ಜಾತಿ ಗಣತಿ-2025|ಮೀಸಲಾತಿ ಪರಿಗಣನೆ: ರಾಜ್ಯಪತ್ರ ಗೊಂದಲದಿಂದ ದಲಿತ ಬೌದ್ಧರಿಗೆ ʼಧರ್ಮಾತಂಕʼ

2001 ರಿಂದ ರಾಜ್ಯದ ಬೌದ್ಧರ ಜನಸಂಖ್ಯೆಯಲ್ಲಿ 76 ಪ್ರತಿಶತ ಕುಸಿತ ಕಂಡುಬಂದಿದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಬೌದ್ಧ ಜನಸಂಖ್ಯೆಯು ಹೊಲೆಯ, ಆದಿ-ಕರ್ನಾಟಕ, ಮಹಾರ್, ಮಾದಿಗ ಸಮುದಾಯದಿಂದ ಮತಾಂತರವಾದವರು.

Update: 2025-09-24 03:52 GMT
Click the Play button to listen to article

ಅವ್ಯವಸ್ಥೆಯ ನಡುವೆಯೇ ಪ್ರಾರಂಭವಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿಗಣತಿ)ಯಲ್ಲಿ ಪಾಲ್ಗೊಳ್ಳಲು ಬೌದ್ಧ ಧರ್ಮಕ್ಕೆ ಮತಾಂತರಗೊಂಡ ದಲಿತ ಸಮುದಾಯವು ಹಿಂದೇಟು ಹಾಕುತ್ತಿದೆ.  ಮೀಸಲಾತಿ ಕೈ ತಪ್ಪುವ ಭಯವೇ ಇದಕ್ಕೆ ಪ್ರಮುಖ‌ ಕಾರಣವಾಗಿದೆ.

ಬೌದ್ಧಧರ್ಮಕ್ಕೆ ಎಸ್‌ಸಿ/ಎಸ್‌ಟಿ ಸಮುದಾಯದವರು ಮತಾಂತರಗೊಂಡಿದ್ದಾರೆ. ಆದರೆ, ಎಸ್‌ಟಿ ಸಮುದಾಯಕ್ಕಿಂತ ಎಸ್‌ಸಿ ಸಮುದಾಯದವರೇ ಹೆಚ್ಚಾಗಿ ಮತಾಂತರವಾಗಿದ್ದಾರೆ. ಆದರೆ ಸಮೀಕ್ಷೆಯಲ್ಲಿ ಧರ್ಮದ ಕಲಂನಲ್ಲಿ ಬೌದ್ಧಧರ್ಮ ಎಂದು ನಮೂದಿಸಲು ಮೀನಮೇಷ ಎಣಿಸುತ್ತಿದ್ದಾರೆ. ಮೀಸಲಾತಿ ಕೈತಪ್ಪುವ ಆತಂಕದಿಂದಾಗಿ ಎಸ್‌ಸಿ ಸಮುದಾಯದ ಜತೆಗೆ ಹಿಂದೂ ಧರ್ಮವೆಂದೇ ಬರೆಸಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ. 

ಸಂವಿಧಾನದಿಂದ‌ ಮನ್ನಣೆ,‌ ಆದರೆ...

ಹಿಂದೂ ಧರ್ಮದಿಂದ ಬೌದ್ಧಧರ್ಮಕ್ಕೆ ಮತಾಂತರಗೊಂಡರೂ ಮೀಸಲಾತಿ ಕಲ್ಪಿಸುವ ಸಂಬಂಧ ಸಂವಿಧಾನದಲ್ಲಿಯೇ ತಿದ್ದುಪಡಿಯಾಗಿದೆ. ಬೌದ್ಧ ಮತ್ತು ಸಿಖ್‌ ಧರ್ಮಕ್ಕೆ ಮತಾಂತರಗೊಂಡ ಎಸ್‌ಸಿ/ಎಸ್‌ಟಿ ಸಮುದಾಯವರಿಗೆ ಮೀಸಲಾತಿ ರದ್ದಾಗುವುದಿಲ್ಲ ಎಂದು ಸಂವಿಧಾನಕ್ಕೆ ತಿದ್ದುಪಡಿ ಮಾಡಲಾಗಿದೆ. ಅಲ್ಲದೇ, ಕೇಂದ್ರ ಸರ್ಕಾರವು ಗೆಜೆಟ್‌ ನೊಟಿಫೀಕೇಷನ್‌ ಮಾಡಿದೆ.

