D.K.Shivakumar | ಕಾಂಗ್ರೆಸ್ ನಾಯಕರ ಔತಣಕೂಟ: ರಾಜಕೀಯ ಬೆರೆಸಬೇಡಿ ಎಂದ ಡಿ.ಕೆ ಶಿವಕುಮಾರ್
ರಾಜಕಾರಣಿಗಳು ಔತಣಕೂಟಗಳಲ್ಲಿ ಪಾಲ್ಗೊಳ್ಳುವುದು ಸಾಮಾನ್ಯ. ನಾನೂ ಕೂಡ ಆಗಾಗ ಔತಣಕೂಟ ಆಯೋಜಿಸುತ್ತೇನೆ. ಇಂಥಹ ವಿಚಾರಗಳಲ್ಲಿ ರಾಜಕೀಯ ಬೆರೆಸಬೇಡಿ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.;
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ವಿದೇಶ ಪ್ರವಾಸದಲ್ಲಿರುವಾಗಲೇ ಸಿದ್ದರಾಮಯ್ಯ ಅವರು ಈ ತಮ್ಮ ಸಂಪುಟ ಸಹುದ್ಯೋಗಿಗಳೊಂದಿಗೆ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸದಲ್ಲಿ ಔತಣಕೂಟದಲ್ಲಿ ಭಾಗಿಯಾಗಿದ್ದು ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿತ್ತು.
ಇದೇ ವಿಚಾರವಾಗಿ ಬಿಜೆಪಿ ಹೇಳಿಕೆ ನೀಡಿ, ಡಿ.ಕೆ.ಶಿವಕುಮಾರ್ ಅವರನ್ನು ಲೇವಡಿ ಮಾಡಿತ್ತು. ಇದೀಗ ಈ ಕುರಿತು ಮಾತನಾಡಿರುವ ಡಿ.ಕೆ ಶಿವಕುಮಾರ್, ಎಲ್ಲರೂ ಊಟಕ್ಕೆ ಸೇರಿದರೆ ಅದರಲ್ಲಿ ತಪ್ಪೇನಿದೆ? ಔತಣಕೂಟಕ್ಕೆ ಸೇರಿದರೆ ಅದಕ್ಕೆ ರಾಜಕೀಯ ಏಕೆ ಬೆರೆಸುತ್ತೀರಿ? ನಾನು ಹಲವು ವರ್ಷಗಳಿಂದ ಎಲ್ಲೂ ಹೊರಗಡೆ ಹೋಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಕುಟುಂಬದೊಂದಿಗೆ ಹೊಸ ವರುಷಕ್ಕೆ ವಿದೇಶಕ್ಕೆ ಹೋಗಿದ್ದೆ ಎಂದು ಅವರು ಹೇಳಿದ್ದಾರೆ.
ಡಿ.ಕೆ. ಶಿವಕುಮಾರ್ ಅವರು ವಿದೇಶ ಪ್ರವಾಸದಲ್ಲಿರುವಾಗ ಬೆಂಗಳೂರಲ್ಲಿ ಹೊಸ ವರ್ಷದ ಹಿನ್ನೆಲೆ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸದಲ್ಲಿ ಔತಣ ಕೂಟದ ಹೆಸರಲ್ಲಿ ರಹಸ್ಯ ಸಭೆ ನಡೆಸಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಹೆಚ್ಚುವರಿ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿ, ಸಂಪುಟ ಪುನಾರಚನೆ ಕುರಿತಂತೆ ಚರ್ಚಿಸಲಾಗಿದೆ ಎಂದು ವಂದತಿ ಹಬ್ಬಿರುವ ಹಿನ್ನಲೆ ದೆಹಲಿಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ.
ರಾಜಕೀಯ ಬೆರೆಸಬೇಡಿ
ರಾಜಕಾರಣಿಗಳು ಔತಣಕೂಟಗಳಲ್ಲಿ ಪಾಲ್ಗೊಳ್ಳುವುದು ಸಾಮಾನ್ಯ. ನಾನೂ ಕೂಡ ಆಗಾಗ ಔತಣಕೂಟ ಆಯೋಜಿಸುತ್ತೇನೆ. ಇಂಥ ವಿಚಾರಗಳಲ್ಲಿ ರಾಜಕೀಯ ಬೆರೆಸಬೇಡಿ. ಕಳೆದ ನಾಲ್ಕು ವರ್ಷದಿಂದ ಎಲ್ಲೂ ಹೊರಗೆ ಹೋಗಿರಲಿಲ್ಲ. ಹೀಗಾಗಿ ಕುಟುಂಬದ ಜೊತೆಗೆ ಹೊಸ ವರ್ಷಕ್ಕೆ ವಿದೇಶಕ್ಕೆ ತೆರಳಿದ್ದೆ. ಇತರ ಅನೇಕ ಮಂತ್ರಿಗಳು ಸಹ ವಿದೇಶ ಪ್ರವಾಸದಲ್ಲಿದ್ದಾರೆ. ಬೆಂಗಳೂರಿನಲ್ಲಿದ್ದವರು ಡಿನ್ನರ್ ಮೀಟ್‌ನಲ್ಲಿ ಭಾಗವಹಿಸಿದ್ದಾರೆ. ಅದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದ್ದಾರೆ.
ರಹಸ್ಯ ಸಭೆ ನಡೆದಿಲ್ಲ
ಸಚಿವ ಸಂಪುಟ ಪುನಾರಚನೆ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆಯ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು,‘‘ಸಭೆಯಲ್ಲಿ ಅಂತಹ ಯಾವುದೇ ಚರ್ಚೆ ನಡೆದಿಲ್ಲ. ಅದು ಊಟದ ಸಭೆಯಾಗಿತ್ತು. ಸಚಿವ ಸಂಪುಟ ಪುನಾರಚನೆ ಸಿಎಂ ಅವರ ಪರಮಾಧಿಕಾರವಾಗಿದ್ದು, ಈ ಬಗ್ಗೆ ಅವರು ಮಾತನಾಡುತ್ತಾರೆ" ಎಂದು ಅವರು ತಿಳಿಸಿದ್ದಾರೆ.