Namma Metro| ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ಬಳಿಕ ಈಗ ಶೌಚಾಲಯ ಬಳಕೆಗೂ ಶುಲ್ಕ

ಬೆಂಗಳೂರಿನ 12 ಮೆಟ್ರೋ ನಿಲ್ದಾಣಗಳಲ್ಲಿ ಸಾರ್ವಜನಿಕ ಶೌಚಾಲಯಗಳಿಗೆ ಶುಲ್ಕ ಪಾವತಿಸುವ ವ್ಯವಸ್ಥೆ ಜಾರಿಗೆ ತರಲಾಗಿದೆ. ಆಯ್ದ ಮೆಟ್ರೋ ನಿಲ್ದಾಣಗಳ ಸಾರ್ವಜನಿಕ ಪ್ರದೇಶಗಳಲ್ಲಿರುವ ಶೌಚಾಲಯಗಳ ನಿರ್ವಹಣೆ ಹೊಣೆಯನ್ನು ಸುಲಭ್ ಇಂಟರ್ನ್ಯಾಷನಲ್‌ಗೆ ವಹಿಸಲಾಗಿದೆ.;

Update: 2025-05-22 10:15 GMT

ನಮ್ಮ ಮೆಟ್ರೋ ಶೌಚಾಲಯ ಉಪಯೋಗಿಸಲು ಹಣ ಪಾವತಿ ಮಾಡಬೇಕು. 

ಮೆಟ್ರೋ ನಿಲ್ದಾಣಗಳ ಶೌಚಾಲಯಗಳ ಬಳಕೆಗೆ ಶುಲ್ಕ ವಿಧಿಸಲು ಬಿಎಂಆರ್​ಸಿಎಲ್ ಮುಂದಾಗಿದೆ. ಆದರೆ ಇದಕ್ಕೆ ಸಾರ್ವಜನಿಕ ವಲಯದಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿದೆ. 

ಬೆಂಗಳೂರಿನ 12 ಮೆಟ್ರೋ ನಿಲ್ದಾಣಗಳಲ್ಲಿ ಸಾರ್ವಜನಿಕ ಶೌಚಾಲಯಗಳಿಗೆ ಶುಲ್ಕ ಪಾವತಿಸುವ ವ್ಯವಸ್ಥೆ ಜಾರಿಗೆ ತರಲಾಗಿದೆ. ಆಯ್ದ ಮೆಟ್ರೋ ನಿಲ್ದಾಣಗಳ ಸಾರ್ವಜನಿಕ ಪ್ರದೇಶಗಳಲ್ಲಿರುವ ಶೌಚಾಲಯಗಳ ನಿರ್ವಹಣೆ ಹೊಣೆಯನ್ನು ಸುಲಭ್ ಇಂಟರ್ನ್ಯಾಷನಲ್‌ಗೆ ವಹಿಸಲಾಗಿದೆ. ಹೀಗಾಗಿ ಬಳಕೆದಾರರ ಶುಲ್ಕ ಸಂಗ್ರಹ ಆರಂಭವಾಗಿದ್ದು, ಮೂತ್ರ ವಿಸರ್ಜನೆಗೆ 2 ಮತ್ತು ಶೌಚಾಲಯ ಬಳಕೆಗೆ 5 ರೂ. ಶುಲ್ಕ ಸಂಗ್ರಹಿಸಲಾಗುತ್ತಿದೆ.

ಯಾವೆಲ್ಲ ಮೆಟ್ರೋ ನಿಲ್ದಾಣಗಳ ಶೌಚಾಲಯಗಳಲ್ಲಿ ಶುಲ್ಕ ಸಂಗ್ರಹ?

ನ್ಯಾಷನಲ್ ಕಾಲೇಜು, ಲಾಲ್‌ಬಾಗ್, ಸೌತ್ ಎಂಡ್ ಸರ್ಕಲ್, ಜಯನಗರ, ರಾಷ್ಟ್ರೀಯ ವಿದ್ಯಾಲಯ ರಸ್ತೆ, ಬನಶಂಕರಿ, ಜಯಪ್ರಕಾಶ್ ನಗರ, ಯಲಚೇನಹಳ್ಳಿ, ಸರ್ ಎಂ ವಿಶ್ವೇಶ್ವರಯ್ಯ ನಿಲ್ದಾಣ – ಸೆಂಟ್ರಲ್ ಕಾಲೇಜು, ಡಾ ಬಿಆರ್ ಅಂಬೇಡ್ಕರ್ ನಿಲ್ದಾಣ – ವಿಧಾನಸೌಧ, ಕಬ್ಬನ್ ಪಾರ್ಕ್ ಮತ್ತು ಕ್ರಾಂತಿವೀರ ರೈಲ್ವೆ ನಿಲ್ದಾಣಗಳ ಶೌಚಾಲಯಗಳಲ್ಲಿ ಶುಲ್ಕ ಸಂಗ್ರಹ ಮಾಡಲಾಗುತ್ತದೆ.

ಬಿಎಂಆರ್​ಸಿಎಲ್ ಹೇಳಿದ್ದೇನು?

ಮೆಟ್ರೋ ಪ್ರಯಾಣಿಕರು ಮಾತ್ರವಲ್ಲದೆ, ಸಾರ್ವಜನಿಕರು ಕೂಡ ಹೆಚ್ಚಾಗಿ ಬಳಸುವ ಶೌಚಾಲಯಗಳ ಉತ್ತಮ ನಿರ್ವಹಣೆಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಬಿಎಂಆರ್‌ಸಿಎಲ್‌ನ ತಿಳಿಸಿದೆ. ಪ್ರಯಾಣಿಕರು ಮೆಟ್ರೋ ಕಾರ್ಡ್ ಅಥವಾ ಟೋಕನ್ ಸ್ವೈಪ್ ಮಾಡಿ ಒಳ ಪ್ರವೇಶಿಸಿದ ನಂತರ ಬಳಕೆಗೆ ಲಭ್ಯವಿರುವ ಶೌಚಾಲಯಗಳಲ್ಲಿ ಶುಲ್ಕ ಪಡೆಯುತ್ತಿಲ್ಲ. ಅವುಗಳು ಉಚಿತವಾಗಿಯೇ ಇರಲಿವೆ. ಮೆಟ್ರೋ ನಿಲ್ದಾಣಗಳಲ್ಲಿ ಸಾರ್ವಜನಿಕ ಪ್ರವೇಶಾವಕಾಶ ಇರುವ ಶೌಚಾಲಯಗಳಿಗೆ ಮಾತ್ರ ಶುಲ್ಕ ಸಂಗ್ರಹಿಸಲಾಗುತ್ತದೆ. ನಿರ್ವಹಣೆಯ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಎಂಆರ್‌ಸಿಎಲ್ ಮೂಲಗಳು ಸ್ಪಷ್ಟಪಡಿಸಿವೆ.

ಆದರೆ ಬಿಎಂಆರ್‌ಸಿಎಲ್ ನಡೆಗೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇತ್ತೀಚೆಗಷ್ಟೇ ಮೆಟ್ರೋ ಪ್ರಯಾಣ ದರ ದುಪ್ಪಟ್ಟು ಹೆಚ್ಚು ಮಾಡಲಾಗಿದೆ. ಇದೀಗ ನಿಲ್ದಾಣಗಳಲ್ಲಿ ಶೌಚಾಲಯ ಬಳಕೆಗೆ ಶುಲ್ಕ ಸಂಗ್ರಹ ಸರಿಯಲ್ಲ ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Tags:    

Similar News