ಮೇಕೆದಾಟು; ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ತಾಕತ್ತು ಕಾಂಗ್ರೆಸ್‌ಗೆ ಇಲ್ಲ: ಹೆಚ್‌ಡಿಕೆ

ಕಾಂಗ್ರೆಸ್ ಪಕ್ಷಕ್ಕೆ ನನ್ನನ್ನು ಕಂಡರೆ ಭಯ. ನನ್ನೊಬ್ಬನ ಮೇಲೆಯೇ ಆ ಪಕ್ಷಕ್ಕೆ ಅತಿಯಾದ ಭಯವಿದೆ. ಈಗಾಗಿ ಪದೇಪದೇ ಕಾಂಗ್ರೆಸ್ ಮುಖಂಡರು ನನ್ನ ಹೆಸರನ್ನು ಜಪ ಮಾಡುತ್ತಿರುತ್ತಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು.;

Update: 2025-07-05 10:36 GMT

ಹೆಚ್‌ ಡಿ ಕುಮಾರಸ್ವಾಮಿ 

ಮೇಕೆದಾಟು ಯೋಜನೆ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಕೇವಲ ಮಾತಿನಲ್ಲೇ ಕಾಲಹರಣ ಮಾಡುತ್ತಿದೆ, ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ಶಕ್ತಿ ಅವರಿಗಿಲ್ಲ ಎಂದು ಕೇಂದ್ರ ಭಾರಿ ಕೈಗಾರಿಕೆಗಳ ಮತ್ತು ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.

ಮೈಸೂರಿನಲ್ಲಿ ಶನಿವಾರ ದಿಶಾ ಸಮಿತಿ ಸಭೆಯಲ್ಲಿ ಭಾಗವಹಿಸುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ಗೆ ತಮಿಳುನಾಡಿನ ಆಡಳಿತ ಪಕ್ಷ ಡಿಎಂಕೆಯ ಮುಲಾಜಿದೆ. ಸರ್ಕಾರಕ್ಕೆ ಶಕ್ತಿ ಇದ್ದರೆ, ತಮಿಳುನಾಡಿನಲ್ಲಿರುವ ತಮ್ಮ ಮೈತ್ರಿ ಪಕ್ಷವನ್ನು ಮೇಕೆದಾಟು ಯೋಜನೆಗೆ ಒಪ್ಪಿಸಲಿ. ನಾನು ಐದೇ ನಿಮಿಷದಲ್ಲಿ ಈ ಯೋಜನೆಗೆ ಪ್ರಧಾನಮಂತ್ರಿಗಳ ಒಪ್ಪಿಗೆ ಕೊಡಿಸುತ್ತೇನೆ. ಚುನಾವಣೆ ಸಂದರ್ಭದಲ್ಲಿ ಹೇಳಿದ್ದ ನನ್ನ ಈ ಮಾತಿಗೆ ನಾನು ಈಗಲೂ ಬದ್ಧನಾಗಿದ್ದೇನೆ" ಎಂದು ಕುಮಾರಸ್ವಾಮಿ ಪುನರುಚ್ಚರಿಸಿದರು.

ಮೇಕೆದಾಟು ಕಾಂಗ್ರೆಸ್ ಕೈಯಲ್ಲಿ ಅಸಾಧ್ಯ

"ಕಾಂಗ್ರೆಸ್‌ನವರಿಗೆ ಮಿತ್ರಪಕ್ಷದ ಮುಲಾಜು ಇದೆ. ಅವರಿಗೆ ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ಶಕ್ತಿ ಇಲ್ಲ. ಡಿಎಂಕೆ ಪಕ್ಷವನ್ನು ಎದುರು ಹಾಕಿಕೊಳ್ಳುವ ಅಥವಾ ಅವರನ್ನು ಧಿಕ್ಕರಿಸುವ ಶಕ್ತಿಯೂ ಇಲ್ಲ. ತಮಿಳುನಾಡು ಸರ್ಕಾರವನ್ನು ಧೈರ್ಯವಾಗಿ ಧಿಕ್ಕರಿಸಿ ಮೇಕೆದಾಟು ಯೋಜನೆ ಕೈಗೆತ್ತಿಕೊಂಡರೆ ಅದು ಸಾಧ್ಯವಾಗುತ್ತದೆ" ಎಂದು ಕುಮಾರಸ್ವಾಮಿ ತಿಳಿಸಿದರು.

