ಪಾಕ್‌ ಹಾಗೂ ಕಾಶ್ಮೀರ ವಿಚಾರದಲ್ಲಿ ಕಾಂಗ್ರೆಸ್‌ನಿಂದ ಪ್ರಮಾದ: ಆರ್‌.ಅಶೋಕ್‌

ಭಯೋತ್ಪಾಕರ ಮೇಲೆ ದಾಳಿ ಮಾಡಿರುವುದನ್ನು ನಾಗರಿಕರು ನಂಬುತ್ತಾರೆ ಆದರೆ ಕೆಲವು ಮಂದಿ ಸಾಕ್ಷಿ ಕೇಳುತ್ತಾರೆ. ಆದ್ದರಿಂದಲೆ ಸೇನಾ ಅಧಿಕಾರಿಗಳು ದಾಳಿ ನಡೆಸಿದ ಸ್ಥಳಗಳ ಉಪಗ್ರಹ ಆಧಾರಿತ ಸಾಕ್ಷಗಳನ್ನು ನೀಡಿದ್ದಾರೆ.;

Update: 2025-05-13 11:45 GMT

ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌

ಸ್ವಾತಂತ್ರ್ಯ ಬಂದ ನಂತರ ಪಾಕಿಸ್ತಾನ ಹಾಗೂ ಕಾಶ್ಮೀರ ವಿಚಾರದಲ್ಲಿ ಕಾಂಗ್ರೆಸ್‌ ಮಾಡಿದ ಪ್ರಮಾದಗಳೇ ಇಂದಿನ ಗಡಿ ಸಮಸ್ಯೆಗಳಿಗೆ ಮೂಲ ಕಾರಣ. ಇಂದಿನ ಸಂದಿಗ್ದ ಪರಿಸ್ಥಿತಿಯಲ್ಲಿ ನಾವು ಅವುಗಳನ್ನು ಪ್ರಶ್ನಿಸುವುದಿಲ್ಲ. ಉದ್ವಿಗ್ನ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ರಾಜಕಾರಣ ಬಿಟ್ಟು ಸೈನಿಕರಿಗೆ ಬೆಂಬಲ ನೀಡಬೇಕು, ಯಾವುದೇ ಒಡಕು ಮಾತನಾಡದೆ ಒಗ್ಗಟ್ಟಿನಲ್ಲಿ ಮುನ್ನಡೆಯಬೇಕು ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ಸಲಹೆ ನೀಡಿದರು.

ಭಯೋತ್ಪಾಕರ ಮೇಲೆ ದಾಳಿ ಮಾಡಿರುವುದನ್ನು ನಾಗರಿಕರು ನಂಬುತ್ತಾರೆ ಆದರೆ ಕೆಲವು ಮಂದಿ ಸಾಕ್ಷಿ ಕೇಳುತ್ತಾರೆ. ಆದ್ದರಿಂದಲೆ ಸೇನಾ ಅಧಿಕಾರಿಗಳು ದಾಳಿ ನಡೆಸಿದ ಸ್ಥಳಗಳ ಉಪಗ್ರಹ ಆಧಾರಿತ ಸಾಕ್ಷಗಳನ್ನು ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಈಗಾಗಲೇ ಘಟನೆಯ ಕುರಿತು ಸವಿಸ್ತಾರವಾಗಿ ಹೇಳಿದ್ದಾರೆ. ಯುದ್ಧದ ಸಂದರ್ಭದಲ್ಲಿ ಅಧಿವೇಶನ ಕರೆಯುವಂತೆ ಕಾಂಗ್ರೆಸ್‌ ಆಗ್ರಹಿಸಬಾರದು ಎಂದರು.