ರಾಜ್ಯ ಸರ್ಕಾರಗಳು ಸಹ ತಮ್ಮ ವ್ಯಾಪ್ತಿಗೆ ಸಂಬಂಧಪಟ್ಟಂತೆ ರಾಜ್ಯಪತ್ರವನ್ನು ಹೊರಡಿಸಬೇಕು. ಆದರೆ, 35 ವರ್ಷಗಳೇ ಕಳೆದರೂ ರಾಜ್ಯ ಸರ್ಕಾರ ಮಾತ್ರ ಈ ಬಗ್ಗೆ ರಾಜ್ಯಪತ್ರ ಹೊರಡಿಸಿಲ್ಲ. ಕೇವಲ ಸಮಾಜ ಕಲ್ಯಾಣ ಇಲಾಖೆಯ ಆದೇಶದ ಮೇರೆಗೆ ಬೌದ್ಧ ಧರ್ಮಕ್ಕೆ ಮತಾಂತರಗೊಂಡರೂ ಎಸ್‌ಸಿ/ಎಸ್‌ಟಿ ಎಂದು ಪ್ರಮಾಣ ಪತ್ರ ನೀಡಲಾಗುತ್ತಿದೆ. ಆದರೆ, ಈ ಬಗ್ಗೆ ಯಾರಾದರೂ ನ್ಯಾಯಾಲಯದಲ್ಲಿ ಪ್ರಶ್ನಿಸಿದರೆ ಸಮಸ್ಯೆಯಾಗಲಿದೆ. ಈ ಆತಂಕವು ದಲಿತ ಸಮುದಾಯದಲ್ಲಿ ಮನೆ ಮಾಡಿದೆ. 

ಸಂವಿಧಾನದಲ್ಲಿ ಬೌದ್ಧಧರ್ಮ ಅಥವಾ ಸಿಖ್‌ ಧರ್ಮಕ್ಕೆ ಮತಾಂತರಗೊಳ್ಳುವ ದಲಿತ ಸಮುದಾಯಕ್ಕೆ ಮೀಸಲಾತಿ ಮುಂದುವರಿಯಲಿದೆ ಎಂಬ ಉಲ್ಲೇಖವಿದ್ದರೂ ಕರ್ನಾಟಕ ರಾಜ್ಯ ಸರ್ಕಾರ ಮಾತ್ರ ಆಡಳಿತ ಸುಧಾರಣಾ ಇಲಾಖೆಯಿಂದ (ಡಿಪಿಎಆರ್‌) ಅಧಿಕೃತ ಆದೇಶ ಹೊರಡಿಸಿ, ರಾಜ್ಯಪತ್ರ ಪ್ರಕಟವಾಗುವಂತೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕಾರಣಕ್ಕಾಗಿ ಬೌದ್ಧಧರ್ಮಕ್ಕೆ ಮತಾಂತರವಾಗಿರುವ ದಲಿತ ಸಮುದಾಯದವರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಬೌದ್ಧ ಧರ್ಮಕ್ಕೆ ಸೇರ್ಪಡೆಯಾಗಿರುವ ಬಗ್ಗೆ ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಮೀಸಲಾತಿ ಕೈತಪ್ಪುವ ಭೀತಿಯಿಂದಾಗಿ ಹಿಂದೂ ಧರ್ಮದವರು ಎಂದು ನಮೂದಿಸಲು ಮುಂದಾಗಿದ್ದಾರೆ ಎಂದು ಮೂಲಗಳು ಹೇಳಿವೆ. 

