ಧರ್ಮಸ್ಥಳದ ಬಗ್ಗೆ ಅಪಪ್ರಚಾರ, ನಗರ ನಕ್ಸಲರ ಪಿತೂರಿ- ಸಿ.ಟಿ.ರವಿ ಆರೋಪ
ಧರ್ಮಸ್ಥಳಕ್ಕೂ ನಮಗೂ ಭಕ್ತಿ ಭಾವದ ಸಂಬಂಧವಿದೆ. ಪ್ರತಿ ಮನೆಯಲ್ಲೂ ಮುಡಿಪು ಹಾಕಿ ಧರ್ಮಸ್ಥಳಕ್ಕೆ ಸಮರ್ಪಿಸುತ್ತೇವೆ. ಕಪೋಲಕಲ್ಪಿತ, ಸುಳ್ಳು ಸುದ್ದಿ ಹರಡುವ ಅಧಿಕಾರ ಯಾರಿಗೂ ಕೊಟ್ಟಿಲ್ಲ, ಕೆಲವರು ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಸಿ.ಟಿ. ರವಿ ಹೇಳಿದ್ದಾರೆ.;
ಸಿಟಿ ರವಿ
ಕೋಟ್ಯಂತರ ಜನರ ಧಾರ್ಮಿಕ ಶ್ರದ್ಧಾಕೇಂದ್ರವಾಗಿರುವ ಧರ್ಮಸ್ಥಳಕ್ಕೆ ಘಾಸಿ ಮಾಡುವ ಅಧಿಕಾರ ಯಾರಿಗೂ ಇಲ್ಲ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನ ವಿಧಾನಸೌಧದಲ್ಲಿ ಮಾಧ್ಯಮದ ಜತೆ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣದ ಹಿಂದೆ ಮತಾಂತರ ಮಾಫಿಯಾ, ನಗರ ನಕ್ಸಲರು ಕೈವಾಡವಿದೆ. ಸದನದಲ್ಲಿ ಧರ್ಮಸ್ಥಳ ವಿಷಯವನ್ನು ಪ್ರಸ್ತಾಪ ಮಾಡಲಾಗುವುದು ಎಂದು ಹೇಳಿದರು.
ಧರ್ಮಸ್ಥಳಕ್ಕೂ ನಮಗೂ ಭಕ್ತಿ ಭಾವದ ಸಂಬಂಧವಿದೆ. ಪ್ರತಿ ಮನೆಯಲ್ಲೂ ಮುಡಿಪು ಹಾಕಿ ಧರ್ಮಸ್ಥಳಕ್ಕೆ ಸಮರ್ಪಿಸುತ್ತೇವೆ. ಅಂತಹ ಪುಣ್ಯಕ್ಷೇತ್ರಕ್ಕೆ ಘಾಸಿ ಮಾಡುವ ಅಧಿಕಾರ ಯಾರಿಗೂ ಇಲ್ಲ. ಕಪೋಲಕಲ್ಪಿತ, ಸುಳ್ಳು ಸುದ್ದಿ ಹರಡುವ ಅಧಿಕಾರ ಯಾರಿಗೂ ಕೊಟ್ಟಿಲ್ಲ. ಕೆಲ ಯೂಟ್ಯೂಬರ್‌ಗಳು ಧರ್ಮಸ್ಥಳದ ಬಗ್ಗೆ ನಾನಾ ರೀತಿಯಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಅವರಿಗೆ ದಾಖಲೆಗಳು ಎಲ್ಲಿಂದ ಬಂದವು, ಇದ್ದರೆ ತಂದು ತೋರಿಸಲಿ ಎಂದು ಆಗ್ರಹಿಸಿದರು.
ಧರ್ಮಸ್ಥಳದಲ್ಲಿ ಅಸಹಜ ಸಾವುಗಳ ಕುರಿತು ಏಕಾಏಕಿ ದೂರು ನೀಡಿದ ಸಾಕ್ಷಿದಾರ ಯಾರು?, ಇಷ್ಟು ದಿನ ಎಲ್ಲಿದ್ದ, ಕೂಡಲೇ ಆತನ ಮಂಪರು ಪರೀಕ್ಷೆ ನಡೆಸಬೇಕು. ಆತ ತೋರಿಸಿರುವ 17 ಸ್ಥಳಗಳ ಪೈಕಿ 16ರಲ್ಲಿ ಏನೂ ಸಿಕ್ಕಿಲ್ಲ. ಹಾಗಾಗಿ ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಅದನ್ನು ಬಿಟ್ಟು ಧರ್ಮಸ್ಥಳಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಿದರು.
ಧರ್ಮಸ್ಥಳದ ಹಿಂದೆ ವಿರೋಧಿಗಳು ಮಾತ್ರ ಇಲ್ಲ, ಮತಾಂತರದ ಪಿತೂರಿ ಅಡಗಿದೆ. ಭಕ್ತಿ ಭಾವಕ್ಕೆ ಭಂಗವಾದರೆ ಮತಾಂತರದ ಬೆಳೆ ತೆಗೆಯಬಹುದು ಎಂದುಕೊಂಡಿದ್ದಾರೆ. ಕಾಡಿನ ನಕ್ಸಲರು ನಗರಕ್ಕೆ ಬಂದಿದ್ದಾರೆ. ಅವರ ಒತ್ತಡಕ್ಕೆ ಸರ್ಕಾರ ಮಣಿದು, ತನಿಖೆಗೆ ಆದೇಶಿಸಿದೆ. ಪ್ರಕರಣದ ಅಸಲಿತನ ತಿಳಿಯಬೇಕಾದರೆ ಎಸ್‌ಐಟಿ ಅಧಿಕಾರಿಗಳು ಮಧ್ಯಂತರ ವರದಿ ಬಿಡುಗಡೆ ಮಾಡಲಿ ಎಂದು ಒತ್ತಾಯಿಸಿದರು.
ಸಾಕ್ಷಿದಾರನ ವಿಶ್ವಾಸಾರ್ಹತೆ ಬಗ್ಗೆ ಪರಿಶೀಲನೆ ಆಗಬೇಕು. ಸಾಕ್ಷಿದಾರನ ಹಿಂದಿರುವವರ ಪರಿಶೀಲನೆ ಆಗಬೇಕು. ಏಕಾಏಕಿ ಬಂದು ದೂರು ನೀಡಿದನಾ ಎಂಬೆಲ್ಲಾ ವಿಚಾರಗಳನ್ನು ಅವಲೋಕಿಸಬೇಕು. ಸಾಕ್ಷ್ಯದಾರನಿಗೆ ಸರ್ಕಾರ ಎಷ್ಟು ಪ್ರಾಮುಖ್ಯತೆ ಕೊಡುತ್ತಿದೆಯೋ, ಅದೇ ರೀತಿ ಲಕ್ಷಾಂತರ ಜನರ ಭಾವನೆಗಳಿಗೂ ಬೆಲೆ ಕೊಡಬೇಕು. ಒಬ್ಬ ವ್ಯಕ್ತಿಯ ವ್ಯಕ್ತಿತ್ವ ರೂಪುಗೊಳ್ಳಲು ವರ್ಷಗಳೇ ಬೇಕು. ಅನ್ನು ಘಾಸಿಗೊಳಿಸುವ ಅಧಿಕಾರ ಯಾರಿಗೂ ಇಲ್ಲ ಎಂದು ಸಿ.ಟಿ.ರವಿ ಹೇಳಿದರು.