ಕುಡುಪು ಗುಂಪು ಹತ್ಯೆ: ಅಶ್ರಫ್ ಕುಟುಂಬಕ್ಕೆ ಕಾಂಗ್ರೆಸ್ ನಾಯಕರಿಂದ ಪರಿಹಾರ ವಿತರಣೆ

ಮಾನವೀಯತೆಯ ನೆಲೆಯಲ್ಲಿ, ಸಚಿವ ಜಮೀರ್ ಅಹ್ಮದ್ ಖಾನ್ ಅವರು ತಮ್ಮ ವೈಯಕ್ತಿಕ ಖಾತೆಯಿಂದ ಹತ್ತು ಲಕ್ಷ ರೂಪಾಯಿ ಹಾಗೂ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಐದು ಲಕ್ಷ ರೂಪಾಯಿ ಪರಿಹಾರ ಮೊತ್ತವನ್ನು ಅಶ್ರಫ್ ಕುಟುಂಬಸ್ಥರಿಗೆ ವಿತರಿಸಿದರು.;

Update: 2025-07-07 12:52 GMT

ಗುಂಪು ಹತ್ಯೆ ಅಶ್ರಫ್ ಕುಟುಂಬಸ್ಥರೊಂದಿಗೆ ಸಭಾಧ್ಯಕ್ಷ ಯು.ಟಿ.ಖಾದರ್,ಸಚಿವ ಜಮೀರ್ ಅಹ್ಮದ್ ಖಾನ್,ಎಐಸಿಸಿ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್,ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಚರ್ಚೆ ಹಾಗೂ ಪರಿಹಾರ ವಿತರಣೆ

ಮಂಗಳೂರಿನ ಕುಡುಪುವಿನಲ್ಲಿ ನಡೆದ ಗುಂಪು ಹತ್ಯೆಯಲ್ಲಿ ಸಾವಿಗೀಡಾಗಿದ್ದ ಮೊಹಮ್ಮದ್ ಅಶ್ರಫ್ ಅವರ ಕುಟುಂಬಕ್ಕೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕೇರಳ ಸಂಸದ ಕೆ.ಸಿ. ವೇಣುಗೋಪಾಲ್ ಅವರ ಕೋರಿಕೆಯ ಮೇರೆಗೆ ಸೋಮವಾರ ಕಾಂಗ್ರೆಸ್ ನಾಯಕರು ಪರಿಹಾರ ವಿತರಿಸಿದರು.

ಸಭಾಧ್ಯಕ್ಷ ಯು.ಟಿ. ಖಾದರ್, ಸಚಿವ ಜಮೀರ್ ಅಹ್ಮದ್ ಖಾನ್, ಎಐಸಿಸಿ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಕಾಂಗ್ರೆಸ್ ಮುಖಂಡರಾದ ಜಿ.ಎ. ಬಾವ ಹಾಗೂ ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಅವರು ಅಶ್ರಫ್ ಕುಟುಂಬಸ್ಥರೊಂದಿಗೆ ಸಭೆ ನಡೆಸಿ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ, ಅಶ್ರಫ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಹೋರಾಟ ನಡೆಸಲು ಸರ್ಕಾರದ ವತಿಯಿಂದ ವಿಶೇಷ ಅಭಿಯೋಜಕರನ್ನು (Special Public Prosecutor) ನೇಮಿಸಲು ನಿರ್ಧರಿಸಲಾಯಿತು. ಅಲ್ಲದೆ, ಗುಂಪು ಹತ್ಯಾ (Lynching) ಕಾಯ್ದೆ ಪ್ರಕಾರ ಹತ್ಯೆಯಾದ ಅಶ್ರಫ್ ಅವರ ಕುಟುಂಬಕ್ಕೆ ಸರ್ಕಾರದ ವತಿಯಿಂದ ಪರಿಹಾರ ಒದಗಿಸುವ ಕುರಿತಾಗಿಯೂ ಚರ್ಚೆ ನಡೆಸಲಾಯಿತು.

ಮಾನವೀಯತೆಯ ನೆಲೆಯಲ್ಲಿ, ಸಚಿವ ಜಮೀರ್ ಅಹ್ಮದ್ ಖಾನ್ ಅವರು ತಮ್ಮ ವೈಯಕ್ತಿಕ ಖಾತೆಯಿಂದ ಹತ್ತು ಲಕ್ಷ ರೂಪಾಯಿ ಹಾಗೂ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಐದು ಲಕ್ಷ ರೂಪಾಯಿ ಪರಿಹಾರ ಮೊತ್ತವನ್ನು ಅಶ್ರಫ್ ಕುಟುಂಬಸ್ಥರಿಗೆ ವಿತರಿಸಿದರು. ಈ ಸಂದರ್ಭದಲ್ಲಿ ಅಶ್ರಫ್ ಕುಟುಂಬಸ್ಥರೊಂದಿಗೆ ಮಲಪ್ಪುರಂ ಕಾಂಗ್ರೆಸ್ ಮುಖಂಡರಾದ ನಾಸಿರ್ ವೆಂಗರ ಮುಂತಾದವರು ಉಪಸ್ಥಿತರಿದ್ದರು.

ಘಟನೆ ಏನು?

ಕಳೆದ ಏಪ್ರಿಲ್ 27 ರಂದು ಮಂಗಳೂರು ಹೊರವಲಯದ ಕುಡುಪು ಗ್ರಾಮದಲ್ಲಿ ಈ ದುರಂತ ಘಟನೆ ನಡೆದಿತ್ತು. ಕೇರಳದ ವಯನಾಡು ಜಿಲ್ಲೆಯ ಪಲ್ಪಳ್ಳಿ ಗ್ರಾಮದ 39 ವರ್ಷದ ಮುಸ್ಲಿಂ ಯುವಕ ಮೊಹಮ್ಮದ್ ಅಶ್ರಫ್ ಅವರನ್ನು ಗುಂಪೊಂದು ಥಳಿಸಿ ಹತ್ಯೆ ಮಾಡಿತ್ತು. ಅಶ್ರಫ್ ಪ್ಲಾಸ್ಟಿಕ್ ಇತ್ಯಾದಿಗಳನ್ನು ಸಂಗ್ರಹಿಸುವ ಕೆಲಸ ಮಾಡುತ್ತಿದ್ದರು. ಅಶ್ರಫ್ ಸ್ಥಳೀಯ ಕ್ರಿಕೆಟ್ ಮೈದಾನದ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಗುಂಪೊಂದು ಅವರನ್ನು ಥಳಿಸಿ ಕೊಲೆ ಮಾಡಿತ್ತು.

ಹಲ್ಲೆಕೋರರು ಅಶ್ರಫ್ ಅವರು "ಪಾಕಿಸ್ತಾನ ಜಿಂದಾಬಾದ್" ಎಂದು ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಿದ್ದರು. ಆದರೆ, ಅಶ್ರಫ್ ಅವರ ಕುಟುಂಬ ಈ ಆರೋಪವನ್ನು ತೀವ್ರವಾಗಿ ನಿರಾಕರಿಸಿತ್ತು. ಅಶ್ರಫ್ ಮಾನಸಿಕ ಅಸ್ವಸ್ಥರಾಗಿದ್ದು, ಅಂತಹ ಯಾವುದೇ ಘೋಷಣೆ ಕೂಗುವವರಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದರು. ಪೊಲೀಸರು ಕೂಡ ಈ ಆರೋಪಕ್ಕೆ ಯಾವುದೇ ಸಾಕ್ಷ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 20ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. 

Tags:    

Similar News