ಕೆಪಿಎಸ್‌ಸಿ ಅಧ್ಯಕ್ಷ- ಕಾರ್ಯದರ್ಶಿ ನಡುವೆ ಶೀತಲ ಸಮರ, ವಿವಿಧ ಇಲಾಖೆಗಳ ಆಯ್ಕೆ ಪಟ್ಟಿಗಿಲ್ಲ ಮುಕ್ತಿ

ಅಧಿಸೂಚನೆಗಳನ್ನು ಹೊರಡಿಸಿ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕೆಂಬ ನಿಯಮವಿದ್ದರೂ ಕೆಲವು ಅಧಿಸೂಚನೆಗಳು ಮೂರರಿಂದ ನಾಲ್ಕುವರ್ಷಗಳ ಕಾಲ ವಿಳಂಬವಾಗುತ್ತಿವೆ. ಪರೀಕ್ಷೆ ಬರೆದು ಆಯ್ಕೆಯಾದ ವಿದ್ಯಾರ್ಥಿಗಳಿಗೆ ನೇಮಕಾತಿ ಪತ್ರ ದೊರೆತರೆ ಸಾಕು ಎಂಬಂತಾಗಿದೆ.;

Update: 2025-07-20 01:51 GMT
ಕರ್ನಾಟಕ ಲೋಕಸೇವಾ ಆಯೋಗ

ಕರ್ನಾಟಕ ಲೋಕಸೇವಾ ಆಯೋಗ  ಪ್ರತಿ ವರ್ಷ ಉದ್ಯೋಗ ನೇಮಕಾತಿಗೆ ವಿವಿಧ ಅಧಿಸೂಚನೆಗಳನ್ನು ಹೊರಡಿಸುತ್ತದೆ. ನಿಗದಿತ ಸಮಯದಲ್ಲಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಬೇಕೆಂಬ ನಿಯಮವಿದ್ದರೂ ಒಂದೊಂದು ಅಧಿಸೂಚನೆ ಮೂರರಿಂದ ನಾಲ್ಕು ವರ್ಷಗಳ ಕಾಲ ವಿಳಂಬವಾಗುತ್ತಿರುವುದು ಪರೀಕ್ಷಾರ್ಥಿಗಳು ಹಾಗೂ ಪರೀಕ್ಷೆ ಬರೆದು ಆಯ್ಕೆಯಾದ ವಿದ್ಯಾರ್ಥಿಗಳಲ್ಲಿ ಸೇವೆ ಸಲ್ಲಿಸಬೇಕೆಂಬ ಉತ್ಸಾಹ ಕ್ಷೀಣಿಸುವಂತೆ‌ ಮಾಡುತ್ತಿದೆ. 

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ನಿಲಯ ಮೇಲ್ವಿಚಾರಕರು(7), ಪೌರಾಡಳಿತ ನಿರ್ದೇಶನಾಲಯದ ನಗರ ಸ್ಥಳಿಯ ಸಂಸ್ಥೆಗಳಲ್ಲಿ ಪ್ರಥಮ ದರ್ಜೆ ಕಂದಾಯ ನಿರೀಕ್ಷಕ(41) ಹುದ್ದೆಗಳಿಗೆ 2020 ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಎಂಜಿನಿಯರ್‌(82), ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಲ್ಲಿನ ಅಧಿಕಾರಿ(6) ಹುದ್ದೆಗಳಿಗೆ 2022 ರಲ್ಲಿ ಹಾಗೂ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಕಿರಿಯ ಲೆಕ್ಕ ಸಹಾಯಕರು(67) ಹುದ್ದೆಗೆ 2023 ರಲ್ಲಿ ಅಧಿಸೂಚನೆ ಹೊರಡಿಸಿತ್ತು.

