ʼಸೆಪ್ಟೆಂಬರ್ ಕ್ರಾಂತಿʼ| ಗುಪ್ತಚರ ಇಲಾಖೆ ಮಾಹಿತಿ ಪಡೆದರೇ ಸಿಎಂ ಸಿದ್ದರಾಮಯ್ಯ?
ಕಾಂಗ್ರೆಸ್‌ನಲ್ಲಿಯೇ ಕೇಳಿಬರುತ್ತಿವ ಕ್ರಾಂತಿ ಹೇಳಿಕೆ ಬಗ್ಗೆ ಸಿದ್ದರಾಮಯ್ಯ ಗುಪ್ತಚರದಿಂದ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಶಾಸಕರ ಅಭಿಪ್ರಾಯಗಳನ್ನು ಪಡೆದುಕೊಂಡಿದ್ದಾರೆ ಎನ್ನಲಾಗಿದೆ;
'ಸೆಪ್ಟೆಂಬರ್ ಕ್ರಾಂತಿ' ಕುರಿತು ಮಾಜಿ ಸಚಿವ ಕೆ.ಎನ್. ರಾಜಣ್ಣ ಹೇಳಿಕೆಯು ಕಾಂಗ್ರೆಸ್‌ನಲ್ಲಿ ನಾನಾ ಚರ್ಚೆಗೆ ಕಾರಣವಾಗಿರುವುದರ ಜತೆಗೆ ಮುಖ್ಯಮಂತ್ರಿ ಸೇರಿದಂತೆ ಹಲವು ಹುದ್ದೆಗಳ ಬದಲಾವಣೆಯ ವದಂತಿಗಳಿಗೆ ರೆಕ್ಕೆಪುಕ್ಕ ಹರಡಿವೆ. ಈ ನಡುವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಪಾಳಯದಲ್ಲಿನ ವದಂತಿಗಳ ಕುರಿತ ಸತ್ಯಾಸತ್ಯತೆ ಅರಿಯಲು ಗುಪ್ತಚರ ಇಲಾಖೆ ಮೂಲಕ ಮಾಹಿತಿ ಪಡೆದುಕೊಂಡಿದ್ದಾರೆ.
ಆಡಳಿತರೂಢ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿಯ ಬದಲಾವಣೆ ಜತೆಗೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯೂ ಆಗಲಿದೆ ಎಂಬ ಚರ್ಚೆಗಳು ನಡೆಯುತ್ತಿವೆ. ಸರ್ಕಾರದ ಸಚಿವರಿಂದಲೇ ಬರುತ್ತಿರುವ ಹೇಳಿಕೆಗಳು ಪುಷ್ಠಿ ನೀಡುತ್ತಿದ್ದು, ಊಹಾಪೋಹಾಗಳು ಮತ್ತಷ್ಟು ಗರಿಗೆದರುವಂತಾಗಿದೆ. ಕಾಂಗ್ರೆಸ್‌ನಲ್ಲಿಯೇ ಇಂತಹ ವದಂತಿಗಳು ಹರಿದಾಡುತ್ತಿರುವುದು ಕಾಂಗ್ರೆಸ್ ವರಿಷ್ಠರಿಗೆ ತಲೆಬಿಸಿಯಾಗಿದೆ. ಕಾಂಗ್ರೆಸ್ ವರಿಷ್ಠರು ಸಚಿವರಿಗೆ, ಶಾಸಕರಿಗೆ ಮುಖ್ಯಮಂತ್ರಿ ಬದಲಾವಣೆ ಕುರಿತು ಹೇಳಿಕೆ ನೀಡದಂತೆ ಸೂಚನೆ ನೀಡಿದರೂ ವದಂತಿಗಳು ಮಾತ್ರ ನಿಲ್ಲುತ್ತಿಲ್ಲ.
