ಫೇಕ್ ಎನ್‌ಕೌಂಟರ್ ಗುಮಾನಿ ಆರೋಪ | ಕೇಂದ್ರ ಸಚಿವರ ಟೀಕೆಗೆ ಕಾಂಗ್ರೆಸ್ ತಿರುಗೇಟು
ಮಾಧ್ಯಮಗಳು ರಾತ್ರಿಯಲ್ಲಿ ಪೊಲೀಸರ ಬೆನ್ನತ್ತದೇ ಹೋಗಿದ್ದರೆ ಫೇಕ್ ಎನ್ಕೌಂಟರ್ ಹೆಸರಿನಲ್ಲಿ ಮುಗಿಸಲು ಪೊಲೀಸ್ ತಂಡಕ್ಕೆ ಸೂಚನೆ ನೀಡಿದ್ದರೆಂದು ಅನಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದ್ದರು;
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಸಿದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರನ್ನು ಪೊಲೀಸರು ಬಂಧಿಸಿದ ಪ್ರಕರಣ ಇದೀಗ ತೀವ್ರ ರಾಜಕೀಯ ತಿರುವು ಪಡೆದುಕೊಂಡಿದೆ.
ಪೊಲೀಸರು ಎನ್‌ಕೌಂಟರ್ ಮಾಡಲು ಉದ್ದೇಶಿಸಿದ್ದರು ಎಂಬ ಸಿ.ಟಿ.ರವಿ ಹೇಳಿಕೆಯನ್ನು ಬಿಜೆಪಿ ನಾಯಕರು ಪುನರುಚ್ಚರಿಸುತ್ತಿದ್ದರೆ, ಕಾಂಗ್ರೆಸ್ ನಾಯಕರು ಆ ಹೇಳಿಕೆಗಳಿಗೆ ತಿರುಗೇಟು ನೀಡಿದ್ದಾರೆ.
ಫೇಕ್ ಎನ್‌ಕೌಂಟರ್ ಮಾಡುತ್ತಿದ್ದರು; ಜೋಶಿ
ಸಿ.ಟಿ.ರವಿ ಅವರನ್ನು ಫೇಕ್ ಎನ್ಕೌಂಟರ್ ಹೆಸರಿನಲ್ಲಿ ಮುಗಿಸಲು ಉದ್ದೇಶಿಸಲಾಗಿತ್ತು ಎಂಬ ಅನುಮಾನ ಮೂಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದ್ದರು.
ಬಾಗಲಕೋಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅವಕಾಶ ಸಿಕ್ಕರೆ ಎನ್‌ಕೌಂಟರ್ ಮಾಡುತ್ತಿದ್ದರು. ಆದರೆ, ಕಾಂಗ್ರೆಸ್ಸಿಗರಿಗೆ ಸರಿಯಾದ ಅವಕಾಶ ಸಿಗಲಿಲ್ಲ. ಸಿ.ಟಿ.ರವಿ ಅವರನ್ನು ವಿಧಾನ ಪರಿಷತ್ ಸದಸ್ಯ ಕೇಶವಪ್ರಸಾದ್ ಕೂಡ ಹಿಂಬಾಲಿಸಿದ್ದರು. ಕ್ಷಣ ಕ್ಷಣದ ಲೈವ್ ಲೊಕೇಶನ್ ಸಿಗುತ್ತಿತ್ತು. ಮಾಧ್ಯಮಗಳು ಕೂಡ ಪೊಲೀಸರ ಬೆನ್ನತ್ತಿದ್ದವು. ಆದರಿಂದ ಯಾವುದೇ ಅಚಾತುರ್ಯ ಆಗಲಿಲ್ಲ ಎಂದು ಹೇಳಿದ್ದಾರೆ.
ಮಾಧ್ಯಮಗಳು ರಾತ್ರಿಯಲ್ಲಿ ಪೊಲೀಸರ ಬೆನ್ನತ್ತದೇ ಹೋಗಿದ್ದರೆ ಫೇಕ್ ಎನ್ಕೌಂಟರ್ ಹೆಸರಿನಲ್ಲಿ ಮುಗಿಸಲು ಪೊಲೀಸ್ ತಂಡಕ್ಕೆ ಸೂಚನೆ ನೀಡಿದ್ದರೆಂದು ಅನಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಸಚಿವರ ಹೇಳಿಕೆ ಶೋಭೆ ತರದು: ಎಚ್.ಕೆ.ಪಾಟೀಲ
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಹಿರಿಯ ಸಚಿವ ಎಚ್ ಕೆ ಪಾಟೀಲ್, ಆ ಹೇಳಿಕೆ ಅವರ ಸ್ಥಾನಕ್ಕೆ ಶೋಭೆ ತರುವುದಿಲ್ಲ ಎಂದಿದ್ದಾರೆ.
ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ತಿನಲ್ಲಿ ನಡೆದ ಘಟನೆ ತಲೆ ತಗ್ಗಿಸುವಂಥದ್ದು. ರವಿ ಅವರನ್ನು ಬಂಧಿಸಿದ ಬಳಿಕ ಬೇರೆ ಬೇರೆ ಸ್ಥಳಕ್ಕೆ ಏಕೆ ಕರೆದೊಯ್ದರು ಎಂದು ಪೊಲೀಸರು ವಿವರಣೆ ಕೊಟ್ಟಿದ್ದಾರೆ ಎಂದು ಹೇಳಿದರು.
ಸಿ.ಟಿ.ರವಿ ಮೇಲೆ ಹಲ್ಲೆಗೆ ಯತ್ನಿಸಿದವರ ಮೇಲೆ ಪ್ರಕರಣ ದಾಖಲಿಸದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಗೃಹ ಸಚಿವರು ಇದಕ್ಕೆ ಪ್ರತಿಕ್ರಿಯಿಸುತ್ತಾರೆ' ಎಂದು ತಿಳಿಸಿದರು.
ಅಮಿತ್ ಶಾ ಸಂತತಿಗೆ ಗೊತ್ತು ಫೇಕ್ ಎನ್‌ಕೌಂಟರ್
ಫೇಕ್ ಎನ್‌ಕೌಂಟರ್ ಕುರಿತ ಹೇಳಿಕೆಗೆ ತಿರುಗೇಟು ನೀಡಿದ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಪ್ರಲ್ಹಾದ ಜೋಶಿ ಕೂಡ ಅಮಿತ್ ಶಾ ಸಂತತಿಯವರು. ಈ ಹಿಂದೆ ಫೇಕ್ ಎನ್‌ಕೌಂಟರ್ ಪ್ರಕರಣದಲ್ಲಿ ಅಮಿತ್ ಶಾ ಅವರನ್ನು ಸುಪ್ರೀಂಕೋರ್ಟ್ ಗಡಿಪಾರು ಮಾಡಿತ್ತು. ಫೇಕ್ ಎನ್‌ಕೌಂಟರ್ ಅವರಿಗೆ ರೂಢಿಯಾಗಿದೆ. ಅವರು ಮಾಡುವ ಕೆಲಸಕ್ಕೆ ನಮ್ಮ ಮೇಲೆ ವೃಥಾ ಆರೋಪ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.