Karnataka By-Election: ಸಿದ್ದರಾಮಯ್ಯ ಇನ್ನಷ್ಟು ಪ್ರಬಲ; ಕುಮಾರಸ್ವಾಮಿ, ವಿಜಯೇಂದ್ರ ತಲ್ಲಣ
ಸಿದ್ದರಾಮಯ್ಯ - ಡಿ.ಕೆ. ಶಿವಕುಮಾರ ನಾಯಕತ್ವಕ್ಕೆ ಮೂರೂ ಕ್ಷೇತ್ರಗಳ ಮತದಾರರು "ಜೈ" ಅಂದಿದ್ದಾರೆ. ಬಿ.ವೈ. ವಿಜಯೇಂದ್ರ ನಾಯಕತ್ವದಲ್ಲಿ ಗೊಂದಲದ ಗೂಡಾಗಿರುವ ರಾಜ್ಯ ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ.;
ಮೈಸೂರು ಮುಡಾ ಪ್ರಕರಣ, ವಕ್ಫ್ ವಿವಾದ, ವಾಲ್ಮೀಕಿ ನಿಗಮದ ಹಗರಣ ಹೀಗೆ ಸಾಲು ಸಾಲು ಆಪಾದನೆಗಳ ಸುಳಿಯಲ್ಲಿ ರಾಜ್ಯದ ಆಡಳಿತಾರೂಢ ಸಿದ್ದರಾಮಯ್ಯ ಸರ್ಕಾರ ಸಿಲುಕಿದ್ದರೂ, ಶನಿವಾರದ ಉಪ ಚುನಾವಣಾ ಫಲಿತಾಂಶ ವಿರೋಧ ಪಕ್ಷಗಳಿಗೆ ಹೀನಾಯ ಸೋಲನ್ನು ನೀಡುವ ಮೂಲಕ ಬೇರೆಯದೇ ಸಂದೇಶವನ್ನು ರವಾನಿಸಿದೆ.
ಸಿದ್ದರಾಮಯ್ಯ -ಡಿ.ಕೆ. ಶಿವಕುಮಾರ್ ನಾಯಕತ್ವಕ್ಕೆ ಮೂರೂ ಕ್ಷೇತ್ರಗಳ ಮತದಾರ "ಜೈ" ಹೇಳಿದ್ದಾನೆ. ಬಿ.ವೈ. ವಿಜಯೇಂದ್ರ ನಾಯಕತ್ವದಲ್ಲಿ ಗೊಂದಲದ ಗೂಡಾಗಿರುವ ರಾಜ್ಯ ಬಿಜೆಪಿಗೆ ಎಚ್ಚರಿಕೆ ನೀಡಿದ್ದಾನೆ ಹಾಗೂ ದೇವೇಗೌಡರ ಕುಟುಂಬದ ಕುಡಿಯನ್ನು ಸೋಲಿಸುವ ಮೂಲಕ ಆ ಕುಟುಂಬಕ್ಕೆ ಸ್ಪಷ್ಟ ಸಂದೇಶವನ್ನೂ ನೀಡಿದ್ದಾನೆ. ಜತೆಗೆ ಬಿಜೆಪಿ- ಜೆಡಿಎಸ್ ಮಿತ್ರತ್ವವನ್ನು ಈ ಬಾರಿ ಮತದಾರ ನಿರಾಕರಿಸಿದ್ದಾನೆ.
ಚನ್ನಪಟ್ಟಣದಲ್ಲಿ ಭಾರೀ ಸ್ಪರ್ಧೆಯ ನಡುವೆಯೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬದ ಕುಡಿ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಹಾಗೂ ಶಿಗ್ಗಾವಿ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಅವರನ್ನು ಹಾಗೂ ಸಂಡೂರು ಕ್ಷೇತ್ರದಲ್ಲಿ ಮತ್ತೆ ಒಟ್ಟಾದ ಹಳೆಯ ಮಿತ್ರರಾದ ಗಣಿಧಣಿ ಜಿ. ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಕೃಪಾಕಟಾಕ್ಷದ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ ಅವರನ್ನು ಕಾಂಗ್ರೆಸ್ ಅಭ್ಯರ್ಥಿಗಳು ಭಾರೀ ಅಂತರದಿಂದ ಮಣಿಸಿದ್ದಾರೆ.
