Savarkar vs Nehru : ಸುವರ್ಣಸೌಧದಲ್ಲಿ ಸಾವರ್ಕರ್, ನೆಹರೂ ಭಾವಚಿತ್ರ ಸಮರ; ಬಿಜೆಪಿಗೆ ತಿರುಗೇಟು ಕೊಟ್ಟ ಕಾಂಗ್ರೆಸ್
ಸುವರ್ಣಸೌಧದ ವಿಧಾನಸಭಾ ಸಭಾಂಗಣದಲ್ಲಿ ಜವಾಹರಲಾಲ್ ನೆಹರೂ, ಇಂದಿರಾಗಾಂಧಿ ಚಿತ್ರಗಳ ಅನಾವರಣ ಮೂಲಕ ಹಿಂದೆ ಸಾವರ್ಕರ್ ಚಿತ್ರ ಅನಾವರಣ ಮಾಡಿದ್ದ ಬಿಜೆಪಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ.;
ಸುವರ್ಣಸೌಧದ ವಿಧಾನಸಭಾ ಸಭಾಂಗಣದಲ್ಲಿ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ, ಇಂದಿರಾಗಾಂಧಿ ತೈಲಚಿತ್ರಗಳನ್ನು ಅನಾವರಣ ಮಾಡುವ ಮೂಲಕ, ಈ ಹಿಂದೆ ಸಾವರ್ಕರ್ ತೈಲವರ್ಣಚಿತ್ರ ಹಾಕಿದ್ದ ಬಿಜೆಪಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ತಿರುಗೇಟು ಕೊಟ್ಟಿದೆ.
ರಾಜ್ಯದಲ್ಲಿ ಹಿಂದೆ ಬಿಜೆಪಿ ಸರ್ಕಾರದ ಆಡಳಿತವಿದ್ದಾಗ, ಕಾಂಗ್ರೆಸ್ ಪಕ್ಷದ ವಿರೋಧದ ಹೊರತಾಗಿಯೂ ಬೆಳಗಾವಿ ಸುವರ್ಣಸೌಧದ ವಿಧಾನಸಭಾ ಸಭಾಂಗಣದಲ್ಲಿ ಸ್ವಾತಂತ್ರ್ಯ ಹೋರಾಟಗಾರ, ಬಲಪಂಥೀಯ ನಾಯಕ ವಿನಾಯಕ ದಾಮೋದರ ಸಾವರ್ಕರ್ ತೈಲಚಿತ್ರ ಅನಾವರಣ ಮಾಡಲಾಗಿತ್ತು. ಹಾಲಿ ಸಂಸದರಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭೆಯ ಸ್ಪೀಕರ್ ಆಗಿದ್ದಾಗ ಸಾವರ್ಕರ್ ಭಾವಚಿತ್ರ ಅನಾವರಣ ನಡೆದಿತ್ತು.
2022ರ ಡಿಸೆಂಬರ್ 19 ರಂದು ಅಸೆಂಬ್ಲಿ ಹಾಲ್ನಲ್ಲಿ ಮಹಾತ್ಮ ಗಾಂಧೀಜಿ, ಡಾ. ಅಂಬೇಡ್ಕರ್, ನೇತಾಜಿ ಸುಭಾಷ್ ಚಂದ್ರ ಬೋಸ್, ಸರ್ದಾರ್ ವಲ್ಲಭ್ ಬಾಯ್ ಪಟೇಲ್, ಸ್ವಾಮಿ ವಿವೇಕಾನಂದ ಹಾಗೂ ಬಸವಣ್ಣನವರ ಫೋಟೋಗಳನ್ನೂ ಅಂದು ಅನಾವರಣ ಮಾಡಲಾಗಿತ್ತು. ಅಂದು ವಿಧಾನಸಭೆ ಕಲಾಪ ಆರಂಭವಾಗುವ ಮುನ್ನ ಕಾರ್ಯಕ್ರಮ ನಡೆದಿತ್ತು.
