17ರಂದು ರಾಜ್ಯಾದ್ಯಂತ ಕಾಂಗ್ರೆಸ್ನಿಂದ ಪ್ರತಿಭಟನೆ; ಕೇಂದ್ರದ ಬೆಲೆ ಏರಿಕೆಗೆ ಆಕ್ರೋಶ
ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ವಿವರಿಸಿದ ಡಿಸಿಎಂ ಡಿ.ಕೆ ಶಿವಕುಮಾರ್, ಬೆಲೆ ಏರಿಕೆ ಹಾಗೂ ರಾಜ್ಯ ಬಿಜೆಪಿಯ ದ್ವಂದ್ವ ನೀತಿ ವಿರುದ್ಧ ವಾಗ್ದಾಳಿ ನಡೆಸಿದರು.;
ಡಿಸಿಎಂ ಡಿ ಕೆ ಶಿವಕುಮಾರ್ ಅವರು ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರದ ಬೆಲೆ ಏರಿಕೆ ನೀತಿ ಹಾಗೂ ರಾಜ್ಯ ಬಿಜೆಪಿಯು ಆಯೋಜಿಸಿರುವ ಪ್ರತಿಭಟನೆ ವಿರುದ್ಧ ರಂದು ಜಿಲ್ಲಾ ಕೇಂದ್ರಗಳು ಹಾಗೂ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದುಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. .
ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಲೆ ಏರಿಕೆ ಹಾಗೂ ರಾಜ್ಯ ಬಿಜೆಪಿಯ ದ್ವಂದ್ವ ನೀತಿ ವಿರುದ್ಧ ವಾಗ್ದಾಳಿ ನಡೆಸಿದರು.
"ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಜಿಲ್ಲಾ ಹಾಗೂ ತಾಲೂಕು ಮಟ್ಟದ ಹೋರಾಟದ ಸ್ವರೂಪವನ್ನು ಶೀಘ್ರ ತಿಳಿಸಲಾಗುತ್ತದೆ. ಅವರ ಜನಾಕ್ರೋಶ ಯಾತ್ರೆಯ ವಿರುದ್ಧ ನಾವು ಏನಾದರೂ ಮಾಡಬೇಕಲ್ಲವೇ?" ಎಂದು ಪ್ರಶ್ನಿಸಿದರು.
ಆರ್.ಅಶೋಕ್ ಹಾಗೂ ವಿಜಯೇಂದ್ರ ಅವರಿಗೆ ಕೇವಲ ರಾಜ್ಯ ಸರ್ಕಾರ ಏರಿಸಿದ ಹಾಲಿನ ದರ ಮಾತ್ರ ಕಣ್ಣಿಗೆ ಕಾಣುತ್ತಿದೆಯೇ? ಬಿಜೆಪಿ ರಾಜ್ಯದಲ್ಲಿ ನಡೆಸುತ್ತಿರುವ ಜನಾಕ್ರೋಶ ಯಾತ್ರೆ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಮಾಡುತ್ತಿರುವ ಯಾತ್ರೆ" ಕುಹಕವಾಡಿದರು.
"ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಹೋರಾಟದ ಸ್ವರೂಪವನ್ನು ಶೀಘ್ರ ತಿಳಿಸಲಾಗುತ್ತದೆ. ಅವರ ಜನಾಕ್ರೋಶ ಯಾತ್ರೆಯ ವಿರುದ್ಧ ನಾವು ಏನಾದರೂ ಮಾಡಬೇಕಲ್ಲವೇ?" ಎಂದು ಹೇಳಿದರು.
ಬಿಜೆಪಿಯವರು ಯಾತ್ರೆ ಹೊರಟ ದಿನವೇ ಕೇಂದ್ರ ಸರ್ಕಾರದವರು ಪೆಟ್ರೋಲ್, ಡೀಸೆಲ್ ಗೆ ತಲಾ 2 ರೂಪಾಯಿ ಹಾಗೂ ಗ್ಯಾಸ್ ಸಿಲಿಂಡರ್ ಬೆಲೆಯನ್ನು 50 ರೂಪಾಯಿ ಜಾಸ್ತಿ ಮಾಡಿ ಉದ್ಘಾಟನೆ ಮಾಡಿ, ಇವರ ಯಾತ್ರೆಗೆ 'ಗಿಫ್ಟ್' ಕಳಿಸಿದ್ದಾರೆ ಎಂದು ವ್ಯಂಗ್ಯವಾಡಿದರು.