ಕರ್ನಾಟಕದ ಮಟ್ಟಿಗೆ ಎನ್‌ಡಿಎ ಮಿತ್ರಪಕ್ಷಗಳಾದ ಬಿಜೆಪಿ- ಜೆಡಿಎಸ್ ನಿಖಿಲ್ ಕುಮಾರಸ್ವಾಮಿ, ಭರತ್ ಬೊಮ್ಮಾಯಿಯಂತಹ ಪ್ರಭಾವಿ ಕುಟುಂಬದ ಕುಡಿಗಳನ್ನೇ ಚುನಾವಣೆಗೆ ಸ್ಪರ್ಧಿಸುವಂತೆ ಮಾಡಿತ್ತು. ಬಿಜೆಪಿಯದೇ ನಾಯಕ ಸಿ.ಪಿ. ಯೋಗೇಶ್ವರ್ ಅವರು ಸಿಡಿದು ಬಂದು ಕಾಂಗ್ರೆಸ್ ಪಾಳಯ ಸೇರಿ ಅಭೂತಪೂರ್ವ ವಿಜಯ ಸಾಧಿಸಿದರೆ, ಶಿಗ್ಗಾವಿಯಲ್ಲಿ ಯಾಸಿರ್ ಅಹಮದ್ ಪಠಾಣ್ ಹಾಗೂ ಸಂಡೂರಿನಲ್ಲಿ ಈಗ ಸಂಸದರಾಗಿರುವ ಇ. ತುಕಾರಾಂ ಪತ್ನಿ ಇ. ಅನ್ನಪೂರ್ಣ ಜಯ ಸಾಧಿಸಿರುವುದು ದೋಸ್ತಿಗಳ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
2023ರ ವಿಧಾನಸಭೆಯಲ್ಲಿ 135 ಕ್ಷೇತ್ರಗಳಲ್ಲಿ ಜಯ ಸಾಧಿಸಿ ಬಹುಮತದ ಸರ್ಕಾರ ರಚಿಸಿದ ಕಾಂಗ್ರೆಸ್ ಪಕ್ಷಕ್ಕೆ ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ) ನಾಯಕ ಸಿದ್ದರಾಮಯ್ಯ ಮತ್ತು ಒಕ್ಕಲಿಗ ನಾಯಕ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಜೋಡಿ, ಮತ್ತೆ ಒಟ್ಟಾಗಿ ಉಪುಚುನಾವಣೆಯಲ್ಲಿ ವಿರೋಧಿ ಪಾಳಯಕ್ಕೆ ಸಿಂಹಸ್ವಪ್ನವಾಗಿ ಕಂಡಿದೆ.
ಮುಡಾ ಪ್ರಕರಣದಲ್ಲಿ ಸ್ವತಃ ಸಿದ್ದರಾಮಯ್ಯ ಬೇಯುತ್ತಿದ್ದರೂ, ವಾಲ್ಮೀಕಿ ಹಗರಣದ ಕಳಂಕವನ್ನು ಮೈಗಂಟಿಸಿಕೊಂಡಿದ್ದರೂ, ಇತ್ತೀಚಿಗಿನ ವಕ್ಫ್ ಭೂ ವಿವಾದ ಹಾಗೂ ಬಿಪಿಎಲ್ ಕಾರ್ಡ್‌ಗಳ ವಿವಾದಗಳ ಸುಳಿಗೆ ಸಿಲುಕಿದ್ದರೂ ಕಾಂಗ್ರೆಸ್ ಮಟ್ಟಿಗೆ ಸಂಘಟನಾತ್ಮಕ ಜಯ ಸಂದಿದೆ.