ಮೇಲ್ಕಂಡ ಹುದ್ದೆಗಳಿಗೆ ಕೆಪಿಎಸ್‌ಸಿ ಪರೀಕ್ಷೆ ನಡೆಸಿ ಅಂಕಪಟ್ಟಿ ಪ್ರಕಟಿಸಿದೆ. ಇದರಲ್ಲಿನ ಎಲ್ಲಾ ಅಧಿಸೂಚನೆಗಳಲ್ಲಿನ ಒಟ್ಟು 267 ಹುದ್ದೆಗಳ ಅಂತಿಮ ಆಯ್ಕೆಪಟ್ಟಿ, ಹೆಚ್ಚುವರಿ ಪಟ್ಟಿ ಹಾಗೂ ಹೆಚ್ಚುವರಿ ಆಯ್ಕೆಪಟ್ಟಿಯನ್ನು  ಕೆಪಿಎಸ್‌ಸಿ ಅಧ್ಯಕ್ಷರು ಹಾಗೂ ಸದಸ್ಯರ ಅನುಮೋದನೆಗೆ ಕಾರ್ಯದರ್ಶಿಯವರು ಮೇ 5 ರಿಂದ 12 ರವರೆಗೆ ವಿವಿಧ ದಿನಗಳಲ್ಲಿ ಮನವಿ ಕಳುಹಿಸಿಕೊಟ್ಟಿದ್ದರು. ಆದರೆ ಅಧ್ಯಕ್ಷರು, ಸದಸ್ಯರು ಹಾಗೂ ಕಾರ್ಯದರ್ಶಿಯ ಆಂತರಿಕ ಸಂಘರ್ಷದಿಂದಾಗಿ ಆಯ್ಕೆಪಟ್ಟಿಗಳಿಗೆ ಇದುವರೆಗೂ ಮುಕ್ತಿ ದೊರೆತಿಲ್ಲ.

ಅಭ್ಯರ್ಥಿಗಳ ಭವಿಷ್ಯದ ಜತೆ ಕೆಪಿಎಸ್‌ಸಿ ಚೆಲ್ಲಾಟ

ಒಳ ಮೀಸಲಾತಿ ಸಮೀಕ್ಷೆ ನಡೆಸುತ್ತಿರುವುದರಿಂದ ಕಳೆದ ನವೆಂಬರ್‌ನಿಂದ ಸರ್ಕಾರ ಯಾವುದೇ ಹುದ್ದೆಗಳಿಗೆ ಹೊಸ ಅಧಿಸೂಚನೆ ಹೊರಡಿಸಿಲ್ಲ. ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಸರ್ಕಾರದಲ್ಲಿ ಖಾಲಿ ಇರುವ 2.50 ಲಕ್ಷ ಹುದ್ದೆಗಳನ್ನು ಹಂತ-ಹಂತವಾಗಿ ಭರ್ತಿ ಮಾಡಲಾಗುವುದು ಎಂದು ಸಿದ್ದರಾಮಯ್ಯ ಭರವಸೆ ನೀಡಿದ್ದರು. ಆದರೆ ಇದುವರೆಗೂ ಕೆಲವೇ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿ ಪರೀಕ್ಷೆ ಬಹಳ ಸಮಯ ವ್ಯರ್ಥ ಮಾಡಿದೆ. ಫಲಿತಾಂಶಗಳನ್ನು ಪ್ರಕಟಿಸಲು ಹಲವು ವರ್ಷಗಳೇ ತೆಗೆದುಕೊಳ್ಳುತ್ತದೆ. ಆದರೆ ಇದೀಗ ಆಯ್ಕೆಪಟ್ಟಿ ಹಾಗೂ ಹೆಚ್ಚುವರಿ ಆಯ್ಕೆಪಟ್ಟಿಯನ್ನು ಪ್ರಕಟಿಸಲು ವಿಳಂಬ ಮಾಡುತ್ತಿರುವುದು ಅಭ್ಯರ್ಥಿಗಳ ಜತೆಗೆ ಕೆಪಿಎಸ್‌ಸಿ ಚೆಲ್ಲಾಟವಾಡುತ್ತಿದೆ ಎಂದು ʼದ ಫೆಡರಲ್‌ ಕರ್ನಾಟಕದʼ ಜತೆ ಮಾತನಾಡಿದ ಉದ್ಯೋಗಕಾಂಕ್ಷಿ ದರ್ಶನ್‌ ತಿಳಿಸಿದರು.  

