ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ರದ್ದು; ನಾಳೆ ನಿಗದಿಯಾಗಿದ್ದ ಸಭೆ ಮಾ.10ಕ್ಕೆ ಮುಂದೂಡಿಕೆ
ನಾಳೆ( ಮಾ.4) ಕರೆದಿದ್ದ ರಾಜ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ರದ್ದು ಮಾಡಿದ್ದು, ಮಾ.10ರಂದು ಸಭೆ ನಡೆಸುವುದಾಗಿ ಕೆಪಿಸಿಸಿ ತಿಳಿಸಿದೆ.;
ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಮಾ.4 ರಂದು ಕರೆಯಲಾಗಿದ್ದ ಶಾಸಕಾಂಗ ಪಕ್ಷದ ಸಭೆಯನ್ನು ದಿಢೀರ್ ರದ್ದು ಮಾಡಲಾಗಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ),ಅನಿವಾರ್ಯ ಕಾರಣಗಳಿಂದ ಶಾಸಕಾಂಗ ಸಭೆ ಮುಂದೂಡಲಾಗಿದೆ ಎಂದು ತಿಳಿಸಿದೆ.
ಬೆಂಗಳೂರಿನ ಅರಮನೆ ರಸ್ತೆಯ ಸಿಐಡಿ ಕಚೇರಿ ಮುಂಭಾಗ ಇರುವ ಹೋಟೆಲ್ ರಾಡಿಸನ್ ಬ್ಲೂ ನಲ್ಲಿ ಮಾ.4ರಂದು ರಾಜ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿತ್ತು. ಈಗ ಸಭೆಯನ್ನು ಮುಂದೂಡಿದ್ದು, ಇದೇ ಹೋಟೆಲ್‌ನಲ್ಲಿ ಮಾ. 10ರಂದು ಸಭೆ ನಿಗದಿಯಾಗಿದೆ ಎಂದು ಹೇಳಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸಕಾಂಗ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಕೆ.ಪಿ.ಸಿ.ಸಿ.ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ವಿಧಾನ ಪರಿಷತ್ತಿನ ಸಭಾ ನಾಯಕ ಎನ್.ಎಸ್. ಭೋಸರಾಜು ಹಾಗೂ ಪಕ್ಷದ ಎಲ್ಲಾ ಕಾರ್ಯಾಧ್ಯಕ್ಷರು ಭಾಗವಹಿಸಲಿದ್ದಾರೆ ಎಂದು ತಿಳಿಸಿದೆ.
ಶಾಸಕಾಂಗ ಪಕ್ಷದ ಸಭೆಯಲ್ಲಿ ಅನುದಾನ ಹಂಚಿಕೆ ಕುರಿತ ಶಾಸಕರ ಅಸಮಾಧಾನ ತಣಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಸರತ್ತು ನಡೆಸಲಿದ್ದಾರೆ. ಅಲ್ಲದೇ ಅನುದಾನ ಹಂಚಿಕೆಯ ಭರವಸೆ ನೀಡಲಿದ್ದಾರೆ ಎಂದು ಹೇಳಲಾಗಿತ್ತು.