Colonel Sofiya Qureshi: ಕರ್ನಲ್ ಸೋಫಿಯಾ ಖುರೇಷಿ ಬೆಳಗಾವಿಯ ಸೊಸೆ
ʻಅಪರೇಶನ್ ಸಿಂದೂರʼದ ಬಗ್ಗೆ ದೇಶಕ್ಕೆ ಸಂಪೂರ್ಣ ಮಾಹಿತಿ ನೀಡಿದ ಕರ್ನಲ್ ಸೋಫಿಯಾ ಖುರೇಷಿ ಕರ್ನಾಟಕದ ಬೆಳಗಾವಿಯರು. ಖುರೇಷಿ ಬೆಳಗಾವಿಯ ಸೊಸೆ ಎಂಬ ವಿಷಯ ತಿಳಿದು ಕನ್ನಡಿಗರಿಗೂ ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ.;
ಪತಿಯೊಂದಿಗೆ ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಷಿ
'ಆಪರೇಷನ್ ಸಿಂದೂರ್' ಮೂಲಕ ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಮತ್ತು ಪಾಕಿಸ್ತಾನದಲ್ಲಿನ ಹಲವಾರು ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸಿರುವ ಭಾರತ, ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ತಕ್ಕ ಉತ್ತರ ನೀಡಿದೆ. ಈ ಯಶಸ್ವಿ ಮಿಲಿಟರಿ ಕಾರ್ಯಾಚರಣೆಯ ಕುರಿತು ದೇಶಕ್ಕೆ ಸಂಪೂರ್ಣ ಮಾಹಿತಿ ನೀಡಿದ ಕರ್ನಲ್ ಸೋಫಿಯಾ ಖುರೇಷಿ ಅವರು ಕರ್ನಾಟಕದ ಬೆಳಗಾವಿ ಜತೆ ನಂಟು ಹೊಂದಿದ್ದಾರೆ ಎಂಬುದು ಕನ್ನಡಿಗರ ಪಾಲಿಗೆ ವಿಶೇಷ. ಅಂದ ಹಾಗೆ ಖುರೇಷಿ ಅವರು ಬೆಳಗಾವಿಯ ಸೊಸೆ.
ಗುಜರಾತ್‌ನವರಾದ ಸೋಫಿಯಾ ಖುರೇಷಿ, ಬೆಳಗಾವಿ ಮೂಲದ ತಾಜುದ್ದೀನ್ ಬಾಗೇವಾಡಿ ಅವರನ್ನು ಪ್ರೀತಿಸಿ ವಿವಾಹವಾಗಿದ್ದಾರೆ. ಅವರ ಪತಿ ತಾಜುದ್ದೀನ್ ಬಾಗೇವಾಡಿ ಅವರು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೊಣ್ಣೂರು ಗ್ರಾಮದವರು. ಗಂಡ ಮತ್ತು ಹೆಂಡತಿ ಇಬ್ಬರೂ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು 2015ರಲ್ಲಿ ವಿವಾಹವಾಗಿದ್ದು, ಸೋಫಿಯಾ ಪ್ರಸ್ತುತ ಜಮ್ಮುವಿನಲ್ಲಿ ಕರ್ನಲ್ ಆಗಿ ಕಾರ್ಯನಿರ್ವಹಿಸುತ್ತಿದ್ದರೆ, ಅವರ ಪತಿ ತಾಜುದ್ದೀನ್ ಬಾಗೇವಾಡಿ ಝಾನ್ಸಿಯಲ್ಲಿ ಕರ್ನಲ್ ಆಗಿದ್ದಾರೆ.
ಸೋಫಿಯಾ ಖುರೇಷಿ ಅವರ ತಂದೆ ಮತ್ತು ಅಜ್ಜ ಕೂಡಾ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಮೂಲತಃ ಗುಜರಾತ್‌ನ ವಡೋದರಾದವರಾದ ಸೋಫಿಯಾ ಅವರ ಅಜ್ಜ ಭಾರತೀಯ ಸೇನೆಯಲ್ಲಿ ಧಾರ್ಮಿಕ ಶಿಕ್ಷಕರಾಗಿದ್ದರು. ಅವರ ತಂದೆ ತಾಜ್ ಮೊಹಮ್ಮದ್ ಖುರೇಷಿ ಅವರು ಕಾರ್ಪ್ಸ್ ಆಫ್ ಎಲೆಕ್ಟ್ರಾನಿಕ್ಸ್ ಮತ್ತು ಮೆಕ್ಯಾನಿಕಲ್ ಎಂಜಿನಿಯರ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದು, 1971ರ ಯುದ್ಧದಲ್ಲೂ ಭಾಗವಹಿಸಿದ್ದರು. ಅವರ ಮುತ್ತಜ್ಜ ಬ್ರಿಟಿಷ್ ಸೈನ್ಯದಲ್ಲಿದ್ದು, 1857ರ ದಂಗೆಯಲ್ಲೂ ಹೋರಾಡಿದ್ದರು. ಸೋಫಿಯಾ ಖುರೇಷಿ ಅವರ 18 ವರ್ಷದ ಮಗ ಕೂಡಾ ವಾಯುಪಡೆಗೆ ಸೇರಲು ತಯಾರಿ ನಡೆಸುತ್ತಿದ್ದು, ದೇಶಸೇವೆ ಅವನ ಕನಸಾಗಿದೆ. ಅವರ ಮಗಳು ಸಹ ಸೈನ್ಯಕ್ಕೆ ಸೇರಲು ಬಯಸುತ್ತಿದ್ದಾಳೆ.
