ಮತಕಳವು ಆರೋಪ: ಬೆಂಗಳೂರಿನಲ್ಲಿ ಆ.8ರಂದು ಕಾಂಗ್ರೆಸ್ ಪ್ರತಿಭಟನೆ; ಇಂದು ಪೂರ್ವಭಾವಿ ಸಭೆ
ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಕೆಪಿಸಿಸಿ ಕಾರ್ಯಾಧ್ಯಕ್ಷರು, ಉಸ್ತುವಾರಿ ಎಐಸಿಸಿ ಕಾರ್ಯದರ್ಶಿಗಳು ಭಾಗವಹಿಸಲಿದ್ದಾರೆ.;
ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರಿನಲ್ಲಿ ಆಗಸ್ಟ್ 8 ರಂದು ನಡೆಯಲಿರುವ ಚುನಾವಣಾ ಅಕ್ರಮಗಳ ವಿರುದ್ಧದ ಹೋರಾಟಕ್ಕೆ ಪೂರ್ವಭಾವಿಯಾಗಿ ಇಂದು (ಬುಧವಾರ) ಕಾಂಗ್ರೆಸ್ ನಾಯಕರು ಸಂಜೆ 6 ಗಂಟೆಗೆ ಕ್ವೀನ್ಸ್ ರಸ್ತೆಯಲ್ಲಿರುವ ಭಾರತ್ ಜೋಡೋ ಭವನದಲ್ಲಿ ಪೂರ್ವಭಾವಿ ಸಭೆ ನಡೆಸಲಿದ್ದಾರೆ.
ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವ ಈ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸುವುದು ಸಭೆಯ ಮುಖ್ಯ ಉದ್ದೇಶವಾಗಿದೆ ಎನ್ನಲಾಗಿದೆ. ಫ್ರೀಡಂ ಪಾರ್ಕ್‌ನಲ್ಲಿ ನಡೆಯಲಿರುವ ಹೋರಾಟದ ಕುರಿತು ನಾಯಕರು ಮಹತ್ವದ ಸಮಾಲೋಚನೆ ನಡೆಸಲಿದ್ದಾರೆ.
ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷರು, ಉಸ್ತುವಾರಿ ಎಐಸಿಸಿ ಕಾರ್ಯದರ್ಶಿಗಳು ಭಾಗವಹಿಸಲಿದ್ದಾರೆ.
ಇವರೊಂದಿಗೆ ಎಲ್ಲಾ ಸಚಿವರು, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಸಂಸದರು, ಮಾಜಿ ಶಾಸಕರು, ಕಳೆದ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಪರಾಜಿತರಾದ ಅಭ್ಯರ್ಥಿಗಳು, ನಿಗಮ ಮಂಡಳಿ ಅಧ್ಯಕ್ಷರು, ಕೆಪಿಸಿಸಿ ಪದಾಧಿಕಾರಿಗಳು, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಮುಂಚೂಣಿ ಘಟಕ, ಸೆಲ್, ವಿಭಾಗಗಳ ರಾಜ್ಯಾಧ್ಯಕ್ಷರು ಮತ್ತು ಬಿಬಿಎಂಪಿ ವ್ಯಾಪ್ತಿಯ ಪ್ರಮುಖ ನಾಯಕರು ಕೂಡ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಬೆಂಗಳೂರಿನ ಲೋಕಸಭಾ ಕ್ಷೇತ್ರವೊಂದರಲ್ಲಿ ಮತ ಕಳವು ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಆ.5ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಯಬೇಕಾಗಿತ್ತು. ಆದರೆ, ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಶಿಬು ಸೊರೇನ್ ನಿಧನದ ಹಿನ್ನೆಲೆಯಲ್ಲಿ ಅಂತಿಮ ನಮನ ಸಲ್ಲಿಸಲು ಹಿರಿಯ ನಾಯಕರು, ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಜಾರ್ಖಂಡ್ಗೆ ತೆರಳುತ್ತಿರುವ ಹಿನ್ನೆಲೆಯಲ್ಲಿ ಆ.8ಕ್ಕೆ ಪ್ರತಿಭಟನೆ ಮುಂದೂಡಲಾಗಿತ್ತು.