Watery Grave | ಯುಗಾದಿ ಹಬ್ಬದಂದೇ ಬಾಲಕರ ಜಲಸಮಾಧಿ; ವಿವಿಧೆಡೆ ಐವರು ನೀರು ಪಾಲು

ಯುಗಾದಿ ಪಾಡ್ಯದ ಅಂಗವಾಗಿ ಬಾಲಕರು ವಿಜಯಪುರದ ಕೃಷ್ಣಾ ನದಿಗೆ ಸ್ನಾನಕ್ಕೆ ಬಂದಿದ್ದು, ಆಳ ಗೊತ್ತಿಲ್ಲದೇ ಒಬ್ಬ ನೀರಿಗೆ ಧುಮುಕಿದ್ದಾನೆ. ಆತನ ರಕ್ಷಣೆಗಾಗಿ ಇಬ್ಬರು ನೀರಿಗೆ ಇಳಿದು ಮುಳುಗಿ ಮೂವರೂ ಮೃತಪಟ್ಟಿದ್ದಾರೆ.;

Update: 2025-03-30 14:48 GMT

ಕೃಷ್ಣಾ ನದಿಯಲ್ಲಿ ಯುಗಾದಿ ಪಾಡ್ಯದ ಅಂಗವಾಗಿ ಸ್ನಾನಕ್ಕೆ ತೆರಳಿದ್ದ ಮೂವರು ಯುವಕರು ನೀರು ಪಾಲಾಗಿರುವ ಘಟನೆ ಭಾನುವಾರ ನಡೆದಿದೆ.

ಆಲಮಟ್ಟಿ ಜಲಾಶಯ ಮುಂಭಾಗದ ರೈಲ್ವೆ ಸೇತುವೆ ಕೆಳಗಿನ ಕೃಷ್ಣ ನದಿಯಲ್ಲಿ ಈಜಲು ತೆರಳಿದ್ದ ಮೂವರಲ್ಲಿ ಒಬ್ಬ ಯುವಕನ ಶವ ಪತ್ತೆಯಾಗಿದ್ದು, ಆತನನ್ನು ಬಾಗಲಕೋಟೆ ತಾಲೂಕಿನ ಇಲ್ಯಾಳ ಗ್ರಾಮದ ಸೋಮಶೇಖರ ಬೊಮ್ಮಣ್ಣ ದೇವರಮನಿ (15) ಎಂದು ಗುರುತಿಸಲಾಗಿದೆ. 

ನಾಪತ್ತೆಯಾಗಿರುವ ಮಲ್ಲಪ್ಪ ಬಸಪ್ಪ ಬಗಲಿ (15) ಹಾಗೂ ಪರನಗೌಡ ಮಲ್ಲಪ್ಪ ಬೀಳಗಿ (17) ಅವರಿಗಾಗಿ ಹುಡುಕಾಟ ನಡೆಯುತ್ತಿದೆ.

ಮೂವರು ಯುವಕರು ನೀರು ಪಾಲಾದ ಘಟನೆ ಬೆನ್ನಲ್ಲೇ ನೆರವಿಗೆ ಧಾವಿಸಿದ ಮೀನುಗಾರರು ಒಬ್ಬ ಯುವಕನ ಮೃತದೇಹ ಹೊರತೆಗೆದರು. ಕಾಣೆಯಾಗಿರುವವರ ಶೋಧಕ್ಕೆ ಬಾಗಲಕೋಟೆಯಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ಕಾರ್ಯಾಚರಣೆ ಮುಂದುವರಿದಿದೆ.

ಯುಗಾದಿ ಪಾಡ್ಯದ ಅಂಗವಾಗಿ ಬಾಲಕರು ಕೃಷ್ಣಾ ನದಿಗೆ ಸ್ನಾನಕ್ಕೆ ಬಂದಿದ್ದು, ಆಳ ಗೊತ್ತಿಲ್ಲದೇ ಒಬ್ಬ ನೀರಿಗೆ ಧುಮುಕಿದ್ದಾನೆ. ಆತನ ರಕ್ಷಣೆಗಾಗಿ ಇಬ್ಬರು ನೀರಿಗೆ ಇಳಿದು ಮುಳುಗಿ ಮೃತಪಟ್ಟಿದ್ದಾರೆ.

ತುಂಗಾ ನದಿಯಲ್ಲಿ ಮುಳುಗಿ ಸಾವು

ಶಿವಮೊಗ್ಗದ ತೀರ್ಥಹಳ್ಳಿ ಬಳಿಯ ತುಂಗಾ ನದಿಯಲ್ಲಿ ಮುಳುಗಿ ಒಬ್ಬ ಯುವಕ ಮೃತಪಟ್ಟಿದ್ದಾನೆ.

ಮೃತನನ್ನು ತೀರ್ಥಹಳ್ಳಿ ತಾಲೂಕಿನ ಜಿಗಳಗೊಡು ಗ್ರಾಮದ ನಿವಾಸಿ ಕಿರಣ್ (20) ಎಂದು ಗುರುತಿಸಲಾಗಿದೆ.

ಕಿರಣ್ ಸೇರಿ ಮೂವರು ಸ್ನೇಹಿತರು ನದಿಯಲ್ಲಿ ಈಜಲು ತೆರಳಿದ್ದರು. ಈ ವೇಳೆ ಈಜು ಬಾರದೆ ಒಬ್ಬ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಮೈಸೂರು ಜಿಲ್ಲೆಯ ಟಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ಯುಗಾದಿ ಹಬ್ಬದ ಪುಣ್ಯಸ್ನಾನಕ್ಕೆಂದು ತೆರಳಿದ್ದ ಬಾಲಕ ಮೃತಪಟ್ಟಿದ್ದಾನೆ. ಟಿ.ನರಸೀಪುರ ಪಟ್ಟಣದ ಶ್ರೀರಾಂಪುರ ನಿವಾಸಿ ಶರಣ್​ (13) ಮೃತ ಬಾಲಕ.  ಶರಣ್ ಸ್ನೇಹಿತರ ಜೊತೆ ನದಿಗೆ ಪುಣ್ಯಸ್ನಾನಕ್ಕೆ ತೆರಳಿದ್ದ. ಈ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.​

Tags:    

Similar News