ಯೋಗೇಶ್ವರ್‌ ಗೆಲುವಿಗೆ ಬಿಜೆಪಿ, ಜೆಡಿಎಸ್‌ ಮುಖಂಡರು ನೆರವು ಕೊಟ್ಟಿದ್ದಾರೆ: ಡಿಕೆ ಶಿವಕುಮಾರ್‌

ಕ್ಷೇತ್ರದಲ್ಲಿ ಸಾಕಷ್ಟು ಪ್ರವಾಸ ಮಾಡಿದ್ದೀವಿ. ಕ್ಷೇತ್ರದ ಜನರಿಗೆ ಏನು ಮಾತು ಕೊಟ್ಟಿದ್ದೇವೊ ಅದನ್ನ ಜಾರಿ ಮಾಡಬೇಕಿದೆ. ಯೋಗೇಶ್ವರ್ ಜೊತೆ ಚರ್ಚಿಸಿ ಇದಕ್ಕೆಲ್ಲ ಚಾಲನೆ ನೀಡಲಾಗುವುದು ಎಂದು ಡಿ.ಕೆ.ಶಿವಕುಮಾರ್‌ ಭರವಸೆ ನೀಡಿದರು.

Update: 2024-11-24 13:14 GMT

ಬಿಜೆಪಿ ಹಾಗೂ ಜೆಡಿಎಸ್‌ ಬೆಂಬಲದಿಂದಲೇ ಚನ್ನಪಟ್ಟಣ ಕ್ಷೇತ್ರದಲ್ಲಿ ಗೆದ್ದಿದ್ದೇವೆ ಎಂದು ಕಾಂಗ್ರೆಸ್‌ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನೀಡಿರುವ ಅಚ್ಚರಿಯ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ.

ಭಾನುವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಜೆಡಿಎಸ್ ಹಾಗೂ ಬಿಜೆಪಿ ಪರೋಕ್ಷ ಬೆಂಬಲ ನೀಡಿವೆ. ಹಾಗಾಗಿ ಯೋಗೇಶ್ವರ್ ಗೆಲುವು ಸುಲಭವಾಯಿತು. ಚನ್ನಪಟ್ಟಣದಲ್ಲಿ ಸಿ.ಪಿ. ಯೋಗೇಶ್ವರ್‌ ಗೆದ್ದೇ ಗೆಲ್ಲುತ್ತಾರೆಂದು ಬಿಜೆಪಿಯ ಮಾಜಿ ಸಚಿವ ಅಶ್ವಥ್ ನಾರಾಯಣ್ ಹೇಳಿರಲಿಲ್ಲವೇ. ಅವರ ಮಾತಿನ ಅರ್ಥವೇನು ಎಂದು ಪ್ರಶ್ನಿಸಿದರು.

ಕ್ಷೇತ್ರದ ಜನ ನಮ್ಮ ಪರವಾಗಿದ್ದಾರೆ ಎಂಬುದು ಸಾಬೀತಾಗಿದೆ. ಈ ಗೆಲುವಿನ ಕ್ರೆಡಿಟ್ ಅಪೂರ್ವ ಸಹೋದರರಿಗೆ ಸಲ್ಲಬೇಕಾಗಿಲ್ಲ‌ ಎಂದು ಹೇಳುವ ಮೂಲಕ ಎಚ್ ಡಿ ಕುಮಾರಸ್ವಾಮಿ ಅವರ ಅಪೂರ್ವ ಸಹೋದರರು ಎಂಬ ವ್ಯಂಗ್ಯಕ್ಕೆ ಅವರದ್ದೇ ದಾಟಿಯಲ್ಲಿ ತಿರುಗೇಟು ನೀಡಿದರು.

ಕುಮಾರಸ್ವಾಮಿ ರಾಜೀನಾಮೆ ಬಳಿಕ ಕ್ಷೇತ್ರದಲ್ಲಿ ಸಾಕಷ್ಟು ಪ್ರವಾಸ ಮಾಡಿದ್ದೀವಿ. ಕ್ಷೇತ್ರದ ಜನರಿಗೆ ಏನು ಮಾತು ಕೊಟ್ಟಿದ್ದೇವೊ ಅದನ್ನ ಜಾರಿ ಮಾಡಬೇಕಿದೆ. ಯೋಗೇಶ್ವರ್ ಜೊತೆ ಚರ್ಚಿಸಿ ಇದಕ್ಕೆಲ್ಲ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಕಾಂಗ್ರೆಸ್‌ ಅಭ್ಯರ್ಥಿಯ ಗೆಲುವಿಗೆ ಎಲ್ಲ ಪಕ್ಷದವರು ಸಹಾಯ ಮಾಡಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಇದ್ದಿದ್ದು ಕೇವಲ 16 ಸಾವಿರ ಮತಗಳಷ್ಟೇ. ಈಗ ಅದರ ಪ್ರಮಾಣ ಜಾಸ್ತಿಯಾಗಿದೆ. ಬಿಜೆಪಿಯವರ ಬೆಂಬಲ ಹೆಚ್ಚಾಗಿದೆ. ಅವರು ನಮ್ಮ ಜೊತೆ ನಿಂತುಕೊಳ್ಳದೇ ಹೋಗಿದ್ದರೆ , ಪರೋಕ್ಷವಾಗಿ ಕೆಲಸ ಮಾಡದೇ ಹೋಗಿದ್ದರೆ ಇಷ್ಟು ಮತ ಗಳಿಸಲು ಆಗುತ್ತಿರಲಿಲ್ಲ. ಹಾಗಾಗಿ ಬಿಜೆಪಿ ಹಾಗೂ ಜೆಡಿಎಸ್‌ನವರನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.

ಚನ್ನಪಟ್ಟಣ ಕ್ಷೇತ್ರ ಗೆದ್ದ ಬಳಿಕ ಮೊದಲ ಬಾರಿಗೆ ಕನಕಪುರಕ್ಕೆ ಭೇಟಿ ನೀಡಿದ ಡಿ.ಕೆ. ಶಿವಕುಮಾರ್‌ ಅವರನ್ನು ಪಕ್ಷದ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು ಅದ್ಧೂರಿಯಾಗಿ ಬರಮಾಡಿಕೊಂಡರು.

ಬಳಿಕ ತಾಲೂಕಿನ ಕೋಡಿಹಳ್ಳಿ ಪ್ಲಾಂಟೇಶನ್‌ ನಲ್ಲಿರುವ ತೋಟದ ಮನೆಗೆ ಭೇಟಿ ನೀಡಿ ತಾಯಿ ಗೌರಮ್ಮ ಅವರ ಆಶೀರ್ವಾದ ಪಡೆದು ಆರೋಗ್ಯ ವಿಚಾರಿಸಿದರು.

Tags:    

Similar News