ಮೂರೂ ಕ್ಷೇತ್ರಗಳನ್ನು ಕಾಂಗ್ರೆಸ್‌ಗೆ ಒಪ್ಪಿಸುವ ಮೂಲಕ ಮತದಾರ ಯಾವುದೇ ಹಗರಣಗಳ ಗಣಿತಕ್ಕೆ ತಲೆಬಾಗದೆ ತನ್ನದೇ ಸಂದೇಶಗಳನ್ನು ಸಾರಿದ್ದಾನೆ. ಕುಮಾರಸ್ವಾಮಿ ಪಾರುಪತ್ಯದ ಚನ್ನಪಟ್ಟಣ ಕ್ಷೇತ್ರದಲ್ಲಿ ಬಿಜೆಪಿ ಹೊಂದಾಣಿಕೆಯನ್ನು ಒಪ್ಪದ ಮತದಾರ ಡಿ.ಕೆ. ಶಿವಕುಮಾರ್ ನಾಯಕತ್ವವನ್ನು ಒಪ್ಪಿಕೊಂಡಂತಾಗಿದೆ. ಜತೆಗೆ ಮಾಜಿ ಶಾಸಕ ಸಿ.ಪಿ. ಯೋಗೇಶ್ವರ್ ಅವರ ಇತ್ತೀಚಿಗಿನ ಮೂರು ಸತತ ಸೋಲುಗಳ ಅನುಕಂಪವೂ ಇಲ್ಲಿ ಕೆಲಸ ಮಾಡಿದಂತೆ ಕಾಣುತ್ತಿದೆ. ಒಟ್ಟಿನಲ್ಲಿ ಅಬ್ಬರದ ಪ್ರಚಾರ ನಡೆಸಿದ ದೇವೇಗೌಡರ ಕುಟುಂಬದ ಕುಡಿ ನಿಖಿಲ್ ಕುಮಾರಸ್ವಾಮಿ ಅವರನ್ನು ಮಣಿಸುವ ಮೂಲಕ ಜೆಡಿಎಸ್- ಬಿಜೆಪಿ ಒಡಂಬಡಿಕೆಯನ್ನು ಮತದಾರ ಒಪ್ಪಲಿಲ್ಲ ಎನ್ನುವುದು ಇಲ್ಲಿ ವೇದ್ಯವಾಗುತ್ತದೆ. ಒಂದರ್ಥದಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ಸತತ ಮೂರನೇ ಸೋಲು (ಮಂಡ್ಯ ಲೋಕಸಭೆ, ರಾಮನಗರ ವಿಧಾನಸಭೆ ಹಾಗೂ ಚನ್ನಪಟ್ಟಣ ಕ್ಷೇತ್ರವನ್ನು ಅಪ್ಪ ಕುಮಾರಸ್ವಾಮಿ ತೆರವು ಮಾಡಿದಾಗ ಸೃಜನೆಯಾದ ಉಪ ಚುನಾವಣೆ) ಅವರ ರಾಜಕೀಯ ಉನ್ನತಿಗೇ ಭಾರೀ ತೊಡರು ಉಂಟಾಗುವಂತೆ ಮತದಾರ ಸಂದೇಶ ನೀಡಿದ್ದಾನೆ.
ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಅವರನ್ನು ಸೋಲಿಸಿದ ಶಿಗ್ಗಾವಿ ಮತದಾರ, ಉಂಟಾಗಿದ್ದ ಒಡಕನ್ನು ಸರಿಪಡಿಸಿಕೊಂಡು ಪ್ರಬಲ ಪೈಪೋಟಿ ನೀಡಿದ ಕಾಂಗ್ರೆಸನ್ನು ಒಪ್ಪಿಕೊಂಡು ಬಿಜೆಪಿ ಪಕ್ಷಕ್ಕೆ ನೇರ ಎಚ್ಚರಿಕೆ ನೀಡಿದ್ದಾನೆ. ಸಂಡೂರಿನಲ್ಲೂ ರೆಡ್ಡಿ- ಶ್ರೀರಾಮುಲು ನೆಚ್ಚಿಕೊಂಡರೆ ಕಷ್ಟ ಎಂಬ ಕಿವಿಮಾತನ್ನು ಬಿಜೆಪಿಗೆ ಮತದಾರ ನೀಡಿದ್ದಾನೆ.
