ಮಂಚದಡಿ ಅವಿತು ಪತ್ನಿಯ ಪ್ರಿಯಕರನ ಕೊಲೆ ಮಾಡಿದ್ದ ಆರೋಪಿ ಖುಲಾಸೆಗೊಳಿಸಿದ ನ್ಯಾಯಾಲಯ

ಪತ್ನಿಯ ಪ್ರಿಯಕರ ಶಿವಕುಮಾರ್‌ನನ್ನು ಕೊಲೆ ಮಾಡಿ, ಸಾಕ್ಷಿ ನಾಶಪಡಿಸಿದ ಆರೋಪವನ್ನು ಭರತ್‌ ಕುಮಾರ್‌ ಮೇಲೆ ಹೊರಿಸಲಾಗಿತ್ತು. ಸಾಕ್ಷಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಆರೋಪಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.;

Update: 2025-04-25 08:13 GMT

ಪತ್ನಿಯೊಂದಿಗೆ ಸರಸ ಸಲ್ಲಾಪದಲ್ಲಿ ತೊಡಗಿದ್ದ ಆಕೆಯ ಪ್ರಿಯಕರನನ್ನು ಅದೇ ಮಂಚದ ಅಡಿ ಅವಿತು ಕೊಲೆ ಮಾಡಿದ್ದ ಆರೋಪಿಯನ್ನು ಖುಲಾಸೆಗೊಳಿಸಿ ಬೆಂಗಳೂರು ಗ್ರಾಮಾಂತರ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.

ಆರೋಪಿ ಭರತ್‌ ಕುಮಾರ್‌ ಅಲಿಯಾಸ್‌ ಭರತ್ ಖುಲಾಸೆಗೊಳಿಸಿ ನ್ಯಾಯಾಧೀಶ ಗುರುಪ್ರಸಾದ್‌ ತೀರ್ಪು ನೀಡಿದ್ದಾರೆ. 

ಪತ್ನಿಯ ಪ್ರಿಯಕರ ಶಿವಕುಮಾರ್‌ನನ್ನು ಕೊಲೆ ಮಾಡಿ, ಸಾಕ್ಷಿ ನಾಶಪಡಿಸಿದ ಆರೋಪ ಭರತ್‌ ಕುಮಾರ್‌ ಮೇಲೆ ಹೊರಿಸಲಾಗಿತ್ತು. ಸಾಕ್ಷಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಆರೋಪಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.

ಭರತ್‌ ಪರ ವಕೀಲರು “ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ನಿಷೇಧ ಕಾಯಿದೆ ಸೆಕ್ಷನ್ ಅಡಿ ದಾಖಲಿಸಿರುವ ಪ್ರಕರಣವನ್ನು ಪಿಎಸ್ಐ ತನಿಖೆ ನಡೆಸುವಂತಿಲ್ಲ. ಆದರೆ, ಈ ಪ್ರಕರಣದಲ್ಲಿ ಪಿಎಸ್ಐ ತನಿಖೆ ನಡೆಸಿದ್ದಾರೆ. ಕೃತ್ಯಕ್ಕೆ ಬಳಸಿದ ಎನ್ನಲಾದ ಚಾಕು ಹಾಗೂ ಬಾತ್‌ರೂಮ್‌ಗೆ ಬಾಗಿಲು ಹಾಕಿದ ಸಂದರ್ಭದಲ್ಲಿ ಆರೋಪಿಯ ಬೆರಳಚ್ಚು ಗುರುತು ಪತ್ತೆಯಾಗಿಲ್ಲ. ಬೆರಳಚ್ಚು ಕಲೆ ಹಾಕಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೂ ಕಳುಹಿಸಿಲ್ಲ. ಆರೋಪಿ ಭರತ್‌ ಅದೇ ಮನೆಯಲ್ಲಿದ್ದ ಎನ್ನುವುದಕ್ಕೆ ಸಾಕ್ಷಾಧಾರಗಳು ಇಲ್ಲ” ಎಂದು ವಾದಿಸಿದ್ದರು.