ಕೇಂದ್ರದಿಂದಲೇ ಸಂವಿಧಾನಕ್ಕೆ ತಿದ್ದುಪಡಿ

ಬೌದ್ಧ ಧರ್ಮಕ್ಕೆ ಸೇರಿದ ಪರಿಶಿಷ್ಟ ವ್ಯಕ್ತಿಗಳಿಗೆ ಮೀಸಲಾತಿ ಸೌಲಭ್ಯಗಳು ಲಭ್ಯವಿವೆ. 1950 ರ ಸಂವಿಧಾನ ಆದೇಶದ ಪ್ರಕಾರ, ಹಿಂದು, ಸಿಖ್ ಅಥವಾ ಬೌದ್ಧ ಧರ್ಮಗಳಿಗೆ ಸೇರಿದ ಪರಿಶಿಷ್ಟ ಜಾತಿಯವರು ಮೀಸಲಾತಿ ಸೌಲಭ್ಯಗಳನ್ನು ಪಡೆಯಲು ಅರ್ಹರು. ಈ ಆದೇಶವು ಆರಂಭದಲ್ಲಿ ಹಿಂದೂ ಧರ್ಮಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ, 1956 ರಲ್ಲಿ ಸಿಖ್ಖರನ್ನು ಮತ್ತು 1990 ರಲ್ಲಿ ಬೌದ್ಧರನ್ನು ಸೇರಿಸುವ ಮೂಲಕ ಇದನ್ನು ತಿದ್ದುಪಡಿ ಮಾಡಲಾಗಿದೆ. ಬೌದ್ಧ ಧರ್ಮಕ್ಕೆ ಮತಾಂತರಗೊಂಡ ದಲಿತ ಸಮುದಾಯದವರಿಗೆ ಮೀಸಲಾತಿ ಸೌಲಭ್ಯಗಳು ಲಭ್ಯವಿದೆ. ಇದರಿಂದಾಗಿ, ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮಗಳಿಗೆ ಮತಾಂತರಗೊಂಡ ಪರಿಶಿಷ್ಟ ವ್ಯಕ್ತಿಗಳು ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಯನ್ನು ಪಡೆಯಲು ಅರ್ಹರಾಗಿರುತ್ತಾರೆ. ಆದರೆ, ಕ್ರಿಶ್ಚಿಯನ್ ಅಥವಾ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡವರೆ ದಲಿತರು ಎಂದು ಪರಿಗಣಿಸುವುದಿಲ್ಲ ಎಂದು ಹೇಳಲಾಗಿದೆ. 

ಕರ್ನಾಟಕ ಸರ್ಕಾರದಲ್ಲಿ ಆದೇಶದಲ್ಲಿ ಏನಿದೆ? 

ಪರಿಶಿಷ್ಟ ಜಾತಿಯವರು ಬೌದ್ಧಧರ್ಮಕ್ಕೆ ಮತಾಂತರಗೊಂಡರೆ ಅಂತಹವರು ಪರಿಶಿಷ್ಟ ಜಾತಿಯವರೆಂದು ಪರಿಗಣಿಸಿ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆ 2013ರಲ್ಲಿ ಸುತ್ತೋಲೆ ಹೊರಡಿಸಿದೆ. ಕೇಂದ್ರ ಸರ್ಕಾರದ ಆದೇಶದನ್ವಯ ಷರತ್ತುಗಳಿಗೊಳಪಟ್ಟು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವ ಬಗ್ಗೆ ತಹಶೀಲ್ದಾರ್‌  ಮತ್ತು ಕಂದಾಯಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಲಾಗಿದೆ.  ಬೌದ್ಧ ಸಂಘಟನೆಯ ಹಲವಾರು ಸಂಘ-ಸಂಸ್ಥೆಗಳು ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿ,  ಪರಿಶಿಷ್ಟ ಜಾತಿ ಪ್ರಮಾಣ ಪತ್ರಗಳನ್ನು ನೀಡುತ್ತಿಲ್ಲವೆಂದು ತಿಳಿಸಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಪರಿಶಿಷ್ಟ ಜಾತಿಯವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲು ಮತ್ತು ಧರ್ಮದ ಕಾಲಂನಲ್ಲಿ "ಬೌದ್ಧರು" ಎಂದು ನಮೂದಿಸಿ ಪ್ರಮಾಣ ಪತ್ರ ನೀಡಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿದ್ದಾರೆ. ಕೇಂದ್ರ ಸರ್ಕಾರ ನೀಡಿರುವ ಆದೇಶದಂತೆ ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿದಲ್ಲಿ ಅಂತಹವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲು ಮತ್ತು ಧರ್ಮದ ಕಾಲಂನಲ್ಲಿ ಬೌದ್ಧ ಧರ್ಮ ಎಂದು ನಮೂದಿಸಲು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಲಾಗಿದೆ. 

