತೆಯಾಗದೆ ರಾಜ್ಯ ಜನರಿಗೆ ಸಮಧಾನ ಸಿಕ್ಕಿದೆ. ಜತೆಗೆ ಅಂತರಾಜ್ಯ ವಿವಾದಕ್ಕೆ ತಾತ್ಕಾಲಿಕ ಪರಿಹಾರ ದೊರಕಿದೆ. ಹಾಗಾದರೆ, ರಾಜ್ಯದ ಡ್ಯಾಮ್​​ಗಳಲ್ಲಿ ಎಷ್ಟು ನೀರು ಸಂಗ್ರಹ ಇದೆ ಎಂಬುದನ್ನು ನೋಡೋಣ.;

Update: 2025-05-26 06:47 GMT

ಕೃಷ್ಣರಾಜಸಾಗರ ಅಣೆಕಟ್ಟು(ಕೆಆರ್‌ಎಸ್‌)

ಮುಂಗಾರು ಪೂರ್ವ ಮಳೆಯು ಈ ಬಾರಿ ರಾಜ್ಯ ಸರ್ಕಾರವನ್ನು ನೀರಿನ ಕೊರತೆಯ ದೊಡ್ಡ ಸಮಸ್ಯೆಯಿಂದ ಪಾರು ಮಾಡಿದೆ. ಕರ್ನಾಟಕದ ಅಣೆಕಟ್ಟುಗಳಲ್ಲಿ ಸಾಕಷ್ಟು ನೀರು ಸಂಗ್ರಹ ಇರುವುದೇ ಅದಕ್ಕೆ ಕಾರಣ. ಹಿಂದಿನ ಅನೇಕ ವರ್ಷಗಳಲ್ಲಿ ಮೇ ತಿಂಗಳ ಆರಂಭದಲ್ಲಿಯೇ ನೀರಿನ ಬವಣೆ ಜೋರಾಗಿ ಆತಂಕ ಎದುರಾಗುತ್ತಿತ್ತು. ಕಾವೇರಿ ನದಿಯ ಕೆಆರ್​ಎಸ್ ಡ್ಯಾಮ್​, ತುಂಗಭದ್ರಾ ಅಣೆಕಟ್ಟು ಹಾಗೂ ಆಲಮಟ್ಟಿ ಅಣೆಕಟ್ಟುಗಳು ಖಾಲಿಯಾದಾಗ ಸಮಸ್ಯೆಗಳು ಉದ್ಭವಿಸುತ್ತಿದ್ದವು. ಅದರಲ್ಲೂ ಬೆಂಗಳೂರು ನಗರ ವಾಸಿಗಳು ನೆಚ್ಚಿಕೊಂಡಿರುವ ಕೆಆರ್​ಎಸ್​​ನಲ್ಲಿ ನೀರು ಖಾಲಿಯಾದರೆ ದೊಡ್ಡ ಸುದ್ದಿಯಾಗುತ್ತಿತ್ತು.

ಕಳೆದ ಮುಂಗಾರಿನಲ್ಲಿ ಉತ್ತಮ ಮಳೆ ಹಾಗೂ ಈ ಬಾರಿ ಮುಂಗಾರು ಪೂರ್ವ ಮಳೆಯು ಜೋರಾಗಿ ಬಂದಿರುವ ಕಾರಣ ನೀರಿನ ಅಭಾವ ಇಲ್ಲದಾಗಿದೆ. ಇನ್ನು ರಾಜ್ಯದಲ್ಲಿ ಹರಿಯುವ ಬಹುತೇಕ ನದಿಗಳು ಅಂತರಾಜ್ಯ ನದಿಗಳಾಗಿದ್ದು ನೀರಿನ ಹಂಚಿಕೆ ಕುರಿತಾದ ಜಲವ್ಯಾಜ್ಯಗಳೂ ಇವೆ. ಬಹುತೇಕ ನದಿಗಳ ನೀರು ಹಂಚಿಕೆಗೆ ನ್ಯಾಯಾಧೀಕರಣಗಳನ್ನು ರಚಿಸಿ ಅದರ ಮೂಲಕ ನೀರಿನ ಪಾಲನ್ನು ಪಡೆದುಕೊಳ್ಳಲಾಗುತ್ತಿವೆ. ಹೀಗಾಗಿ ಡ್ಯಾಮ್​​ಗಳಲ್ಲಿ ನೀರಿನ  ಕೊರತೆ ಉಂಟಾದರೆ ನೆರೆಯ ರಾಜ್ಯಗಳು ತಮ್ಮ ಪಾಲನ್ನು ಕೇಳಿ ತಗಾದೆ ತೆಗೆಯುತ್ತಿದ್ದವು. ಆದರೆ, ಈ ಬಾರಿ ಆ ಸಮಸ್ಯೆಯೂ ತಲೆದೋರಿಲ್ಲ. ಬಹುತೇಕ ಡ್ಯಾಮ್​ಗಳಲ್ಲಿ ಹೊರ ಹರಿವು ಮುಂದುವರಿದಿದೆ.

