ವಿವಾದಿತ 'ಜನಸಂದಣಿ ನಿಯಂತ್ರಣ ವಿಧೇಯಕ' ಪರಿಶೀಲನೆಗೆ ಸಮಿತಿ ರಚನೆ
ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಾವಳಿಗಳ ನಿಯಮ 247ರ ಮೇರೆಗೆ ವಿಧಾನಸಭಾ ಸದಸ್ಯರನ್ನು ಒಳಗೊಂಡ ಪರಿಶೀಲನಾ ಸಮಿತಿಯನ್ನು ರಚಿಸಲಾಗಿದೆ ಎಂದು ಸಭಾಧ್ಯಕ್ಷರು ತಿಳಿಸಿದ್ದಾರೆ.
ರಾಜ್ಯದಲ್ಲಿ ನಡೆಯುವ ಸಾರ್ವಜನಿಕ ಕಾರ್ಯಕ್ರಮಗಳು, ಧಾರ್ಮಿಕ ಜಾತ್ರೆಗಳು, ಸಮಾರಂಭಗಳು ಮತ್ತು ರಾಜಕೀಯ ಸಮಾವೇಶಗಳಲ್ಲಿ ಜನಸಂದಣಿಯನ್ನು ನಿಯಂತ್ರಿಸುವ ಹಾಗೂ ಅನಾಹುತಗಳನ್ನು ತಡೆಯುವ ಉದ್ದೇಶದಿಂದ ರೂಪಿಸಲಾಗಿದ್ದ ವಿವಾದಿತ 'ಕರ್ನಾಟಕ ಜನಸಂದಣಿ ನಿಯಂತ್ರಣ (ಕಾರ್ಯಕ್ರಮಗಳು ಮತ್ತು ಗುಂಪುಗೂಡುವ ಸ್ಥಳಗಳಲ್ಲಿ ಜನಸಂದಣಿಯ ನಿರ್ವಹಣೆ) ವಿಧೇಯಕ-2025' ಅನ್ನು ಇದೀಗ ಸಮಗ್ರವಾಗಿ ಪರಿಶೀಲಿಸಲು 11 ಶಾಸಕರನ್ನೊಳಗೊಂಡ ಪರಿಶೀಲನಾ ಸಮಿತಿಗೆ ವಹಿಸಲಾಗಿದೆ.
ಆಗಸ್ಟ್ 21 ರಂದು ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ಈ ವಿಧೇಯಕವನ್ನು ಮಂಡಿಸಲಾಗಿತ್ತು. ಆದರೆ, ಇದರಲ್ಲಿನ ಕಠಿಣ ನಿಯಮಗಳು ಮತ್ತು ಅಸ್ಪಷ್ಟ ಅಂಶಗಳ ಬಗ್ಗೆ ಆಡಳಿತ ಹಾಗೂ ವಿರೋಧ ಪಕ್ಷಗಳ ಸದಸ್ಯರಿಂದ ತೀವ್ರ ಆಕ್ಷೇಪಗಳು ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ, ಸದನದ ನಿರ್ಣಯದಂತೆ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಈ ಪರಿಶೀಲನಾ ಸಮಿತಿಯನ್ನು ರಚಿಸಿ, ವರದಿ ಸಲ್ಲಿಸಲು ಮೂರು ತಿಂಗಳ ಕಾಲಾವಕಾಶ ನಿಗದಿಪಡಿಸಿದ್ದಾರೆ. ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಈ ಸಮಿತಿಯ ಅಧ್ಯಕ್ಷರಾಗಿದ್ದು, ಕಾನೂನು ಸಚಿವ ಎಚ್.ಕೆ. ಪಾಟೀಲ್ ಹಾಗೂ ಶಾಸಕರಾದ ರಿಜ್ವಾನ್ ಅರ್ಷದ್, ವಿ. ಸುನಿಲ್ ಕುಮಾರ್, ಎಸ್.ಆರ್. ವಿಶ್ವನಾಥ್ ಸೇರಿದಂತೆ ಒಟ್ಟು 11 ಶಾಸಕರು ಸಮಿತಿಯ ಸದಸ್ಯರಾಗಿದ್ದಾರೆ.
ಏನಿದು ಜನಸಂದಣಿ ನಿಯಂತ್ರಣ ವಿಧೇಯಕ?
