ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಆರೋಪ; ನ್ಯಾಯಾಂಗ ತನಿಖೆಗೆ ಸಿ.ಟಿ.ರವಿ ಆಗ್ರಹ

ಸುವರ್ಣ ವಿಧಾನಸೌಧ ಬಳಿ ನನ್ನನ್ನು ಬಂಧಿಸಿದ ನಂತರ ಪೊಲೀಸರು ಖಾನಾಪುರ,ಅಂಕಲಗಿ ಸೇರಿದಂತೆ ವಿವಿಧೆಡೆ ಸುತ್ತಾಡಿಸಿದರು. ನನ್ನ ಫೋನ್ ಕಿತ್ತುಕೊಳ್ಳಲು ಯತ್ನಿಸಿ ಹಲ್ಲೆ ನಡೆಸಿದರು ಸಿ.ಟಿ. ರವಿ ಹೇಳಿದ್ದಾರೆ.;

Update: 2024-12-21 13:10 GMT
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸಿ.ಟಿ.ರವಿ ಸೇರಿ ಹಲವು ನಾಯಕರು ಪತ್ರಿಕಾಗೋಷ್ಠಿ ನಡೆಸಿದರು

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವಿರುದ್ಧ ಅಶ್ಲೀಲ ಪದ ಬಳಸಿದ ಪ್ರಕರಣ ಹೊಸ ತಿರುವು ಪಡೆಯುತ್ತಿದ್ದು ಎಂಎಲ್‌ಸಿ ಸಿಟಿ ರವಿ ಹಲವಾರು ಆರೋಪಗಳನ್ನು ಮಾಡಿದ್ದಾರೆ. ಬಂಧನ ನಂತರ ಪೊಲೀಸರು ನಡೆದುಕೊಂಡ ರೀತಿ ನಿಗೂಢವಾಗಿತ್ತು. ಹಾಗಾಗಿ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ.ಆಗ್ರಹಿಸಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಶನಿವಾರ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸುವರ್ಣ ವಿಧಾನಸೌಧ ಬಳಿ ನನ್ನನ್ನು ಬಂಧಿಸಿದ ನಂತರ ಪೊಲೀಸರು ಖಾನಾಪುರ,ಅಂಕಲಗಿ ಸೇರಿದಂತೆ ವಿವಿಧೆಡೆ ಸುತ್ತಾಡಿಸಿದರು. ನನ್ನ ಫೋನ್ ಕಿತ್ತುಕೊಳ್ಳಲು ಯತ್ನಿಸಿ ಹಲ್ಲೆ ನಡೆಸಿದರು. ನಾನು ದೈವದ ರೀತಿ ವರ್ತಿಸಿದ್ದರಿಂದ ಪೋನ್ ಕಿತ್ತುಕೊಳ್ಳಲು ಆಗಲಿಲ್ಲ ಎಂದು ಹೇಳಿದರು.

ಪೊಲೀಸರು ನನ್ನ ಮೇಲೆ ಹಲ್ಲೆ ನಡೆಸಿದ್ದಕ್ಕೆ ವಿಡಿಯೋ ಸಾಕ್ಷಿ ಇದೆ. ಆದರೆ, ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ನನ್ನ ವಿರುದ್ಧ ಮಾಡಿರುವ ಆರೋಪಕ್ಕೆ ಯಾವುದೇ ಸಾಕ್ಷಿಯಿಲ್ಲ ಎಂದು ತಿರುಗೇಟು ನೀಡಿದ್ದಾರೆ. 

ಪೊಲೀಸರ ನಿಗೂಢ ಮಾತುಕತೆ

 ನನ್ನನ್ನು ಸುತ್ತಾಡಿಸುವಾಗ ಪೊಲೀಸರು ಯಾರೊಂದಿಗೋ ವಾಕಿಟಾಕಿ, ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರು. ನನ್ನೊಂದಿಗೆ ಪೊಲೀಸ್‌ ವಾಹನದಲ್ಲಿದ್ದ ರಾಮದುರ್ಗ ಡಿವೈಎಸ್ಪಿ ಚಿದಂಬರ್, ಬೆಳಗಾವಿ ಮಾರ್ಕೆಟ್ ಠಾಣೆ ಎಸ್ಐ ಗಂಗಾಧರ್, ಕಿತ್ತೂರು ಎಸ್ಐ ಕೂಡ ಮೇಲಿಂದ ಮೇಲೆ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರು. ಬೆಳಗಾವಿ ಪೊಲೀಸ್ ಆಯುಕ್ತರು, ಎಸ್ಪಿ ಹಾಗೂ ಇನ್ನಿತರೆ ಅಧಿಕಾರಿಗಳು ನನ್ನ ಜೊತೆ ನಡೆದುಕೊಂಡ ರೀತಿ ನಿಗೂಢವಾಗಿತ್ತು. ಈ ಎಲ್ಲವನ್ನೂ ಸಮಗ್ರ ತನಿಖೆ ನಡೆಸಬೇಕು. ಪೊಲೀಸರ ಅಧಿಕೃತ ಫೋನ್, ಖಾಸಗಿ ಫೋನ್ ಕಾಲ್ ಬಗ್ಗೆ ತನಿಖೆ ಆಗಬೇಕು. ನನ್ನ ಫೋನ್ ಕೂಡ ಟ್ರ್ಯಾಪ್‌ ಮಾಡುತ್ತಿದ್ದಾರೆ ಎಂದು ದೂರಿದರು.