ಹೀಗೆ, ರಾಜ್ಯದ ಪ್ರಮುಖ ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹ ಎಷ್ಟಿದೆ, ಸಾಮರ್ಥ್ಯ ಎಷ್ಟು, ಎಷ್ಟು ದಿನಗಳ ಕಾಲ ನೀರಿನ ಸಂಗ್ರಹ ಇದೆ ಎಂಬುದನ್ನು ಗಮನಿಸೋಣ. 

ಪ್ರಮುಖ ಅಣೆಕಟ್ಟುಗಳು 

ಕಾವೇರಿ ನದಿಗೆ ಅಡ್ಡಲಾಗಿ ಕೃಷ್ಣರಾಜ ಸಾಗರ ಅಣೆಕಟ್ಟು(KRS), ಶರಾವತಿಗೆ ಅಡ್ಡಲಾಗಿ ಲಿಂಗನಮಕ್ಕಿ ಜಲಾಶಯ, ಕಾಳಿ ನದಿಗೆ ಅಡ್ಡಲಾಗಿ ಸೂಫ ಅಣೆಕಟ್ಟು, ತುಂಗಭದ್ರಾ ನದಿಗೆ ಅಡ್ಡಲಾಗಿ ತುಂಗಭದ್ರಾ ಅಣೆಕಟ್ಟು, ಭದ್ರಾ ನದಿಗೆ ಅಡ್ಡಲಾಗಿ ಭದ್ರಾ ಜಲಾಶಯ, ಕೃಷ್ಣನದಿಗೆ ಅಡ್ಡಲಾಗಿ ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯ, ಕಬಿನಿ ಹಾಗೂ ಹೇಮಾವತಿ ಜಲಾಶಯ ಸೇರಿ ಅನೇಕ ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ. 

ಕೃಷ್ಣರಾಜಸಾಗರ ಅಣೆಕಟ್ಟು(ಕೆಆರ್‌ಎಸ್‌)

ಮೈಸೂರು ಮತ್ತು ಮಂಡ್ಯ ಜಿಲ್ಲೆಯ ಜೀವನದಿಯಾದ ಕಾವೇರಿ ನದಿಗೆ ಅಡ್ಡಲಾಗಿ ಈ ಅಣೆಕಟ್ಟನ್ನು ಕಟ್ಟಲಾಗಿದೆ. ಅಣೆಕಟ್ಟಿನ ಮುಖ್ಯ ಉದ್ದೇಶಗಳೆಂದರೆ ನೀರಾವರಿ ಮತ್ತು ಕುಡಿಯುವ ನೀರು ಸರಬರಾಜು. ಈ ಅಣೆಕಟ್ಟು 6700 ಅಡಿ ಉದ್ದವಿದ್ದು 130 ಅಡಿ ಎತ್ತರವಿದೆ. ಸ್ವಯಂಚಾಲಿತ ಗೇಟ್‌ಗಳನ್ನು ಒಳಗೊಂಡ ಪ್ರಪಂಚದ ಮೊದಲ ಅಣೆಕಟ್ಟುಗಳಲ್ಲಿ ಒಂದು. ಕೃಷ್ಣರಾಜ ಸಾಗರಕ್ಕೆ ಮೂರು ಪ್ರಮುಖ ನಾಲೆಗಳಿವೆ. ಅದರಲ್ಲಿ ವಿಶ್ವೇಶ್ವರಯ್ಯ ನಾಲೆ 45 ಕಿ.ಮೀ. ನಷ್ಟಿದೆ.  32 ಕಿ.ಮೀ.ಗಳ ಬಲದಂಡೆ ಮತ್ತು 21 ಕಿ.ಮೀ. ಎಡದಂಡೆ ನಾಲೆ ಇದೆ. 130 ಅಡಿ ಎತ್ತರದ ಅಣೆಕಟ್ಟಿನಲ್ಲಿ 49.457 ಟಿಎಂಸಿ ಅಡಿ ನೀರು ಸಂಗ್ರಹವಾಗಲಿದೆ.