ಆ ಸಂದರ್ಭದಲ್ಲಿ ಸಾವರ್ಕರ್ ಫೋಟೊ ಅನಾವರಣಕ್ಕೆ ಕಾಂಗ್ರೆಸ್ ನೇರವಾಗಿ ವಿರೋಧ ವ್ಯಕ್ತಪಡಿಸಿರಲಿಲ್ಲ. ಆದರೆ ತಮಗೆ ಭಾವಚಿತ್ರ ಅನಾವರಣ ಕಾರ್ಯಕ್ರಮಕ್ಕೆ ಆಹ್ವಾನ ನೀಡಿಲ್ಲ ಎಂದು ಆಗ ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ನೇತೃತ್ವದಲ್ಲಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಶಾಸಕರು ಸುವರ್ಣಸೌಧದ ಮೆಟ್ಟಿಲುಗಳ ಮೇಲೆ ಧರಣಿ ನಡೆಸುವ ಮೂಲಕ ಕಾರ್ಯಕ್ರಮ ಬಹಿಷ್ಕರಿಸಿದ್ದರು.
ಅಂದಿನ ಬಿಜೆಪಿ ಸರ್ಕಾರದ ನಡೆಗೆ ಎರಡು ವರ್ಷಗಳ ಕಾಲ ಕಾದಿದ್ದ ಕಾಂಗ್ರೆಸ್, ಇಂದು ಅಂದರೆ ( 2024ರ ಡಿಸೆಂಬರ್ 16 ರಂದು) ಅಸೆಂಬ್ಲಿ ಹಾಲ್ನಲ್ಲಿ ಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರು, ಇಂದಿರಾಗಾಂಧಿ, ಡಾ. ಅಂಬೇಡ್ಕರ್, ಸುಭಾಷ್ ಚಂದ್ರ ಬೋಸ್, ಬಾಬು ರಾಜೇಂದ್ರ ಪ್ರಸಾದ್, ಸ್ವಾಮಿ ವಿವೇಕಾನಂದ ಹಾಗೂ ಸ್ವಂತಂತ್ರ ಭಾರತದ ಮೊದಲ ಶಿಕ್ಷಣ ಸಚಿವ ಮೌಲಾನಾ ಅಬ್ದುಲ್ ಕಲಾಂ ಅಜಾದ್ ಭಾವಚಿತ್ರಗಳ ಅನಾವರಣ ಮಾಡಿ ತಿರುಗೇಟು ಕೊಟ್ಟಿದೆ.
ಡಿಸೆಂಬರ್ 15ರಂದು ಸೋಮವಾರ ವಿಧಾನಸಭಾ ಕಲಾಪ ಆರಂಭ ಗಣ್ಯರ ಭಾವಚಿತ್ರ ಸನಾವರಣ ಮಾಡಲು ಮೊದಲು ತೀರ್ಮಾನಿಸಲಾಗಿತ್ತು. ಆದರೆ ಕಲಾಪದ ಮೊದಲು ತಮ್ಮ ನಿರ್ಧಾರ ಬದಲಿಸಿದ ಸ್ಪೀಕರ್ ಯು.ಟಿ. ಖಾದರ್ ಮಧ್ಯಾಹ್ನ 3 ಗಂಟೆಗೆ ಭಾವಚಿತ್ರ ಅನಾವರಣ ಕಾರ್ಯಕ್ರಮ ಮುಂದೂಡಿದ್ದರು. ಇದೀಗ ಭಾವಚಿತ್ರ ಅನಾವರಣ ಮಾಡಲಾಗಿದೆ.
ಭಾರತದ ಪ್ರಥಮ ರಾಷ್ಟ್ರಪತಿ ಡಾ. ಬಾಬು ರಾಜೇಂದ್ರಪ್ರಸಾದ್, ಪ್ರಥಮ ಪ್ರಧಾನಿ ಜವಹರಲಾಲ್ ನೆಹರು, ಪ್ರಥಮ ಶಿಕ್ಷಣ ಸಚಿವ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಹಾಗೂ ಪ್ರಥಮ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಅವರ ತೈಲ ಕಲಾಕೃತಿಗಳನ್ನು ಅನಾವರಣ ಮಾಡಲಾಗಿದೆ. ಜೊತೆಗೆ ಡಾ. ಬಿ.ಆರ್. ಅಂಬೇಡ್ಕರ್, ಸ್ವಾಮಿ ವಿವೇಕಾನಂದ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮರು ವಿನ್ಯಾಸಗೊಂಡ ಭಾವಚಿತ್ರಗಳನ್ನು ಅನಾವರಣ ಮಾಡಲಾಯಿತು.