"ಬುಧವಾರದಂದು ಕಚ್ಚಾ ತೈಲದ ಬೆಲೆ ಶೇ. 4.23 ರಷ್ಟು ಇಳಿಕೆಯಾಗಿದೆ. ಆದರೂ ಕೇಂದ್ರ ಸರ್ಕಾರ ಬೆಲೆ ಇಳಿಕೆ ಮಾಡಿಲ್ಲ. ಪೆಟ್ರೋಲ್ ನ ಮೂಲ ದರ ಪ್ರತಿ ಲೀಟರ್ ಗೆ 42.60 ಪೈಸೆ ಇದೆ. ದೇಶದಾದ್ಯಂತ ಪ್ರತಿ ಲೀಟರ್ ಪೆಟ್ರೋಲ್ 103 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಒಂದು ಲೀಟರ್ ಗೆ ರೂ.60 ರೂಪಾಯಿ ಲಾಭ ಸರ್ಕಾರಕ್ಕೆ ಸಿಗುತ್ತಿದೆ. ಡೀಸಲ್ ಬೆಲೆ ರೂ.91 ರೂಪಾಯಿ ಇದೆ. ರೂ. 43 ಲಾಭ ಮಾಡುತ್ತಿದ್ದಾರೆ. ಶೇಕಡ 60 ರಷ್ಟು ತೆರಿಗೆ ಪೆಟ್ರೋಲ್, ಡೀಸೆಲ್ ಮೇಲೆ ಹಾಕಿದ್ದಾರೆ" ಎಂದರು.
ರಾಜ್ಯದಲ್ಲಿ ಹಾಲಿನ ದರ ಕಡಿಮೆ
"ಹಾಲಿನ ದರ ನಮ್ಮ ರಾಜ್ಯದಲ್ಲಿ ಅತ್ಯಂತ ಕಡಿಮೆಯಿದೆ. ನೀರಿನ ಬೆಲೆ ಏರಿಕೆಯನ್ನು ಅತ್ಯಂತ ಕಡಿಮೆ ಮಾಡಿದ್ದೇವೆ. ಕಸ ಸಂಗ್ರಹಣೆ ಶುಲ್ಕವನ್ನು ಈ ಹಿಂದಿನ ಬಿಜೆಪಿ ಸರ್ಕಾರ ನಿಗದಿ ಮಾಡಿದ್ದಕ್ಕಿಂತ ಕಡಿಮೆ ನಿಗದಿ ಮಾಡಿದ್ದೇವೆ. ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದ ಜನರ ಬದುಕು ಹಸನಾಗಲಿ ಎಂದು ಗ್ಯಾರಂಟಿ ಯೋಜನೆ ಮೂಲಕ ರೂ.52 ಸಾವಿರ ಕೋಟಿ ಮೀಸಲಿಟ್ಟಿದ್ದೇವೆ" ಎಂದು ಶಿವಕುಮಾರ್ ಅವರು ಮಾಹಿತಿ ನೀಡಿದರು.
"ರೂ. 80 ಇದ್ದ ಹೆದ್ದಾರಿ ಟೋಲ್ ಬೆಲೆ 250 ಕ್ಕೂ ಹೆಚ್ಚಾಗಿದೆ. ಇದೆಲ್ಲವು ಅಶೋಕ್ ಅವರಿಗೆ ಕಾಣಿಸುತ್ತಿಲ್ಲವೇ" ಎಂದು ಶಿವಕುಮಾರ್ ಅವರು ಪ್ರಶ್ನಿಸಿದರು.
ಬಿಜೆಪಿಯವರ ಫೋಟೋ ಹಾಕಿಕೊಳ್ಳಲಿ
"ಬಿಜೆಪಿಯವರು ಪ್ರತಿಭಟನಾ ಬ್ಯಾನರ್ ನಲ್ಲಿ ನನ್ನ ಹಾಗೂ ಸಿದ್ದರಾಮಯ್ಯ ಅವರ ಫೋಟೋಗಳನ್ನು ಹಾಕುವ ಬದಲು ಕೇಂದ್ರ ನಾಯಕರ ಫೋಟೋ ಹಾಕಿಕೊಳ್ಳಿ, ನಮ್ಮ ಬೆಲೆ ಏರಿಕೆ ಬದಲು ಬಿಜೆಪಿ ಬೆಲೆ ಏರಿಕೆಯನ್ನು ಪ್ರಶ್ನಿಸಿ" ಎಂದು ವ್ಯಂಗ್ಯವಾಡಿದರು.
ನೀವು ಯಾವ ವಸ್ತುಗಳ ಬೆಲೆ ಕಡಿಮೆ ಮಾಡಲು ಹೋರಾಟ ಮಾಡುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, "ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡಿದ ಕಾರಣಕ್ಕೆ ನಮ್ಮಲ್ಲಿಯೂ ಬೆಲೆ ಏರಿಕೆಯಾಗಿದೆ. ಅವರ ನೀತಿಯ ಕಾರಣಕ್ಕೆ ನಾವು ಬೆಲೆ ಏರಿಕೆ ಮಾಡದೇ ವಿಧಿಯಿಲ್ಲ" ಎಂದು ಹೇಳಿದರು.
ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್ ಒನ್ ಎನ್ನುವ ರಾಯರೆಡ್ಡಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, "ಅದನ್ನು ಅವರು ಹೇಳಿಲ್ಲ ಎನ್ನುವ ಮರು ಹೇಳಿಕೆ ನೀಡಿದ್ದಾರಲ್ಲ. ಇದರ ಬಗ್ಗೆ ಅವರನ್ನು ಕರೆದು ಮಾತನಾಡುತ್ತೇನೆ. ಅವರ ಬಳಿ ಚರ್ಚೆ ನಡೆಸುತ್ತೇನೆ" ಎಂದು ಹೇಳಿದರು.