ಊಹಾಪೋಹಾಗಳು ಹಬ್ಬುತ್ತಿರುವುದು ಒಂದು ರೀತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮುಜುಗರವನ್ನುಂಟು ಮಾಡುವಂತಾಗಿದೆ. ಈ ಕಾರಣಕ್ಕಾಗಿ ಗುಪ್ತಚರ ಇಲಾಖೆಯಿಂದ ಗೌಪ್ಯವಾಗಿ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಕಾಂಗ್ರೆಸ್‌ನಲ್ಲಿಯೇ ಯಾವ ರೀತಿಯ ಅಭಿಪ್ರಾಯಗಳಿವೆ ಎಂಬುದರನ್ನು ತಿಳಿದುಕೊಂಡಿದ್ದಾರೆ. ಪಕ್ಷದ ಶಾಸಕರು, ಸಚಿವರು ಮುಖ್ಯಮಂತ್ರಿ ಬದಲಾವಣೆಯಾಗಬೇಕೇ ಎಂದು ಉನ್ನತ ಮೂಲಗಳು ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿವೆ.
ಮುಖ್ಯಮಂತ್ರಿ ಬದಲಾವಣೆ ಚರ್ಚೆಗಳು ನಡೆಯುತ್ತಿದ್ದಾಗಲೇ ಮುಖ್ಯಮಂತ್ರಿಗಳು ಗುಪ್ತಚರ ಇಲಾಖೆಗೆ ಈ ಬಗ್ಗೆ ಮಾಹಿತಿ ಪಡೆದುಕೊಳ್ಳುವಂತೆ ಸೂಚನೆ ನೀಡಿದ್ದರು. ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಗುಪ್ತಚರ ಇಲಾಖೆಗೆ ಹಿರಿಯ ಅಧಿಕಾರಿಗಳು ತಮ್ಮ ಕಿರಿಯ ಸಿಬ್ಬಂದಿಯ ತಂಡಗಳನ್ನು ರಚಿಸಿ ಕಾಂಗ್ರೆಸ್ ಪಾಳೆಯದಲ್ಲಿ ವ್ಯಕ್ತವಾಗಿರುವ ಮಾಹಿತಿ ಪಡೆದುಕೊಳ್ಳುವಂತೆ ನಿರ್ದೇಶನ ನೀಡಿದ್ದರು. ಅಧಿಕಾರಿಗಳ ನಿರ್ದೇಶನ ಮೇರೆಗೆ ಕಾರ್ಯಪ್ರವೃತ್ತರಾದ ಗುಪ್ತಚರ ಇಲಾಖೆಯ ಪೊಲೀಸ್ ತಂಡವು ರಾಜ್ಯದಲ್ಲಿನ ಕಾಂಗ್ರೆಸ್ ನಾಯಕರ ಆಪ್ತ ವಲಯಗಳೊಂದಿಗೆ ಮಾತುಕತೆ ನಡೆಸಿ ಮಾಹಿತಿ ಪಡೆದುಕೊಂಡರು. ನಂತರ ಅದನ್ನು ಹಿರಿಯ ಅಧಿಕಾರಿಗಳಿಗೆ ತಲುಪಿಸಿದ್ದರು. ಹಿರಿಯ ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ಎಲ್ಲಾ ವಿಷಯವನ್ನು ಮುಟ್ಟಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಸಿದ್ದರಾಮಯ್ಯ ಬದಲಾವಣೆಗೆ ಶಾಸಕರಿಗೆ ಮನಸ್ಸಿಲ್ಲ?