ಸ್ಪೀಕರ್ ಯು.ಟಿ. ಖಾದರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು ತೈಲವರ್ಣ ಕಲಾಕೃತಿಗಳನ್ನು ಅನಾವರಣ ಮಾಡಿದರು. ಡಿಸಿಎಂ ಡಿ.ಕೆ. ಶಿವಕುಮಾರ್, ವಿಪಕ್ಷ ನಾಯಕ ಆರ್. ಅಶೋಕ್, ಸಂಸದೀಯ ವ್ಯವಹಾರಗಳ ಇಲಾಖೆ ಸಚಿವ ಹೆಚ್.ಕೆ. ಪಾಟೀಲ್ ಉಪಸ್ಥಿತರಿದ್ದರು.
ನೆಹರು ಭಾವಚಿತ್ರ ಹಾಕಲು ನಿರಾಕರಿಸಿದ್ದ ಬಿಜೆಪಿ
2022ರಲ್ಲಿ ಭಾರತದ ಮೊದಲ ಪ್ರಧಾನಿ ಪಂ. ನೆಹರು ಭಾವಚಿತ್ರವನ್ನು ಸುವರ್ಣಸೌಧದ ಅಸೆಂಬ್ಲಿ ಹಾಲ್ನಲ್ಲಿ ಹಾಕಲು ಅಂದಿನ ಸ್ಪೀಕರ್ ಕಾಗೇರಿ ನಿರಾಕರಿಸಿದ್ದರು. ಬಿಜೆಪಿಯ ತೀರ್ಮಾನವನ್ನು ಸ್ಪೀಕರ್ ಪಾಲನೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಧರಣಿ ನಡೆಸಿದ್ದರು.
ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸುವರ್ಣಸೌಧದ ವಿಧಾನಸಭೆ ಸಭಾಂಗಣದಿಂದ ಸಾವರ್ಕರ್ ಭಾವಚಿತ್ರವನ್ನು ತೆಗೆಯಬಹುದು ಎಂಬ ಚರ್ಚೆಗಳು ಶುರುವಾಗಿದ್ದವು. ಹಾಗೆ ಮಾಡದ ಮುಖ್ಯಮಂತ್ರಿ ಸಿದ್ದರಾಮಯ್ಯ, 'ಬಿಜೆಪಿಯಂತೆ ನಾವು ರಾಜಕೀಯ ಮಾಡುವುದಿಲ್ಲ, ಯಾರದ್ದೆ ಭಾವಚಿತ್ರವನ್ನು ಸಭಾಂಗಣದಿಂದ ತೆಗೆಯುವುದಿಲ್ಲ' ಎಂಬ ಸ್ಪಷ್ಟನೆಯನ್ನು ಕೊಟ್ಟಿದ್ದರು. ನಂತರ ಯಾವುದೇ ಭಾವಚಿತ್ರವನ್ನು ಸುವರ್ಣಸೌಧದ ವಿಧಾನಸಭಾ ಸಭಾಂಗಣದಿಂದ ತೆಗೆದಿರಲಿಲ್ಲ.
