Karnataka Budget 2025 | ಮಲ್ಟಿಫ್ಲೆಕ್ಸ್‌ಗಳಲ್ಲಿ ಏಕರೂಪ ದರ, ಸರ್ಕಾರಿ ಒಟಿಟಿ

ರಾಜ್ಯ ಸರ್ಕಾರ ಏಕರೂಪದ ದರ ನೀತಿ ಜಾರಿಗೆ ತಂದಿದ್ದು, ರೂ.200 ಗರಿಷ್ಠ ದರ ನಿಗದಿಪಡಿಸಲಿದೆ ಎಂದು ತಮ್ಮ 16ನೇ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ .;

Update: 2025-03-07 05:49 GMT

ರಾಜ್ಯದ ಎಲ್ಲಾ ಮಲ್ಟಿಫ್ಲೆಕ್ಸ್ ಸಿನಿಮಾ ಥಿಯೇಟರುಗಳಲ್ಲಿ ಏಕರೂಪದ ದರ ಜಾರಿಗೆ ತರುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.

ರಾಜ್ಯ ಸರ್ಕಾರ ಏಕರೂಪದ ದರ ನೀತಿ ಜಾರಿಗೆ ತಂದಿದ್ದು, ರೂ.200 ಗರಿಷ್ಠ ದರ ನಿಗದಿಪಡಿಸಲಿದೆ ಎಂದು ತಮ್ಮ 16ನೇ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ .

ರಾಜ್ಯದಲ್ಲಿನ ಮಲ್ಟಿಫ್ಲೆಕ್ಸ್‌ಗಳಲ್ಲಿ ಪ್ರದರ್ಶನಗೊಳ್ಳುವ ಎಲ್ಲಾ ಭಾಷೆಗಳ ಚಿತ್ರಗಳಿಗೆ ಈ ದರ ಅನ್ವಯವಾಗಲಿದೆ. ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ದುಬಾರಿ ಟಿಕೆಟ್ ದರದ ಕುರಿತು ಸಾಕಷ್ಟು ಚರ್ಚೆ ನಡೆದಿತ್ತು.

ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ಬೆಲೆ ಹೆಚ್ಚಾಗಿರುವ ಕಾರಣ ಬಹುತೇಕರು ಚಿತ್ರ ವೀಕ್ಷಣೆಗೆ ಬರುತ್ತಿರಲಿಲ್ಲ. ಹೀಗಾಗಿ ಕನ್ನಡ ಚಿತ್ರಗಳಿಗೆ ಪ್ರೇಕ್ಷಕರ ಕೊರತೆ ಎದ್ದು ಕಾಣುತ್ತಿತ್ತು. ಇನ್ನು ಪರಭಾಷಾ ಚಿತ್ರಗಳಿಗೆ ಟಿಕೆಟ್‌ ದರವನ್ನು ಮನಸೋಇಚ್ಛೆ ನಿಗದಿ ಮಾಡಿ ಪ್ರೇಕ್ಷಕರನ್ನು ಲೂಟಿ ಮಾಡಲಾಗುತ್ತಿತ್ತು.

ಮಲ್ಟಿಫ್ಲೆಕ್ಸ್ ಗಳಲ್ಲಿ ಏಕರೂಪದ ದರ ಜಾರಿಗೆ ತರುವಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕಲಾವಿದರ ಸಂಘಗಳು ಕೂಡ ಸರ್ಕಾರವನ್ನು ಒತ್ತಾಯಿಸಿದ್ದವು. ಈ ಹಿನ್ನೆಲೆಯಲ್ಲಿ ಎಲ್ಲಾ ಮಲ್ಟಿಪ್ಲೆಕ್ಸ್‌ಗಳಲ್ಲಿ 200 ರೂ.ಏಕರೂಪದ ದರ ಘೋಷಿಸಿದೆ.