ಮಂಗಳವಾರ(ಮೇ21) ಅಂತ್ಯಕ್ಕೆ ಜಲಾಶಯದಲ್ಲಿ ನೀರಿನ ಮಟ್ಟ 89.32 ಅಡಿಗೆ ಕುಸಿದಿದ್ದು 60 ಅಡಿ ತಲುಪುವವರೆಗೂ ನೀರನ್ನು ಕುಡಿಯಲು ಬಳಸಬಹುದು. ಉಳಿದ ನೀರನ್ನು ಡೆಡ್‌ ಸ್ಟೋರೆಜ್‌ ಎಂದು ಪರಿಗಣಿಸಲಾಗುತ್ತದೆ.

ಪ್ರಸ್ತುತ ಅಣೆಕಟ್ಟಿನಲ್ಲಿರುವ ನೀರನ್ನು ಎರಡು ತಿಂಗಳುಗಳ ಕಾಲ ಕುಡಿಯಲು ಬಳಸಬಹುದಾಗಿದೆ. ಕಳೆದ ವರ್ಷ ಇದೇ ಸಮಯಕ್ಕೆ 80.72 ಅಡಿ ನೀರಿನ ಸಂಗ್ರಹವಿತ್ತು. ಪ್ರಸ್ತುತ ಕೊಡಗಿನಲ್ಲಿ ಉತ್ತಮ ಮಳೆಯಾಗುತ್ತಿದ್ದು ಜಲಾಶಯಕ್ಕೆ ನಿತ್ಯ 148 ಕ್ಯುಸೆಕ್‌ ನೀರು ಹರಿದುಬರುತ್ತಿದ್ದು, ಕುಡಿಯುವ ನೀರಿನ ಉದ್ದೇಶಕ್ಕಾಗಿ ಜಲಾಶಯದಿಂದ 549 ಕ್ಯುಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ. ಕಳೆದ ವರ್ಷ ಉತ್ತಮ ಮಳೆಯಾಗಿದ್ದ ಪರಿಣಾಮ ತಮಿಳುನಾಡಿಗೆ ಅದರ ಪಾಲಿನ ನೀರಿಗಿಂತ ಹೆಚ್ಚು ಹರಿದಿರುವುದರಿಂದ 2024 ನೇ ಸಾಲಿನಲ್ಲಿ ಯಾವುದೇ ಸಮಸ್ಯೆ ಉದ್ಭವವಾಗಿರಲಿಲ್ಲ.

90 ವರ್ಷಗಳ ಅಣೆಕಟ್ಟಿನ ಇತಿಹಾಸದಲ್ಲಿಯೇ 154 ದಿನ (ಜುಲೈ 25 ರಿಂದ ಡಿಸೆಂಬರ್‌ 25)ರವರೆಗೆ ಜಲಾಶಯ ತುಂಬಿತ್ತು. 

ಜಲಾಶಯದಲ್ಲಿ ಶೇಖರಣೆಯಾಗಿರುವ ಹೂಳು ತೆಗಿಸಿದರೆ, ಇನ್ನೂ 3ರಿಂದ 4 ಟಿಎಂಸಿ ಅಡಿ ನೀರು ಸಾಮರ್ಥ್ಯ ಹೆಚ್ಚಲಿದೆ ಎಂಬುದು ನೀರಾವರಿ ತಜ್ಞರ ಅಭಿಪ್ರಾಯ.

