Operation Sindoor | ಮತ್ತೆ ಪಾಕಿಸ್ತಾನ ಬೆನ್ನಿಗೆ ನಿಂತ ಚೀನಾ ; ಶಾಶ್ವತ ಕದನ ವಿರಾಮಕ್ಕೆ ಒತ್ತು ನೀಡಲು ಭಾರತಕ್ಕೆ ಒತ್ತಡ
ಪಾಕಿಸ್ತಾನ ಜತೆಗಿನ ಭಿನ್ನಾಭಿಪ್ರಾಯವನ್ನು ಮಾತುಕತೆ ಮೂಲಕ ಬಗೆಹರಿಸಿಕೊಂಡು ಶಾಶ್ವತ ಕದನ ವಿರಾಮ ಸ್ಥಾಪಿಸಬೇಕು ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ಭಾರತಕ್ಕೆ ತಾಕೀತು ಮಾಡಿದ್ದಾರೆ.;
ಭಾರತ-ಪಾಕಿಸ್ತಾನದ ಸಂಘರ್ಷದಲ್ಲಿ ಅಮೆರಿಕವು ಮಧ್ಯಪ್ರವೇಶ ಮಾಡಿ ಕದನ ವಿರಾಮ ಏರ್ಪಡುವಂತೆ ಮಾಡಿದೆ. ಆದರೆ, ಇತ್ತ ಕದನ ವಿರಾಮ ಉಲ್ಲಂಘನೆ ಬಳಿಕವೂ ಚೀನಾ ಸರ್ಕಾರ ಪಾಕಿಸ್ತಾನ ಪರ ನಿಲುವು ಪ್ರಕಟಿಸಿದೆ. ಇದು ಭಾರತದ ಕೆಂಗಣ್ಣಿಗೆ ಗುರಿಯಾಗಿದೆ.
ಶಾಶ್ವತ ಕದನ ವಿರಾಮಕ್ಕೆ ತಾಕೀತು
ಪಾಕಿಸ್ತಾನ ಜತೆಗಿನ ಭಿನ್ನಾಭಿಪ್ರಾಯವನ್ನು ಮಾತುಕತೆ ಮೂಲಕ ಬಗೆಹರಿಸಿಕೊಂಡು ಶಾಶ್ವತ ಕದನ ವಿರಾಮ ಸ್ಥಾಪಿಸಬೇಕು ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ಭಾರತಕ್ಕೆ ತಾಕೀತು ಮಾಡಿದ್ದಾರೆ.
ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರೊಂದಿಗೆ ಮಾತುಕತೆ ವೇಳೆ ಈ ಕುರಿತು ಸಲಹೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ದೋವಲ್ ಅವರು, 'ಯುದ್ಧ ಭಾರತದ ಆಯ್ಕೆಯಲ್ಲ, ಆದರೆ ಪಹಲ್ಗಾಮ್ ದಾಳಿಯ ನಂತರ ಭಾರತಕ್ಕೆ ಭಯೋತ್ಪಾದನಾ ನಿಗ್ರಹ ಕ್ರಮ ಕೈಗೊಳ್ಳುವ ಅಗತ್ಯವಿದೆ' ಎಂದು ಹೇಳಿದೆ.
'ಭಾರತ ಮತ್ತು ಪಾಕಿಸ್ತಾನವು ಸಮಾಲೋಚನೆ ಮೂಲಕ ಸಮಗ್ರ ಹಾಗೂ ಶಾಶ್ವತ ಕದನ ವಿರಾಮ ಸಾಧಿಸುವುದನ್ನು ಚೀನಾ ಬೆಂಬಲಿಸಲಿದೆ. ಇದು ಎರಡೂ ದೇಶಗಳ ಮೂಲಭೂತ ಹಿತಾಸಕ್ತಿಯ ವಿಷಯವಾಗಿದೆ' ಎಂದು ಯಿ ಹೇಳಿದ್ದಾರೆ.
ಪಹಲ್ಲಾಮ್ ದಾಳಿಯನ್ನು ಚೀನಾ ಖಂಡಿಸಲಿದೆ ಎಂದು ಇದೇ ವೇಳೆ ತಿಳಿಸಿದ್ದಾರೆ.
ಉಗ್ರರ ದಾಳಿಗೆ ಪ್ರತೀಕಾರವಾಗಿ ಮೇ 7 ರಂದು ಭಾರತವು ಪಾಕಿಸ್ತಾನದ ಮೇಲೆ ಆಪರೇಷನ್ ಸಿಂದೂರ ಕಾರ್ಯಾಚರಣೆ ಕೈಗೊಂಡಿತ್ತು. ಅಲ್ಲಿಂದ ಭಾರತ ಮತ್ತು ಪಾಕ್ ನಡುವೆ ಸತತ ನಾಲ್ಕು ದಿನಗಳ ಕಾಲ ಡೋನ್, ಕ್ಷಿಪಣಿ ದಾಳಿಗಳು ಮುಂದುವರಿದಿದ್ದವು. ಶನಿವಾರ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ನೇತೃತ್ವದಲ್ಲಿ ಉಭಯ ದೇಶಗಳ ನಡುವೆ ಕದನ ವಿರಾಮ ಏರ್ಪಟ್ಟಿತ್ತು. ಆದರೆ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನ, ಜಮ್ಮು ಮತ್ತು ಕಾಶ್ಮೀರದ ಮೇಲೆ ಡೋನ್ ದಾಳಿ ನಡೆಸಿ ಕದನ ವಿರಾಮ ಉಲ್ಲಂಘಿಸಿತ್ತು.
ಇಸ್ಲಾಮಾಬಾದ್ ಜೊತೆ ಚೀನಾ ದೃಢವಾಗಿ ನಿಲ್ಲಲಿದೆ
ಪಾಕಿಸ್ತಾನಕ್ಕೆ ಚೀನಾ ಮತ್ತೆ ಬೆಂಬಲ ವ್ಯಕ್ತಪಡಿಸಿದೆ. ಪಾಕಿಸ್ತಾನದ ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಮತ್ತು ರಾಷ್ಟ್ರೀಯ ಸ್ವಾತಂತ್ರ್ಯ ಎತ್ತಿಹಿಡಿಯುವಲ್ಲಿ ಚೀನಾವು ಪಾಕಿಸ್ತಾನದ ಜತೆ ದೃಢವಾಗಿ ನಿಲ್ಲಲಿದೆ ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಹೇಳಿದ್ದಾರೆ.
ಸವಾಲಿನ ಸಂದರ್ಭಗಳಲ್ಲಿ ಪಾಕಿಸ್ತಾನ ಸಂಯಮ ಮತ್ತು ಜವಾಬ್ದಾರಿಯುತವಾಗಿ ವರ್ತಿಸಿದೆ ಎಂದು ಚೀನಾ ಹೇಳಿದೆ ಎಂದು ಪಾಕ್ ಉಪ ಪ್ರಧಾನಿ ಮತ್ತು ವಿದೇಶಾಂಗ ಸಚಿವ ಇಶಾಕ್ ದಾರ್ ತಿಳಿಸಿದ್ದಾರೆ.