Shiva Rajkumar | ಡಾ ಶಿವರಾಜ್‌ ಕುಮಾರ್‌ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಸಿಎಂ ಸಿದ್ದರಾಮಯ್ಯ

Update: 2025-01-27 07:27 GMT

ಅಮೆರಿಕಾದಲ್ಲಿ ಚಿಕಿತ್ಸೆ ಪಡೆದು ವಾಪಸ್ಸಾಗಿರುವ ನಟ ಡಾ ಶಿವರಾಜ್‌ ಕುಮಾರ್‌ ಅವರನ್ನು ಸೋಮವಾರ(ಜ.27) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

ಬೆಂಗಳೂರಿನ ನಾಗರಭಾವಿಯಲ್ಲಿರುವ ಶಿವರಾಜ್‌ ಕುಮಾರ್‌ ಅವರ ನಿವಾಸಕ್ಕೆ ಬೆಳಿಗ್ಗೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಅವರ ಚಿಕಿತ್ಸೆ ಮತ್ತು ಸದ್ಯದ ಆರೋಗ್ಯ ಸ್ಥಿತಿಯ ಕುರಿತು ಶಿವರಾಜ್‌ ಕುಮಾರ್‌ ಮತ್ತು ಅವರ ಪತ್ನಿ ಗೀತಾ ಶಿವರಾಜ್‌ ಕುಮಾರ್‌ ಅವರೊಂದಿಗೆ ಮಾತುಕತೆ ನಡೆಸಿದರು.

ಶಿವರಾಜ್‌ ಕುಮಾರ್‌ ಅವರ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಶಿವರಾಜ್ ಕುಮಾರ್ ಅವರ ಶಸ್ತ್ರಚಿಕಿತ್ಸೆಯ ನಂತರ ಹಿಂತಿರುಗಿ ಬಂದ ನಂತರ ಅವರ ಆರೋಗ್ಯವನ್ನು ವಿಚಾರಿಸಲು ಇಂದು ಭೇಟಿ ಮಾಡಿದ್ದೇನೆ. ಅವರ ಶಸ್ತ್ರಚಿಕಿತ್ಸೆಯ ಮರುದಿನವೇ ಅವರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದಾಗ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ತೊಂದರೆ ಇಲ್ಲ ಎಂದು ತಿಳಿಸಿದ್ದರು.

ಇದೀಗ, ತಾವು ಸಂಪೂರ್ಣ ಗುಣಮುಖರಾಗಿದ್ದು, ಮುಂದಿನ ತಿಂಗಳಿನಿಂದ ಚಿತ್ರೀಕರಣಕ್ಕೆ ತೆರಳುವುದಾಗಿ ಶಿವರಾಜ್‌ ಕುಮಾರ್ ತಿಳಿಸಿದ್ದಾರೆ ಎಂದು ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ತಿಳಿಸಿದರು.

ಕ್ಯಾನ್ಸರ್‌ ಸಂಬಂಧಿ ಶಸ್ತ್ರ ಚಿಕಿತ್ಸೆಗೆಂದು ಅಮೆರಿಕಕ್ಕೆ ಹೋಗಿದ್ದ ಶಿವರಾಜ್ ಕುಮಾರ್ ಭಾನುವಾರ(ಜ.26) ಬೆಳಿಗ್ಗೆ ಬೆಂಗಳೂರಿಗೆ ಮರಳಿದ್ದಾರೆ. ಮೂತ್ರಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಅಮೆರಿಕಾದ ಮಿಯಾಮಿಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ವಾಪಸ್ಸಾಗಿದ್ದಾರೆ. 

ನಟ ಡಾ ಶಿವರಾಜ್‌ ಕುಮಾರ್‌ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದ ಸಿಎಂ ಸಿದ್ದರಾಮಯ್ಯ

ನಟ ಶಿವರಾಜ್‌ ಕುಮಾರ್‌ ಹಾಗೂ ಗೀತಾ ಶಿವರಾಜ್‌ ಕುಮಾರ್‌ ಅವರು ಕಳೆದ ವಾರ ವೀಡಿಯೋ ಒಂದನ್ನು ಹಂಚಿಕೊಂಡು ತಾವು ಚಿಕಿತ್ಸೆ ಪಡೆದು  ಬೆಂಗಳೂರಿಗೆ ವಾಪಾಗುವ ಬಗ್ಗೆ  ಮಾಹಿತಿ ನೀಡಿದ್ದರು. ನಿಮ್ಮ ಪ್ರೀತಿ ಮತ್ತು ಅಭಿಮಾನಕ್ಕೆ ನಾನು ಚಿರಋಣಿ. ನಿಮ್ಮನ್ನೆಲ್ಲಾ ನೋಡಲು ನಾನು ಜನವರಿ 26ರಂದು ಗಣರಾಜ್ಯೋತ್ಸವ ದಿನ ಬೆಂಗಳೂರಿಗೆ ಬರುತ್ತಿದ್ದೇನೆ ಎಂದು ತಮ್ಮ ಅಭಿಮಾನಿಗಳಿಗೆ ಹ್ಯಾಟ್ರಿಕ್‌ ಹೀರೋ ಶಿವರಾಜ್ ಕುಮಾರ್ ಹೇಳಿದ್ದರು.

ಡಿಸೆಂಬರ್ 18 ರಂದು ಬೆಂಳೂರಿನಿಂದ ಅಮೆರಿಕಾಕ್ಕೆ ಪ್ರಯಾಣ ಮಾಡಿದ್ದ ಶಿವರಾಜ್‌ ಕುಮಾರ್‌ ಅವರಿಗೆ ಡಿಸೆಂಬರ್ 24ರಂದು ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಶಿವರಾಜ್ ಕುಮಾರ್ ಒಟ್ಟು 6 ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

Similar News