ಶೈಕ್ಷಣಿಕ ಸಾಧನೆ
ತಮ್ಮ ಶೈಕ್ಷಣಿಕ ಸಾಧನೆಗಳಲ್ಲೂ ಮುಂಚೂಣಿಯಲ್ಲಿರುವ ಕರ್ನಲ್ ಸೋಫಿಯಾ ಖುರೇಷಿ ಅವರು 1997ರಲ್ಲಿ ವಡೋದರಾದ ಮಹಾರಾಜ ಸಯಾಜಿರಾವ್ ವಿಶ್ವವಿದ್ಯಾಲಯದಿಂದ ಜೀವರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ನಂತರ ಪಿಎಚ್‌ಡಿ ಅಧ್ಯಯನ ಆರಂಭಿಸಿದರೂ, ಅದನ್ನು ಅರ್ಧಕ್ಕೆ ತೊರೆದು 1999ರಲ್ಲಿ ಭಾರತೀಯ ಸೇನೆಗೆ ಸೇರಿದ್ದರು.
ಇಂಡಿಯನ್ ಆರ್ಮಿ ಕಾರ್ಪ್ಸ್ ಆಫ್ ಸಿಗ್ನಲ್ಸ್‌ನಲ್ಲಿ ತರಬೇತಿ ಪಡೆದಿರುವ ಸೋಫಿಯಾ ಅವರು ಕಾಂಗೋದಂತಹ ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಯಲ್ಲಿ 6 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು, ಮಾನವೀಯ ಕಾರ್ಯಗಳಿಗೂ ಗಣನೀಯ ಕೊಡುಗೆ ನೀಡಿದ್ದಾರೆ.
ತಮ್ಮ ಸೊಸೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿರುವ ಮಾವ ಗೌಸಸಾಬ್ ಬಾಗೇವಾಡಿ ಅವರು, "ನಿನ್ನೆ ಸೋಫಿಯಾ ಟಿವಿಯಲ್ಲಿ ಕಾರ್ಯಾಚರಣೆ ಬಗ್ಗೆ ಮಾತನಾಡಿದ್ದನ್ನು ನೋಡಿ ನಮಗೆಲ್ಲ ಹೆಮ್ಮೆಯಾಯಿತು. ಅವಳು ನಮ್ಮ ಊರು ಮತ್ತು ಕರ್ನಾಟಕದ ಗೌರವವನ್ನು ಹೆಚ್ಚಿಸಿದ್ದಾಳೆ. ದೇಶಕ್ಕಾಗಿ ದುಡಿಯಿರಿ ಎಂದು ನಾವು ನಮ್ಮ ಮಕ್ಕಳಿಗೆ ಹೇಳಿದ್ದೆವು, ಅವರೆಲ್ಲರೂ ಇಂದು ದೇಶ ಸೇವೆಯಲ್ಲಿ ತೊಡಗಿದ್ದಾರೆ" ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದ ಹೇಡಿತನದ ದಾಳಿಗೆ ಭಾರತೀಯ ಸೈನಿಕರು ತಕ್ಕ ಪಾಠ ಕಲಿಸಿದ್ದಾರೆ ಎಂದೂ ಅವರು ಹೇಳಿದ್ದಾರೆ.
ಸೋಫಿಯಾಗೆ ನಾಟಿಕೋಳಿ ಇಷ್ಟ
ಸೊಸೆ ಮತ್ತು ಮಗ ಮನೆಗೆ ಬಂದಾಗ ಬಹಳ ಸಂತೋಷದಿಂದಿರುತ್ತಾರೆ. ಸೊಸೆಗೆ ನಾಟಿ ಕೋಳಿ, ರೊಟ್ಟಿ ಮತ್ತು ಕಬ್ಬು ಎಂದರೆ ಬಹಳ ಇಷ್ಟ. ಸೊಸೆ ನಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುತ್ತಾರೆ ಮತ್ತು ವಾಕಿಂಗ್ ಮಾಡಲು ಹೇಳುತ್ತಾರೆ. ನಾವು ಸಮಾಜದವರೊಂದಿಗೆ ಬೆರೆತು ಬಾಳುತ್ತೇವೆ ಮತ್ತು ನಮ್ಮ ಮಕ್ಕಳಿಗೂ ಅದನ್ನೇ ಹೇಳಿದ್ದೇವೆ. ಜಮೀನಿನಲ್ಲಿ ಕಷ್ಟಪಟ್ಟು ದುಡಿದು ಮಕ್ಕಳನ್ನು ಓದಿಸಿದ್ದೇವೆ. ನನಗೆ ಮೂರು ಗಂಡು ಮಕ್ಕಳಿದ್ದು, ಅವರಲ್ಲಿ ಒಬ್ಬ ಅಗ್ನಿಶಾಮಕ ದಳದಲ್ಲಿ ಸೇವೆ ಸಲ್ಲಿಸುತ್ತಾನೆ. ನಮ್ಮ ಮಕ್ಕಳು ಕೊಣ್ಣೂರಿನಲ್ಲಿ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ನಂತರ ಕಮಾಂಡ್ ಟ್ರೇನಿಂಗ್‌ನಲ್ಲಿ ಉತ್ತೀರ್ಣರಾಗಿ ಇಬ್ಬರು ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ನಾನು ವರ್ಷಕ್ಕೆ ಎರಡು ಬಾರಿ ನನ್ನ ಮಗನ ಬಳಿ ಹೋಗುತ್ತೇನೆ ಎಂದು ಅವರು ಹೆಮ್ಮೆಯಿಂದ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.