ಒಟಿಟಿಯಲ್ಲಿ ಕನ್ನಡ ಚಿತ್ರ

ಆಂಧ್ರಪ್ರದೇಶ, ಕೇರಳ ಮಾದರಿಯಲ್ಲಿ ಕರ್ನಾಟಕದಲ್ಲೂ ಕನ್ನಡ ಚಿತ್ರಗಳ ಪ್ರದರ್ಶನಕ್ಕೆ ಸರ್ಕಾರಿ ಸ್ವಾಮ್ಯದ ಪ್ರತ್ಯೇಕ ಒಟಿಟಿ ವೇದಿಕೆ ಆರಂಭಿಸುವುದಾಗಿ ಸಿಎಂ ಘೋಷಿಸಿದ್ದಾರೆ.

ಒಟಿಟಿ ವೇದಿಕೆಗಳಲ್ಲಿ ಕನ್ನಡ ಚಿತ್ರಗಳ ಪ್ರದರ್ಶನದಿಂದ ಕನ್ನಡ ಭಾಷೆಯ ಚಿತ್ರಗಳಿಗೆ ಹೆಚ್ಚು ಪ್ರೋತ್ಸಾಹ ಸಿಗಲಿದೆ. ಹಾಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಿಎಂ ಬಜೆಟ್‌ನಲ್ಲಿ ತಿಳಿಸಿದ್ದಾರೆ.

ಕೈಗಾರಿಕಾ ನೀತಿಯಲ್ಲಿ ಸಿನಿಮಾಗಳಿಗೆ ಸೌಲಭ್ಯ ವಿತರಿಸಲು ಅನುವಾಗುವಂತೆ ಸಿನಿಮಾವನ್ನು ಉದ್ಯಮವಾಗಿ ಪರಿಗಣಿಸಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ.

ಮೈಸೂರಿನಲ್ಲಿ ಫಿಲಂ ಸಿಟಿಗೆ 500 ಕೋಟಿ

ಮೈಸೂರಿನಲ್ಲಿ ಫಿಲಂ ಸಿಟಿ ನಿರ್ಮಾಣ ಯೋಜನೆಗೆ ಈ ಬಾರಿಯ ಬಜೆಟ್‌ನಲ್ಲಿ 500 ಕೋಟಿ ರೂ. ಅನುದಾನವನ್ನು ಕೂಡ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ.

ಮೈಸೂರಿನಲ್ಲಿ 150 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ಫಿಲಂ ಸಿಟಿಗೆ 500 ಕೋಟಿ ರೂ ಅನುದಾನವನ್ನು ಈ ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಅಲ್ಲದೆ, ಸಿನಿಮಾ ಕ್ಷೇತ್ರವನ್ನು ಉದ್ಯಮವೆಂದು ಪರಿಗಣಿಸಿ, ಕೈಗಾರಿಕಾ ನೀತಿಯಡಿ ಒದಗಿಸಲಾಗುವ ಸೌಲಭ್ಯಗಳನ್ನು ನಮ್ಮ ಸರ್ಕಾರವು ಸಿನಿಮಾ ಕ್ಷೇತ್ರಕ್ಕೆ ಒದಗಿಸಲಿದೆ ಎಂದೂ ಘೋಷಿಸಲಾಗಿದೆ.

ಚಲನಚಿತ್ರ ಅಕಾಡೆಮಿ ಚಿತ್ರಮಂದಿರ ಸಮುಚ್ಛಯ

ಬೆಂಗಳೂರಿನ ನಂದಿನಿ ಲೇಔಟ್ನಲ್ಲಿ ಚಲನಚಿತ್ರ ಅಕಾಡೆಮಿಯು ಹೊಂದಿರುವ 2.5 ಎಕರೆ ನಿವೇಶನದಲ್ಲಿ ಬಹು ಪರದೆಗಳಿರುವ ಚಿತ್ರಮಂದಿರ ಸಮುಚ್ಛಯವನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.

Tags:    

Similar News