Karnataka By-Election | ಕಾಂಗ್ರೆಸ್‌ ಗೆಲವು ಸಿದ್ದರಾಮಯ್ಯ ನಾಯಕತ್ವಕ್ಕೆ ಸಿಕ್ಕ ಜಯ: ಡಿ.ಕೆ ಶಿವಕುಮಾರ್‌

ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಾಯಕತ್ವ, ಗ್ಯಾರಂಟಿ ಯೋಜನೆ, ಅಭಿವೃದ್ಧಿಗೆ ಸಂದ ಜಯ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ತಿಳಿಸಿದ್ದಾರೆ.

Update: 2024-11-23 12:38 GMT
ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಪ್ರತಿಕಾಗೋಷ್ಠಿ ನಡೆಸಿ ಮತದಾರರಿಗೆ ಧನ್ಯವಾದ ಹೇಳಿದರು.
Click the Play button to listen to article

ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎಲ್ಲಾ ಕಡೆ ಗೆಲುವು ಸಾಧಿಸಿದ್ದಕ್ಕಾಗಿ ಶನಿವಾರ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ ಕಾಂಗ್ರೆಸ್ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌, ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವ, ಗ್ಯಾರಂಟಿ ಯೋಜನೆ, ಅಭಿವೃದ್ಧಿಗೆ ಸಂದ ಜಯ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. 

ಶನಿವಾರ ಉಪ ಚುನಾವಣೆಯ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಬೆಂಗಳೂರಿನ ಕೆ.ಪಿ.ಸಿ.ಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ನೇತೃತ್ವದ ಆಡಳಿತ ಹಾಗೂ ಗ್ಯಾರಂಟಿ ಮತ್ತು ಅಭಿವೃದ್ಧಿ ಕೆಲಸಗಳನ್ನು ರಾಜ್ಯದ ಜನತೆ ಮೆಚ್ಚಿ ಮತ ನೀಡಿದ್ದಾರೆ. ಈ ಮೂರು ಫಲಿತಾಂಶ ನಮ್ಮ ಗ್ಯಾರಂಟಿ ಹಾಗೂ ಅಭಿವೃದ್ಧಿಗೆ ಸಿಕ್ಕ ಗೆಲುವು. ಈಗ ರಾಜ್ಯ ವಿಧಾನಸಭೆಯಲ್ಲಿ ನಮ್ಮ ಸಂಖ್ಯೆ 136 ರಿಂದ 138 ಕ್ಕೆ ಏರಿದೆ ಎಂದು ಅವರು ತಿಳಿಸಿದರು. 

ಟೀಕೆ ಸಾಯುತ್ತವೆ, ಕೆಲಸ ಉಳಿಯುತ್ತವೆ

ವಿರೋಧ ಪಕ್ಷದ ನಾಯಕರು ಅನೇಕ ಬಾರಿ ಟೀಕೆ ಮಾಡಿ ಚಿಕ್ಕ ವಿಷಯವನ್ನು ಬೆಟ್ಟದಷ್ಟು ದೊಡ್ಡದಾಗಿ ಮಾಡಿದ್ದಾರೆ. ಅದಕ್ಕೆ ತಕ್ಕಂತೆ ಮತದಾರರು ತೀರ್ಪು ನೀಡಿದ್ದಾರೆ. ನಾನು ಮೊದಲೇ ಹೇಳಿದ್ದೆ, ಟೀಕೆ ಸಾಯುತ್ತವೆ, ಕೆಲಸ ಉಳಿಯುತ್ತವೆ ಅಂತ. ಈಗ ಜನರು ಇದಕ್ಕೆ ಮನ್ನಣೆ ಕೊಟ್ಟಿದ್ದಾರೆ. ಟೀಕೆ ಮತ್ತು ಸುಳ್ಳು ಪ್ರಚಾರದಿಂದ ದೂರವಿರಿ ಎಂದು ಪ್ರತಿಪಕ್ಷಗಳಿಗೆ ಮತದಾರರು ಸಂದೇಶ ನೀಡಿದ್ದಾರೆ. ಜನರ ಭಾವನೆಗಳೊಂದಿಗೆ ಆಟವಾಡಬೇಡಿ ಎಂಬ ಸಂದೇಶವನ್ನೂ ನೀಡಿದ್ದಾರೆ. ಜನರ ಜೀವನ ಮತ್ತು ಜೀವನೋಪಾಯದ ಮೇಲೆ ರಾಜಕೀಯ ನಡೆಸಬೇಕು ಎಂದು ಅವರು ತಿಳಿಸಿದರು. 

