ಕಾಂಗ್ರೆಸ್ ಶಾಸಕರಿಗೆ ಮಾತ್ರ 50 ಕೋಟಿ ರೂಪಾಯಿ ಅನುದಾನ ಕೊಟ್ಟ ಸರ್ಕಾರ!
ಶಾಸಕರು ತಮ್ಮ ಬೇಡಿಕೆ ಪತ್ರಗಳೊಂದಿಗೆ ಕಾಮಗಾರಿ ವಿವರ ನೀಡಬೇಕು. ಜುಲೈ 30 ಹಾಗೂ 31ರಂದು ಜಿಲ್ಲಾವರು ಶಾಸಕರು ವಿಧಾನಸೌಧದಲ್ಲಿ ನಡೆಯುವ ಸಭೆಗೆ ಹಾಜರಾಗಬೇಕು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.;
ಸಿಎಂ ಸಿದ್ದರಾಮಯ್ಯ
ಅನುದಾನ ಸಿಗುತ್ತಿಲ್ಲ, ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ ಎಂದು ಸ್ವಪಕ್ಷೀಯ ಶಾಸಕರೇ ಸರ್ಕಾರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಶಾಸಕರುಗಳಿಗೆ ಮಾತ್ರ ತಲಾ 50 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಸ್ವಪಕ್ಷೀಯರ ಅಸಮಾಧಾನ ಕೊನೆಗಾಣಿಸಲು ಯತ್ನಿಸಿದರೂ ವಿಪಕ್ಷ ಸದಸ್ಯರ ಕೋಪಕ್ಕೆ ಕಾರಣವಾಗುವುದು ಗ್ಯಾರಂಟಿ.
2025-26ರ ಬಜೆಟ್‌ನಲ್ಲಿ ಘೋಷಿಸಿದಂತೆ, ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ 50 ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದೆ. ಇದರಲ್ಲಿ ಲೋಕೋಪಯೋಗಿ ಇಲಾಖೆ, ಗ್ರಾಮೀಣ ರಸ್ತೆ, ಸೇತುವೆ ಕಾಮಗಾರಿಗಳು ಹಾಗೂ ನಗರ ಪ್ರದೇಶದ ಕಾಮಗಾರಿಗಳಿಗೆ 37.50 ಕೋಟಿ ರೂ. ಮತ್ತು ಶಾಸಕರ ವಿವೇಚನಾಧಿಕಾರದಡಿ ಆಯ್ಕೆ ಮಾಡಬಹುದಾದ ಇತರೆ ಇಲಾಖೆಗಳ ಕಾಮಗಾರಿಗಳಿಗೆ 12.50 ಕೋಟಿ ರೂಪಾಯಿ ನಿಗದಿಪಡಿಸಲಾಗಿದೆ.
ಶಾಸಕರು ಹಾಗೂ ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ಕಾಮಗಾರಿ ವಿವರ ನೀಡಬೇಕು. ಜುಲೈ 30 ಹಾಗೂ 31 ರಂದು ಜಿಲ್ಲಾವಾರು ಶಾಸಕರು ವಿಧಾನಸೌಧದಲ್ಲಿ ನಡೆಯುವ ಸಭೆಗೆ ಹಾಜರಾಗಬೇಕು ಎಂದು ತಿಳಿಸಲಾಗಿದೆ. ಕಾಂಗ್ರೆಸ್ ಪಕ್ಷದ ಶಾಸಕರುಗಳಿಗೆ ಸಿಎಂ ಸಿದ್ದರಾಮಯ್ಯ ಪ್ರತ್ಯೇಕ ಪತ್ರ ಬರೆದಿದ್ದು, ಶಾಸಕರುಗಳ ಆಪ್ತ ಸಹಾಯಕರು ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಡಾ. ವೆಂಕಟೇಶಯ್ಯ ಅವರ ಕಚೇರಿಯಲ್ಲಿ ಅದನ್ನು ಪಡೆದುಕೊಳ್ಳಬೇಕು ಎಂದು ರಾಜ್ಯ ಶಾಸಕಾಂಗ ಪಕ್ಷದ ಕಚೇರಿ ವ್ಯವಸ್ಥಾಪಕರು ಸೂಚನೆ ನೀಡಿದ್ದಾರೆ.
ಶಾಸಕರ ಅಸಮಾಧಾನದ ಹಿನ್ನೆಲೆ
"ನಮ್ಮದೇ ಸರ್ಕಾರವಿದ್ದರೂ ಕ್ಷೇತ್ರಗಳಿಗೆ ಅನುದಾನ ದೊರೆಯುತ್ತಿಲ್ಲ. ಸಚಿವರುಗಳು ನಮ್ಮ ಶಿಫಾರಸು ಪತ್ರಗಳಿಗೆ ಸ್ಪಂದಿಸುತ್ತಿಲ್ಲ. ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ" ಎಂದು ಆಳಂದ ಶಾಸಕ ಹಾಗೂ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ್ ಹಾಗೂ ಕಾಗವಾಡ ಶಾಸಕ ರಾಜುಕಾಗೆ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಶಾಸಕರ ಅಸಮಾಧಾನ ಹೆಚ್ಚಾಗುತ್ತಿದ್ದಂತೆ, ಇತ್ತೀಚೆಗೆ ರಾಜ್ಯಕ್ಕೆ ಆಗಮಿಸಿದ್ದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ 101 ಶಾಸಕರು ಹಾಗೂ 22 ಸಚಿವರುಗಳ ಜತೆ ಪ್ರತ್ಯೇಕ ಸಭೆ ನಡೆಸಿ ಹಲವು ಅಭಿಪ್ರಾಯಗಳನ್ನು ಸಂಗ್ರಹಿಸಿದ್ದರು. ಹಾಗೆಯೇ ಸಚಿವರುಗಳಿಗೆ ಕೆಲವು ಸಲಹೆ ಸೂಚನೆ ನೀಡಿದ್ದರು. ಸಭೆ ಅಂತ್ಯವಾದ ನಂತರ ಸುರ್ಜೇವಾಲ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜತೆ ಚರ್ಚೆ ನಡೆಸಿದ್ದರು.
ಕಾಂಗ್ರೆಸ್ ಶಾಸಕರಿಗೆ ಮಾತ್ರ ಅನುದಾನ: ಸಾರ್ವಜನಿಕ ಚರ್ಚೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಶಾಸಕರುಗಳಿಗೆ ಮಾತ್ರ ಅನುದಾನ ಬಿಡುಗಡೆ ಮಾಡಿರುವುದರಿಂದ, ಸ್ವಪಕ್ಷೀಯ ಶಾಸಕರ ಅಸಮಾಧಾನ ಶಮನ ಮಾಡಿದರೂ, ಪ್ರತಿಪಕ್ಷಗಳ ಶಾಸಕರಿಗೆ ಅನುದಾನ ಬಿಡುಗಡೆ ಮಾಡದಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.