ಒಟ್ಟಿನಲ್ಲಿ ಬಿಜೆಪಿ ಭದ್ರಕೋಟೆ ಶಿಗ್ಗಾವಿ, ಜೆಡಿಎಸ್ ಭದ್ರಕೋಟೆ ಚನ್ನಪಟ್ಟಣ ಈಗ ಕೈವಶವಾಗಿದೆ. ಬಳ್ಳಾರಿ ಗಣಿಧಣಿಗಳ ಅಬ್ಬರದಲ್ಲೂ ಸಂಡೂರನ್ನು ಕಾಂಗ್ರೆಸ್ ಉಳಿಸಿಕೊಂಡಿರುವುದು ಹಿಂದೊಮ್ಮೆ ಬಿಜೆಪಿ ಭದ್ರಕೋಟೆಯಾಗಿದ್ದ ಬಳ್ಳಾರಿಯನ್ನು ಕಾಂಗ್ರೆಸ್ ಆವರಿಸಿಕೊಳ್ಳುತ್ತಿರುವುದು ವೇದ್ಯವಾಗಿದೆ.
ವಿಧಾನಸಭೆಯಲ್ಲಿ ಬಹುಮತದಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ಗೆ, 2022ರ ಲೋಕಸಭಾ ಚುನಾವಣೆಯಲ್ಲಿ ಅಷ್ಟೇನೂ ಖುಷಿಯನ್ನು ನೀಡದ ಫಲಿತಾಂಶ ಒಂದು ರೀತಿಯ ಎಚ್ಚರಿಕೆಯ ಗಂಟೆಯಾಗಿತ್ತು. ಈಗ ಮೂರು ಉಪಚುನಾವಣೆಗಳನ್ನು ಭಾರೀ ಅಂತರದಿಂದ ಗೆದ್ದ ಕಾಂಗ್ರೆಸ್ ಹಗರಣ, ವಿವಾದಗಳ ನಡುವೆಯೂ ತನ್ನ ಸಂಘಟನೆಯನ್ನು ಬಲಪಡಿಸಿಕೊಂಡಿದೆ ಎಂದು ವ್ಯಾಖ್ಯಾನಿಸಬಹುದು.
ಗ್ಯಾರಂಟಿ ಯೋಜನೆಗಳು
ಬಿಜೆಪಿ ಪಕ್ಷದಿಂದ ಸತತ ಮೂದಲಿಕೆ ಮಾತನ್ನು ಎದುರಿಸಿದ್ದ ಗ್ಯಾರಂಟಿ ಯೋಜನೆಗಳು ಒಂದರ್ಥದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆಸರೆಯಾಗಿದೆ ಎನ್ನಬಹುದು. 2023ರ ವಿಧಾನಸಭೆ ಚುನಾವಣೆ ಮುನ್ನ ಕಾಂಗ್ರೆಸ್ ಆಶ್ವಾಸನೆ ನೀಡಿದ್ದ ಗೃಹಲಕ್ಷ್ಮಿ, ಅನ್ನಭಾಗ್ಯದಂತಹ ಪಂಚ ಯೋಜನೆಗಳು ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹಂತಹಂತಗಳಾಗಿ ಜಾರಿಗೆ ಬಂದಿರುವುದು ಮತದಾರನ ಮನಸ್ಸು ತಟ್ಟಿದಂತೆ ಕಾಣುತ್ತಿದೆ. ಲೋಕಸಭಾ ಚುನಾವಣೆಯಲ್ಲಿ 9 ಕ್ಷೇತ್ರಗಳನ್ನು ಗೆದ್ದ ಕಾಂಗ್ರೆಸ್‌ಗೆ ಗ್ಯಾರಂಟಿ ಯೋಜನೆಗಳು ಅಷ್ಟೇನೂ ಸಹಾಯ ಮಾಡಿಲ್ಲವಾದರೂ, ಆ ಯೋಜನೆಗಳ ಜಾರಿ ಸಂಬಂಧ ಬಿಜೆಪಿಯ ಸಂಶಯದ ನಡುವೆಯೂ ಕಾಂಗ್ರೆಸ್ ಬದ್ಧತೆ ತೋರಿಸಿರುವುದು ಈ ಉಪ ಚುನಾವಣೆಗಳಲ್ಲಿ ಸಿದ್ದರಾಮಯ್ಯ-ಡಿ.ಕೆ. ಶಿವಕುಮಾರ್ ನಾಯಕತ್ವದ ತಂಡಕ್ಕೆ ಸಹಾಯ ಮಾಡಿದೆ ಎನ್ನಬಹುದು. ಆಯಾ ಕ್ಷೇತ್ರಗಳಲ್ಲಿ ಜಾತಿ, ಸಮುದಾಯಗಳನ್ನು ಮೀರಿ ಈ ಯೋಜನೆಗಳು ಜನಮಾನಸದ ಕದ ತಟ್ಟಿರುವುದು ಕಂಡುಬರುತ್ತದೆ.