ವಿಧಾನಸಭಾ ಚುನಾವಣೆಗೆ ಪೂರ್ವಭಾವಿ 

ಈ ಫಲಿತಾಂಶಗಳು ಮುಂಬರುವ 2028 ರ ಕರ್ನಾಟಕ ವಿಧಾನಸಭೆ ಚುನಾವಣೆಯ ಪೂರ್ವಭಾವಿ ಎಂದು ಡಿಸಿಎಂ ಶಿವಕುಮಾರ್ ಹೇಳಿದ್ದಾರೆ. ಈ ಫಲಿತಾಂಶದ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಜನತೆ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಅವರು ಹೇಳಿದರು.

ಮತದಾರರು ಬಹಳಷ್ಟು ಬುದ್ದಿವಂತರು ಹಾಗೂ ವಿದ್ಯಾವಂತರು ಕೂಡ ಆಗಿದ್ದಾರೆ. ಅವರು ಸಾಕಷ್ಟು ವಿವೇಚನೆಯನ್ನು ಹೊಂದಿದ್ದಾರೆ. ಶಿಗ್ಗಾವಿ ಕ್ಷೇತ್ರದಲ್ಲಿ ಮಾಜಿ ಸಿಎಂ ಹಾಗೂ ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ 2023ರ ವಿಧಾನಸಭೆ ಚುನಾವಣೆಯಲ್ಲಿ 30 ಸಾವಿರಕ್ಕೂ ಅಧಿಕ ಮುನ್ನಡೆ ಸಾಧಿಸಿದ್ದರು. ಈಗ ನಾವು 14,000 ಕ್ಕೂ ಹೆಚ್ಚು ಮತಗಳಿಂದ ಮುನ್ನಡೆ ಸಾಧಿಸಿದ್ದೇವೆ ಎಂದು ಅವರು ಹೇಳಿದರು.

ಆಧಾರ ರಹಿತ ಆರೋಪ ಜನರು ಸಹಿಸುತ್ತಿಲ್ಲ 

ಒಂದು ಸ್ಥಾನವು ಕಿತ್ತೂರು ಕರ್ನಾಟಕದಲ್ಲಿ, ಇನ್ನೊಂದು ಕಲ್ಯಾಣ ಕರ್ನಾಟಕದಲ್ಲಿ ಮತ್ತು ಮೂರನೆಯದು ಹಳೆಯ ಮೈಸೂರು ಪ್ರದೇಶದಲ್ಲಿದೆ. ರಾಜ್ಯಾದ್ಯಂತ ಜನರು ಕಾಂಗ್ರೆಸ್‌  ಪಕ್ಷವನ್ನು ಬೆಂಬಲಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರನ್ನು ಹೇಗೆ ಅಪಹಾಸ್ಯ ಮಾಡಿ ಎನ್‌ಡಿಎ ಮೈತ್ರಿಕೂಟವನ್ನು ಬಿಂಬಿಸಲಾಯಿತು ಎಂಬುದನ್ನು ರಾಜ್ಯದ ಜನತೆ  ನೋಡಿದ್ದಾರೆ. ಆಧಾರ ರಹಿತ ಆರೋಪಗಳನ್ನು ಮಾಡಿ ದೊಡ್ಡದಾಗಿ ಬಿಂಬಿಸಲಾಯಿತು.  ಅದನ್ನು ಜನರು ಸಹಿಸುತ್ತಿಲ್ಲ ಎಂದು ಅವರು ಹೇಳಿದರು. 