ಎಲ್ಲ ದ್ವಾರಗಳನ್ನು ಮುಚ್ಚಿ ಸಾವರ್ಕರ್ ಭಾವಚಿತ್ರ ಅನಾವರಣ
ವಿಧಾನಸಭೆ ಸಭಾಂಗಣದ ಎಲ್ಲಾ ದ್ವಾರಗಳನ್ನು ಬಂದ್ ಮಾಡಿ ಸಾವರ್ಕರ್ ಭಾವಚಿತ್ರವನ್ನು ಅಂದಿನ ಸ್ಪೀಕರ್ ಕಾಗೇರಿ ಅನಾವರಣ ಮಾಡಿದ್ದರು. ಸಾವರ್ಕರ್ ಸೇರಿ 7 ಗಣ್ಯರ ಭಾವಚಿತ್ರಗಳನ್ನು ಅನಾವರಣ ಮಾಡಲಾಗಿತ್ತು. ವಿಧಾನಸಭೆ ಸಭಾಂಗಣದ ಎಲ್ಲ ಬಾಗಿಲುಗಳನ್ನು ಮುಚ್ಚಿದ ನಂತರ ಸ್ಪೀಕರ್ ಅಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ, ಆಗ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅನಾವರಣಗೊಳಿಸಿದ್ದರು. ಆಗ ಕಾನೂನು ಸಚಿವರಾಗಿದ್ದ ಜೆ.ಸಿ.ಮಾಧುಸ್ವಾಮಿ, ಸಚಿವರಾಗಿದ್ದ ಗೋವಿಂದ ಕಾರಜೋಳ, ಸಿ.ಸಿ. ಪಾಟೀಲ್, ಕೋಟ ಶ್ರೀನಿವಾಸ ಪೂಜಾರಿ, ನಾರಾಯಣಗೌಡ, ಭೈರತಿ ಬಸವರಾಜ್, ಪ್ರಭು ಚೌವ್ಹಾಣ್ ಉಪಸ್ಥಿತರಿದ್ದರು.
ಕರ್ನಾಟಕಕ್ಕೆ ಸಾವರ್ಕರ್ ಕೊಡುಗೆ ಪ್ರಶ್ನಿಸಿದ್ದ ಡಿ.ಕೆ. ಶಿವಕುಮಾರ್
ವಿಧಾನಸಭೆ ಸಭಾಂಗಣದಲ್ಲಿ ಸಾವರ್ಕರ್ ಭಾವಚಿತ್ರ ಅನಾವರಣವನ್ನು ಪ್ರಶ್ನಿಸಿದ್ದ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಿ.ಕೆ. ಶಿವಕುಮಾರ್, ‘ಸಾವರ್ಕರ್’ಗು ಕರ್ನಾಟಕಕ್ಕೂ ಏನು ಸಂಬಂಧ? ಎಂದು ಪ್ರಶ್ನೆ ಮಾಡಿದ್ದರು.
ಆದೇ ಸಂದರ್ಭದಲ್ಲಿ ಅಂದರೆ 2022ರ ಡಿಸೆಂಬರ್ 29ರಂದು ಬೆಳಗಾವಿ ಹಿಂಡಲಗಾ ಜೈಲಿನಲ್ಲಿಯೂ ಸಾವರ್ಕರ್ ಭಾವಚಿತ್ರವನ್ನು ಅಳವಡಿಸುವ ಮೂಲಕ ಅಂದಿನ ಗೃಹ ಸಚಿವ ಆರಗ ಜ್ಞಾನೇಂದ್ರ ಕರ್ನಾಟಕಕ್ಕೂ ಸಾವರ್ಕರ್ ಅವರಿಗೂ ಸಂಬಂಧವಿದೆ ಎಂದಿದ್ದರು.
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ವಿಚಾರಣಾಧೀನ ಕೈದಿಯಾಗಿ ಸಾವರ್ಕರ್ 100 ದಿನ ಹಿಂಡಲಗಾ ಜೈಲಿನಲ್ಲಿ ಸೆರೆವಾಸ ಅನುಭವಿಸಿದ್ದರು. ಸ್ವಾತಂತ್ರ್ಯಾನಂತರ ಪಾಕಿಸ್ತಾನ ಪ್ರಧಾನಿ ಲಿಯಾಕತ್ ಅಲಿ ಖಾನ್ ಭಾರತ ಭೇಟಿ ವಿರೋಧಿಸಿದ್ದ ಕಾರಣಕ್ಕಾಗಿ 1950ರ ಏಪ್ರಿಲ್ 4ರಂದು ಬೆಳಗಾವಿ ಹಿಂಡಲಗಾ ಜೈಲು ಸೇರಿದ್ದರು.