ಆರ್‌ಸಿಬಿ ವಿಜಯೋತ್ಸವದ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ದುರಂತದಲ್ಲಿ 11 ಮಂದಿ ಮೃತಪಟ್ಟ ನಂತರ ರಾಜ್ಯ ಸರ್ಕಾರವು ಈ ಕಠಿಣ ಕಾನೂನನ್ನು ರೂಪಿಸಿತ್ತು. ಈ ವಿಧೇಯಕವು ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ಕಾರ್ಯಕ್ರಮಗಳು, ಸಮಾರಂಭಗಳು ಮತ್ತು ಸಭೆಗಳಲ್ಲಿ ಜನಸಂದಣಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ, ಕಾನೂನುಬಾಹಿರ ಸಭೆಗಳನ್ನು ತಡೆಯುವ ಮತ್ತು ಅನಾಹುತಗಳು ಸಂಭವಿಸಿದರೆ ಆಯೋಜಕರನ್ನು ಹೊಣೆಗಾರರನ್ನಾಗಿಸುವ ಗುರಿ ಹೊಂದಿದೆ. ನಿಯಮ ಉಲ್ಲಂಘಿಸುವವರಿಗೆ ಕಠಿಣ ಜೈಲು ಶಿಕ್ಷೆ ಮತ್ತು ಭಾರೀ ದಂಡ ವಿಧಿಸುವ ಪ್ರಸ್ತಾಪಗಳನ್ನು ಇದು ಒಳಗೊಂಡಿದೆ.
ಶಾಸಕರಿಂದ ಆಕ್ಷೇಪಗಳು
ಈ ವಿಧೇಯಕದ ಬಗ್ಗೆ ಸದನದಲ್ಲಿ ತೀವ್ರ ಚರ್ಚೆ ನಡೆದಿತ್ತು. ಪ್ರತಿಪಕ್ಷ ನಾಯಕ ಆರ್. ಅಶೋಕ್, ಈ ಕಾಯ್ದೆಯನ್ನು ರಾಜಕೀಯ ಸಮಾವೇಶಗಳಿಗೂ ಅನ್ವಯಿಸಬೇಕು ಮತ್ತು ಅನಾಹುತವಾದರೆ ಆಯೋಜಕರೇ ಹೊಣೆ ಹೊರಬೇಕು ಎಂದು ಸಲಹೆ ನೀಡಿದ್ದರು.
ಬಿಜೆಪಿ ಶಾಸಕ ವಿ. ಸುನೀಲ್ ಕುಮಾರ್ ಅವರು, "ಈ ವಿಧೇಯಕವು ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಜಾತ್ರೆ ಮತ್ತು ಧಾರ್ಮಿಕ ಹಬ್ಬಗಳಿಗೂ ಅನ್ವಯವಾಗುತ್ತದೆಯೇ?" ಎಂದು ಪ್ರಶ್ನಿಸಿದ್ದರು. "50,000ಕ್ಕಿಂತ ಹೆಚ್ಚು ಜನ ಸೇರುವ ಕಾರ್ಯಕ್ರಮಗಳಿಗೆ 1 ಕೋಟಿ ರೂಪಾಯಿ ಬಾಂಡ್ ನೀಡಬೇಕೆಂಬ ನಿಯಮವನ್ನು ಸಣ್ಣ ದೇವಾಲಯಗಳು ಮತ್ತು ಜಾತ್ರಾ ಸಮಿತಿಗಳು ಹೇಗೆ ಪಾಲಿಸಲು ಸಾಧ್ಯ? ಸರ್ಕಾರ ಈ ಬಗ್ಗೆ ವಿನಾಯಿತಿ ನೀಡಬೇಕು," ಎಂದು ಆಗ್ರಹಿಸಿದ್ದರು.
ಮದುವೆ ಸಮಾರಂಭಗಳಿಗೆ ಈ ಕಾಯ್ದೆ ಅನ್ವಯಿಸುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದ್ದರೂ, ರಾಜಕಾರಣಿಗಳು ಆಯೋಜಿಸುವ ಬೃಹತ್ ಊಟದ ಕಾರ್ಯಕ್ರಮಗಳಿಗೆ ಯಾವ ನಿಯಮ ಅನ್ವಯವಾಗುತ್ತದೆ ಎಂಬ ಬಗ್ಗೆ ಗೊಂದಲವಿತ್ತು. ಅಲ್ಲದೆ, ಈ ವಿಧೇಯಕವು ಪೊಲೀಸರಿಗೆ ಹೆಚ್ಚಿನ ಅಧಿಕಾರ ನೀಡಿ, ಅದರ ದುರುಪಯೋಗಕ್ಕೆ ಕಾರಣವಾಗಬಹುದು ಎಂಬ ಆತಂಕವನ್ನು ಶಾಸಕರು ವ್ಯಕ್ತಪಡಿಸಿದ್ದರು. ಈ ಎಲ್ಲಾ ಗೊಂದಲಗಳು ಮತ್ತು ಆಕ್ಷೇಪಗಳ ಹಿನ್ನೆಲೆಯಲ್ಲಿ, ವಿಧೇಯಕವನ್ನು ಇದೀಗ ಕೂಲಂಕಷವಾಗಿ ಪರಿಶೀಲಿಸಲು ಸಮಿತಿಗೆ ಒಪ್ಪಿಸಲಾಗಿದೆ.