ಪಹಲ್ಗಾಮ್‌ ದಾಳಿಯಲ್ಲಿ ಪ್ರವಾಸಿಗರನ್ನು ಹತ್ಯೆ ಮಾಡಿ ಭಾರತ ತಾಯಂದಿರ ಸಿಂದೂರ ಮುಟ್ಟಿದವರಿಗೆ ತಕ್ಕ ಶಾಸ್ತಿ ಮಾಡಲಾಗಿದೆ, ಸೇನಾಪಡೆಗಳು ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದ್ದಾರೆ. ಕಾಶ್ಮೀರ ನಮ್ಮದು, ಪಿಒಕೆ ವಶಪಡಿಸಿಕೊಳ್ಳುತ್ತೇವೆ ಎಂಬ ಸಂದೇಶ ನೀಡಿದ್ದಾರೆ. ತಿರಂಗಾ ಯಾತ್ರೆ ಮೂಲಕ ಎಲ್ಲರೂ ಸೈನಿಕರಿಗೆ ಗೌರವ ಸಲ್ಲಿಸೋಣ ಎಂದು ತಿಳಿಸಿದರು.

ಭಾರತೀಯ ಸೇನಾಪಡೆ ʼಆಪರೇಷನ್ ಸಿಂದೂರ್ʼ ಮೂಲಕ ಭಯೋತ್ಪಾದನೆ ವಿರುದ್ಧ ಹೋರಾಡಿ ಉಗ್ರರ ನೆಲೆಗಳನ್ನು ನಾಶಗೊಳಿಸಿತ್ತು. ನಮ್ಮ ತಂಟೆಗೆ ಬಂದರೆ ಯಾರ ಮಾತನ್ನು ಕೇಳುವುದಿಲ್ಲ, ನಿಮಗೆ ತಕ್ಕ ಬುದ್ದಿ ಕಲಿಸುತ್ತೇವೆ ಎಂದು ಸೈನಿಕರು ಇಡೀ ಪ್ರಪಂಚಕ್ಕೆ ಸಂದೇಶ ಕೊಟ್ಟಿದ್ದಾರೆ, ಆದ್ದರಿಂದ ಸೈನಿಕರ ಜತೆ ನಾವಿದ್ದೇವೆ ಎಂಬ ಸಂದೇಶ ನೀಡಲು ಮೇ 15ರಿಂದ ತಿರಂಗಾ ಯಾತ್ರೆ ಮಾಡಲಾಗುತ್ತಿದೆ ಎಂದರು.

ತಿರಂಗಾ ಯಾತ್ರೆಯಲ್ಲಿ ರಾಜಕೀಯ ಬೇಡ 

ರಾಷ್ಟ್ರ ರಕ್ಷಣೆಗಾಗಿ ತಿರಂಗಾ ಯಾತ್ರೆಯಲ್ಲಿ ಯಾವುದೇ ರಾಜಕೀಯ ಇಲ್ಲದೇ ಪ್ರತಿಯೊಬ್ಬ ಭಾರತೀಯನು ಪಾಲ್ಗೊಳ್ಳಬೇಕು. ನಾವು ಸೇನಾ ಪಡೆಯೊಂದಿಗೆ ಇದ್ದೇವೆ. ಮೇ 15ಕ್ಕೆ ಬೆಂಗಳೂರಿನ ಮಲ್ಲೇಶ್ವರಂನ ಸಿರೂರ್ ಪಾರ್ಕ್‌ನಿಂದ 18ನೇ ಕ್ರಾಸ್‌ವರೆಗೆ ತಿರಂಗಾ ಯಾತ್ರೆ ನಡೆಯಲಿದ್ದು ಎಲ್ಲ ವರ್ಗದವರು ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಮೇ16 ಮತ್ತು ಮೇ17ಕ್ಕೆ ಜಿಲ್ಲಾ ಕೇಂದ್ರಗಳಲ್ಲಿ ತಿರಂಗಾ ಯಾತ್ರೆ ಆರಂಭವಾಗಲಿದ್ದು, ಮೇ18 ರಿಂದ 23ರವರೆಗೆ ತಾಲ್ಲೂಕು ಕೇಂದ್ರಗಳು ಹಾಗೂ ಪ್ರತಿ ಹಳ್ಳಿಗಳಲ್ಲಿ ಮಾಡಬೇಕೆಂದು ಕರೆ ಕೊಟ್ಟಿದ್ದು ದೇಶದಲ್ಲಿ ಎಲ್ಲಾ ನಾಗರಿಕರು ಒಟ್ಟಾಗಿದ್ದೇವೆ ಎಂದು ತಿಳಿಸಿದರು.  

Tags:    

Similar News