ಬಸವನಗುಡಿ ಕಡಲೆಕಾಯಿ ಪರಿಷೆಗೆ ಜನಸಾಗರ; ಜನ ದಟ್ಟಣೆಗೆ ಟ್ರಾಫಿಕ್ ಜಾಮ್
ಕಡಲೆ ಪರಿಷೆ ಹಿನ್ನೆಲೆಯಲ್ಲಿ ಬಸವನಗುಡಿ ಸೇರಿ ಸುತ್ತಮುತ್ತಲಿನ ರಸ್ತೆಗಳಲ್ಲಿ ಜನದಟ್ಟಣೆ ಹೆಚ್ಚಾಗಿದೆ. ಈ ಭಾಗದ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಿ, ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಲಾಗಿದೆ.;
ಬೆಂಗಳೂರಿನಲ್ಲಿ ಆರಂಭವಾಗಿರುವ ಬಸವನಗುಡಿಯ ಐತಿಹಾಸಿಕ ಕಡಲೆಕಾಯಿ ಪರಿಷೆಯು ಹಳ್ಳಿ ಸಂತೆಯಂತೆ ಕಂಗೊಳಿಸುತ್ತಿದೆ. ರಜಾ ದಿನವಾದ ಭಾನುವಾರ ಕಡಲೆಕಾಯಿ ಪರಿಷೆಗೆ ಸಹಸ್ರಾರು ಜನರು ಆಗಮಿಸಿದ್ದು, ಬಡವರ ಬಾದಾಮಿಯ ತರಹೇವಾರಿ ತನಿಸುಗಳಿಗೆ ಮಾರು ಹೋಗಿದ್ದಾರೆ.
ಬುಲ್ ಟೆಂಪಲ್ ರಸ್ತೆಯ ದೊಡ್ಡ ಗಣಪತಿ ದೇವಸ್ಥಾನ ಆವರಣ ಸೇರಿದಂತೆ ರಸ್ತೆಯ ಇಕ್ಕೆಲಗಳಲ್ಲಿ ಕಡಲೆಕಾಯಿ ಪರಿಷೆ ಅದ್ಧೂರಿಯಾಗಿ ನಡೆಯುತ್ತಿದೆ. ರಾಜ್ಯದ ಮೂಲೆ ಮೂಲೆಗಳಿಂದ ರೈತರು ಹಾಗೂ ವ್ಯಾಪಾರಿಗಳು ಕಡಲೆಕಾಯಿ ಪರಿಷೆಗೆ ಆಗಮಿಸಿ, ಮಾರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.
ಪರಿಷೆ ಹಿನ್ನೆಲೆಯಲ್ಲಿ ಬಸವನಗುಡಿ ಸೇರಿ ಸುತ್ತಮುತ್ತಲಿನ ರಸ್ತೆಗಳಲ್ಲಿ ಜನದಟ್ಟಣೆ ಹೆಚ್ಚಾಗಿದೆ. ಈ ಭಾಗದ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಿ, ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಲಾಗಿದೆ.
ಲಾಲ್‌ಬಾಗ್ ವೆಸ್ಟ್‌ಗೇಟ್, ಚಾಮರಾಜಪೇಟೆ, ಬುಲ್ ಟೆಂಪಲ್ ಮೂಲಕ ಹನುಮಂತನಗರದ ಕಡೆಗೆ ಸಂಚರಿಸುವ ವಾಹನಗಳು, ಬುಲ್ ಟೆಂಪಲ್ ರಸ್ತೆಯ ರಾಮಕೃಷ್ಣ ಆಶ್ರಮ ವೃತ್ತದಲ್ಲಿ ಬಲತಿರುವು ಪಡೆದು, ಸೀತಾರಾಮಯ್ಯ (ಹಯವದನರಾವ್) ರಸ್ತೆಯಲ್ಲಿ ಸಾಗಿ, ಗವಿಪುರಂ 3ನೇ ಅಡ್ಡರಸ್ತೆ, ಮೌಂಟ್ ಜಾಯ್ ರಸ್ತೆಯ ಮೂಲಕ ಹನುಮಂತನಗರ ತಲುಪಲು ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.