ಬಿಲ್ ಪಾವತಿಗೆ ಕೆಲವು ಸಚಿವರು ವಿಳಂಬ ಮಾಡುತ್ತಿದ್ದಾರೆ. ಎನ್ ಓಸಿಗೆ ಕಮಿಷನ್ ಕೇಳುತ್ತಿರುವುದರ ಬಗ್ಗೆ ಗುತ್ತಿಗೆದಾರರ ಸಂಘ ಪತ್ರ ಬರೆದಿರುವ ಬಗ್ಗೆ ಕೇಳಿದಾಗ, "ಇದರ ಬಗ್ಗೆ ಲೋಕಾಯುಕ್ತಕ್ಕೆ ಹಾಗೂ ಸರ್ಕಾರಕ್ಕೆ ದೂರು ನೀಡಲಿ. ನಮ್ಮ ಸರ್ಕಾರ ನ್ಯಾಯಬದ್ಧವಾಗಿ ಆಡಳಿತ ನೀಡುತ್ತೇವೆ. ನಾವು ಯಾವುದೇ ಲಂಚಕ್ಕೆ ಪ್ರೋತ್ಸಾಹ ನೀಡುವವರಲ್ಲ," ಎಂದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸೇರಿದಂತೆ ಇತರೇ ಚರ್ಚೆಗಳ ಬಗ್ಗೆ ಕೇಳಿದಾಗ, "ಯಾವುದೇ ಬದಲಾವಣೆಯಿಲ್ಲ. ಒಂದಷ್ಟು ಪದಾಧಿಕಾರಿಗಳನ್ನು ನೇಮಕ ಮಾಡುತ್ತಾರೆ. ಒಂದಷ್ಟು ಜಿಲ್ಲಾ ಅಧ್ಯಕ್ಷರನ್ನು ಬದಲಾವಣೆ ಮಾಡುತ್ತಾರೆ," ಎಂದರು.
ವಿಧಾನಪರಿಷತ್ ಸದಸ್ಯರ ಕುರಿತ ಪ್ರಶ್ನೆಗೆ, "ಏ.17 ರಂದು ಪ್ರಧಾನ ಕಾರ್ಯದರ್ಶಿಗಳು ರಾಜ್ಯಕ್ಕೆ ಬರಲಿದ್ದಾರೆ" ಎಂದರು.
ಬೆಂಗಳೂರು ಬಿಟ್ಟು ಬೇರೆ ಕಡೆ ಎರಡನೇ ವಿಮಾನ ನಿಲ್ದಾಣವಾಗಲಿ ಎಂದು ಒಂದಷ್ಟು ಶಾಸಕರು ಪತ್ರ ಬರೆದಿರುವ ಬಗ್ಗೆ ಕೇಳಿದಾಗ, "ನನಗೆ ಈ ಬಗ್ಗೆ ತಿಳಿದಿಲ್ಲ. ನನಗೆ ಇಡೀ ಕರ್ನಾಟಕವೇ ಒಂದು. ಚಾಮರಾಜನಗರ, ಬೀದರ್, ಗುಲ್ಬರ್ಗಾ ಎಲ್ಲವೂ ನನಗೆ ಒಂದೇ" ಎಂದು ಹೇಳಿದರು.
ನೀವು ಪ್ರತ್ಯೇಕವಾಗಿ ವಿಮಾನ ನಿಲ್ದಾಣಕ್ಕೆ ಮನವಿ ನೀಡಿರುವ ಬಗ್ಗೆ ಕೇಳಿದಾಗ, "ನಾನು ಯಾವುದೇ ಮನವಿ ನೀಡಿಲ್ಲ. ಇದಕ್ಕೆ ಮಂತ್ರಿಗಳು ಇದ್ದಾರೆ ಅವರು ಇದನ್ನು ನಿಭಾಯಿಸುತ್ತಿದ್ದಾರೆ" ಎಂದರು.
ಸಿಎಂ ವಿರುದ್ಧ ಸುಳ್ಳು ಆರೋಪ
ಮುಖ್ಯಮಂತ್ರಿಗಳ ವಿರುದ್ಧ ಗಣಿ ಗುತ್ತಿಗೆ ಕಿಕ್ ಬ್ಯಾಕ್ ಪಡೆದ ಆರೋಪದ ಬಗ್ಗೆ ಕೇಳಿದಾಗ, "ರಾಜಕೀಯವಾಗಿ ಆರೋಪ ಮಾಡಲು ಪ್ರಯತ್ನ ಮಾಡುತ್ತಿರಬಹುದು. ಇದರಲ್ಲಿ ಯಾವುದೇ ಸತ್ಯವಿಲ್ಲ," ಎಂದು ತಿಳಿಸಿದರು.