ಗುಪ್ತಚರ ಇಲಾಖೆಯ ಮಾಹಿತಿ ಪ್ರಕಾರ ಕಾಂಗ್ರೆಸ್‌ನಲ್ಲಿನ ಬಹಳಷ್ಟು ಮಂದಿಗೆ ಸಿದ್ದರಾಮಯ್ಯ ಅವರ ಬದಲಿಸಲು ಮನಸ್ಸು ಇಲ್ಲ. ಮುಖ್ಯಮಂತ್ರಿ ಹುದ್ದೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ತಂದು ಕೂರಿಸುವ ಇರಾದೆ ಇಲ್ಲ. ಡಿ.ಕೆ.ಶಿವಕುಮಾರ್ ಅವರ ಕೆಲವರ ಬೆಂಬಲಿಗರು ಹೊರತು ಪಡಿಸಿದರೆ ಬಹಳಷ್ಟು ಮಂದಿಗೆ ಬೇಡದ ವಿಷಯವಾಗಿದೆ. ಅಲ್ಲದೇ, ಎಲ್ಲವೂ ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟ ವಿಚಾರವಾಗಿರುತ್ತದೆ ಎಂಬ ಸಂದೇಶವನ್ನು ನೀಡಿದ್ದಾರೆ ಎಂದು ಹೇಳಲಾಗಿದೆ.
ಮಾತಿಗೆ ಬದ್ಧರಾಗಿದ್ದ ರಾಜಣ್ಣ?
ಸೆಪ್ಟೆಂಬರ್ ಕ್ರಾಂತಿ ಕುರಿತು ಹೇಳಿಕೆ ನೀಡಿದ್ದ ಕೆ.ಎನ್.ರಾಜಣ್ಣ ತಮ್ಮ ಸಚಿವ ಸ್ಥಾನವನ್ನು ಕಳೆದುಕೊಳ್ಳಬೇಕಾಯಿತು. ಸಚಿವ ಸ್ಥಾನದಲ್ಲಿದ್ದ ವೇಳೆ ನೀಡಿದ ಹೇಳಿಕೆಯ ಬಗ್ಗೆ ಹಲವು ಬಾರಿ ಪ್ರಶ್ನಿಸಿದ್ದರೂ ತಮ್ಮ ಹೇಳಿಕೆಗೆ ಬದ್ಧ ಎಂದು ಹೇಳಿದ್ದರು. ರಾಜಣ್ಣ ನೀಡಿದ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಯಿತು. ಸೆಪ್ಟೆಂಬರ್ ಕ್ರಾಂತಿ ಹೇಳಿಕೆಗೆ ಬದ್ಧವಾಗಿದ್ದರೂ ಸೆಪ್ಟೆಂಬರ್‌ನಲ್ಲಿ ಏನು ಕ್ರಾಂತಿ ನಡೆಯಲಿದೆ ಎಂಬ ಪ್ರಶ್ನೆಗೆ ಸ್ಪಷ್ಟವಾದ ಉತ್ತರ ಮಾತ್ರ ಕೊಡಲಿಲ್ಲ.
ರಾಜ್ಯ ಉಸ್ತುವಾರಿ ಬದಲಾವಣೆ?
ಕೆ.ಎನ್.ರಾಜಣ್ಣ ಹೇಳಿಕೆಯು ಮುಖ್ಯಮಂತ್ರಿ ಬದಲಾವಣೆಯಲ್ಲ, ಬದಲಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಬದಲಾವಣೆಯಾಗಲಿದೆ ಎಂಬ ಸುಳಿವು ನೀಡಿದರೆ? ಎಂಬ ಅನುಮಾನಗಳು ವ್ಯಕ್ತವಾಗಿವೆ. ರಾಜ್ಯದಲ್ಲಿ ಅಂತಹದ್ದೇ ವಿದ್ಯಮಾನಗಳು ನಡೆಯುತ್ತಿದ್ದವು. ಸುರ್ಜೇವಾಲಾ ಬಗ್ಗೆ ರಾಜಣ್ಣ ಅವರಿಗೆ ಬೇಸರ ಇದ್ದು, ಇದೇ ಕಾರಣಕ್ಕಾಗಿ ಇಂತಹ ಹೇಳಿಕೆ ನೀಡಿ ವದಂತಿ ಹಬ್ಬಿಸಿದರು ಎಂಬ ಮಾತುಗಳು ಕಾಂಗ್ರೆಸ್‌ನಲ್ಲಿ ಕೇಳಿ ಬಂದಿವೆ.