ಅಂಕಲಗಿ ಠಾಣೆಯಲ್ಲಿ ಏನಾದರೂ ತಿನ್ನಿ ಸಾರ್, ನಮ್ಮದು ಕರ್ಮದ ಜೀವನ, ತಿನ್ನಿ ಸಾರ್ ಪೊಲೀಸರು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲಿಂದ ಆಸ್ಪತ್ರೆಗೆ ತೆರಳಿ ಪೆಟ್ಟು ಬಿದ್ದಿರುವ ಜಾಗ ವೈದ್ಯರಿಗೆ ತೋರಿಸಿದೆ. ನನ್ನನ್ನು ಹೊರಗೆ ಕೂರಿಸಿ ಪೊಲೀಸರು ಒಳಗೆ ಹೋಗಿ ವೈದ್ಯರ ಜೊತೆಗೆ ಮಾತನಾಡಿದರು. ನನ್ನನ್ನು ಗುಂಡು ಹಾರಿಸಿ ಕೊಲೆ ಮಾಡಲು ಸಂಚು ನಡೆದಿತ್ತು ಎಂಬ ಅನುಮಾನವಿದೆ. ಪೊಲೀಸ್‌ ಇಲಾಖೆ ಗೃಹ ಸಚಿವರ ಹಿಡಿತದಲ್ಲೇ ಇದೆಯಾ ಎಂಬ ಪ್ರಶ್ನೆ ಕಾಡುತ್ತಿದೆ. ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು ಎಂದು ಸಿಟಿ ರವಿ ಅವರು ಒತ್ತಾಯಿಸಿದರು.

ಚಿಕ್ಕಮಗಳೂರಿನ ಸಂಸ್ಕೃತಿ ಕುರಿತ ಕಾಂಗ್ರೆಸ್‌ ನಾಯಕರ ಟೀಕೆಗೆ ತಿರುಗೇಟು ನೀಡಿದ ಸಿ.ಟಿ.ರವಿ, ನಾನು ಬೆಳೆದ ಬಂದ ಹಾದಿ ಅವರು ಬೆಳೆದು ಬಂದ ರೀತಿ ಯಾವುದು ಎಂಬುದು ಚಿಕ್ಕಮಗಳೂರಿನ ಜನರಿಗೆ ಗೊತ್ತಿದೆ. ನಾನು ತಪ್ಪು ಮಾಡಿದ್ದರೇ ಕಾನೂನು ಪ್ರಕಾರ ಶಿಕ್ಷೆಯಾಗಲಿ, ಅನುಭವಿಸುತ್ತೇನೆ. ಜೆಡಿಎಸ್‌ ಪಕ್ಷದ ಎಚ್‌.ಡಿ.ರೇವಣ್ಣ, ಬಿಜೆಪಿ ಶಾಸಕ ಮುನಿರತ್ನ ಹಾಗೂ ನನ್ನ ಮೇಲೆ ನಡೆದಿರುವ ಘಟನೆ ನೋಡಿದರೆ ಷಡ್ಯಂತ್ರದ ಒಂದು ಭಾಗ ಎನಿಸುತ್ತಿದೆ. ಕಾಲವೇ ಎಲ್ಲದಕ್ಕೂ ಉತ್ತರ ಕೊಡುತ್ತದೆ. ಸತ್ಯ ಮೇಯ ಜಯತೆ ಎಂದು ಹೇಳಿದರು.

ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್‌ಐಆರ್

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವಿರುದ್ಧ ಅಶ್ಲೀಲ ಪದ ಬಳಸಿದ ಆರೋಪದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಬಂಧನ ಖಂಡಿಸಿ ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ ನಡೆಸಿದ 100ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ದೇವರಾಜ್ ಶೆಟ್ಟಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಸೇರಿದಂತೆ ಹಲವರ ವಿರುದ್ಧ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಐದು, ನಗರ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ. ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ ವೇಳೆ ಬಲವಂತವಾಗಿ ಅಂಗಡಿ ಬಾಗಿಲು ಮುಚ್ಚಿಸಿದ್ದಲ್ಲದೇ ಬೈಕ್, ಟೈರ್‌ಗಳಿಗೆ ಬೆಂಕಿ ಇಟ್ಟಿದ್ದಾರೆ. ಅನುಮತಿ ಪಡೆಯದೇ ಹೆದ್ದಾರಿ ತಡೆದು, ಸಾರ್ವಜನಿಕರ ಶಾಂತಿಗೆ ಭಂಗ ಉಂಟು ಮಾಡಿದ ಆರೋಪದ ಮೇಲೆ ಬಿಜೆಪಿ ಕಾರ್ಯಕರ್ತರ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

ಗುರುವಾರ ವಿಧಾನ ಪರಿಷತ್ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿದ ನಂತರ ಸದನದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಸದಸ್ಯರ ನಡುವೆ ವಾಕ್ಸಮರ ನಡೆದಿತ್ತು. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ಅವಹೇಳನ ಪದ ಬಳಸಿದ ಕಾರಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಆಕ್ರೋಶ ವ್ಯಕ್ತಪಡಿಸಿ, ಸಿ.ಟಿ. ರವಿ ಅವರನ್ನು ʼಕೊಲೆಗಾರʼ ಎಂದು ನಿಂದಿಸಿದ್ದರು. ಇದಕ್ಕೆ ಪ್ರತಿಯಾಗಿ ಸಿ.ಟಿ. ರವಿ ಅಶ್ಲೀಲ ಪದ ಬಳಸಿದರು ಎಂಬ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು.

ಸಿ.ಟಿ. ರವಿ ಬಂಧನ ಖಂಡಿಸಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರತಿಭಟನೆಗೆ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಕರೆ ನೀಡಿದ್ದರು. ಅದರಂತೆ ಚಿಕ್ಕಮಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.

Tags:    

Similar News