ಮೇಕೆದಾಟು ಯೋಜನೆ ಕಾಂಗ್ರೆಸ್ ಕೈಯಲ್ಲಿ ಸಾಧ್ಯವಿಲ್ಲ ಎಂದು ಪುನರುಚ್ಚರಿಸಿದ ಅವರು, "ತಮಿಳುನಾಡು ಸರ್ಕಾರವನ್ನೇ ಒಪ್ಪಿಸದೆ ಮೇಕೆದಾಟು ಯೋಜನೆ ಕಚೇರಿ ತೆರೆದರೆ ಏನು ಪ್ರಯೋಜನ? ಮೇಕೆದಾಟು ಮಾಡುತ್ತೇವೆ ಎಂದು ಹೇಳಿದವರು ಕಾಂಗ್ರೆಸ್‌ನವರು, ನಾನಲ್ಲ. ಯೋಜನೆ ಮಾಡುತ್ತೇವೆ ಎಂದು ಹೇಳಿದವರು ಮಾಡಬೇಕು ತಾನೇ? ಮೇಕೆದಾಟು ಹೆಸರಿನಲ್ಲಿ ಪಾದಯಾತ್ರೆ ಮಾಡಿ ಅಧಿಕಾರಕ್ಕೆ ಬಂದರಲ್ಲ, ಎರಡೂವರೆ ವರ್ಷದಿಂದ ಸುಮ್ಮನೆ ಸಮಯ ಹಾಳು ಮಾಡುತ್ತಿದ್ದಾರೆ ಅಷ್ಟೇ. ಸುಮ್ಮನೆ ನನ್ನ ಮೇಲೆ ಜವಾಬ್ದಾರಿ ಹೊರಿಸಿದರೆ ನಾನು ಹೇಗೆ ಮಾಡಲು ಸಾಧ್ಯ?" ಎಂದು ಅವರು ಕಿಡಿಕಾರಿದರು.

ಕಾಂಗ್ರೆಸ್‌ಗೆ ನನ್ನ ಭಯವಿದೆ, ಅದಕ್ಕೆ ನನ್ನನ್ನೇ ಟಾರ್ಗೆಟ್ ಮಾಡುತ್ತಿದೆ

ಕಾಂಗ್ರೆಸ್ ಪಕ್ಷದವರಿಗೆ ಜನರ ಕೆಲಸ ಮಾಡುವುದಕ್ಕಿಂತ ರಾಜಕೀಯ ಮಾಡುವುದರಲ್ಲಿ ಹೆಚ್ಚು ಆಸಕ್ತಿ ಇದೆ ಎಂದು ಕುಮಾರಸ್ವಾಮಿ ಆರೋಪಿಸಿದರು. "ಕಾಂಗ್ರೆಸ್ ಪಕ್ಷಕ್ಕೆ ನನ್ನನ್ನು ಕಂಡರೆ ಭಯ. ನನ್ನೊಬ್ಬನ ಮೇಲೆಯೇ ಆ ಪಕ್ಷಕ್ಕೆ ಅತಿಯಾದ ಭಯವಿದೆ. ಈಗಾಗಿ ಪದೇಪದೇ ಕಾಂಗ್ರೆಸ್ ಮುಖಂಡರು ನನ್ನ ಹೆಸರನ್ನು ಜಪ ಮಾಡುತ್ತಿರುತ್ತಾರೆ. ಬಿಜೆಪಿ-ಜೆಡಿಎಸ್ ಜೊತೆಯಾದ ಮೇಲಂತೂ ಕಾಂಗ್ರೆಸ್ ನಾಯಕರಿಗೆ ನಿದ್ದೆಯೇ ಬರುತ್ತಿಲ್ಲ. ಈಗಾಗಿ ನನ್ನ ಮೇಲೆ ಪದೇಪದೇ ಟಾರ್ಗೆಟ್ ಮಾಡಿ ಮಾತನಾಡುತ್ತಿದ್ದಾರೆ" ಎಂದು ಅವರು ನೇರ ಆರೋಪ ಮಾಡಿದರು.

"ಮುಂದೆ ಕೂಡ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ, ಸಂತೋಷ. ಮುಂದಿನ ಐದು ವರ್ಷ ಅಲ್ಲದಿದ್ದರೆ ಐವತ್ತು ವರ್ಷ ಅವರೇ ಆಳ್ವಿಕೆ ಮಾಡಲಿ. ಮೊದಲು ಜನರು ಹೇಳಿದ ಕೆಲಸ ಮಾಡಿ. ಇಪ್ಪತ್ತು ವರ್ಷ ನಮ್ಮದೇ ಸರ್ಕಾರ ಎಂದವರು ಏನೇನಾದರೂ ಎನ್ನುವುದು ನನಗೆ ಗೊತ್ತಿದೆ. ಮುಂದೆ ಯಾರದ್ದು ಸರ್ಕಾರ ಎಂಬುದನ್ನು ಜನರೇ ತೀರ್ಮಾನ ಮಾಡುತ್ತಾರೆ. ಕಾಂಗ್ರೆಸ್‌ನಲ್ಲಿ ಸಿಎಂ ಖುರ್ಚಿಗಾಗಿ ಗಲಾಟೆಗಳೇ ನಡೆಯುತ್ತಿದೆ. ಗಲಾಟೆಯಲ್ಲಿ ಮುಳುಗಿರುವ ಕಾಂಗ್ರೆಸ್ ಪಕ್ಷವನ್ನು ಜನ ಹೇಗೆ ಒಪ್ಪುತ್ತಾರೆ? ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ" ಎಂದು ಕುಮಾರಸ್ವಾಮಿ ಟೀಕಾಪ್ರಹಾರ ನಡೆಸಿದರು.