ದಲಿತ ಬೌದ್ಧರಿಗೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆಯ ಆದೇಶ

ಸಮಾಜ ಕಲ್ಯಾಣ ಇಲಾಖೆಯಿಂದ ಸುತ್ತೊಲೆ ಹೊರಡಿಸಲಾಗಿದ್ದರೂ, ಸರ್ಕಾರವು ರಾಜ್ಯಪತ್ರ ಹೊರಡಿಸಿಲ್ಲ. ಇದು ಗೊಂದಲಕ್ಕೆ ಕಾರಣವಾಗಿದೆ. ಅಲ್ಲದೇ, ಕೆಲವು ಅಧಿಕಾರಿಗಳು ಬೌದ್ಧಧರ್ಮಕ್ಕೆ ಮತಾಂತರಗೊಂಡ ದಲಿತರಿಗೆ ಎಸ್‌ಸಿ ಜಾತಿ ಪ್ರಮಾಣ ಪತ್ರ ನೀಡಲು ತಕರಾರು ಮಾಡುತ್ತಿದ್ದಾರೆ. ಬಹಳಷ್ಟು ಅಧಿಕಾರಿಗಳಿಗೆ ಸಂವಿಧಾನದ ತಿದ್ದುಪಡಿಯ ಜ್ಞಾನವೂ ಇಲ್ಲವಾಗಿದೆ. ಇನ್ನು ಕೆಲವು ಅಧಿಕಾರಿಗಳು ರಾಜ್ಯಪತ್ರ ಹೊರಡಿಸಿಲ್ಲ ಎಂಬ ನೆಪವೊಡ್ಡಿ ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲ ಎಂದು ಹೇಳಲಾಗಿದೆ. ಈ ಕಾರಣಕ್ಕಾಗಿ ಬೌದ್ಧಧರ್ಮ ಎಂದು ನಮೂದಿಸಲು ಹಿಂದೇಟು ಹಾಕಲಾಗುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ. 

ಸಮೀಕ್ಷೆಯಲ್ಲಿ ಬೌದ್ಧಧರ್ಮ ಬರೆಸಲು ಮನವಿ 

ರಾಜ್ಯ ಸರ್ಕಾರ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಬೌದ್ಧಧರ್ಮಕ್ಕೆ ಮತಾಂತರಗೊಂಡ ದಲಿತ ಸಮುದಾಯವರು ಧೈರ್ಯವಾಗಿ  ಧರ್ಮದ ಕಲಂನಲ್ಲಿ ಬೌದ್ಧಧರ್ಮ ಎಂದು ಬರೆಸಬಹುದು. ಅವರಿಗೆ ಮೀಸಲಾತಿ ಕೈ ತಪ್ಪುವುದಿಲ್ಲ. ಸಂವಿಧಾನದಲ್ಲಿಯೇ ತಿದ್ದುಪಡಿಯಾಗಿದ್ದು, ಹಿಂಜರಿಕೆಯ ಅಗತ್ಯ ಇಲ್ಲ. ಮುಂದಿನ ದಿನದಲ್ಲಿ ರಾಜ್ಯಪತ್ರ ಹೊರಡಿಸುವ ಬಗ್ಗೆ ಸರ್ಕಾರದ ಜತೆ ಮಾತುಕತೆ ನಡೆಸಲಾಗುವುದು ಎಂದು ದಲಿತ ಮುಖಂಡರು ತಿಳಿಸಿದ್ದಾರೆ. 

ದ ಫೆಡರಲ್‌ ಕರ್ನಾಟಕ ಜತೆ ಮಾತನಾಡಿದ ದಲಿತ ಮುಖಂಡ ಮಾವಳ್ಳಿ ಶಂಕರ್‌, ಬೌದ್ಧ ಅಥವಾ ಸಿಖ್‌ ಸಮುದಾಯಕ್ಕೆ ಮತಾಂತರಗೊಂಡ ದಲಿತ ಸಮುದಾಯಕ್ಕೆ ಮೀಸಲಾತಿ ಮುಂದುವರಿಯುತ್ತದೆ. ಹೀಗಾಗಿ ಸಮೀಕ್ಷೆಯಲ್ಲಿ ಬೌದ್ಧಧರ್ಮ ಎಂದು ಬರೆಸಬಹುದು. ಈ ಬಗ್ಗೆ ದಲಿತ ಸಮದಾಯದಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯ ಇದೆ. ಬಹಳಷ್ಟು ಮಂದಿಗೆ ಅರಿವಿನ ಕೊರತೆಯಿಂದಾಗಿ ಬೌದ್ಧಧರ್ಮ ಎಂದು ಬರೆಸಲು ಹಿಂದೇಟು ಹಾಕುತ್ತಿದ್ದಾರೆ.