ಹಗರಣಗಳು
ಮೈಸೂರು ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವತಃ ಪ್ರಮುಖ ಆರೋಪಿಯಾಗಿ ಅವರ ರಾಜೀನಾಮೆಗೆ ಒತ್ತಡ ಹೇರಿ ಬಿಜೆಪಿ-ಜೆಡಿಎಸ್ ಅನೇಕ ಹರತಾಳ, ಜಾಥಾಗಳನ್ನು ಮಾಡಿದ್ದರೂ, ಜನತೆ ಕಾಂಗ್ರೆಸ್‌ಗೆ ಈ ಗೆಲುವು ನೀಡುವ ಮೂಲಕ ಅವರ ನಾಯಕತ್ವವನ್ನು ಒಪ್ಪಿಕೊಂಡಿರುವುದು ಹಾಗೂ ವಿರೋಧ ಪಕ್ಷಗಳ ಆರೋಪವನ್ನು ಅಷ್ಟೇನೂ ಗಣನೆಗೆ ತೆಗೆದುಕೊಳ್ಳದೇ ಇರುವುದು ಈ ಫಲಿತಾಂಶದಿಂದ ಭಾಸವಾಗುತ್ತದೆ.
ಗ್ಯಾರಂಟಿ ಯೋಜನೆಗಳನ್ನು ತಂದ ಸಿದ್ದರಾಮಯ್ಯ ಅವರ ವಿರುದ್ಧ ಸಾಲು ಸಾಲು ಆರೋಪ ಮಾಡುತ್ತಿರುವುದು ಮತ್ತು ಅವುಗಳನ್ನು ಸಿದ್ದರಾಮಯ್ಯ ಅವರು ಎದುರಿಸುತ್ತಿರುವ ರೀತಿಯೂ ಒಪ್ಪಿತವಾದಂತಿದೆ. ಜತೆಗೆ ಹಗರಣಗಳ ನಡುವೆಯೂ ಬಿಜೆಪಿ-ಜೆಡಿಎಸ್ ಪಕ್ಷಗಳು ಆರೋಪಿಸಿದಂತೆ ಸರ್ಕಾರ ಪತನವಾಗದೆ, ಕಾಂಗ್ರೆಸ್ ಇನ್ನಷ್ಟು ಒಗ್ಗಟ್ಟು ಪ್ರದರ್ಶಿಸಿರುವುದನ್ನು ಮೂರೂ ಪಕ್ಷಗಳ ಮತದಾರ ಗಣನೆಗೆ ತೆಗೆದುಕೊಂಡಿರಬಹುದು.