ಪ್ರಕರಣದ ಹಿನ್ನೆಲೆ: ದೂರಿನಲ್ಲಿ ದಾಖಲಿಸಿರುವಂತೆ, ಭರತ್‌ ಕುಮಾರ್‌ ಮತ್ತು ಆತನ ಪತ್ನಿ ರಾಣಿ (ಹೆಸರು ಬದಲಿಸಲಾಗಿದೆ) ಪ್ರೀತಿಸಿ 2013ರಲ್ಲಿ ಮದುವೆಯಾಗಿದ್ದರು. ಬಳಿಕ ನೆಲಮಂಗಲದ ಅಪ್ಪೇಗೌಡನಪಾಳ್ಯದಲ್ಲಿ ವಾಸವಾಗಿದ್ದರು. ಶಿವಕುಮಾರ್‌ ಎಂಬಾತನನ್ನು ಭರತ್‌ ಕುಮಾರ್‌ಗೆ ತನ್ನೂರಿನವರು ಎಂದು ರಾಣಿ ಪರಿಚಯಿಸಿದ್ದರು. ಆ ಬಳಿಕ ಶಿವಕುಮಾರ್‌ಗೆ ಭರತ್‌ ಕುಮಾರ್‌ ಕಂಪನಿಯಲ್ಲಿ ಕೆಲಸ ಕೊಡಿಸಿ, ತನ್ನದೇ ಮನೆಯಲ್ಲಿ ಇರಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಭರತ್‌ ಪತ್ನಿಯ ಜೊತೆ ಶಿವಕುಮಾರ್‌ ಅಕ್ರಮ ಸಂಬಂಧ ಸಾಧಿಸಿದ್ದ. ಈ ವಿಚಾರ ತಿಳಿದು ನೆಲಮಂಗಲದ ಮನೆ ಖಾಲಿ ಮಾಡಿ ಭರತ್‌ ಪತ್ನಿಯೊಂದಿಗೆ ಬ್ಯಾಡರಹಳ್ಳಿ ಸಮೀಪದ ಅಂದ್ರಹಳ್ಳಿಯಲ್ಲಿ ಹೊಸ ಮನೆ ಮಾಡಿಕೊಂಡು ನೆಲೆಸಿದ್ದರು.

ಆದರೆ, ಭರತ್ ಇಲ್ಲದ ವೇಳೆ ಅಂಧ್ರಹಳ್ಳಿಯ ಮನೆಗೆ ಹೋಗಿ ಬರುತ್ತಿದ್ದ ಶಿವಕುಮಾರ್‌ ನಡವಳಿಕೆ ಬಗ್ಗೆ ಬೇಸತ್ತು ತನ್ನ ಪತ್ನಿ ಹಾಗೂ ಶಿವಕುಮಾರ್‌ಗೆ ಭರತ್‌ ಎಚ್ಚರಿಕೆ ನೀಡಿದ್ದರು. ಹಾಗಿದ್ದರೂ ಇಬ್ಬರೂ ಅಕ್ರಮ ಸಂಬಂಧ ಮುಂದುವರೆಸಿದ್ದರು. 2021 ಮಾರ್ಚ್‌ 24ರಂದು ರಾತ್ರಿ ಶಿವಕುಮಾರ್‌ ಅಂಧ್ರಹಳ್ಳಿಯ ಭರತ್‌ ಮನೆಗೆ ಬಂದಿದ್ದ. ಅಂಗಡಿಯಿಂದ ಚಿಕನ್‌ ತರಿಸಿ ಭರತ್ ಪತ್ನಿ ಕೈಯಲ್ಲಿ ಅಡುಗೆ ಮಾಡಿಸಿಕೊಂಡು ಊಟ ಮಾಡಿ ಅಲ್ಲಿಯೇ ಮಲಗಿದ್ದ. ಭರತ್ ಪತ್ನಿ ಮತ್ತು ಶಿವಕುಮಾರ್‌ ಮಂಚದ ಮೇಲೆ ಮಲಗಿ ಸರಸ ಸಲ್ಲಾಪದಲ್ಲಿ ತೊಡಗಿದ್ದರು. ಅದೇ ಮಂಚದಡಿ ರಾತ್ರಿಯಿಡೀ ಅವಿತು ಕುಳಿತಿದ್ದ ಭರತ್‌, ಬೆಳಗಿನ ಜಾವ 2 ಗಂಟೆ ಸುಮಾರಿನಲ್ಲಿ ಅತನ ಪತ್ನಿ ಬಾತ್‌ ರೂಮ್‌ಗೆ ಹೋದಾಗ, ಆ ಕೊಠಡಿಗೆ ಹೊರಗಿನಿಂದ ಲಾಕ್‌ ಮಾಡಿ ಶಿವಕುಮಾರ್‌ಗೆ ಚಾಕುವಿನಿಂದ ಇರಿದು ಭರತ್‌ ಕುಮಾರ್‌ ಹತ್ಯೆ ಮಾಡಿದ್ದ ಎಂದು ಆರೋಪಿಸಲಾಗಿತ್ತು.

ಈ ಸಂಬಂಧ ಮನೆಯ ಮಾಲೀಕ ನೀಡಿದ ದೂರಿನ ಮೇರೆಗೆ ಕೊಲೆ ಪ್ರಕರಣ ದಾಖಲಿಸಿದ್ದ ಬ್ಯಾಡರಹಳ್ಳಿ ಪೊಲೀಸರು ಆರೋಪಿ ಭರತ್‌ನನ್ನು ಬಂಧಿಸಿದ್ದರು. ಅ ಬಳಿಕ ತನಿಖೆ ನಡೆಸಿ ಆರೋಪಿ ಭರತ್‌ ವಿರುದ್ಧ ಐಪಿಸಿ ಸೆಕ್ಷನ್‌ 302 & ಎಸ್‌ಸಿ/ಎಸ್‌ಟಿ ದೌರ್ಜನ್ಯ ನಿಷೇಧ ಕಾಯಿದೆ ಸೆಕ್ಷನ್‌ 3(2)(ವಿ) ಅಡಿ ಆರೋಪ ಪಟ್ಟಿ ಸಲ್ಲಿಸಿದ್ದರು.

Tags:    

Similar News