ಅಭ್ಯರ್ಥಿಗಳಿಂದ ನಿರಂತರ ಹೋರಾಟ

ಅಖಿಲ ಕರ್ನಾಟಕ ವಿದ್ಯಾರ್ಥಿಗಳು ಹಾಗೂ ಸಂಶೋಧಕರ ಸಂಘದ ಅಧ್ಯಕ್ಷ ಸಂತೋಷ್‌ ಮರೂರು ʼದ ಫೆಡರಲ್‌ ಕರ್ನಾಟಕದʼ ಜತೆ ಮಾತನಾಡಿ, "ಕೆಪಿಎಸ್‌ಸಿ ಪರೀಕ್ಷೆ ನಡೆಸಲು ಪಂಚವಾರ್ಷಿಕ ಯೋಜನೆಗಳಂತೆ ಸಮಯ ತೆಗೆದುಕೊಳ್ಳುತ್ತವೆ. ಯಾವುದೇ ಒಂದು ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿ ನೇಮಕಾತಿ ಪತ್ರ ಪಡೆಯಲು ಕನಿಷ್ಠ 4ರಿಂದ 5 ವರ್ಷ ಕಾಯಬೇಕಿದೆ. ಅಧಿಸೂಚನೆಯ ಆಯ್ಕೆಪಟ್ಟಿ ಹಾಗೂ ಹೆಚ್ಚುವರಿ ಆಯ್ಕೆಪಟ್ಟಿಗಳನ್ನು ಆಯೋಗದ ಅನುಮತಿಗೆ ಸಲ್ಲಿಸಿದರೆ ಅಧ್ಯಕ್ಷರು ಹಾಗೂ ಸದಸ್ಯರು ಅನುಮತಿ ನೀಡಲು ವಿಳಂಬ ಮಾಡುವುದು ಸರಿಯಲ್ಲ. ಪರೀಕ್ಷೆಗಳಲ್ಲಿ ಪಾಸ್‌ ಆಗಿ ಅಂತಿಮ ಆಯ್ಕೆಪಟ್ಟಿಯಲ್ಲಿರುವ ಅಭ್ಯರ್ಥಿಗಳು ನೇಮಕಾತಿ ಪತ್ರ ನೀಡುವಂತೆ ಹಲವು ಬಾರಿ ಹೋರಾಟ ನಡೆಸಿದ್ದಾರೆ.  ಪಿ.ಸಿ. ಹೋಟಾ ಸಮಿತಿಯ ಶಿಫಾರಸ್ಸಿನಂತೆ ಕೆಪಿಎಸ್‌ಸಿ ಅಧಿಸೂಚನೆ ಹೊರಡಿಸಿ ನಿಗದಿತ ಅವಧಿಯಲ್ಲಿ ಫಲಿತಾಂಶ ಪ್ರಕಟಿಸಿ ನೇಮಕಾತಿ ಪತ್ರಗಳನ್ನು ನೀಡಬೇಕು." ಎಂದರು.           