ಇವುಗಳ ನಡುವೆ, ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ತೋರಿದ ಸಂಘಟನಾ ಚತುರತೆ, ಬಿಕ್ಕಟ್ಟನ್ನು ಅಲ್ಲಲ್ಲೇ ಹೊಸಕಿ ಎಲ್ಲ ನಾಯಕರನ್ನೂ ಜತೆಯಾಗಿ ಕರೆದುಕೊಂಡು ಹೋಗಿರುವುದು ಕಾಂಗ್ರೆಸ್‌ಗೆ ಲಾಭದಾಯಕವಾಗಿದೆ ಎನ್ನಬಹುದು.
ಬೊಮ್ಮಾಯಿ ಮತ್ತು ಕುಮಾರಸ್ವಾಮಿ ಅವರಿಗೆ "ನಿಮ್ಮನ್ನು ವಿಧಾನಸಭೆಗೆ ಪ್ರತಿನಿಧಿಗಳಾಗಿ ಕಳುಹಿಸಿದ್ದೇವೆ. ರಾಜೀನಾಮೆ ನೀಡಿ ಲೋಕಸಭಾ ಸದಸ್ಯರಾದಿರಿ. ಹಾಗಾಗಿ ಬೇರೆಯವರಿಗೆ ಅವಕಾಶ ಕೊಡೋಣ" ಎಂಬ ಸಂದೇಶವನ್ನು ಜನತೆ ನೀಡಿದಂತೆ ಕಾಣುತ್ತಿದೆ.
ಬಿಜೆಪಿ ಬಿಕ್ಕಟ್ಟು
ರಾಜ್ಯ ಬಿಜೆಪಿ ನಾಯಕತ್ವದ ಸಮಸ್ಯೆಯನ್ನು ಎದುರಿಸುತ್ತಿದ್ದು, ಹಿಂದೆ ಕಾಣುತ್ತಿದ್ದ ಒಗ್ಗಟ್ಟಿನ ಮಂತ್ರ ಇಲ್ಲವಾಗಿದೆ. ಕ್ರಮೇಣ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತನ್ನ ಹಿಡಿತವನ್ನು ಕಳೆದುಕೊಳ್ಳುತ್ತಿದ್ದು, ಅವರ ಪುತ್ರ ಬಿ.ವೈ. ವಿಜಯೇಂದ್ರ ಅಧ್ಯಕ್ಷತೆಯಲ್ಲಿ ನಾಯಕರ ನಡುವಿನ "ಸಾರ್ವಜನಿಕ ಕಲಹ" ಇನ್ನಷ್ಟು ಬಿಗಡಾಯಿಸಿರುವುದು ಉಪ ಚುನಾವಣೆಯಲ್ಲಿ ನೇರ ಹೊಡೆತ ಕೊಟ್ಟಂತಿದೆ. ಮುಡಾ, ವಾಲ್ಮೀಕ ಹಗರಣ ಸೇರಿದಂತೆ ಕಾಂಗ್ರೆಸ್ ಪಕ್ಷವನ್ನು ಎಲ್ಲಿ ಘಾಸಿ ಮಾಡಬೇಕೋ, ಅಲ್ಲಿ ರಾಜ್ಯ ಬಿಜೆಪಿ ಹಿನ್ನಡೆ ಕಂಡಿದೆ.
"ಎತ್ತು ಏರಿಕೆ, ಕೋಣ ನೀರಿಗೆʼ ಏನ್ನುವಂತೆ ವಿಜಯೇಂದ್ರ, ವಿರೋಧ ಪಕ್ಷ ನಾಯಕ ಆರ್. ಅಶೋಕ್ ಒಂದೆಡೆ ಸಾಗಿದರೆ, ವಿರೋಧಿ ಬಣ ಬಸನಗೌಡ ಪಾಟೀಲ ಯತ್ನಾಳ, ರಮೇಶ್ ಜಾರಕಿ ಹೊಳಿ ಮತ್ತಿತರರು ವಿರುದ್ಧ ದಿಕ್ಕಿನಲ್ಲಿ ನಡೆಯುತ್ತಿದ್ದರು.
