Egg Attack on Muniratna | ಕೊಲೆಗೆ ಸಂಚು: ಕಾಂಗ್ರೆಸ್‌ ನಾಯಕರ ವಿರುದ್ಧ ಶಾಸಕ ಮುನಿರತ್ನ ಆರೋಪ

ಬೆಂಗಳೂರಿನ ಕಂಠೀರಣ ಸ್ಟುಡಿಯೋ ಬಳಿ ಶಾಸಕ ಮುನಿರತ್ನ ಮೇಲೆ ಕಿಡಿಗೇಡಿಗಳು ಮೊಟ್ಟೆಯಿಂದ ದಾಳಿ ಮಾಡಿದ್ದಾರೆ. ತಕ್ಷಣವೇ ಪೊಲೀಸರು ಹಾಗೂ ಬಿಜೆಪಿ ಕಾರ್ಯಕರ್ತರು ಮುನಿರತ್ನ ಅವರನ್ನು ರಕ್ಷಿಸಿದರು.

Update: 2024-12-25 09:48 GMT

ಅತ್ಯಾಚಾರ ಹಾಗೂ ಜಾತಿನಿಂದನೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ಮೇಲೆ ದುಷ್ಕರ್ಮಿಗಳು ಮೊಟ್ಟೆಯಿಂದ ದಾಳಿ ನಡೆಸಿರುವ ಘಟನೆ ಬೆಂಗಳೂರಿನ ಕಂಠೀರಣ ಸ್ಟುಡಿಯೋ ಸಮೀಪದ ಲಕ್ಷ್ಮೀದೇವಿನಗರದಲ್ಲಿ ಬುಧವಾರ ನಡೆದಿದೆ.

ಲಕ್ಷ್ಮಿದೇವಿನಗರದ ಬಿಜೆಪಿ ವಾರ್ಡ್‌ ಕಚೇರಿಯಲ್ಲಿ ಸುಶಾಸನ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುನಿರತ್ನ ಆಗಮಿಸುತ್ತಿದ್ದಾಗ ಈ ದಾಳಿ ನಡೆದಿದೆ. ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗುತ್ತಾ ಮುನಿರತ್ನ ಅವರನ್ನು ಸ್ವಾಗತಿಸುತ್ತಿದ್ದರು. ಈ ವೇಳೆ ಕಿಡಿಗೇಡಿಗಳು ಮುನಿರತ್ನ ತಲೆಗೆ ಗುರಿ ಇಟ್ಟು ಮೊಟ್ಟೆಯಿಂದ ಹೊಡೆದಿದ್ದಾರೆ. ಕೂಡಲೇ ಪೊಲೀಸರು ಹಾಗೂ ಬಿಜೆಪಿ ಕಾರ್ಯಕರ್ತರು ಮುನಿರತ್ನ ಅವರ ರಕ್ಷಣೆಗೆ ಧಾವಿಸಿದರು. 

ಮುನಿರತ್ನ ಮೇಲೆ ಕಾಂಗ್ರೆಸ್‌ ಕಾರ್ಯಕರ್ತರೇ ಮೊಟ್ಟೆಯಿಂದ ದಾಳಿ ನಡೆಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಕಂಠೀರವ ಸ್ಟುಡಿಯೋ ಬಳಿ ಪ್ರತಿಭಟನೆ ನಡೆಸಿದರು. ಈ ವೇಳೆ ಕಾಂಗ್ರೆಸ್‌ ಕಾರ್ಯಕರ್ತರು ಕೂಡ ಮುನಿರತ್ನ ವಿರುದ್ಧ ಧಿಕ್ಕಾರ ಕೂಗಿದರು. ಆಗ ಎರಡೂ ಕಡೆಯ ಕಾರ್ಯಕರ್ತರ ಮಧ್ಯೆ ಜಟಾಪಟಿ ನಡೆಯಿತು. ಪೊಲೀಸರು ಹಲವರನ್ನು ವಶಕ್ಕೆ ಪಡೆದುಕೊಂಡರು.

ನನ್ನ ಕೊಲೆಗೆ ಸಂಚು; ಮುನಿರತ್ನ

ಘಟನೆ ಕುರಿತಂತೆ ಪ್ರತಿಕ್ರಿಯಿಸಿದ ಶಾಸಕ ಮುನಿರತ್ನ, ನನ್ನ ಕೊಲೆಗೆ ಸಂಚು ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ನನಗೆ ಸೂಕ್ತ ರಕ್ಷಣೆ ಇಲ್ಲ. ನನಗೆ ಪ್ರಾಣ ಬೆದರಿಕೆ ಕೂಡ ಇದೆ. ಸರ್ಕಾರದಿಂದ ಯಾವುದೇ ರಕ್ಷಣೆ ಒದಗಿಸಿಲ್ಲ ಎಂದು ದೂರಿದ್ದಾರೆ.

ಕ್ಷೇತ್ರದಲ್ಲಿ ಕುಸುಮಾ ಸೋಲಿಗೆ ಕಾರಣವಾದ ನಿನ್ನನ್ನು ಬಿಡುವುದಿಲ್ಲ. ರಾಜೀನಾಮೆ ಕೊಟ್ಟು ಜೀವ ಉಳಿಸಿಕೋ ಎಂದು ಡಿ.ಕೆ.ಸುರೇಶ್ ಬೆದರಿಕೆ ಹಾಕಿದ್ದರು. ನಾನು ಕೊಲೆಯಾದರೆ ಡಿ.ಕೆ.ಸುರೇಶ್, ಡಿ.ಕೆ. ಶಿವಕುಮಾರ್, ಕುಸುಮಾ ಹಾಗೂ ಅವರ ತಂದೆ ಹನುಮಂತರಾಯಪ್ಪ ಅವರೇ ಕಾರಣ ಎಂದು ಮುನಿರತ್ನ ಗಂಭೀರ ಆರೋಪ ಮಾಡಿದ್ದಾರೆ. ನನ್ನನ್ನು ಕೊಲೆ ಮಾಡಿ ಕುಸುಮಾ ಅವರನ್ನು ಮತ್ತೆ ಶಾಸಕರನ್ನಾಗಿ ಆಯ್ಕೆ ಮಾಡುವ ಯೋಜನೆ ಹೊಂದಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ರಾಜ್ಯಪಾಲರಿಗೆ ಪತ್ರ ಬರೆದಿದ್ದೇನೆ

ನನ್ನ ಮೇಲೆ ಆಸಿಡ್ ತುಂಬಿಸಿದ ಮೊಟ್ಟೆ ಹೊಡೆಯುವುದಾಗಿ 2 ತಿಂಗಳ ಹಿಂದೆಯೇ ಬೆದರಿಕೆ ಕರೆ ಬಂದಿತ್ತು. ನನ್ನ ಜೀವಕ್ಕೆ ಅಪಾಯವಿದೆ ಎಂದು ಹೇಳಿ ಆಗಲೇ ರಾಜ್ಯಪಾಲರು ಸೇರಿ ಸರ್ಕಾರದ ಹಲವರಿಗೆ ಪತ್ರ ಬರೆದಿದ್ದೇನೆ. ಆದರೆ, ಇಲ್ಲಿಯವರೆಗೆ ನನಗೆ ಗನ್ ಮ್ಯಾನ್ ಕೊಟ್ಟಿಲ್ಲ. ಮೊಟ್ಟೆ ಎಸೆದಾಗ ಪೊಲೀಸರು ಇರದಿದ್ದರೆ ನಾನು ಕೊಲೆ ಆಗುತ್ತಿದ್ದೆ. ಪೊಲೀಸರೇ ನನ್ನನ್ನು ಕಾಪಾಡಿದರು ಎಂದು ಮುನಿರತ್ನ ಹೇಳಿದ್ದಾರೆ.

Tags:    

Similar News