ನಂತರ ಮುಂಬೈ ಹೈಕೋರ್ಟ್ಗೆ ಸಾವರ್ಕರ್ ಪುತ್ರ ಹೆಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ ನಂಗತರ ನಂತರ ಜುಲೈ 13, 1950ರಂದು ಸಾವರ್ಕರ್ ಬಿಡುಗಡೆ ಆಗಿದ್ದರು. ಬಳಿಕ ಸಾವರ್ಕರ್ ಅವರನ್ನು ಅದ್ಧೂರಿಯಾಗಿ ಸ್ಥಳೀಯ ನಾಯಕರು ಬರಮಾಡಿಕೊಂಡಿದ್ದರು. 1950ರ ಏಪ್ರಿಲ್ 4 ರಿಂದ ಜುಲೈ 13 ವರೆಗೆ ವಿಚಾರಣಾದೀನ ಖೈದಿಯಾಗಿ ಹಿಂಡಲಗಾ ಜೈಲಿನಲ್ಲಿ ಸಾವರ್ಕರ್ ಇಲ್ಲಿದ್ದರು ಎಂಬ ಕಾರಣಕ್ಕಾಗಿ ಭಾವಚಿತ್ರ ಅಳವಡಿಕೆ ಮಾಡಲಾಗುತ್ತಿದೆ ಎಂಬ ಸ್ಪಷ್ಟನೆಯನ್ನು ಆರಗ ಕೊಟ್ಟಿದ್ದರು.
ಈಗ ಮತ್ತೊಮ್ಮೆ ಫೋಟೋ ಫೈಟ್?
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಜಕೀಯ ತಂತ್ರಗಾರಿಕೆಯಿಂದಲೇ ಕಾಂಗ್ರೆಸ್ ಸರ್ಕಾರ ಬಿಜೆಪಿಗೆ ತಿರುಗೇಟು ಕೊಟ್ಟಿದೆ. ಈ ಹಿಂದೆ ಸಾವರ್ಕರ್ ಫೋಟೊ ಹಾಕಿದ್ದಾಗಲೂ ರಾಜಕೀಯ ಜಾಣ್ಮೆಯನ್ನು ಕಾಂಗ್ರೆಸ್ ನಾಯಕರು ಅನುಸರಿಸಿದ್ದರು. ಈಗ ಸಾವರ್ಕರ್ ಫೋಟೊವನ್ನು ತೆರವುಗೊಳಿಸದೆ, ಪಂ. ನೆಹರು ಭಾವಚಿತ್ರ ಸೇರಿದಂತೆ 7 ಮಹನೀಯರ ಫೋಟೊಗಳನ್ನು (ಗಾಂಧೀಜಿ, ಅಂಬೇಡ್ಕರ್, ಸುಭಾಶ್ಚಂದ್ರ ಬೋಸ್ ಅವರ ಹೊಸ ಚಿತ್ರಗಳನ್ನು ಅಳವಡಿಸಲಾಗಿದೆ) ವಿಧಾನಸಭೆ ಸಭಾಂಗಣದಲ್ಲಿ ಹಾಕಲಾಗಿದೆ. ಹಿಂದಿನಂತೆಯೆ ರಾಜಕೀಯವಾಗಿ ಜಾಣ್ಮೆಯ ನಡೆಯನ್ನು ರಾಜ್ಯ ಕಾಂಗ್ರೆಸ್ ನಾಯಕರು ಇಟ್ಟಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಬಸವಣ್ಣನ ಅನುಭವ ಮಂಟಪದ ತೈಲಚಿತ್ರವನ್ನು ಸುವರ್ಣಸೌಧದಲ್ಲಿ ಅನಾವರಣ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ಗಮನ ಸೆಳೆದಿತ್ತು. ಈ ಎಲ್ಲ ಬೆಳವಣಿಗೆಗಳಿಗೆ ಬಿಜೆಪಿ ಯಾವ ರೀತಿ ಪ್ರತಿಕ್ರಿಯೆ ಕೊಡಬಹುದು? ಎಂಬುದು ಕುತೂಹಲ ಮೂಡಿಸಿದೆ.