ರಾಜ್ಯದಲ್ಲಿ ಸಚಿವರು ಮತ್ತು ಶಾಸಕರ ನಡುವೆ ಭಿನ್ನಾಭಿಪ್ರಾಯ ಮೂಡಿದಾಗ ಸುರ್ಜೇವಾಲ ಅವರು ಸಭೆಯನ್ನು ನಡೆಸಿದ್ದರು. ಶಾಸಕರ ಜತೆಗೆ ಮೂರು ಸುತ್ತಿನ ಸಭೆ ನಡೆಸಿದರೆ, ಸಚಿವರ ಜತೆಗೂ ಮೂರು ಸುತ್ತಿನ ಸಭೆಯನ್ನು ಕೈಗೊಂಡಿದ್ದರು. ಈ ವೇಳೆ ಕೆಲವು ಶಾಸಕರು ತಮ್ಮ ಅಸಮಾಧಾನವನ್ನು ಸುರ್ಜೇವಾಲ ಬಳಿ ತೋಡಿಕೊಂಡಿದ್ದರು. ಸಚಿವರೊಂದಿಗೂ ಸುರ್ಜೇವಾಲಾ ಸಭೆ ನಡೆಸಿದ್ದರು. ಆದರೆ, ಸಭೆಗೆ ರಾಜಣ್ಣ ಗೈರಾಗಿದ್ದರು. ಸಭೆಯ ಸಂದರ್ಭದಲ್ಲೇ ಅವರು ವಿದೇಶ ಪ್ರವಾಸಕ್ಕೆ ಕುಟುಂಬದ ಜತೆಗೆ ತೆರಳಿದ್ದರು. ಈ ವಿಚಾರವಾಗಿ ಸ್ಪಷ್ಟನೆ ನೀಡಿ, ಸಭೆಗೆ ಕರೆದಿಲ್ಲ. ಅದಕ್ಕೆ ಹಾಜರಾಗಿಲ್ಲ ಎಂದು ತಿಳಿಸಿದ್ದರು. ಅಲ್ಲದೇ, ರಣದೀಪ್ ಸಿಂಗ್ ಸುರ್ಜೇವಾಲ ಕಾರ್ಯವೈಖರಿಯ ಬಗ್ಗೆಯೂ ರಾಜಣ್ಣ ಅಸಮಾಧಾನವನ್ನು ಹೊರ ಹಾಕಿದ್ದರು.
ಸಂಪುಟ ಪುನಾರಚನೆಯೇ?
ರಾಜಣ್ಣ ಸುಳಿವಿನಂತೆ ಸೆಪ್ಟಂಬರ್‌ನಲ್ಲಿ ಕ್ರಾಂತಿಯಾದರೆ ಸಂಪುಟ ಬದಲಾವಣೆ ಆಗಲಿದೆಯೇ? ಎಂಬುದು ಮತ್ತೊಂದು ಕುತೂಹಲವಾಗಿದೆ. ಈಗಾಗಲೇ ಸಚಿವ ಸಂಪುಟ ಬದಲಾವಣೆಯಾಗಬೇಕು ಎಂದು ಕೆಲವು ಶಾಸಕರು ಪಟ್ಟು ಹಿಡಿದಿದ್ದಾರೆ. ಸಿದ್ದರಾಂಯ್ಯ ಸಹ ಸರ್ಕಾರಕ್ಕೆ ಎರಡೂವರೆ ವರ್ಷವಾಗಲಿದ್ದು, ಸಂಪುಟ ಪುನಾರಚನೆ ಮಾಡುವ ಬಗ್ಗೆ ಒಲವು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಇಂತಹದೊಂದು ಕುತೂಹಲ ಸಹಜವಾಗಿ ಕೆರಳಿಸಿದೆ. ಒಂದು ವೇಳೆ ಸಂಪುಟ ಪುನಾರಚನೆಯಾದರೆ 7 - 8 ಸಚಿವರಿಗೆ ಕೊಕ್ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ನಡುವೆ, ರಣದೀಪ್ ಸಿಂಗ್ ಸುರ್ಜೇವಾಲ ಶಾಸಕರ ಜತೆ ಸಭೆ ನಡೆಸಿದ ವೇಳೆಯಲ್ಲಿಯೂ ಕೆಲವು ಶಾಸಕರು ಇಂತಹದೊಂದು ಬೇಡಿಕೆ ಇಟ್ಟಿದ್ದಾರೆ. ಹಲವು ಶಾಸಕರಿಗೆ ಸಚಿವರಾಗಬೇಕು ಎಂಬ ಕನಸು ಇದೆ. ಒಂದು ವೇಳೆ ಹೈಕಮಾಂಡ್ ಒಪ್ಪಿಗೆ ಕೊಟ್ಟರೆ ಈ ನಿಟ್ಟಿನಲ್ಲಿ ಬೆಳವಣಿಗೆಗಳು ನಡೆಯುವ ಸಾಧ್ಯತೆ ಇದೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆಯೇ?
ರಾಜ್ಯ ಉಸ್ತುವಾರಿ ಬದಲಾವಣೆ, ಸಚಿವ ಸಂಪುಟ ಪುನಾರಚನೆ ಮಾತ್ರವಲ್ಲ ಸೆಪ್ಟೆಂಬರ್ ಕ್ರಾಂತಿ ಎಂಬ ಹೇಳಿಕೆಯು ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆಯಾಗಲಿದೆಯೇ? ಎಂಬ ಪ್ರಶ್ನೆಯೂ ಉದ್ಬವಿಸಿದೆ. ಕಾಂಗ್ರೆಸ್‌ನಲ್ಲಿ ಒಂದೆಡೆ ಮುಖ್ಯಮಂತ್ರಿ ಬದಲಾವಣೆಗೆ ಒತ್ತಾಯ ಮಾಡಿದರೆ, ಮತ್ತೊಂದು ಬಣ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆಗೆ ಪಟ್ಟು ಹಿಡಿದಿದೆ. ಒಬ್ಬರಿಗೆ ಒಂದೇ ಹುದ್ದೆ ಎಂಬ ನೀತಿಯನ್ವಯ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆಯಾಗಬೇಕು ಎಂಬುವುದು ಸಿದ್ದರಾಮಯ್ಯ ಆಪ್ತ ಬಳಗದ ನಿಲುವಾಗಿದೆ. ಪಕ್ಷ ಸಂಘಟನೆಯ ದೃಷ್ಟಿಯಲ್ಲಿ ಕೆಪಿಸಿಸಿಗೆ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವ ಅಧ್ಯಕ್ಷರ ಅಗತ್ಯ ಇದೆ. ಸರ್ಕಾರ ಮತ್ತು ಪಕ್ಷ ಎರಡನ್ನು ಒಟ್ಟಿಗೆ ಸಂಭಾಳಿಸಲು ಸಾಧ್ಯವಿಲ್ಲ. ಹೀಗಿರುವಾಗ ಪಕ್ಷ ಸಂಘಟನೆಗೆ ಒತ್ತು ಕೊಡಬೇಕಾಗಿದೆ ಎನ್ನುವುದು ಕೆಲವು ಹಿರಿಯ ಮುಖಂಡರ ಅಭಿಪ್ರಾಯವಾಗಿದೆ. ಇದಕ್ಕೆ ಹೈಕಮಾಂಡ್ ಒಪ್ಪಿಗೆ ನೀಡಲಿದೆಯೇ? ಎಂಬುವುದು ಕುತೂಹಲ ಮೂಡಿಸಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿ ಈಗಾಗಲೇ ಎರಡು ವರ್ಷ ಕಳೆದಿದ್ದು, ನವೆಂಬರ್ ವೇಳೆಗೆ ಎರಡೂವರೆ ವರ್ಷವಾಗಲಿದೆ. ವರ್ಷ ಕಳೆಯುತ್ತಿದ್ದಂತೆ ಸಂಪುಟ ವಿಸ್ತರಣೆಯ ಕೂಗು ಕೇಳಿಬಂದಿತ್ತು. ಮೇ ತಿಂಗಳಲ್ಲೂ ಹಲವು ವದಂತಿಗಳು ಹರಿದಾಡಿತ್ತು. ಪ್ರತಿಪಕ್ಷ ಬಿಜೆಪಿಯಂತೂ ಮನಸ್ಸು ಬಂದಾಗಲೆಲ್ಲಾ ಮುಖ್ಯಮಂತ್ರಿ ಬದಲಾಗುತ್ತಾರೆ ಎಂಬ ಸುದ್ದಿ ಹಬ್ಬಿಸುತ್ತಿದೆ. ಇದಕ್ಕೆ ಕಾಂಗ್ರೆಸ್ ನಾಯಕರ ಹೇಳಿಕೆಯೂ ಪುಷ್ಠಿ ನೀಡುತ್ತದೆ.
ಕ್ರಾಂತಿ ಎನ್ನುವುದು ಕೇವಲ ವದಂತಿಯೇ?
ಕಾಂಗ್ರೆಸ್‌ನಲ್ಲಿ ಕ್ರಾಂತಿ ನಡೆಯುತ್ತವೆ ಎಂಬ ಹೇಳಿಕೆಯು ಹೊಸದೇನಲ್ಲ. ಈ ಹಿಂದೆ ಮೇ ಕ್ರಾಂತಿ, ಆಗಸ್ಟ್ ಕ್ರಾಂತಿ ಎಂದೆಲ್ಲ ಸುದ್ದಿ ಹಬ್ಬಿತ್ತು. ಬಳಿಕ ಸೆಪ್ಟೆಂಬರ್ ಕ್ರಾಂತಿ ನಡೆಯಲಿದೆ ಎಂಬ ಹೇಳಿಕೆಯು ವ್ಯಾಪಕವಾಗಿ ಹರಡಿದೆ. ಆದರೆ, ಕೆಲವು ಹಿರಿಯ ನಾಯಕರ ಹೇಳಿಕೆಯ ಪ್ರಕಾರ ರಾಜ್ಯ ರಾಜಕಾರಣದಲ್ಲಿ ಕ್ರಾಂತಿಯಾಗಲಿದ್ದು, ಅದು ಪಕ್ಷದ ವಿಚಾರದಲ್ಲೋ ಅಥವಾ ಸರ್ಕಾರದಲ್ಲಿಯೋ ಎಂಬುದನ್ನು ಕಾದು ನೋಡಿ ಎನ್ನುತ್ತಾರೆ. ಇದೆಲ್ಲದರ ಜತೆಗೆ ನವೆಂಬರ್‌ನಲ್ಲಿ ಬದಲಾವಣೆ ನಡೆಯಲಿದೆ. ಆದರೆ ಗಣನೀಯ ಬದಲಾವಣೆಯಾಗುವುದಿಲ್ಲ. ಕಾಂಗ್ರೆಸ್‌ನಲ್ಲಿ ಕ್ರಾಂತಿ ನಡೆಯುತ್ತವೆ ಎಂಬ ಹೇಳಿಕೆಯು ಸಾಮಾನ್ಯವಾಗಿದೆ. ಆದರೆ, ಎಷ್ಟರ ಮಟ್ಟಿಗೆ ಅದು ಸತ್ಯಾಂಶಕ್ಕೆ ಹತ್ತಿರವಾಗಿರಲಿದೆ ಎಂಬುದನ್ನು ಕಾದುನೋಡಬೇಕಿದೆ.