ದಲಿತರಲ್ಲಿ ಅರಿವು ಇಲ್ಲದ ಕಾರಣ ಸಮೀಕ್ಷೆಯಲ್ಲಿ ಬೌದ್ಧಧರ್ಮ ಎಂದು ನಮೂದಿಸಲು ಗೊಂದಲ ಉಂಟಾಗಿದೆ. ಬೌದ್ಧಧರ್ಮಕ್ಕೆ ಮತಾಂತರಗೊಂಡರೂ ಹಿಂದೂ ಧರ್ಮ ಎಂದು ಬರೆಸಲಾಗುತ್ತಿದೆ. ಮೀಸಲಾತಿ ಕೈ ತಪ್ಪಲಿದೆ ಎಂಬ ಕಾರಣಕ್ಕಾಗಿ ಹೀಗೆ ಬರೆಸಲಾಗುತ್ತಿದೆ. ಬೌದ್ಧಧರ್ಮ ಎಂದು ಬರೆಸಿದರೆ ಯಾವುದೇ ಸಮಸ್ಯೆಯಾಗುವುದಿಲ್ಲ. ಹೀಗಾಗಿ ಬೌದ್ಧಧರ್ಮಕ್ಕೆ ಮತಾಂತರಗೊಂಡ ದಲಿತರು ಧೈರ್ಯವಾಗಿ ಬೌದ್ಧಧರ್ಮ ಎಂದು ಬರೆಸಬಹುದು. ಇನ್ನು, ರಾಜ್ಯಪತ್ರದಲ್ಲಿ ಹೊರಡಿಸುವ ಬಗ್ಗೆ ಸರ್ಕಾರದ ಜತೆ ಮಾತುಕತೆ ನಡೆಸಲಾಗುವುದು ಎಂದು ತಿಳಿಸಿದರು. 

ಎಸ್‌ಸಿ/ಎಸ್‌ಟಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಚಂದ್ರಶೇಖರಯ್ಯ ದ ಫೆಡರಲ್‌ ಕರ್ನಾಟಕದ ಜತೆ ಮಾತನಾಡಿ, ರಾಜ್ಯ ಸರ್ಕಾರವು ಬೌದ್ಧಧರ್ಮಕ್ಕೆ ಮತಾಂತರಗೊಂಡ ದಲಿತರಿಗೆ ಮೀಸಲಾತಿ ಮುಂದುವರಿಯಲಿದೆ ಎಂಬುದರ ಬಗ್ಗೆ ಸುತ್ತೋಲೆ ಹೊರಡಿಸಿದೆ. ಇದೇ ಆಧಾರದ ಮೇಲೆ ಪ್ರಮಾಣ ಪತ್ರ ನೀಡಲಾಗುತ್ತಿದೆ. ಆದರೆ, ರಾಜ್ಯಪತ್ರ ಹೊರಡಿಸಿಲ್ಲ. 35 ವರ್ಷಗಳಿಂದ ನೊಟಿಫೈ ಮಾಡದೆ ಸರ್ಕಾರ ಬಾಕಿ ಉಳಿಸಿಕೊಂಡಿದೆ. ಯಾರಾದರೂ ನ್ಯಾಯಾಲಯದಲ್ಲಿ ಈ ಬಗ್ಗೆ ಪ್ರಶ್ನೆ ಮಾಡಿದರೆ ಸಮಸ್ಯೆ ಉಂಟಾಗಲಿದೆ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. 

ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ/ಎಸ್‌ಟಿ ನೌಕರ ಸಮನ್ವಯ ಸಮಿತಿ ಅಧ್ಯಕ್ಷ ಶಿವಶಂಕರ್‌, ಸಂವಿಧಾನದಲ್ಲಿಯೇ ಅವಕಾಶ ನೀಡಲಾಗಿದೆ. ಬೌದ್ಧಧರ್ಮಕ್ಕೆ ಮತಾಂತರವಾದರೂ ಮೀಸಲಾತಿ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಆದರೆ, ಕೆಲವರು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಹಿಂದೂಗಳ ಸಂಖ್ಯೆ ಕಡಿಮೆಯಾಗಲಿದೆ ಎಂಬ ಭಾವನೆಯಿಂದ ಬೌದ್ಧಧರ್ಮಕ್ಕೆ ಹೋದರೆ ಮೀಸಲಾತಿ ಸಿಗುವುದಿಲ್ಲ ಎಂಬ ಸುಳ್ಳು ಪ್ರಚಾರ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು. 