ಪೂರ್ಣ ಅವಧಿ ಕೆಲಸ ನಿರ್ವಹಿಸದ ಕಾರ್ಯದರ್ಶಿಗಳು

ಕೆಪಿಎಸ್‌ಸಿ ಶುದ್ದೀಕರಣಕ್ಕೆ ಸರ್ಕಾರ ನೇಮಿಸಿದ್ದ ಪಿ. ಸಿ. ಹೋಟಾ ಸಮಿತಿ ಶಿಫಾರಸ್ಸಿನಂತೆ ಕೆಪಿಎಸ್‌ಸಿ ಕಾರ್ಯದರಗಶಿ ಹುದ್ದೆಗೆ ಪೂರ್ಣಪ್ರಮಾಣದ ಒಬ್ಬ ಐಎಎಸ್‌ ದರ್ಜೆಯ ಅಧಿಕಾರಿಯನ್ನು ನೇಮಕ ಮಾಡಬೇಕು ಹಾಗೂ ಅಧಿಕಾರ ವಹಿಸಿಕೊಂಡ ಮೂರು ವರ್ಷಗಳವರೆಗೂ ಅವರನ್ನು ಬೇರಡೆಗೆ ವರ್ಗಾಯಿಸಬಾರದು ಎಂಬ ನಿಯಮವಿದ್ದರೂ ಸಹ ಸರ್ಕಾರ ಕಾರ್ಯದರ್ಶಿಗಳನ್ನು ವರ್ಷಕ್ಕೆ ಇಬ್ಬರಂತೆ ವರ್ಗಾವಣೆಗೊಳಿಸುತ್ತಲೇ ಇದೆ. 2022 ರ ಅಂತ್ಯಕ್ಕೆ ವಿಕಾಸ್‌ ಕಿಶೋರ್ ಸುರಳ್ಕರ್ ಅವರನ್ನು ಸರ್ಕಾರ ಕೆಪಿಎಸ್‌ಸಿಗೆ ವರ್ಗಾಯಿಸಿತು. ದಕ್ಷತೆಯಿಂದ ಕೆಲಸ ನಿರ್ವಹಿಸುತ್ತಿದ್ದ ಅಧಿಕಾರಿಯನ್ನು ಆಯೋಗದ ಒತ್ತಡಕ್ಕೆ ಮಣಿದು ಒಂದು ವರ್ಷದಲ್ಲೆ ಬೇರೆಡೆಗೆ ವರ್ಗಾಯಿಸಿ ಲತಾಕುಮಾರಿ ಅವರನ್ನು ಕಾರ್ಯದರ್ಶಿಯನ್ನಾಗಿ ಮಾಡಲಾಯಿತು. ಅಧ್ಯಕ್ಷರ ಮಾತಿನಂತೆ ಕರ್ತವ್ಯ ನಿರ್ವಹಿಸುತ್ತಿಲ್ಲ, ಅಧ್ಯಕ್ಷರನ್ನು ಬಿಟ್ಟು ಕೇವಲ ಸದಸ್ಯರೊಂದಿಗೆ ಸಭೆ ನಡೆಸುತ್ತಾರೆ. ಏಕಪಕ್ಷಿಯ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ ಅವರನ್ನು ವರ್ಗಾವಣೆಗೊಳಿಸಬೇಕೆಂದು ಅಧ್ಯಕ್ಷರು ಸರ್ಕಾರಕ್ಕೆ ದೂರು ನೀಡಿದರು. ಸಾಂವಿಧಾನಾತ್ಮಕ ಸಂಸ್ಥೆಯೊಂದಿಗಿನ ಸಂಘರ್ಷದಲ್ಲಿ ಸರ್ಕಾರ ಲತಾ ಕುಮಾರಿಯನ್ನು ವರ್ಗಾವಣೆ ಮಾಡಿ ಡಾ. ರಾಕೇಶ್‌ ಕುಮಾರ್‌ ಅವರನ್ನು 2024 ರಲ್ಲಿ ಕಾರ್ಯದರ್ಶಿಯಾಗಿ ನೇಮಕ ಮಾಡಿತ್ತು.