ಹೂಳು ತೆಗೆಸುವಂತೆ ದಶಕಗಳಿಂದ ರೈತರು ಆಗ್ರಹಿಸುತ್ತಲೇ ಇದ್ದಾರೆ. ಆದರೆ ಈ ಬೇಡಿಕೆಯನ್ನು ಯಾವುದೇ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಇದರ ಜತೆಗೆ ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಹೂಳು ತೆಗೆಯುವುದು ಸೇರಿದಂತೆ, ಯಾವುದೇ ನೀರಾವರಿ ಅಭಿವೃದ್ಧಿ ಕೆಲಸಗಳಿಗೆ ಕೈ ಹಾಕಿದಾಗಲೆಲ್ಲಾ ನೆರೆಯ ತಮಿಳುನಾಡು ಆಕ್ಷೇಪ ಎತ್ತುತ್ತಲೇ ಬಂದಿದೆ. ಪರಿಣಾಮ ಜಲಾಶಯ ನಿರ್ಮಾಣಗೊಂಡು ಒಂಬತ್ತು ದಶಕವಾದರೂ ಕನ್ನಂಬಾಡಿಯ ಒಡಲಿನಿಂದ ಹೂಳು ತೆಗಿಸಿಲ್ಲ.

ಮೈಸೂರು ಮತ್ತು ಮಂಡ್ಯ ಜಿಲ್ಲೆಯ 2.50 ಲಕ್ಷ ಎಕರೆ ಪ್ರದೇಶಕ್ಕೆ ನೀರುಣಿಸುತ್ತಿರುವ ಕೃಷ್ಣರಾಜ ಸಾಗರ ಜಲಾಶಯದ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 49.45 ಟಿಎಂಸಿ. ಈ ಪೈಕಿ ಬಳಸಲು ಸಾಧ್ಯವಾಗುವ ನೀರಿನ ಪ್ರಮಾಣ 45 ಟಿಎಂಸಿ ಮಾತ್ರ. ಉಳಿದ ಸುಮಾರು 4.5 ಟಿಎಂಸಿ ನೀರನ್ನು ಡೆಡ್ ಸ್ಟೊರೇಜ್ ಎಂದು ಘೋಷಿಸುವುದರಿಂದ ಬಳಸಲು ಸಾಧ್ಯವೇ ಇಲ್ಲ.

ತುಂಗಭದ್ರಾ ಜಲಾಶಯ

ತುಂಗಭದ್ರಾ ಜಲಾಶಯ

ತುಂಗಭದ್ರಾ ಜಲಾಶಯ 132 ಟಿಎಂಸಿ ಸಾಮರ್ಥ್ಯದ ದೊಡ್ಡ ಅಣೆಕಟ್ಟು ಇದಾಗಿದ್ದು, ಪ್ರಸ್ತುತ ಜಲಾಶಯದಲ್ಲಿ 30 ಟಿಎಂಸಿ ಅಡಿಯಷ್ಟು ಹೂಳು ತುಂಬಿದೆ ಎಂದು ಹೇಳಲಾಗುತ್ತಿದೆ. ಬೇಸಿಗೆಯ ಅವಧಿಯಲ್ಲಿ ಜಲಾಶಯದ ಹೂಳು ತೆಗಿಸಬೇಕು ಎಂದು ನೀರಾವರಿ ಹೋರಾಟ ಸಮಿತಿಗಳು ಹೋರಾಟ ಮಾಡಿ ಸರ್ಕಾರಕ್ಕೆ ಮನವಿ ಮಾಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಉತ್ತಮ ಮಳೆಯಾದ ಸಂದರ್ಭದಲ್ಲಿ ಜಲಾಶಯ ತುಂಬಿ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ. ಹೂಳು ತೆಗೆಸಿದರೆ ಹೆಚ್ಚುವರಿ ನೀರನ್ನು ಸಂಗ್ರಹಣೆ ಮಾಡಬಹುದಾಗಿದೆ.

ಶನಿವಾರ (ಮೇ25)ರ ಅಂತ್ಯಕ್ಕೆ  25 ಜಲಾಶಯದಲ್ಲಿ 10 ಟಿಎಂಸಿ ನೀರು ಸಂಗ್ರವಿದ್ದು ಕಳೆದ ವರ್ಷ ಇದೇ ದಿನ 3.36 ಟಿಎಂಸಿ ಸಂಗ್ರಹವಿತ್ತು. 3497 ಕ್ಯೂಸೆಕ್‌ ಒಳ ಹರಿವಿದ್ದು 2123 ಹೊರಹರಿವಿದೆ ಎಂದು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ತಿಳಿಸಿದೆ.