ಸಚಿವ ಚೆಲುವರಾಯಸ್ವಾಮಿಗೆ ಕುಮಾರಸ್ವಾಮಿ ತಿರುಗೇಟು

ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ಸಂಸದನಾಗಿ ತಾನು ತಂದಿರುವ ಅನುದಾನದ ಬಗ್ಗೆ ಟೀಕೆ ಮಾಡಿರುವ ಸಚಿವ ಚೆಲುವರಾಯಸ್ವಾಮಿಗೆ ಕುಮಾರಸ್ವಾಮಿ ತಿರುಗೇಟು ನೀಡಿದರು. "ಸಚಿವ ಮಹಾಶಯರು ಮೊದಲು ಮಾಹಿತಿ ಪಡೆದುಕೊಂಡು ಮಾತಾಡಲಿ. ಕೇವಲ ಸಂಸದರ ಅನುದಾನ ತಂದಿದ್ದೇನೆ ಎಂದು ಅವರು ಹೇಳಿದ್ದಾರೆ. ನಾನು ಬರೀ ಸಂಸದರ ನಿಧಿಯಿಂದ ಹಣ ತಂದಿಲ್ಲ. ಬೇರೆ ಬೇರೆ ವಿಶೇಷ ಅನುದಾನಗಳನ್ನೇ ತಂದಿದ್ದೇನೆ. ಮಾಹಿತಿ ಇಲ್ಲದಿದ್ದರೆ ಮಾತನಾಡಬಾರದು. ನಾನು ವಿವಿಧ ಬಾಬ್ತುಗಳಿಂದ ಎಷ್ಟು ಅನುದಾನ ತಂದಿದ್ದೇನೆ ಎಂಬುದನ್ನ ಮೊದಲು ಅವರು ತಿಳಿದುಕೊಳ್ಳಲಿ. ಸಂಸದರ ಅನುದಾನ ಅಲ್ಲದೆ ಸಿಎಸ್‌ಆರ್ ಮೂಲದಿಂದಲೂ ಅನುದಾನ ತಂದಿದ್ದೇನೆ ಎಂಬುದು ಮಂಡ್ಯ ಜನತೆಗೆ ಗೊತ್ತಿದೆ. ಸಚಿವರಾದವರಿಗೆ ಮಾಹಿತಿ ಇಲ್ಲದಿದ್ದರೆ ನಾನು ಏನು ಮಾಡಲು ಸಾಧ್ಯ?" ಎಂದು ಕುಮಾರಸ್ವಾಮಿ ಹೇಳಿದರು.

ಸಚಿವರು ತಮ್ಮನ್ನು ಸಭೆಗಳಿಗೆ ಕರೆದಿಲ್ಲ ಎಂಬ ಆರೋಪಕ್ಕೆ ಸ್ಪಷ್ಟನೆ ನೀಡಿದ ಕುಮಾರಸ್ವಾಮಿ, "ನಾನು ಕೇಂದ್ರ ಸಚಿವನಾಗಿದ್ದೇನೆ. ಪೂರ್ವ ನಿಯೋಜಿತವಾಗಿ ಅನೇಕ ಸಭೆಗಳು ನಿಗದಿಯಾಗಿರುತ್ತದೆ. ಬೇರೆ ರಾಜ್ಯಗಳ ಪ್ರವಾಸಗಳು ಕೂಡ ಇರುತ್ತವೆ. ಆದರೂ ನಾನು ಮಂಡ್ಯ ಕ್ಷೇತ್ರಕ್ಕೆ ಆದ್ಯತೆಯ ಮೇರೆಗೆ ಭೇಟಿ ನೀಡುತ್ತಿದ್ದೇನೆ. ನನ್ನ ಪಾಲಿನ ಕೆಲಸಗಳನ್ನು ಯಾವುದೂ ಬಾಕಿ ಉಳಿಸಿಕೊಂಡಿಲ್ಲ. ಇವರು ತರಾತುರಿಯಲ್ಲಿ ಸಭೆಗಳಿಗೆ ಬನ್ನಿ ಎಂದು ಕರೆದಾಗ, ಅದಕ್ಕೂ ಮೊದಲೇ ನಿಗದಿಯಾಗಿರುವ ಸಭೆಗಳು ಇರುತ್ತವೆ. ಹೀಗಾಗಿ ಅವರ ಸಭೆಗಳಿಗೆ ಹೋಗಲು ಆಗಿಲ್ಲ ಅಷ್ಟೇ. ಅದರಲ್ಲಿ ಬೇರೆ ಅರ್ಥ ಹುಡುಕುವ ಅಗತ್ಯವಿಲ್ಲ" ಎಂದು ಕೇಂದ್ರ ಸಚಿವರು ಸ್ಪಷ್ಟಪಡಿಸಿದರು. 

Tags:    

Similar News