ಜತೆಗೆ ವಿಜಯೇಂದ್ರ ಬಣ ಬೆಂಗಳೂರು ಮೈಸೂರು ಜಾಥಾ ಕೈಗೊಂಡರೆ, ಯತ್ನಾಳ ತಂಡ ಬಳ್ಳಾರಿ ಜಾಥಾ ಕಾರ್ಯಕ್ರಮ ಪ್ರಕಟಿಸಿತು. ಎರಡೂ ಪಾಳಯಗಳು ಒಬ್ಬರನ್ನೊಬ್ಬರು ದೂಷಿಸಿ ಕಾಲಹರಣ ಮಾಡಿದ್ದು, ಬಿಜೆಪಿ ಸಂಘಟನೆಗೆ ತೊಡಕಾಗಿದ್ದಂತೂ ಸತ್ಯ.
ವಿಜಯೇಂದ್ರ ಅವರ ನಾಯಕತ್ವವನ್ನೂ ಈ ಉಪ ಚುನಾವಣೆ ಒರೆಗೆ ಹಚ್ಚಿದ್ದು, ಅವರನ್ನು ರಾಜ್ಯಾಧ್ಯಕ್ಷ ಹುದ್ದೆಯಿಂದ ಬದಲಾಯಿಸಬೇಕೆನ್ನುವ ಅವರ ವಿರೋಧಿ ಪಾಳಯಕ್ಕೆ ಇನ್ನಷ್ಟು ಬಲ ನೀಡಿದೆ.
ಜೆಡಿಎಸ್‌ಗೆ ಚಾಟಿ
ನಿಖಿಲ್ ಕುಮಾರಸ್ವಾಮಿ ಅವರ ಸೋಲಿನ ಮೂಲಕ ದೇವೇಗೌಡರ ಕುಟುಂಬಕ್ಕೇ ಒಕ್ಕಲಿಗರ ಬೆಂಬಲ ಎಂಬ ನಂಬಿಕೆ ಹುಸಿಯಾದಂತಾಗಿದೆ. ಇನ್ನೊಬ್ಬ ಒಕ್ಕಲಿಗ ನಾಯಕ ಸಿ.ಪಿ. ಯೋಗೇಶ್ವರ್ ಅವರನ್ನು ಗೆಲ್ಲಿಸುವ ಮೂಲಕ ಹಳೇ ಮೈಸೂರು ಪ್ರಾಂತ್ಯದಲ್ಲಿ ಡಿ.ಕೆ. ಶಿವಕುಮಾರ್ ಅವರ ನಾಯಕತ್ವ ಮತ್ತೆ ಮುನ್ನೆಲೆಗೆ ಬರುವಂತೆ ಮಾಡಿದೆ. ಆ ಮೂಲಕ ಲೋಕಸಭಾ ಚುನಾವಣೆಯಲ್ಲಿ ತನ್ನ ಸೋದರ ಡಿ.ಕೆ. ಸುರೇಶ್ ಅವರನ್ನು ದೇವೇಗೌಡರ ಅಳಿಯ ಡಾ. ಮಂಜುನಾಥ್ ಬಿಜೆಪಿ ಅಭ್ಯರ್ಥಿಯಾಗಿ ನೀಡಿದ ಸೋಲಿಗೆ ಪ್ರತ್ಯುತ್ತರ ನೀಡಿದಂತಾಗಿದೆ.
ಒಟ್ಟಿನಲ್ಲಿ ಸಿದ್ದರಾಮಯ್ಯ ಅವರಿಗೆ ಈ ಉಪ ಚುನಾವಣೆ ಗೆಲುವುಗಳು ಮತ್ತಷ್ಟು ಶಕ್ತಿ ತುಂಬಿದೆ. ಬಿಜೆಪಿಗೆ ಮೈಮರೆಯದಂತೆ ಎಚ್ಚರಿಕೆ ನೀಡಿದೆ ಹಾಗೂ ಜೆಡಿಎಸ್ ಪಾಳಯಕ್ಕೆ "ಅನುಕೂಲಸಿಂಧುʼ ರಾಜಕಾರಣ ಮಾಡದಂತೆ ಚಾಟಿಯೇಟು ನೀಡಿದೆ.