ಜಲಾಶಯದಿಂದ ವ್ಯರ್ಥವಾಗಿ ಹರಿದು ಹೋಗುತ್ತಿರುವ 27 ಟಿಎಂಸಿ ನೀರನ್ನು ತಡೆದು ಹಿಡಿಯಲು ನವಲಿ ಸಮಾನಾಂತರ ಜಲಾಶಯ ಹಾಗೂ ಪರ್ಯಾಯ ಯೋಜನೆಗಳ ಮೂಲಕ ನೀರು ಸಂಗ್ರಹಿಸುವ ಬಗ್ಗೆ ಆಂಧ್ರ ಹಾಗೂ ತೆಲಂಗಾಣದ ಜತೆ ಚರ್ಚೆ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ತಿಳಿಸಿದ್ದರು. 

ಆಲಮಟ್ಟಿ ಜಲಾಶಯ

ಉತ್ತರ ಕರ್ನಾಟಕದಲ್ಲಿ ಕೃಷ್ಣನದಿಗೆ ಅಡ್ಡಲಾಗಿ ಆಲಮಟ್ಟಿ ಅಣೆಕಟ್ಟು(ಲಾಲ್‌ ಬಹದ್ದೂರ್‌ ಶಾಸ್ತ್ರಿ ಅಣೆಕಟ್ಟು) ನಿರ್ಮಿಸಲಾಗಿದ್ದು 123 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು ಮಾರ್ಚ್‌ ಅಂತ್ಯದ ವೇಳೆಗೆ ಅಣೆಕಟ್ಟಿನಲ್ಲಿ 21 ಟಿಎಂಸಿ ನೀರು ಲಭ್ಯವಿದೆ. ತೆಲಂಗಾಣ ಹಾಗೂ ಆಂಧ್ರಪ್ರದೇಶಕ್ಕೆ 32 ಟಿಎಂಸಿ ನೀರು ಹರಿಸಿದ ಪರಿಣಾಮ ಕಳೆದ ಎರಡು ವರ್ಷಕ್ಕೆ ಹೋಲಿಸಿದರೆ ನೀರಿನ ಮಟ್ಟದಲ್ಲಿ ಕುಸಿತ ಹೊಂದಿದೆ. ಕಳೆದ ವರ್ಷ ಮೇ ಅಂತ್ಯಕ್ಕೆ 44.96 ಟಿಎಂಸಿ ನೀರು ಇತ್ತು.

ತೆಲಂಗಾಣಕ್ಕೆ ಹೆಚ್ಚುವರಿ ನೀರು ಬಿಟ್ಟಿದ್ದರಿಂದ ರೈತರು ಆಕ್ರೋಶ ವ್ಯಕ್ತಪಡಿಸಿದ್ದರು. ನಂತರ ಅಧಿಕಾರಿಗಳು ನೀರು ಹರಿಸುವ ಪ್ರಮಾಣ ಕಡಿಮೆ ಮಾಡಿದ್ದಾರೆ. ವಿಜಯಪುರ ಹಾಗೂ ಬಾಗಲಕೋಟೆಗೆ ಕುಡಿಯುವ ನೀರು ಮಾತ್ರವಲ್ಲದೆ ಕೃಷಿಗೂ ನೀರು ಬಿಡುಗಡೆ ಮಾಡಬೇಕು ಎಂದು ರೈತರು ಮನವಿ ಸಲ್ಲಿಸಿದ್ದಾರೆ. ಜಲಾಶಯದಲ್ಲಿ ಸಾಕಷ್ಟು ನೀರು ಇರುವುದರಿಂದ ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಕೃಷ್ಣ ಭಾಗ್ಯ ಜಲನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.  

ಆಲಮಟ್ಟಿ ಜಲಾಶಯದಲ್ಲಿ ಸಂಗ್ರಹವಾಗಿರುವ ಹೂಳನ್ನು ತೆಗಿಸಬೇಕು ಎಂದು ನೀರಾವರಿ ಹೋರಾಟಗಾರರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ಜಲಾಶದಲ್ಲಿ ಹೂಳು ತುಂಬಿಕೊಂಡಿರುವ ಪರಿಣಾಮ 524.25 ಮೀಟರ್‌ಗಿಂತ ಹೆಚ್ಚಿನ ನೀರು ತುಂಬಿಕೊಳ್ಳುವುದರಿಂದ ಮಳೆಗಾಲದಲ್ಲಿ ಜಲಾಶಯದ ಹಿಂದಿನ ಗ್ರಾಮಗಳು ಮುಳುಗಡೆಯ ಭೀತಿ ಎದುರಿಸುತ್ತಿವೆ. 