ಆರ್.ವಿ. ಟೀಚರ್ಸ್ ಕಾಲೇಜ್ ಜಂಕ್ಷನ್, ಟ್ರಿನಿಟಿ ಆಸ್ಪತ್ರೆ ರಸ್ತೆ ಮತ್ತು ಕೆ.ಆರ್ ರಸ್ತೆ, ಬ್ಯೂಗಲ್ ರಾಕ್ ರಸ್ತೆ ಗಳಿಂದ ಹನುಮಂತನಗರ ಕಡೆಗೆ ಹೋಗುವ ವಾಹನಗಳು ಠ್ಯಾಗೋರ್ ಸರ್ಕಲ್ (ಮಾರುಕಟ್ಟೆ ರಸ್ತೆ- ಬ್ಯೂಗಲ್‌ರಾಕ್ ರಸ್ತೆ ಜಂಕ್ಷನ್)ನಲ್ಲಿ ಬಲತಿರುವು ಪಡೆದು ಗಾಂಧಿಬಜಾರ್ ಮುಖ್ಯರಸ್ತೆ ಮೂಲಕ ರಾಮಕೃಷ್ಣ ಆಶ್ರಮ ಜಂಕ್ಷನ್, ಸೀತಾರಾಮಯ್ಯ (ಹಯವದನರಾವ್) ರಸ್ತೆ, ಗವಿಪುರಂ ಎಕ್ಸ್‌ಟೆನ್ಸ್‌ನ್ 3ನೇ ಅಡ್ಡರಸ್ತೆ, ಮೌಂಟ್ ಜಾಯ್ ರಸ್ತೆಯ ಮೂಲಕ ಹನುಮಂತನಗರ ಕಡೆಗೆ ತೆರಳಬಹುದು.
ತ್ಯಾಗರಾಜನಗರ, ಬನಶಂಕರಿ,ಎನ್.ಆರ್.ಕಾಲೋನಿ, ಬುಲ್‌ಟೆಂಪಲ್ ರಸ್ತೆ ಕಡೆಯಿಂದ ಚಾಮರಾಜಪೇಟೆ ಕಡೆಗೆ ಸಾಗುವ ವಾಹನಗಳು ಬುಲ್ ಟೆಂಪಲ್ ರಸ್ತೆಯ ಕಾಮತ್ ಯಾತ್ರಿ ನಿವಾಸ ಜಂಕ್ಷನ್‌ನಲ್ಲಿ ಎಡತಿರುವು ಪಡೆದು, ಆಶೋಕನಗರ 2ನೇ ಕ್ರಾಸ್ (ಬಿ.ಎಂ.ಎಸ್. ಕಾಲೇಜ್ ಹಾಸ್ಟೆಲ್ ರಸ್ತೆ) ರಸ್ತೆಯಲ್ಲಿ ಸಾಗಿ ಕತ್ರಿಗುಪ್ಪೆ ರಸ್ತೆಯ ಜಂಕ್ಷನ್‌ನಲ್ಲಿ ಬಲ ತಿರುವು ಪಡೆಯಬೇಕು. ನಂತರ 3ನೇ ಮುಖ್ಯರಸ್ತೆ ಮೂಲಕ ನಾರಾಯಣಸ್ವಾಮಿ ಸರ್ಕಲ್‌ನಲ್ಲಿ ಕೆ.ಜಿ. ನಗರ ಮುಖ್ಯರಸ್ತೆ ಅಥವಾ ಸೀತಾರಾಮಯ್ಯ (ಹಯವದನರಾವ್) ರಸ್ತೆಯಲ್ಲಿ ಸಾಗಿ ರಾಮಕೃಷ್ಣ ಆಶ್ರಮ ಜಂಕ್ಷನ್ ಮೂಲಕ ಚಾಮರಾಜಪೇಟೆ ತಲುಪಬೇಕು ಎಂದು ಬೆಂಗಳೂರು ಸಂಚಾರಿ ಪೊಲೀಸರು ತಿಳಿಸಿದ್ದಾರೆ.
ಕಡಲೆಕಾಯಿ ಪರಿಷೆಗೆ ಆಗಮಿಸುವ ಸಾರ್ವಜನಿಕರಿಗೆ ಎಪಿಎಸ್ ಕಾಲೇಜು ಆಟದ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಕಡಲೆಕಾಯಿ ಪರಿಷೆಯ ಈ ಬಾರಿ ಮೂರು ದಿನ ಆಯೋಜಿಸಲಾಗಿದೆ. ನ.23 ರಿಂದ ಆರಂಭವಾಗಿರುವ ಪರಿಷೆ, ನ.26 ರಂದು ಮುಕ್ತಾಯವಾಗಲಿದೆ.