ಐಎಎಸ್‌ ಅಧಿಕಾರಿ ಡಾ. ರಾಕೇಶ್‌ ಕುಮಾರ್‌ ಒಂದು ವರ್ಷ ಅಧಿಕಾರ ಪೂರ್ಣಗೊಳಿಸುತ್ತಲೇ ಅವರ ಜಾಗಕ್ಕೆ ಐಎಎಸ್‌ ಅಧಿಕಾರಿ ರಮಣದೀಪ್‌ ಚೌಧರಿಯನ್ನು ವರ್ಗಾವಣೆಗೊಳಿಸಿತು. ನೇಮಕವಾಗಿ ವರ್ಷ ಮುಗಿಯುವ ಮೊದಲೇ ಜೂ.3 ರಂದು ಆ ಸ್ಥಳಕ್ಕೆ ಹಿರಿಯ ಐಎಎಸ್‌ ಅಧಿಕಾರಿ ಆರ್.‌ ವಿಶಾಲ್‌ ಅವರನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶಿಸಿತ್ತು. ಕೇವಲ 14 ದಿನಗಳ ಅಂತರದಲ್ಲಿ(ಜೂ.17) ಆರ್‌. ವಿಶಾಲ್‌ ಅವರನ್ನು ವರ್ಗಾವಣೆಗೊಳಿಸಿ ಐಎಎಸ್‌ ಅಧಿಕಾರಿ ಜಾನಕಿ ಕೆ.ಎಂ. ಅವರನ್ನು ಕೆಪಿಎಸ್‌ಸಿ ಹೊಸ ಕಾರ್ಯದರ್ಶಿಯಾಗಿ ಸರ್ಕಾರ ನೇಮಿಸಿದೆ.

ಅಧ್ಯಕ್ಷರ ಹಾಗೂ ಕಾರ್ಯದರ್ಶಿ ನಡುವಿನ ಶೀತಲ ಸಮರ

ಸಂವಿಧಾನದ 315ನೇ ವಿಧಿಯನ್ವಯ ರಾಜ್ಯ ಲೋಕಸೇವಾ ಆಯೋಗಗಳನ್ನು ರಚನೆ ಮಾಡಲಾಗುತ್ತದೆ. ಸಂವಿಧಾನಾತ್ಮಕ ಸಂಸ್ಥೆಯಾಗಿರುವ ಲೋಕಸೇವಾ ಆಯೋಗಕ್ಕೆ ರಾಜ್ಯ ಸರ್ಕಾರ ಸೂಚಿಸಿದವರನ್ನು ರಾಜ್ಯಪಾಲರು ಅಧ್ಯಕ್ಷ ಹಾಗೂ ಸದಸ್ಯರನ್ನಾಗಿ ನೇಮಕಮಾಡುತ್ತಾರೆ. ಅದೇ ರೀತಿಯಾಗಿ ಕೆಪಿಎಸ್‌ಸಿ ಕಾರ್ಯಗಳು ಸುಗಮವಾಗಿ ನಡೆಸಲು ಅನುಕೂಲವಾಗುವಂತೆ ಒಬ್ಬ ಐಎಎಸ್‌ ಅಧಿಕಾರಿಯನ್ನು ಕಾರ್ಯದರ್ಶಿಯಾಗಿ ನೇಮಕ ಮಾಡಲಾಗುತ್ತದೆ. ಆದರೆ ಇಲ್ಲಿಯವರೆಗೂ ಅಧ್ಯಕ್ಷರು, ಸದಸ್ಯರು ಹಾಗೂ ಕಾರ್ಯದರ್ಶಿಗಳ ನಡುವೆ ಸಭೆಗಳಾಗುವಾಗ ಕೆಲವೊಮ್ಮೆ ಯಾವುದೇ ನಿರ್ಧಾರಗಳನ್ನು ಕೈಗೊಳ್ಳದೆ ಸಭೆ ಮುಕ್ತಾಯವಾಗಿದೆ. ಕೆಲವು ಬಾರಿ ಅಧ್ಯಕ್ಷರು ಸಭೆಗೆ ಹಾಜರಾಗದಿದ್ದರೂ ಕೇವಲ ಸದಸ್ಯರನ್ನು ಒಳಗೊಂಡಂತೆ ಕಾರ್ಯದರ್ಶಿ ಸಭೆ ನಡೆಸಿ ಅಧ್ಯಕ್ಷರ ಕೆಂಗಣ್ಣಿಗೆ ಗುರಿಯಾಗಿದ್ದರು. 

Tags:    

Similar News