ಆಲಮಟ್ಟಿ ಜಲಾಶಯ

ಅಂತರರಾಜ್ಯ ನೀರಿನ ವಿವಾದಗಳು

ರಾಜ್ಯದಲ್ಲಿನ ಬಹುತೇಕ ನದಿಗಳು ಬೇರೆ ಬೇರೆ ರಾಜ್ಯಗಳ ಮೂಲಕ ಹರಿದು ಹೋಗುವುದರಿಂದ ಅಂತಾರಾಜ್ಯ ನದಿಗಳಾಗಿ ಮಾರ್ಪಟ್ಟಿವೆ. ಪ್ರತೀ ವರ್ಷ ಒಂದಿಲ್ಲೊಂದು ರಾಜ್ಯಗಳ ನಡುವೆ ಅಣೆಕಟ್ಟು ಹಾಗೂ ನೀರಿನ ಹಂಚಿಕೆ ವಿಷಯದಲ್ಲಿ ಸಂಘರ್ಷ ನಡೆಯುತ್ತಲೇ ಇರುತ್ತದೆ. ಈ ವಿವಾದ ಇತ್ಯರ್ಥಕ್ಕಾಗಿ ನ್ಯಾಯಾಧೀಕರಣಗಳೂ ಸ್ಥಾಪನೆಯಾಗಿವೆ.  ಅವುಗಳಲ್ಲಿ ಪ್ರಮುಖವಾದದು ಕರ್ನಾಟಕ - ತಮಿಳುನಾಡು ನಡುವಿನ ಕಾವೇರಿ ನದಿ ನೀರು ವಿವಾದ.

ಏನಿದು ಕಾವೇರಿ ವಿವಾದ?

ಕಾವೇರಿ ನದಿಯು ಕರ್ನಾಟಕದಲ್ಲಿ ಹುಟ್ಟಿ ತಮಿಳುನಾಡು ಮೂಲಕ ಹರಿದು ಬಂಗಾಳ ಕೊಲ್ಲಿ ಸೇರುತ್ತದೆ. ಮುಂಗಾರಿನಲ್ಲಿ ವಾಡಿಕೆಯ ಮಳೆ ಬಂದರೆ ಎರಡೂ ರಾಜ್ಯಗಳಿಗೂ ಯಾವುದೇ ಸಮಸ್ಯೆ ಇರುವುದಿಲ್ಲ. ಮಳೆ ಕಡಿಮೆಯಾದರೆ ತಗಾದೆ ಆರಂಭವಾಗುತ್ತದೆ. ಕೆಆರ್‌ಎಸ್‌ ಅಣೆಕಟ್ಟಿನಿಂದ ಕಾವೇರಿ ಜಲಮಂಡಳಿ ತೀರ್ಪಿನ ಪ್ರಕಾರ ಜೂನ್‌ನಲ್ಲಿ 10 ಟಿಎಂಸಿ, ಜುಲೈ  34 ಟಿಎಂಸಿ, ಆಗಸ್ಟ್  50 ಟಿಎಂಸಿ, ಸೆಪ್ಟೆಂಬರ್ 40 ಟಿಎಂಸಿ, ಅಕ್ಟೋಬರ್ 22 ಟಿಎಂಸಿ, ನವೆಂಬರ್ 15 ಟಿಎಂಸಿ, ಡಿಸೆಂಬರ್ 8 ಟಿಎಂಸಿ, ಜನವರಿ 3 ಟಿಎಂಸಿ, ಫೆಬ್ರವರಿ 2.5 ಟಿಎಂಸಿ, ಮಾರ್ಚ್ 2.5 ಟಿಎಂಸಿ, ಏಪ್ರಿಲ್  2.5 ಟಿಎಂಸಿ, ಹಾಗೂ ಮೇನಲ್ಲಿ 2.5 ಟಿಎಂಸಿ ಒಟ್ಟು 192 ಟಿಎಂಸಿ ನೀರು ಬಿಡಬೇಕೆಂಬ ನಿಯಮವಿದೆ. 