ರಾಜ್ಯದಲ್ಲಿ ಬೌದ್ಧ ಧರ್ಮೀಯರ ಸಂಖ್ಯೆ ಕುಸಿತ 

ನೀತಿ ಸಂಶೋಧನೆ ಮತ್ತು ಸಾಮಾಜಿಕ ಕ್ರಿಯೆಯ ಕೇಂದ್ರದ ಸಿಇಒ ಡಾ. ಭಾವನಾ ಹಲಾನಾಯಕ್ ಅಧ್ಯಯನದ ಪ್ರಕಾರ, 2001 ರಿಂದ ಬೌದ್ಧರ ಜನಸಂಖ್ಯೆಯಲ್ಲಿ ಸುಮಾರು 76 ಪ್ರತಿಶತದಷ್ಟು ಸ್ಪಷ್ಟ ಕುಸಿತ ಕಂಡುಬಂದಿದೆ. 2011ರಲ್ಲಿ ಕಲಬುರಗಿಯಲ್ಲಿ ಶೇ. 91 ರಷ್ಟು ಜನರು ಬೌದ್ಧರ ಸ್ಥಾನಮಾನವನ್ನು ಹೊಂದಿಲ್ಲ ಎಂಬುದು ಸ್ಪಷ್ಟವಾಗಿದೆ. ಬೀದರ್ ಜಿಲ್ಲೆಯಲ್ಲಿ ಬೌದ್ಧರ ಸಂಖ್ಯೆಯಲ್ಲಿ ಶೇ.76 ರಷ್ಟು ಕುಸಿತ ಕಂಡುಬಂದಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಬೌದ್ಧರ ಸಂಖ್ಯೆಯಲ್ಲಿ ಶೇಕಡಾ 26 ರಷ್ಟು ಕುಸಿತ ಕಂಡುಬಂದಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಬೌದ್ಧರ ಸಂಖ್ಯೆ ಶೇ.18 ರಷ್ಟು ಕುಸಿತ ಕಂಡಿದ್ದು, ಮಂಡ್ಯದಲ್ಲಿ ಶೇ. 97 ರಷ್ಟು ಕುಸಿದಿದೆ. ಮೈಸೂರು ಜಿಲ್ಲೆಯಲ್ಲಿ  ಶೇ. 42 ರಷ್ಟು ಬೌದ್ಧರ ಜನಸಂಖ್ಯೆ ಕುಸಿದಿದೆ.  ಚಾಮರಾಜನಗರದಲ್ಲಿ 2001ಕ್ಕೆ ಹೋಲಿಸಿದರೆ ಶೇ. 86 ರಷ್ಟು ಬೌದ್ಧರ ವಲಸೆ ನಡೆದಿದೆ. ಬೆಳಗಾವಿ ಜಿಲ್ಲೆಯಲ್ಲಿ ಬೌದ್ಧರ ಜನಸಂಖ್ಯೆಯಲ್ಲಿ ಶೇ.77 ರಷ್ಟು ಇಳಿಕೆಯಾಗಿದ್ದು, ವಿಜಯಪುರದಲ್ಲಿ ಶೇ. 83 ರಷ್ಟು ಇಳಿಕೆ ಮತ್ತು ಧಾರವಾಡ ಜಿಲ್ಲೆಯಲ್ಲಿ ಶೇ. 72 ರಷ್ಟು ಕುಸಿತ ಕಂಡುಬಂದಿದೆ ಎಂದು ತಿಳಿಸಲಾಗಿದೆ. 

2001ರಲ್ಲಿ ಕರ್ನಾಟಕದಲ್ಲಿ ಬೌದ್ಧ ಧರ್ಮಕ್ಕೆ ಸೇರಿದ ಪರಿಶಿಷ್ಟ ಜಾತಿಯ ಒಟ್ಟು ಜನಸಂಖ್ಯೆ 8.9 ಮಿಲಿಯನ್ ಆಗಿದ್ದು, ಪರಿಶಿಷ್ಟ ವರ್ಗಕ್ಕೆ ಸೇರುವ ಬೌದ್ಧರು ಸುಮಾರು 0.34 ಮಿಲಿಯನ್ ಆಗಿದೆ. 2001 ರ ಜನಗಣತಿಯ ಪ್ರಕಾರ ಕರ್ನಾಟಕದಲ್ಲಿ ಅತಿ ಹೆಚ್ಚು ಬೌದ್ಧ ಜನಸಂಖ್ಯೆಯು ಹೊಲೆಯ, ಆದಿ-ಕರ್ನಾಟಕ, ಮಹಾರ್,  ಮಾದಿಗ ಸಮುದಾಯದಿಂದ ಮತಾಂತರ ಆಗಿದ್ದವರಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 

Tags:    

Similar News