ಬಿಜೆಪಿಯವರಿಗೆ ಸುಳ್ಳೇ ಮನೆದೇವರು 

ಬಿಜೆಪಿ ನಾಯಕರು ಬರೀ ಸುಳ್ಳುಗಳನ್ನು ಹೇಳುವ ಮೂಲಕ ರಾಜಕಾರಣ ಮಾಡುತ್ತಿದ್ದಾರೆ. ಸುಳ್ಳೇ ಅವರಿಗೆ ಮನೆ ದೇವರು ಎಂಬ ರೀತಿಯಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದರು. ಆದರೆ ಏನಾಯಿತು? ಬೊಮ್ಮಾಯಿ ಮಗ ಸೋತ ಅಂತರ ಎಷ್ಟು? ನಿಖಿಲ್ ಕುಮಾರಸ್ವಾಮಿ ಸೋತ ಮತದ ಅಂತರವೆಷ್ಟು ನೀವೇ ನೋಡಿ? ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸಿಕ್ಕ‌ ಮತ ಈಗ ಸಿಕ್ಕಿರುವ ಮತ ಎಷ್ಟು ಅಂತ ತಾಳೆ ಮಾಡಿ ನೋಡಿ. ಪ್ರಮುಖ ನಾಯಕರು ಎಂದು ಕರೆಯಲ್ಪಡುವವರು ಬಿಜೆಪಿಗಾಗಿ ಸಂಡೂರಿಗೆ ಹೋದರು. ಆದರೆ ವಿಫಲರಾಗಿದ್ದಾರೆ ಎಂದು ಗಣಿ ಉದ್ಯಮಿ ಮತ್ತು ಶಾಸಕ ಜನಾರ್ದನ ರೆಡ್ಡಿ ಅವರ ಹೆಸರನ್ನು ಉಲ್ಲೇಖಿಸದೆ ಬಿಜೆಪಿಗೆ ತಿರುಗೇಟು ನೀಡಿದರು. 

ಕಮಲ ಕೆಸರಲ್ಲಿದ್ದರೆ ಚಂದ, ತೆನೆ ಹೊಲದಲ್ಲಿದ್ದರೆ ಚಂದ ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಮಾತ್ರ ಚಂದ ಎಂದ ಅವರು, ಸಿದ್ದರಾಮಯ್ಯನವರನ್ನು ಯಾವ ರೀತಿ ಲೇವಡಿ ಮಾಡಿದ್ದಾರೆ. ವಿಪಕ್ಷಗಳು ಅವರ ಮುಖವನ್ನು ಈಗ ಕನ್ನಡಿಯಲ್ಲಿ ನೋಡಿಕೊಳ್ಳಬೇಕು. ಏನೂ ಇಲ್ಲದೆ ಇವರು ಆರೋಪ ಮಾಡಿ ಚಿಕ್ಕ ವಿಷಯನ್ನು ಬೆಟ್ಟದಷ್ಟು ಮಾಡಿದ ಪರಿಣಾಮಕ್ಕೆ ಜನರು ಸರಿಯಾದ ಉತ್ತರ ನೀಡಿದ್ದಾರೆ. ಚನ್ನಪಟ್ಟಣದಲ್ಲಿ ಆರಂಭದಲ್ಲೇ ಜನರು ಅವರ ತೀರ್ಮಾನ ಮಾಡಿ ಸಿದ್ದರಾಮಯ್ಯನವರ ನಾಯಕತ್ವದಲ್ಲಿ ಸರ್ಕಾರ ನಡೀಬೇಕು ಅಂತ ಜನ ಆಶಿಸಿದ್ದಾರೆ ಎಂದು ಡಿ.ಕೆ ಶಿವಕುಮಾರ್‌ ತಿಳಿಸಿದ್ದಾರೆ. 

Tags:    

Similar News