ಉಳಿದ ನೀರನ್ನು ರಾಜ್ಯದ ನೀರಾವರಿ, ಕುಡಿಯಲು, ವಿದ್ಯುತ್‌ ಉತ್ಪಾದನೆ ಹಾಗೂ ಪ್ರವಾಸೋದ್ಯಮಕ್ಕೆ ಬಳಸಬಹುದಾಗಿದೆ. ಇದರ ಹೊರತಾಗಿಯೂ ತಮಿಳುನಾಡಿಗೆ ಹರಿದುಹೋಗುವ ಹೆಚ್ಚು ನೀರನ್ನು ಸಂಗ್ರಹಿಸಿಟ್ಟುಕೊಳ್ಳಲು ಮೇಕೆದಾಟು ಬಳಿ ಅಣೆಕಟ್ಟು ಕಟ್ಟಲು ಸರ್ಕಾರ ಯೋಜನೆ ರೂಪಿಸಿದೆ. ಆದರೆ, ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸಿದೆ.

ಕೃಷ್ಣ ನದಿ ವಿವಾದ ಏನು?

ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು 1945ರಲ್ಲಿ ಮುನಿರಾಬಾದ್‌ ಸಮೀಪ ತುಂಗಭದ್ರಾ ಅಣೆಕಟ್ಟು ನಿರ್ಮಿಸಲಾಗಿದೆ.  ಕೃಷ್ಣ ಜಲವಿವಾದ ನ್ಯಾಯಾಧಿಕರಣ ಪ್ರಕಾರ ತುಂಗಭದ್ರಾ ನದಿ ಜಲಾಶಯದ 230 ಟಿಎಂಸಿ ಪೈಕಿ ಕರ್ನಾಟಕಕ್ಕೆ 151 ಟಿಎಂಸಿ ನೀರು ಮತ್ತು ಆಂಧ್ರ ಪ್ರದೇಶಕ್ಕೆ 79 ಟಿಎಂಸಿ ನೀರು ಹಂಚಿಕೆ ಮಾಡಲಾಗಿದೆ. 

ಕೃಷ್ಣ ನದಿಗೆ ಆಲಮಟ್ಟಿ ಹಾಗೂ ಯಾದಗಿರಿ ಬಳಿ ಜಲಾಶಯ ನಿರ್ಮಿಸಲಾಗಿದೆ. ಇತ್ತೀಚೆಗೆ ರಾಜ್ಯ ಸರ್ಕಾರ ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಿಸುವ ಮೂಲಕ ರಾಜ್ಯದ 15 ಲಕ್ಷ ಹೆಕ್ಟರ್‌ಗೆ ನೀರು ಹರಿಸಲಾಗುವುದು ಎಂದು ತಿಳಿಸಿತ್ತು. ಆದರೆ ಮಹಾರಾಷ್ಟ್ರ ಸರ್ಕಾರ ಆಲಮಟ್ಟಿ ಜಲಾಶಯದಿಂದಾಗಿ ಕೊಲ್ಹಾಪುರ ಹಾಗೂ ಸಾಂಗ್ಲಿ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಲಿದೆ. ಆದ್ದರಿಂದ ಅಣೆಕಟ್ಟಿನ ಎತ್ತರ ಹೆಚ್ಚಿಸಬಾರದು ಎಂದು ವಿರೋಧ ವ್ಯಕ್ತಪಡಿಸಿತ್ತು. ವಿವಾದ ಸುಪ್ರೀಂಕೋರ್ಟ್‌ ಅಂಗಳಕ್ಕೆ ತಲುಪಿ, ಕೊನೆಗೂ ಅಣೆಕಟ್ಟಿನ ಎತ್ತರ ಹೆಚ್ಚಿಸಲು ಅನುಮತಿ ನೀಡಿತ್ತು.

ನದಿ ನೀರು ಹಂಚಿಕೆ ವಿವಾದಗಳಿಗೆ ಜಲಾಶಯಗಳಲ್ಲಿ ಸಂಗ್ರಹವಾಗಿರುವ ಹೂಳು ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಆ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಬೇಕು ಎಂಬುದು ನೀರಾವರಿ ಹೋರಾಟಗಾರರ ಆಗ್ರಹವಾಗಿದೆ.

Tags:    

Similar News